ಮನೋರಂಜನೆ

ಚಿತ್ರ ವಾಸ್ತುಪ್ರಕಾರ: ಹೊರಳುದಾರಿಯಲ್ಲಿ ಅರ್ಧಚಂದ್ರ

Pinterest LinkedIn Tumblr

jaggu

–ರಘುನಾಥ ಚ.ಹ.

ಚಿತ್ರ:
ವಾಸ್ತುಪ್ರಕಾರ
ತಾರಾಗಣ:
ಜಗ್ಗೇಶ್, ಅನಂತನಾಗ್, ಟಿ.ಎನ್‌. ಸೀತಾರಾಂ, ರಕ್ಷಿತ್‌ ಶೆಟ್ಟಿ ಸುಧಾರಾಣಿ, ಪರೂಲ್ ಯಾದವ್, ಐಶಾನಿ ಶೆಟ್ಟಿ, ಸುಧಾ ಬೆಳವಾಡಿ, ಇತರರು
ನಿರ್ದೇಶನ:
ಯೋಗರಾಜ್ ಭಟ್
ನಿರ್ಮಾಪಕರು:
ರಿಸುಬ್ಬು, ಎಂ.ಎನ್‌. ಕುಮಾರ್

ಸೃಜನಶೀಲ ಕಲಾಕಾರನೊಬ್ಬ ತನ್ನ ಪ್ರತಿ ಪ್ರಯತ್ನದಲ್ಲೂ ಹೊಸತಾಗಲು, ತನ್ನನ್ನು ತಾನು ಮೀರಲು ಪ್ರಯತ್ನಿಸುತ್ತಿರುತ್ತಾನೆ. ಇಂಥ ಪ್ರಯತ್ನದಲ್ಲಿ ಅನೂಹ್ಯ ಗೆಲುವು ಅಥವಾ ದಾರುಣ ಸೋಲಿಗೆ ಎದೆಗೊಡಬೇಕಾದ ಅಪಾಯ ಕಲಾಕಾರನಿಗೆ ಇರುತ್ತದೆ. ಆ ಕಾರಣದಿಂದಲೇ ಅನೇಕರು, ಹೊಸತನಕ್ಕೆ ಹಂಬಲಿಸದೆ, ಸಿದ್ಧಸೂತ್ರಗಳನ್ನು ಮತ್ತೆ ಮತ್ತೆ ಉಜ್ಜುತ್ತಿರುತ್ತಾರೆ. ಕನ್ನಡ ಚಿತ್ರರಂಗದಲ್ಲಂತೂ ಹೊಸ ಪರೀಕ್ಷೆಗಳಿಗೆ ಒಡ್ಡಿಕೊಳ್ಳುವ ಸೃಜನಶೀಲರು ಬೆರಳೆಣಿಕೆಯಷ್ಟೂ ಇಲ್ಲ. ಇಂಥ ಅಪರೂಪದ ಪಟ್ಟಿಗೆ ಸೇರುವವರು ನಿರ್ದೇಶಕ ಯೋಗರಾಜ್‌ ಭಟ್‌. ಅವರ ‘ವಾಸ್ತುಪ್ರಕಾರ’ ಹೊಸ ಸಾಧ್ಯತೆಗಳಿಗೆ ಹಂಬಲಿಸುವ ಸಿನಿಮಾ ರೂಪದಲ್ಲಿ ಮುಖ್ಯವೆನ್ನಿಸುತ್ತದೆ. ಅವರ ಹಿಂದಿನ ಯಾವ ಚಿತ್ರಗಳೊಂದಿಗೂ ಹೋಲಿಸಲು ಸಾಧ್ಯವಿಲ್ಲ ಎನ್ನುವುದೇ ‘ವಾಸ್ತುಪ್ರಕಾರ’ದ ವಿಶೇಷವನ್ನು ಹೇಳುವಂತಿದೆ.

ವಾಸ್ತುಪ್ರಿಯರೇ ಹೆಚ್ಚಾಗಿರುವ ಸಂದರ್ಭದಲ್ಲಿ ವಾಸ್ತುವನ್ನು ಸುಳ್ಳೆಂದು ಹೇಳುವ ಧೈರ್ಯ ತೋರಿರುವ ನಿರ್ದೇಶಕರು, ಆ ಸುಳ್ಳನ್ನು ನಿರೂಪಿಸುವುದಕ್ಕೆ ಆಯ್ದುಕೊಂಡಿರುವ ದಾರಿಯೂ ಸೊಗಸಾಗಿದೆ. ಹೊಸತೊಂದು ದೇಶ–ಭಾಷೆಯನ್ನು ಕಥೆಯಲ್ಲಿ ಸೃಷ್ಟಿಸಿ, ಆ ಕಲ್ಪಿತ ಲೋಕಕ್ಕೆ ಪ್ರೇಕ್ಷಕರನ್ನು ಕರೆದೊಯ್ಯುವ ಪ್ರಯತ್ನ ಚಿತ್ರದಲ್ಲಿದೆ. ಹಳ್ಳಿಯಲ್ಲಿ ದಡ್ಡುಬಿದ್ದ ಹುಡುಗನೊಬ್ಬ, ಉದ್ಧಾರವಾಗುವ ಆಸೆಯಿಂದ ವಿದೇಶದಲ್ಲಿನ ತನ್ನ ಸೋದರಮಾವನ ಬಳಿ ಹೋಗುತ್ತಾನೆ. ಈ ಮಾವ ಅಳಿಯಂದಿರು ಮಾಡುವ ಕಿತಾಪತಿಗಳೇ ‘ವಾಸ್ತುಪ್ರಕಾರ’ದ ಕೇಂದ್ರ. ವಾಸ್ತುವನ್ನು ವಿರೋಧಿಸಿ ಊರು ಬಿಡುವ ಹುಡುಗ, ವಿದೇಶದಲ್ಲಿ ಹೊಟ್ಟೆಪಾಡಿಗಾಗಿ ವಾಸ್ತುತಜ್ಞನಾಗುವ ಬದುಕಿನ ವೈರುಧ್ಯ ಸಿನಿಮಾದಲ್ಲಿದೆ. ವಿಶಾಲವಾದ, ವೈಭವೋಪೇತ ಬಂಗಲೆಯಲ್ಲಿ ಉಸಿರುಗಟ್ಟಿದ ಸಂಬಂಧಗಳು, ಮನೆ ಅಸ್ತವ್ಯಸ್ತಗೊಂಡಾಗ ನಳನಳಿಸತೊಡಗುತ್ತವೆ. ಸಾಮಾನ್ಯವಾಗಿ ಸಂದೇಶ ನೀಡುವುದರಿಂದ ಯೋಗರಾಜ್‌ ಭಟ್‌ ಚಿತ್ರಗಳು ದೂರ. ಆದರೆ, ‘ವಾಸ್ತುಪ್ರಕಾರ’– ನೆಮ್ಮದಿಯ ಬದುಕಿಗಾಗಿ ಮನಸ್ಸಿನ ಗೋಡೆಗಳನ್ನು ಕೆಡಹುವ ಅಗತ್ಯವನ್ನು ಪ್ರತಿಪಾದಿಸುತ್ತದೆ. ಜಗ್ಗೇಶ್‌ ಅವರನ್ನು ‘ವಾಸ್ತುಪ್ರಕಾರ’ದಲ್ಲಿ ನೋಡುವುದೇ ಒಂದು ಚಂದ. ನಡೆ–ನುಡಿ, ಮಾತು–ಮೌನ ಎಲ್ಲದರಲ್ಲೂ ಉಲ್ಲಾಸ ಉತ್ಸಾಹವಿದೆ. ಉಳಿದಂತೆ ತಾರಾಗಣದಲ್ಲಿ ಗಮನಸೆಳೆಯುವುದು ಅನುಭವಿ ಅನಂತನಾಗ್‌ ಹಾಗೂ ಒಗರುಗನ್ನಡದ ಯುವನಟಿ ಐಶಾನಿ ಶೆಟ್ಟಿ. ವಾಸ್ತು ವಿದ್ವಾಂಸನಾಗಿ ಟಿ.ಎನ್‌. ಸೀತಾರಾಂ ಅವರ ಪಾತ್ರಕ್ಕೆ ಹೆಚ್ಚಿನ ಅವಕಾಶಗಳಿಲ್ಲ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಾಹಕ ಸಂತೋಷ್‌ ರೈ ಪಾತಾಜೆ ನೆಳಲು ಬೆಳಕಿನ ಆಟ, ಹರಿಕೃಷ್ಣರ ಹಿನ್ನೆಲೆ ಸಂಗೀತ ಗಮನಸೆಳೆಯುತ್ತದೆ.

ಕಥೆಯಲ್ಲಿ ಅನಿರೀಕ್ಷಿತ ತಿರುವುಗಳು ಇಲ್ಲದಿರುವುದು ‘ವಾಸ್ತುಪ್ರಕಾರ’ ಸಿನಿಮಾದ ಸಮಸ್ಯೆಗಳಲ್ಲೊಂದು. ಭಟ್ಟರ ಚಿತ್ರಗಳಲ್ಲಿನ ಹಾಡುಗಳಲ್ಲಿರುವ ಮತ್ತೆ ಮತ್ತೆ ಗುನುಗುನುಗಿಸುವ ಗುಣವೂ ವಾಸ್ತುಗೀತೆಗಳಲ್ಲಿಲ್ಲ. ಮಾತಿನ ಚಾಲಾಕಿತನ ಉಳಿಸಿಕೊಂಡೂ ಭಟ್ಟರು ಆವಾಹಿಸಿಕೊಂಡಿರುವ ಗಾಂಭೀರ್ಯ ಬೆರಗುಹುಟ್ಟಿಸುವಂತಿದೆ. ನಿರ್ದೇಶಕನಾಗಿ ಹೊರಳುದಾರಿಯಲ್ಲಿರುವ ಯೋಗರಾಜ್‌ ಭಟ್‌ ಅವರ ವಿಶಿಷ್ಟ ಪ್ರಯೋಗದ ರೂಪವಾಗಿ ‘ವಾಸ್ತುಪ್ರಕಾರ’ ಮಹತ್ವದ ಸಿನಿಮಾ. ಆದರೆ, ಈ ಹೊರಳುದಾರಿಯ ನಡಿಗೆಯಲ್ಲಿ ಅವರಿಗೆ ದೊರೆತಿರುವುದು ಸಮಾಧಾನಕರ ಯಶಸ್ಸು ಮಾತ್ರ.

Write A Comment