ಮನೋರಂಜನೆ

‘‘ಶಿವಣ್ಣ ಪರಿಪೂರ್ಣ…: ನಿರ್ದೇಶಕ ಹರ್ಷ

Pinterest LinkedIn Tumblr

crec17harsha

– ಅಮಿತ್ ಎಂ.ಎಸ್.

ಕಲಾವಿದನಾಗಿ ಶಿವರಾಜ್‌ಕುಮಾರ್‌ ಅವರನ್ನು ‘ಪರ್ಫೆಕ್ಟ್‌ ಮ್ಯಾನ್’ ಎಂದು ಬಣ್ಣಿಸುವ ನಿರ್ದೇಶಕ ಹರ್ಷ, ಆ ಪೂರ್ಣತೆಯನ್ನೇ ‘ವಜ್ರಕಾಯ’ ಚಿತ್ರದ ಪಾತ್ರದಲ್ಲಿಯೂ ರೂಪಿಸಿದ್ದಾರಂತೆ.

‘ಈ ಚಿತ್ರದಲ್ಲಿ ಶಿವಣ್ಣನೇ ವಿಶೇಷ!’

–‘ವಜ್ರಕಾಯ’ ಚಿತ್ರವನ್ನು ಶಿವರಾಜ್‌ ಕುಮಾರ್ ಆವರಿಸಿಕೊಂಡಿರುವ ಬಗೆಯನ್ನು ನಿರ್ದೇಶಕ ಹರ್ಷ ಒಂದೇ ಸಾಲಿನಲ್ಲಿ ಹೇಳಿದ್ದು ಹೀಗೆ.

ಚಿತ್ರೀಕರಣ ಪೂರ್ಣಗೊಳಿಸಿರುವ ‘ವಜ್ರಕಾಯ’ ಚಿತ್ರವೀಗ ಸಂಕಲನದ ಕೋಣೆಯಲ್ಲಿದೆ. ಮೇ ಅಂತ್ಯದ ವೇಳೆಗೆ ಅದನ್ನು ತೆರೆಗೆ ತರುವ ಉತ್ಸಾಹದಲ್ಲಿದ್ದ ಹರ್ಷ, ಸಿನಿಮಾ ಕಥೆಯ ಪುಟ್ಟ ಎಳೆಯನ್ನೂ ಬಿಟ್ಟುಕೊಡಲು ಸಿದ್ಧರಿರಲಿಲ್ಲ. ಕಥನದ ಆಚೆಗೇ ಅವರ ಮಾತುಗಳು ಹರಿದಾಡಿದವು.

‘ವಜ್ರಕಾಯ’ ಎಂದರೆ ಎಲ್ಲವನ್ನೂ ತಡೆಯುವ ಶಕ್ತಿಯುಳ್ಳವನು ಎಂದರ್ಥ. ನಟನೆ, ನೃತ್ಯ, ಮಾತು, ನಡತೆ ಎಲ್ಲದರಲ್ಲಿಯೂ ಪರ್ಫೆಕ್ಟ್‌ ಮ್ಯಾನ್‌ ಆಗಿರುವ ಶಿವಣ್ಣ ಅವರನ್ನು ಪಾತ್ರದಲ್ಲಿಯೂ ‘ಪರ್ಫೆಕ್ಟ್‌ ಮ್ಯಾನ್’ ಆಗಿ ಈ ಚಿತ್ರ ತೋರಿಸಲಿದೆ ಎನ್ನುತ್ತಾರೆ ಹರ್ಷ. ಕುಟುಂಬ, ಪ್ರೀತಿ, ಆ್ಯಕ್ಷನ್, ಮದರ್ ಸೆಂಟಿಮೆಂಟ್ ಎಲ್ಲವನ್ನೂ ಈ ಚಿತ್ರ ಒಳಗೊಂಡಿದೆ. ಶಿವಣ್ಣ ಚಿತ್ರದ ಆರಂಭದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತಾರೆ. ಹೊಡೆದಾಟದಲ್ಲಿ ರಟ್ಟೆಯರಳಿಸುತ್ತಾರೆ. ಭಾವುಕ ಸನ್ನಿವೇಶಗಳಲ್ಲಿ ಅಷ್ಟೇ ಆಪ್ತವಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹರ್ಷ ಹೇಳುತ್ತಾರೆ.

ಈ ಚಿತ್ರದ ಹಾಡೊಂದರಲ್ಲಿ ರವಿತೇಜಾ, ಶಿವಕಾರ್ತಿಕೇಯನ್, ದಿಲೀಪ್ ಕುಮಾರ್‌ರಂತಹ ಪರಭಾಷಾ ನಾಯಕರೂ ಹೆಜ್ಜೆ ಹಾಕಿದ್ದಾರೆ. ಅದೂ ಏನು ಎತ್ತ ಎಂದು ಕೇಳದೆಯೇ, ಬಿಡಿಗಾಸು ಸಂಭಾವನೆಯನ್ನೂ ಪಡೆಯದೆಯೇ! ಶಿವಣ್ಣ ಅವರ ಒಂದೇ ಫೋನ್ ಕರೆಗೆ ಪ್ರೀತಿಯಿಂದ ಬಂದು ಅವರು ನರ್ತಿಸಿ ಹೋಗಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ಸಂಗತಿ ಎಂಬ ಖುಷಿ ಹರ್ಷ ಅವರದು. ‘ಇನ್ನೂ ಬೇಕಾದರೆ ಗೆಳೆಯರನ್ನು ಕರೆಸೋಣ ಎಂಬ ಉತ್ಸಾಹದಲ್ಲಿದ್ದರು ಶಿವಣ್ಣ. ಆದರೆ ಈ ಹಾಡಿನಲ್ಲಿ ಐವರಿಗೆ ಮಾತ್ರ ಜಾಗ ಸಿಗುವುದು. ಮುಂದಿನ ಸಿನಿಮಾಕ್ಕೆ ಮಾಡೋಣ’ ಎಂದು ಹರ್ಷ ಹೇಳಿದರಂತೆ.

ಶಿವರಾಜ್‌ಕುಮಾರ್ ಮತ್ತು ತಮ್ಮ ಕಾಂಬಿನೇಷನ್‌ನ ಹಿಂದಿನ ಚಿತ್ರ ‘ಭಜರಂಗಿ’ಗೂ ಈ ಚಿತ್ರಕ್ಕೂ ಕೊಂಚವೂ ಸಾಮ್ಯತೆ ಇಲ್ಲ ಎಂದು ಸ್ಪಷ್ಟಪಡಿಸುತ್ತಾರೆ ಹರ್ಷ. ‘ಭಜರಂಗಿ’ಯಲ್ಲಿ ಕ್ರೌರ್ಯ, ಫ್ಯಾಂಟಸಿ, ಡಾರ್ಕ್‌ ಶೇಡ್‌ ಢಾಳಾಗಿ ಇತ್ತು. ಅದರಲ್ಲಿ ಪುನರ್ಜನ್ಮದ ಕಥನವೂ ಇತ್ತು. ಇದು ಸಂಪೂರ್ಣ ಈಗಿನ ಕಾಲದ ಕಥನ ಎನ್ನುತ್ತಾರೆ.

ಚಿತ್ರದ ದೃಶ್ಯ ಚಿಕಿತ್ಸೆ ವಿಭಿನ್ನ ಅನುಭವ ನೀಡುತ್ತದೆ ಎಂಬ ಆತ್ಮವಿಶ್ವಾಸ ಅವರದು. ಸಾಮಾನ್ಯವಾಗಿ ಸಿನಿಮಾಗಳಲ್ಲಿ ಮಂಗಳೂರು, ಮಂಡ್ಯ, ಉತ್ತರ ಕರ್ನಾಟಕ, ಬೆಂಗಳೂರು ಅಥವಾ ಮಲೆನಾಡು ಹೀಗೆ ವಿಭಿನ್ನ ಹಿನ್ನೆಲೆ ಸಂಸ್ಕೃತಿಯನ್ನು ಬಿಂಬಿಸಲಾಗುತ್ತದೆ. ಆದರೆ ಇಲ್ಲಿ ಪ್ರಸ್ತುತಪಡಿಸುತ್ತಿರುವ ಸಂಸ್ಕೃತಿಯೇ ಬೇರೆ. ಇದರಲ್ಲಿ ಹೊಸತನವಿದೆ ಎಂದು ವಿವರಿಸುತ್ತಾರೆ.

ತೆಲುಗಿನಲ್ಲಿ ‘ಮಗಧೀರ’, ಕನ್ನಡದಲ್ಲಿ ‘ಭಜರಂಗಿ’ ಚಿತ್ರಗಳ ಬಳಿಕ ಪುನರ್ಜನ್ಮ, ಐತಿಹಾಸಿಕ ಘಟನೆಯನ್ನು ಬೆಸೆಯುವ ಕಥೆಗಳು ಹೆಚ್ಚು ಬರುತ್ತಿವೆ. ಈ ಯಶಸ್ಸಿನ ಮಂತ್ರವನ್ನು ಹಿಂಬಾಲಿಸುವ ಟ್ರೆಂಡ್‌ ಅನ್ನು ತಮ್ಮದೇ ರೀತಿಯಲ್ಲಿ ಅವರು ವ್ಯಾಖ್ಯಾನಿಸುತ್ತಾರೆ. ‘ಈ ಬಗೆಯ ಕಥನಗಳು ಬಾರದೆ ತುಂಬಾ ಸಮಯ ಆಗಿದೆ ಎಂಬ ಕಾರಣಕ್ಕೆ ‘ಭಜರಂಗಿ’ ಸಾಹಸಕ್ಕೆ ಮುಂದಾದೆ. ಅನೇಕ ಮಂದಿ ಅದನ್ನು ಅನುಸರಿಸಿದರು. ಅದು ಬಹಳ ಜನಪ್ರಿಯವಾಗಿರುವ ಟ್ರೆಂಡ್. ಜನರಿಗೆ ಈಗಿನ ತಂತ್ರಜ್ಞಾನ, ಅದೇ ಜೀವನ, ನಗರ, ಕಾರು ಬೈಕುಗಳು ಎಂದಾಗ ಬೇಸರ ಸಹಜ. ಅದನ್ನು ಬಿಟ್ಟು ಹಳೆಯ ಕಾಲದ್ದು ಎಂದು ತೋರಿಸಿದಾಗ ಕುತೂಹಲ ಕೆರಳುತ್ತದೆ. ವಾಸ್ತವವಾಗಿ ಜನರು ತಾವು ನೋಡದೇ ಇರುವುದನ್ನು ನೋಡಲು ಇಷ್ಟಪಡುತ್ತಾರೆ. ಹೀಗಾಗಿಯೇ ಈ ಬಗೆಯ ಕಥನಗಳು ಯಶಸ್ಸು ಕಂಡಿರುವುದು ಎನ್ನುತ್ತಾರೆ.

‘ವಜ್ರಕಾಯ’ ಚಿತ್ರಕ್ಕೆ ‘ಭಜರಂಗಿ’ಗಿಂತಲೂ ಹೆಚ್ಚಿನ ಶ್ರಮ ತಗುಲಿದೆ. ಏಕೆಂದರೆ ಇಲ್ಲಿ ಕಲಾವಿದರ ಸಂಖ್ಯೆ ಜಾಸ್ತಿ. ‘ಭಜರಂಗಿ’ಯಲ್ಲಿ ಎರಡನೇ ಭಾಗ ಒಂದೇ ರೀತಿಯಲ್ಲಿ ಸಾಗುತ್ತದೆ. ಇಲ್ಲಿ ಮೊದಲ ಭಾಗದಲ್ಲೇ ಒಂದು ಸಿನಿಮಾ ನೋಡಿದ ಅನುಭವ ಸಿಗುತ್ತದೆ. ದ್ವಿತೀಯಾರ್ಧದಲ್ಲಿ ಸಂಪೂರ್ಣ ತಿರುವು ಪಡೆದುಕೊಳ್ಖುತ್ತದೆ. ಎರಡು ಮೂರು ಖಳನಾಯಕರು ಬರುತ್ತಾರೆ. ಭಾವುಕ ತಾಯಂದಿರಿದ್ದಾರೆ, ಮೂವರು ನಾಯಕಿಯರಿದ್ದಾರೆ. ಕುರಿ ಪ್ರತಾಪ, ಚಿಕ್ಕಣ್ಣ, ಸಾಧು ಕೋಕಿಲ, ಜಹಾಂಗೀರ್ ಮುಂತಾದ ಹಾಸ್ಯಕಲಾವಿದರ ದೊಡ್ಡ ಬಳಗವೇ ಇದೆ. ಇಷ್ಟು ದೊಡ್ಡ ಕಲಾವಿದರ ಬಳಗವನ್ನು ನಿಭಾಯಿಸುವುದು ಸುಲಭವಲ್ಲ ಎನ್ನುವುದು ಅವರ ಅನುಭವಕ್ಕೆ ಬಂದಿದೆ.

ಒಂದು ಯಶಸ್ವಿ ಸಿನಿಮಾ ನೀಡಿರುವುದರಿಂದ ಸಹಜವಾಗಿಯೇ ‘ವಜ್ರಕಾಯ’ದ ಬಗ್ಗೆ ನಿರೀಕ್ಷೆಗಳು ಹೆಚ್ಚುತ್ತವೆ. ಆದರೆ ಅತಿಯಾದ ನಿರೀಕ್ಷೆ ಬೇಡ ಎನ್ನುವುದು ಅವರ ಮನವಿ. ಇದು ಇಂಗ್ಲಿಷ್‌ ಅಥವಾ ತೆಲುಗು ಸಿನಿಮಾವಲ್ಲ. ಕಡಿಮೆ ಬಜೆಟ್‌ನಲ್ಲಿ ಮಾಡಿರುವ ಉತ್ತಮ ಪ್ರಯತ್ನ ಎನ್ನುವ ಹರ್ಷ, ‘ಅತಿ ನಿರೀಕ್ಷೆ ಇರಿಸಿಕೊಳ್ಳಬಾರದು’ ಎನ್ನುವ ರಜನಿಕಾಂತ್ ಅವರ ಮಾತನ್ನು ನೆನಪಿಸಿಕೊಳ್ಳುತ್ತಾರೆ. ಅತಿ ನಿರೀಕ್ಷೆ ಇರಿಸಿಕೊಳ್ಳುವ ಪ್ರೇಕ್ಷಕರು ಇನ್ನೂ ಹೆಚ್ಚಿನದನ್ನೇ ಬಯಸುತ್ತಾರೆ. ಸಿನಿಮಾ ಚೆನ್ನಾಗಿದ್ದರೂ ಅವರ ನಿರೀಕ್ಷೆಗೆ ತಕ್ಕಂತೆ ಇಲ್ಲವೆಂದಾಗ ಅದನ್ನು ಜೀರ್ಣಿಸಿಕೊಳ್ಳಲಾರರು. ಆದರೆ ನಿರೀಕ್ಷೆಗಳನ್ನು ಪೂರ್ಣಗೊಳಿಸುವ ಗುಣಮಟ್ಟದ ಕಥೆ, ಅಭಿನಯ ‘ವಜ್ರಕಾಯ’ದಲ್ಲಿದೆ. ಅದರಲ್ಲಿ ಪ್ರೇಕ್ಷಕರಿಗೆ ಮೋಸವಿಲ್ಲ ಎಂಬ ಭರವಸೆ ನೀಡುತ್ತಾರೆ.

ನಿರ್ದೇಶಕನಿಗೆ ಚಿತ್ರದಲ್ಲಿ ಸೋಲು ಗೆಲುವು ಎರಡನೆಯದು. ಅದರಿಂದ ಕಲಿತುಕೊಳ್ಳುವುದೇನು ಎನ್ನುವುದೇ ಮುಖ್ಯ. ಜತೆಗೆ ಪ್ರೇಕ್ಷಕರು ಮಾತ್ರವಲ್ಲ, ನಿರ್ಮಾಪಕರೂ ಸಂತಸದಿಂದ ಮನೆಗೆ ಹೋಗುವಂತಿರಬೇಕು. ಈ ಎಲ್ಲಾ ಅಂಶಗಳನ್ನೂ ಗಮನದಲ್ಲಿರಿಸಿಕೊಂಡೇ ಮುಂದುವರಿಯುವುದು ಎಂದು ಹೇಳುತ್ತಾರೆ.

ತಮ್ಮ ಮುಂದಿನ ಸಿನಿಮಾದಲ್ಲಿ ಇನ್ನೂ ಹೆಚ್ಚಿನ ಕಲಾವಿದರ ಬಳಗ ಇರಲಿದೆ ಎನ್ನುವ ಹರ್ಷ, ಮುಂದಿನ ಚಿತ್ರದ ಕುರಿತು ಗುಟ್ಟು ಬಿಟ್ಟುಕೊಡಲು ಸದ್ಯಕ್ಕೆ ಸಿದ್ಧರಿಲ್ಲ.

Write A Comment