ಕರ್ನಾಟಕ

ಮೇಕೆದಾಟು ಯೋಜನೆಗೆ ಅಡ್ಡಗಾಲು: ಕರ್ನಾಟಕ ಬಂದ್ ಗೆ ವ್ಯಾಪಕ ಬೆಂಬಲ

Pinterest LinkedIn Tumblr

Karnataka-bandh

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕುತ್ತಿರುವ ತಮಿಳುನಾಡು ಸರ್ಕಾರದ ಧೋರಣೆ ಖಂಡಿಸಿ  ಕನ್ನಡ ಒಕ್ಕೂಟ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ.  ಶಾಲಾ ಕಾಲೇಜುಗಳಿಗೆ ಬೇಸಿಗೆ ರಜೆ ಇರುವುದರಿಂದ ವಿದ್ಯಾರ್ಥಿಗಳಿಗೆ ಅಷ್ಟೇನೂ ತೊಂದರೆಯಾಗುವುದಿಲ್ಲ. ಆದರೂ ಪರೀಕ್ಷೆ, ತುರ್ತು ಸೇವೆಗಳನ್ನು ಹೊರತುಪಡಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯ ಬಂದ್‌ನ್ನು ಯಶಸ್ವಿಗೊಳಿಸಬೇಕೆಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಒಕ್ಕೂಟದ ಪದಾಧಿಕಾರಿಗಳಾದ ಸಾ.ರಾ.ಗೋವಿಂದ್, ಕನ್ನಡ ಸೇನೆ ಕುಮಾರ್, ಪ್ರವೀಣ್ ಶೆಟ್ಟಿ , ಕರವೇ ಅಧ್ಯಕ್ಷ ಶಿವರಾಮೇಗೌಡ, ಗಿರೀಶ್ ಗೌಡ ಸೇರಿದಂತೆ ಅನೇಕ ಮುಖಂಡರು ಇಂದು ಕರ್ನಾಟಕ ಬಂದ್ ಸಂಬಂಧ ಬೆಂಗಳೂರಿನ ಕೆಂಪೇಗೌಡ ಪ್ರತಿಮೆಯಿಂದ ಜಾಗೃತಿ ಜಾಥಾ ನಡೆಸಿ ನಗರದಾದ್ಯಂತ ಯಶಸ್ವಿ ಬಂದ್‌ಗೆ ಮನವಿ ಮಾಡಿದರು.

ಎಲ್ಲ ಕನ್ನಡಪರ ಸಂಘಟನೆಗಳು, ಸರ್ಕಾರಿ ನೌಕರರು, ಲಾರಿ ಮಾಲೀಕರ ಸಂಘ, ಆಟೋ ಟ್ಯಾಕ್ಸಿ ಚಾಲಕರ ಸಂಘ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘ ಸೇರಿದಂತೆ ನೂರಾರು ಸಂಘಟನೆಗಳು ಸ್ವಯಂಪ್ರೇರಿತವಾಗಿ ಬಂದ್‌ಗೆ ಬೆಂಬಲ ನೀಡಿರುವುದರಿಂದ ನಾಳೆ ಬಸ್ ಮತ್ತು ಆಟೋ ಸಂಚಾರ ಇರುವುದಿಲ್ಲ.  ಟ್ಯಾಕ್ಸಿ , ಕ್ಯಾಬ್‌ಗಳು ಸಂಚರಿಸುವ ಸಾಧ್ಯತೆ ಕಡಿಮೆ, ಸರ್ಕಾರಿ ನೌಕರರು ಬಂದ್‌ಗೆ ಬೆಂಬಲ ಸೂಚಿಸಿರುವುದರಿಂದ  ಕಚೇರಿಗಳು ಬಾಗಿಲು ಮುಚ್ಚಿರುತ್ತವೆ. ಸಾರ್ವಜನಿಕರು ನಾಳೆ ನಡೆಯುವ ಬಂದ್‌ಗೆ  ಈಗಲೇ ತಯಾರಿ ಮಾಡಿಕೊಳ್ಳಬೇಕಾಗುತ್ತದೆ.  ಬೆಂಗಳೂರಿನಲ್ಲಿ ನೂರಕ್ಕೂ ಹೆಚ್ಚು  ಕಿ.ಮೀ ಜಾಗೃತಿ ಜಾಥಾ ನಡೆಸಿದ ಕನ್ನಡ ಒಕ್ಕೂಟದ ಪದಾಧಿಕಾರಿಗಳು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಂದ್  ನಡೆಸಬೇಕೆಂದು ಮನವಿ ಮಾಡಿದರು.

ವಾಟಾಳ್ ನಾಗರಾಜ್ ಮಾತನಾಡಿ, ಇದು ಕುಡಿಯುವ ನೀರಿಗಾಗಿ ನಡೆಸುತ್ತಿರುವ ಹೋರಾಟ. ನಮ್ಮ ಸರ್ಕಾರದ ವಿರುದ್ಧದ ಹೋರಾಟವಲ್ಲ. ನಾಳೆ ನಡೆಯಲಿರುವ ಬಂದ್‌ನಲ್ಲಿ   ಕನ್ನಡಿಗರ ಶಕ್ತಿ  ಪ್ರದರ್ಶನ ತಮಿಳುನಾಡಿಗೆ ಎಚ್ಚರಿಕೆಯ ಸಂದೇಶವಾಗಬೇಕು ಎಂದರು.
ಮೇಕೆದಾಟು ಯೋಜನೆಗೆ ಸರ್ಕಾರ ಬದ್ಧವಾಗಿದೆ. ಯೋಜನೆಯನ್ನು ವಿಳಂಬ ಮಾಡದಂತೆ ಜಾರಿಗೊಳಿಸಬೇಕು. ನಮ್ಮ ನೀರಿನ ಹಕ್ಕನ್ನು ನಾವು ಪಡೆಯಲು ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ ಎಂದು ಆಕ್ರೋಶಭರಿತರಾಗಿ ಹೇಳಿದರು.  ಕರ್ನಾಟಕ ಸರ್ಕಾರ ಮಹತ್ವದ ಮೇಕೆದಾಟು ಯೋಜನೆಯನ್ನು ವಿಳಂಬ ಮಾಡದಂತೆ ಜಾರಿಗೊಳಿಸಬೇಕು. ನಮ್ಮ ಸಂಸದರು ಸಂಸತ್ತಿನಲ್ಲಿ ನಮ್ಮ ಪರವಾಗಿ ಗಟ್ಟಿಯಾಗಿ ನಿಲ್ಲಬೇಕು ಎಂದು ಆಗ್ರಹಿಸಿದ ಅವರು, ಕನ್ನಡ ಒಕ್ಕೂಟ ನಾಡಿನ ರಕ್ಷಣೆಗಾಗಿ ಯಾವ ಹೋರಾಟಕ್ಕೂ ಸಿದ್ಧವಿದೆ ಎಂದರು.
ಬಂದ್‌ಗೆ ಪಕ್ಷಾತೀತವಾಗಿ, ಜಾತ್ಯತೀತವಾಗಿ ಎಲ್ಲರೂ ಬೆಂಬಲ ನೀಡಿರುವುದು ಕನ್ನಡ ಶಕ್ತಿಯ ಪ್ರತೀಕವಾಗಿದೆ ಎಂದು ವಾಟಾಳ್ ಹೇಳಿದರು.

ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಮಾತನಾಡಿ, ನಮ್ಮ ಜಲದ ಬಗ್ಗೆ ನಾವೇ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿರುವುದು ವಿಷಾದದ ಸಂಗತಿಯಾಗಿದೆ. ತಮಿಳುನಾಡು ಸರ್ಕಾರ ಕಾವೇರಿ ವಿಷಯದಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿದೆ. ಕೇಂದ್ರ ಸರ್ಕಾರ ಮೇಕೆದಾಟು ಯೋಜನೆ ಸಂಬಂಧ ತಮಿಳುನಾಡಿಗೆ ಸ್ಪಷ್ಟ ಸೂಚನೆ ನೀಡಬೇಕು. ನಮ್ಮ ಪಾಲಿನ ನೀರನ್ನು ನಾವು ಬಳಸಿಕೊಳ್ಳಲು ನಾವು ಹೋರಾಟ ಮಾಡಬೇಕಿದೆ ಎಂದು ಅವರು ಹೇಳಿದರು.  ನಾಳೆ ರಾಜ್ಯ ಬಂದ್ ನಡೆಸುವ ಬಗ್ಗೆ ಕಳೆದ 15 ದಿನಗಳಿಂದ ರಾಜ್ಯಾದ್ಯಂತ ಪ್ರವಾಸ ಮಾಡಿ ಜಾಗೃತಿ ಮೂಡಿಸಲಾಗಿದೆ. ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಬಂದ್ ಯಶಸ್ವಿಯಾಗಿ ಜರುಗಲಿದೆ ಎಂದು ತಿಳಿಸಿದರು.  ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್.ಕುಮಾರ್ ಮಾತನಾಡಿ, ನೆಲ, ಜಲ, ಸಂಸ್ಕೃತಿಗೆ ಧಕ್ಕೆಯಾದಾಗ ಕನ್ನಡಿಗರು ಕೈ ಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮೈಕೊಡವಿ ಎದ್ದು ಹೋರಾಟ ಮಾಡುತ್ತಾರೆ. ಅದಕ್ಕೆ ನಾಳಿನ ಬಂದೇ ಕಾರಣ. ನಾಳೆ ನಮ್ಮ ಒಗ್ಗಟ್ಟು ಪ್ರದರ್ಶಿಸುವ ಮೂಲಕ ನೀರಾವರಿ ಯೋಜನೆಯನ್ನು ಶೀಘ್ರ ಜಾರಿಗೆ ಒತ್ತಾಯಿಸಲಾಗುವುದು ಎಂದು ಹೇಳಿದರು.  ಪ್ರವೀಣ್ ಕುಮಾರ್ ಶೆಟ್ಟಿ, ಗಿರೀಶ್ ಗೌಡ, ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ತಮಿಳುನಾಡು ಧೋರಣೆಯನ್ನು ಖಂಡಿಸಿದರು.

Write A Comment