ಮನೋರಂಜನೆ

ರಂಗಭೂಮಿ: ಕನ್ನಡ- ಕೊಡವ ದಾಂಪತ್ಯ ಗೀತೆ

Pinterest LinkedIn Tumblr

psmec11Kodava2

-ಗುಡಿಹಳ್ಳಿ ನಾಗರಾಜ
‘ಬದ್‌ಕ್’ ನಾಟಕದ ದೃಶ್ಯ
ಕನ್ನಡದ ಜತೆಗೆ ಕರ್ನಾಟಕದ ಇತರ ಭಾಷೆಗಳಾದ ಕೊಂಕಣಿ, ತುಳು, ಕೊಡವ ತಮ್ಮದೇ ಆದ ರಂಗ ಚಟುವಟಿಕೆಗಳನ್ನು ಹೊಂದಿವೆ. ಅವರವರ ಪುಟ್ಟ ಪ್ರಾಂತಗಳಲ್ಲಿ ಅವರವರ ಭಾಷೆಗಳಲ್ಲಿ  ನಾಟಕ ಪ್ರದರ್ಶನ ನಡೆಯುತ್ತಿರುತ್ತವೆ. ಅಲ್ಲಿ ಕನ್ನಡದ ನಾಟಕಗಳನ್ನೂ ಅವರೇ ಸಂಘಟಿಸುತ್ತಾರೆ. ತುಳು ಮಾತೃಭಾಷೆಯವರಾಗಲಿ, ಕೊಡವ ಮಾತೃಭಾಷೆಯವರಾಗಲಿ ಅವರಿಗೆ ತುಳು, ಕೊಡವ ಒಂದೇ, ಕನ್ನಡವೂ ಒಂದೇ ಎನ್ನುವಷ್ಟರ ಮಟ್ಟಿಗೆ ಈ ಭಾಷಾ ಸೌಹಾರ್ದ ಬೆರೆತುಹೋಗಿದೆ.

ನಟ, ನಿರ್ದೇಶಕ, ನಾಟಕಕಾರ ಅಡ್ಡಂಡ ಕಾರ್ಯಪ್ಪ ಕಳೆದ 35 ವರ್ಷಗಳಿಂದ ಏಕಕಾಲಕ್ಕೆ ಕನ್ನಡ ಮತ್ತು ಅದಕ್ಕಿಂತ ಹೆಚ್ಚಾಗಿ ಕೊಡವ ನಾಟಕರಂಗವನ್ನು ಕಟ್ಟುವಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ. ನೀನಾಸಂನಲ್ಲಿ ರಂಗ ತರಬೇತಿ ಪಡೆದ ಕಾರ್ಯಪ್ಪ ಕನ್ನಡ ನಾಟಕಗಳಲ್ಲಿ ನಟಿಸಿದ್ದಾರೆ, ನಿದೇಶಿಸಿದ್ದಾರೆ, ಸಂಘಟಿಸಿದ್ದಾರೆ.

ನೂರು ವರ್ಷಗಳ ಇತಿಹಾಸ ಹೊಂದಿರುವ ಕೊಡಗು ರಂಗಭೂಮಿಯ ಆದ್ಯ ಪ್ರವರ್ತಕರೆಂದರೆ ಅಪ್ಪಚ್ಚ ಕವಿ. ಕೊಡಗು ಜಿಲ್ಲೆಯಲ್ಲಿ ಕ್ಯಾಂಪ್ ಮಾಡುತ್ತಿದ್ದ ಗುಬ್ಬಿ ವೀರಣ್ಣ, ಪೀರ್ ಮಹ್ಮದ್ ಕಂಪೆನಿಗಳ ನಾಟಕಗಳನ್ನು ನೋಡಿ ಅದೇ ಶೈಲಿಯಲ್ಲಿ ಪೌರಾಣಿಕ ನಾಟಕ ರಚನೆ, ನಿರ್ದೇಶನಗಳೊಂದಿಗೆ ರಂಗ ಪ್ರವೇಶಿಸಿದ ಅಪ್ಪಚ್ಚ ಕವಿ, ಮುಂದೆ ತಮ್ಮದೇ ಸ್ವಂತ ಕಂಪನಿ ಕಟ್ಟಿ ದಶಕಗಳ ಕಾಲ ನಡೆಸಿಕೊಂಡು ಬಂದರು.

ಅಧ್ಯಯನಶೀಲರಾಗಿದ್ದ ಅಪ್ಪಚ್ಚ ಕವಿ ಕೊಡಗು ಭಾಷೆಯಲ್ಲಿ ಸೊಗಸಾದ ಕವಿತೆಗಳನ್ನು ರಚಿಸಿ ಕೊಡಗು ರಾಷ್ಟ್ರೀಯ ಕವಿ ಎಂದೇ ಹೆಸರಾಗಿದ್ದಾರೆ. ಅವರ ನಂತರ ಬಿಡಿಯಾದ ಕೆಲ ಸಾಮಾಜಿಕ ನಾಟಕಗಳು ಹಾಗೂ ಶಾಲಾ ಕಾಲೇಜುಗಳ ನಾಟಕ ಪ್ರಯೋಗ ಬಿಟ್ಟರೆ, ತೀವ್ರವಾದ ರಂಗ ಚಳವಳಿ ಕೊಡಗಿನಲ್ಲಿ ಇರಲೇ ಇಲ್ಲ. ಈ ನಿರ್ವಾತವನ್ನು ತುಂಬಿದವರು ಅಡ್ಡಂಡ ಕಾರ್ಯಪ್ಪ.

1980ರಲ್ಲಿ ಸೃಷ್ಟಿ ಕೊಡವ ರಂಗ ಎಂಬ ಪ್ರಾದೇಶಿಕ ರೆಪರ್ಟರಿಯನ್ನು ಕಟ್ಟಿ 15 ವರ್ಷಗಳ ಕಾಲ ನಿರಂತರವಾಗಿ ಕೊಡಗಿನಾದ್ಯಂತ ನಾಟಕ ಪ್ರದರ್ಶಿಸಿ ಹೊಸ ಸಂಚಲನವನ್ನೇ ಮೂಡಿಸಿದರು. ಕಾಲೇಜು ದಿನಗಳಲ್ಲೇ ನಾಟಕಗಳಲ್ಲಿ ಜತೆಯಾಗಿ ಭಾಗವಹಿಸುತ್ತಿದ್ದ ಅನಿತಾ ಅವರೂ ನೀನಾಸಂ ತರಬೇತಿ ಪಡೆದು ಮುಂದೆ ಕಾರ್ಯಪ್ಪ ಅವರ ಬಾಳ ಸಂಗಾತಿ ಆಗಿದ್ದು ಸೃಷ್ಟಿ ರಂಗ ಚಳವಳಿಗೆ ದೊಡ್ಡ ಬಲ ನೀಡಿತು. ಕೊಡವ, ಕನ್ನಡ ನಾಟಕಗಳನ್ನು ಅವರು ಒಟ್ಟೊಟ್ಟಿಗೆ ಪ್ರದರ್ಶಿಸುತ್ತಿದ್ದರು.

1980-90ರ ದಶಕದ ಕನ್ನಡದ ಹೆಸರಾಂತ ನಿರ್ದೇಶಕರ ಪೈಕಿ ಹಲವರು ಕೊಡಗಿನಲ್ಲಿ ಹೋಗಿ ನಾಟಕ ನಿರ್ದೇಶಿಸಿ, ಕೊಡಗು ನಾಟಕದ ಅನುಭವಗಳನ್ನು ಇಲ್ಲಿಗೆ ಹೊತ್ತು ತಂದಿದ್ದಾರೆ. ಹಾಗಾಗಿ ಕಾರ್ಯಪ್ಪ ಕನ್ನಡ ಮತ್ತು ಕೊಡವ ರಂಗಭೂಮಿಯ ಕೊಂಡಿಯಾಗಿದ್ದಾರೆ.

ಹತ್ತಾರು ನಾಟಕಗಳನ್ನು ರಚಿಸಿ ನಿರ್ದೇಶಿಸಿರುವ ಕಾರ್ಯಪ್ಪ ಈ ಮಧ್ಯೆ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕೊಡಗು ಸ್ವಾಯತ್ತತೆಯ ಹೋರಾಟಗಳಲ್ಲಿ ಭಾಗವಹಿಸಿದರೂ ‘ಅಲ್ಲಿರುವುದು ನಮ್ಮ ಮನೆ’ ಎಂಬಂತೆ ರಂಗಭೂಮಿಗೆ ಮರಳಿದ್ದಾರೆ. ಇದೀಗ ಅವರು ‘ರಂಗಭೂಮಿ’ ಕುಟುಂಬದ ಟ್ರಸ್ಟ್ ಸ್ಥಾಪಿಸಿ ಮತ್ತೆ ಭಿನ್ನವಾದ ರಂಗ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಈ ತಂಡದ ಹೊಸ ನಾಟಕ ‘ಬದ್‌ಕ್’ (ಬದುಕು) ವೀಕ್ಷಿಸುವ ಅವಕಾಶ ಬೆಂಗಳೂರಿಗರಿಗೆ ಇತ್ತೀಚೆಗೆ ಲಭ್ಯವಾಯಿತು.

ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಮೆಟ್ರೊ ರಂಗಮಂದಿರದಲ್ಲಿ ಏ.4ರಂದು ಪ್ರದರ್ಶನವಾದ ಈ ನಾಟಕ ಪ್ರೇಕ್ಷಕರ ಮನಸ್ಸನ್ನು ಉಲ್ಲಾಸಗೊಳಿಸಿತು. ವಸುಧೇಂದ್ರ ಅವರ ಕತೆ ಆಧರಿಸಿ ಕಾರ್ಯಪ್ಪ ಈ ‘ಬದುಕು’ ನಾಟಕ ರಚಿಸಿದ್ದಾರೆ. ಮೂಲ ತೆಲುಗಿನದಾದರೂ ಅದಕ್ಕೆ ಅಪ್ಪಟ ಕನ್ನಡತನದ ಸ್ಪರ್ಶ ನೀಡಿ ವೃದ್ಧ ಬ್ರಾಹ್ಮಣ ದಂಪತಿ ಪ್ರೀತಿ ಪ್ರೇಮವನ್ನು ಅತ್ಯಂತ ನೈಜವಾಗಿ ವಸುಧೇಂದ್ರ ಸೆರೆಹಿಡಿದಿದ್ದರೆ, ಅಲ್ಲ ಇದು ಕೊಡವರದ್ದೇ ಕತೆ ಎನ್ನುವಷ್ಟರ ಮಟ್ಟಿಗೆ ತಾಜಾ ಆದ ನಾಟಕವಾಗಿಸಿದ್ದಾರೆ ಕಾರ್ಯಪ್ಪ.

ಕೊಡವರ ಅಡುಗೆ ಮನೆ, ಮನೆಯೊಳಗಿನ ಅಟ್ಟ, ಪರಿಕರಗಳ ನೈಜ ವಿನ್ಯಾಸ ಮಾಲತೇಶ ಬಡಿಗೇರ ಅವರದು. ನಿರ್ದೇಶನವೂ ಅವರದೇ. ಚಂಗಪ್ಪಜ್ಜ ಮತ್ತು ತಂಗಚ್ಚಿಗೆ ನಾಲ್ವರು ಮಕ್ಕಳು. ಮಕ್ಕಳೆಲ್ಲ ತಮ್ಮ ತಮ್ಮ ಬದುಕು ಅರಸಿ ಹೋಗಿದ್ದಾರೆ. ಕೊನೆಯ ಮಗ ಸೈನ್ಯದಲ್ಲಿದ್ದಾನೆ. ಚಂಗಪ್ಪಜ್ಜನಿಗೆ ತಂಗಚ್ಚಿಯೇ ಎಲ್ಲ. ತಂಗಚ್ಚಿಗೆ ಚಂಗಪ್ಪಜ್ಜನೇ ಸರ್ವಸ್ವ. ಹುಸಿ ಮನಸ್ಸು, ಕೋಪ ಏನೇ ಇದ್ದರೂ- ಅಲ್ಲಿ ಸರಸ ಮಾತ್ರ ಇದೆ, ವಿರಸವಿಲ್ಲ.

ಬದುಕಿನ ಸುದೀರ್ಘ ನಡುಗೆಯಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಪರಸ್ಪರ ಆಸರೆಯಾಗಿದ್ದಾರೆ. ಮನೆವಾರ್ತೆಗಳಲ್ಲೇ ಬದುಕನ್ನು ಸವಿಯುತ್ತಾರೆ. ಅವರ ನೆನಪುಗಳಲ್ಲಿ ನಾಸ್ಟಾಲ್ಜಿಯಾ ಇಲ್ಲ, ಬರೀ ಸೌಂದರ್ಯವಿದೆ. ಈ ದಾಂಪತ್ಯ ಗೀತೆ ಎಷ್ಟು ಸೊಗಸಾಗಿದೆ ಎಂದರೆ ಅದು ಊರವರು ಆಡಿಕೊಳ್ಳುವ ವಿಷಯವಾಗಿದೆ! ಊರ ಜನ ಮತ್ತು ದಂಪತಿ ಮಧ್ಯೆ ಚುಬ್ರ ವಾಹಕನಾಗಿದ್ದಾನೆ. ಅವನು ಹೇಳುವ ಕತೆಗಳು, ಗಾಸಿಪ್‌ಗಳು ಒಟ್ಟು ಕೊಡಗಿನ ಸಂದರ್ಭವನ್ನೇ ಕಟ್ಟಿಕೊಡುತ್ತವೆ.

ಅಲ್ಲಲ್ಲಿ ಅಪ್ಪಚ್ಚಕವಿಯ ಕಾವ್ಯ ವಾಚನ, ಕಚಗುಳಿ ಇಡುವ ಸಂಭಾಷಣೆ, ಹೃದಯ ತಟ್ಟುವ ಮಾತುಗಳಿಂದ ನಾಟಕವನ್ನು ಸೊಗಸಾಗಿ ನೇಯ್ದಿದ್ದಾರೆ ಕಾರ್ಯಪ್ಪ. ಕೊಡವ ಕನ್ನಡಿಗರಿಗೆ ಅರ್ಥವಾಗದ ಭಾಷೆಯಲ್ಲ. ಆ ಭಾಷೆಯಲ್ಲಿ ಶೇ.50 ಕನ್ನಡ ಪದಗಳೇ ಇವೆ. ಹಾಗಾಗಿ ಶೇ. 60ರಿಂದ 70ರಷ್ಟು ಆ ಭಾಷೆ ಎಲ್ಲ ಕನ್ನಡಿಗರಿಗೂ ಅರ್ಥವಾಗುತ್ತದೆ ಚಂಗಪ್ಪಜ್ಜನಾಗಿ ಅಡ್ಡಂಡ ಕಾರ್ಯಪ್ಪ ಅವರದು ನೈಜ ನಟನೆ.

ಹುಟ್ಟುನಟರೆಂಬಷ್ಟು ಸಹಜವಾಗಿ ಅವರ ಪಾತ್ರ ಮೂಡಿಬಂದಿದೆ. ಅವರೊಂದಿಗೆ ಸ್ಪರ್ಧೆಗೆ ಬಿದ್ದಂತೆ ತಂಗಚ್ಚಿಯಾಗಿ ಅನಿತಾ ಕಾರ್ಯಪ್ಪ ನಟಿಸಿದ್ದಾರೆ. ಚುಬ್ರನಾಗಿ ಚೆಡಿಯಂಡ ಮೇದಪ್ಪನ ನಟನೆಯೂ ಉತ್ತಮ. ನಾಟಕದಲ್ಲಿರುವುದು ಇವು ಮೂರೇ ಪಾತ್ರಗಳು. ಆದರೆ ಒಟ್ಟಾರೆ ಕೊಡಗು ವಾತಾವರಣವೇ ಕಣ್ಣಿಗೆ ಕಟ್ಟುತ್ತದೆ.

ಆಧುನಿಕ ಬದುಕಿನ ಕ್ರಮ ಕೊಡವ ನಾಡಿನ ದಂಪತಿಗಳ ಮಧ್ಯೆಯೂ ಸಾಕಷ್ಟು ಬಿರುಕುಗಳನ್ನು ತಂದಿದೆ. ದಾಂಪತ್ಯದ ಸಖೀಗೀತ ಕಡಿಮೆಯಾಗಿರುವ ಈ ಕಾಲಕ್ಕೆ ಇದನ್ನು ‘ದಾಂಪತ್ಯ ಥೆರಪಿ’ಯಾಗಿ ಬಳಸಿದ್ದೇವೆ ಎಂಬ ಸಮಜಾಯಿಷಿ ಕಾರ್ಯಪ್ಪ ಅವರದು. ಅದನ್ನವರು ವಾಚ್ಯವಾಗಿ ಹೇಳಲೇಬೇಕಿಲ್ಲ. ನಾಟಕವೇ ಅದನ್ನೆಲ್ಲ ಕಲಾತ್ಮಕವಾಗಿ ಕಟ್ಟಿಕೊಟ್ಟಿದೆ.

Write A Comment