ಮನೋರಂಜನೆ

‘ಬದಲಾಪುರ್‌’ದ ‘ದಿಟ್ಟೆ’ ರಾಧಿಕಾ ಆಪ್ಟೆ

Pinterest LinkedIn Tumblr

crec17radhika1-Cut

‘ನಿನ್ನ ಬಟ್ಟೆಗಳನ್ನು ಕಳಚು’– ನಾಯಕ ಹೇಳುತ್ತಾನೆ. ಕೋಣೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿರುವ ಅವಳು ಎರಡು ಒಳುಡುಪುಗಳನ್ನು ಹೊರತುಪಡಿಸಿ ಮಿಕ್ಕೆಲ್ಲಾ ಬಟ್ಟೆಗಳನ್ನೂ ಕಳಚುತ್ತಾಳೆ. ಯಾವ ದೃಶ್ಯವೂ ಕಟ್‌ ಆಗುವುದಿಲ್ಲ. ‘ಈಗ ಜೋರಾಗಿ ನಗು’– ನಾಯಕನ ಆಣತಿಗೆ ಒಲ್ಲೆ ಎನ್ನುವ ಸ್ಥಿತಿ ಅವಳದ್ದಲ್ಲ. ನಗುತ್ತಾಳೆ. ಆಮೇಲೆ ಅಳ ಮುಖದ ಪಕ್ಕದ ಗೋಡೆಗೆ ಜೋರಾಗಿ ಗುದ್ದುತ್ತಾ, ತನ್ನ ಹೆಸರನ್ನು ಕೂಗುವಂತೆ ತಾಕೀತು ಮಾಡುತ್ತಾನೆ. ಅವಳು ತನ್ನ ಅಸಹಾಯಕತೆಯ ದನಿಯನ್ನೂ ಬೆರೆಸಿ ಅವನ ಹೆಸರನ್ನು ಕೂಗಿದಾಗ ಹೊರಗೆ ಇರುವ ಅವಳ ಪತಿಗೆ ಅದು ಬೇರೆಯದೇ ರೀತಿ ಕೇಳುತ್ತದೆ.

ಇಂಥದೊಂದು ಸನ್ನಿವೇಶಕ್ಕೆ ಒಪ್ಪಿ ನಟಿಸಿದ ‘ದಿಟ್ಟೆ’ ರಾಧಿಕಾ ಆಪ್ಟೆ. ‘ಬದಲಾಪುರ್‌’ ಸಿನಿಮಾದ ವಿಕೃತಿಯ ಭಾಗವಾಗಿಯೂ ಈ ನಟಿಯ ಅಭಿನಯ  ಗಮನಸೆಳೆಯುವಂಥದ್ದು. ಅದರ ಔಚಿತ್ಯ, ಹೆಣ್ಣನ್ನು ಬಿಂಬಿಸಿರುವ ರೀತಿ, ಅಭಿರುಚಿ ಚರ್ಚಾರ್ಹ ಎನ್ನುವುದು ನಿಜವಾದರೂ ರಾಧಿಕಾ ಪರಿಸ್ಥಿತಿಗೆ ಅಭಿನೇತ್ರಿಯಾಗಿ ಸ್ಪಂದಿಸುತ್ತಿರುವ ಕ್ರಮ ಅನೇಕರ ಮೆಚ್ಚುಗೆಗೆ ಕಾರಣವಾಗಿದೆ.

ರಾಧಿಕಾ ಮುಖವನ್ನೇ ಹೋಲುವ ನಟಿಯೊಬ್ಬಳು ತನ್ನ ನಗ್ನ ಚಿತ್ರಗಳ ಸೆಲ್ಫಿ ತೆಗೆದು ಜಾಲತಾಣದಲ್ಲಿ ತೇಲಿಬಿಟ್ಟಾಗ, ಅನೇಕರು  ರಾಧಿಕಾ ಕಡೆಗೆ ಪ್ರಶ್ನೆಗಳ ಕೂರಂಬು ತೇಲಿಬಿಟ್ಟರು. ‘ಹಂಟರ್‌’ ಸಿನಿಮಾ ಪ್ರಚಾರಕ್ಕೆಂದು ಊರೂರು ಸುತ್ತುತ್ತಾ ಬೆಂಗಳೂರಿಗೆ ಬಂದಾಗಲೂ ಆ ಘಟನೆಯ ನೆನಪು ಬೆನ್ನುಬಿಡಲಿಲ್ಲ. ಆದರೆ, ರಾಧಿಕಾ ತಾನು ಅವನ್ನೆಲ್ಲಾ ಮೀರಿದ ನಟಿ ಎಂದು ಪದೇ ಪದೇ ಉತ್ತರ ಕೊಟ್ಟರು.

ಹಿಂದಿ, ಬಂಗಾಳಿ, ಮರಾಠಿ, ತೆಲುಗು, ತಮಿಳು, ಮಲಯಾಳ ಇವಿಷ್ಟೂ ಭಾಷೆಗಳ ಸಿನಿಮಾಗಳಲ್ಲಿ ಅಭಿನಯದ ಸಾಣೆಗೆ ಒಡ್ಡಿಕೊಂಡಿರುವ ರಾಧಿಕಾ ರಂಗಮೋಹಿ. ‘ಆಸಕ್ತ’ ಮರಾಠಿ ರಂಗತಂಡದ ಗರಡಿಯಲ್ಲಿ ಪಳಗಿದವರು. ಪುಣೆಯ ಫರ್ಗ್ಯೂಸನ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರ, ಗಣಿತ ಓದಿದ ಈ ನಟಿ ಒಂದು ಕೋನದಲ್ಲಿ ಜೂಹಿ ಚಾವ್ಲಾ ಅವರನ್ನು ಹೋಲುತ್ತಾರೆ. ಅದೇ ಗಿಣಿ ಮೂಗು.

ಅನಾಹಿತ ಒಬೆರಾಯ್‌ ಅವರ ‘ಬಾಂಬೆ ಬ್ಲ್ಯಾಕ್‌’ ನಾಟಕದಲ್ಲಿ ಅಭಿನಯಿಸಿದ ಈ ಚೆಲುವೆಯನ್ನು ಕಂಡು ನಟ ರಾಹುಲ್‌ ಬೋಸ್‌ ಬೆರಗಾದರು. ಬಂಗಾಳ ಸಿನಿಮಾ ನಿರ್ದೇಶಕ ಅನಿರುದ್ಧ್‌ ರಾಯ್‌ ಚೌಧರಿ ಅವರಿಗೆ ಈ ನಟಿಯ ಹೆಸರನ್ನು ಶಿಫಾರಸ್ಸು ಮಾಡಿದ್ದೇ ರಾಹುಲ್‌. ‘ಅನಾಹತೆ’ ಬಂಗಾಳಿ ಸಿನಿಮಾದಲ್ಲಿ ಟೀವಿ ಪತ್ರಕರ್ತೆಯ ಪಾತ್ರ ಒಲಿದುಬಂತು. ಆ ಪಾತ್ರದ ತೂಕದ ಮಾತು ಹೇಗೇ ಇರಲಿ; ರಾಹುಲ್‌ ಬೋಸ್‌, ಶರ್ಮಿಳಾ ಟ್ಯಾಗೋರ್‌ ತರಹದ ಪಳಗಿದವರ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿತಲ್ಲ ಆಗ ರಾಧಿಕಾಗೆ ಆಕಾಶ ಮೂರೇ ಗೇಣು. ಅಮೋಲ್‌ ಪಾಲೇಕರ್‌ ಅವರ ಮರಾಠಿ ಸಿನಿಮಾ ‘ಸಮಾಂತರ್‌’, ರಾಮ್‌ಗೋಪಾಲ್‌ ವರ್ಮಾ ನಿರ್ದೇಶನದ ‘ರಕ್ತ ಚರಿತ್ರ’ ಸರಣಿ ಸಿನಿಮಾಗಳು ಅಭಿನಯದಲ್ಲಿ ರಾಧಿಕಾ ಅವರನ್ನು ಇನ್ನಷ್ಟು ಪಳಗಿಸಿದವು.

ಹತ್ತು ವರ್ಷದ ಹಿಂದೆಯೇ ಬಾಲಿವುಡ್‌ ಓಣಿಯ ಕಮಟು ಕಂಡ ರಾಧಿಕಾ, 2011ರಲ್ಲಿ ಸಮಕಾಲೀನ ನೃತ್ಯ ಕಲಿಯಲೆಂದು ಲಂಡನ್‌ಗೆ ಹೋದರು. ಬರುವಾಗ ಬ್ರಿಟಿಷ್‌ ಸಂಗೀತಗಾರ ಬೆನೆಡಿಕ್ಟ್‌ ಟೇಲರ್‌ ಕೈಗಳು ಜೊತೆಗಿದ್ದವು. 2012ರಲ್ಲಿ ಶುರುವಾದ ಇಬ್ಬರ ದಾಂಪತ್ಯಗೀತೆಗೆ ಸಿನಿಪಯಣವೇನೂ ತಡೆ ಒಡ್ಡಿಲ್ಲ.

ಹುಡುಗಿಯರನ್ನು ಛೇಡಿಸುವ ವಸ್ತುವನ್ನು ಒಳಗೊಂಡ, ಅನುರಾಗ್‌ ಕಶ್ಯಪ್‌ ನಿರ್ದೇಶನದ ‘ದಟ್‌ ಡೇ ಆಫ್ಟರ್‌ ಎವ್ರಿ ಡೇ’ ಕಿರುಚಿತ್ರದಲ್ಲೂ ಅಭಿನಯಿಸಿದ ರಾಧಿಕಾ ಸದ್ಯಕ್ಕೆ ಒಂದರ್ಧ ಡಜನ್‌ ತಮಿಳು ಚಿತ್ರಗಳ ಸ್ಕ್ರಿಪ್ಟ್‌ಗಳನ್ನು ಎದುರಲ್ಲಿ ಹರಡಿಕೊಂಡು ಕುಳಿತಿದ್ದಾರೆ. ಮೂವತ್ತು ದಾಟಿದ ವಯಸ್ಸಿನಲ್ಲಿಯೂ ಅವರಿಗೆ ತಮ್ಮ ಅಭಿನಯದ ಫಾರ್ಮ್‌ ಕುರಿತು ತುಂಬುಹೆಮ್ಮೆ!

Write A Comment