ಮನೋರಂಜನೆ

ವಿರಾಟ್ ಕೊಹ್ಲಿಯನ್ನು ಟೀಕೆ ಮಾಡುವ ಮುನ್ನ…

Pinterest LinkedIn Tumblr

Virat-Kohli

ವಿಶ್ವಕಪ್ ಸೆಮಿಫೈನಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡು ಭಾರತ ವಿಶ್ವಕಪ್ ಪಂದ್ಯದಿಂದ ಹೊರಗೆ ಬಿತ್ತು. ಅಲ್ಲಿಯವರೆಗೆ ಟೀಂ ಇಂಡಿಯಾ ಏಳು ಪಂದ್ಯಗಳನ್ನು ಗೆದ್ದು ಬೀಗಿದಾಗ ಎಲ್ಲರೂ ಭಾರತೀಯ ತಂಡಕ್ಕೆ ಬೆಂಬಲವಾಗಿ ನಿಂತಿದ್ದರು. ಯಾವಾಗ ಸೆಮಿಫೈನಲ್‌ನಲ್ಲಿ ಟೀಂ ಇಂಡಿಯಾ ಪರಾಭವಗೊಂಡಿತೋ ಅಭಿಮಾನಿಗಳು, ನಿರೂಪಕರು ಎಲ್ಲರೂ  ಆಟಗಾರರನ್ನು ವಿಮರ್ಶೆಗೊಳಪಡಿಸತೊಡಗಿದರು. ಸೆಮಿಫೈನಲ್‌ವಲ್ಲಿ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ಎಲ್ಲರ ಟೀಕೆಗೊಳಗಾಯಿತು. ಸೆಮಿಫೈನಲ್ ವೀಕ್ಷಿಸಲು ಬಂದ ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾಳನ್ನೂ ಟೀಕಾಕಾರರು ಸುಮ್ಮನೆ ಬಿಟ್ಟಿಲ್ಲ. ಸೋಷ್ಯಲ್ ಮೀಡಿಯಾಗಳಲ್ಲಿ ಟೀಕೆ, ವಿಮರ್ಶೆ, ಜೋಕ್‌ಗಳಲ್ಲಿ ಅನುಷ್ಕಾ-ಕೊಹ್ಲಿ ಲೇವಡಿಗೊಳಗಾದರು. ವಿರಾಟ್ ಕೊಹ್ಲಿಯಂಥವರು ವಿಮರ್ಶೆಗಳಿಗೆ ಅತೀತರಲ್ಲ. ಇಲ್ಲಿ ಕೊಹ್ಲಿ ಸೋತಿರಬಹುದು. ಆದರೆ ಆತ ಕ್ರಿಕೆಟ್‌ಗಾಗಿ ನೀಡಿದ ಮಹತ್ವ ಮತ್ತು ಸಮರ್ಪಣೆಯನ್ನು ನಾವು ಮರೆಯುವಂತಿಲ್ಲ.

1999 ವಿಶ್ವಕಪ್‌ನ ಸಂದರ್ಭದಲ್ಲಿ ಅಪ್ಪ ತೀರಿದಾಗ ತಾಯ್ನಾಡಿಗೆ ಮರಳಿದ ಸಚಿನ್ ತೆಂಡೂಲ್ಕರ್ ಅಪ್ಪನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಇಂಗ್ಲೆಂಡ್‌ಗೆ ವಾಪಾಸಾದರು. ಅಲ್ಲಿ ಕಿನ್ಯಾ ವಿರುದ್ಧ ಸೆಂಚುರಿ ಬಾರಿಸಿ ಅಪ್ಪನ ಸ್ಮರಣೆ ಮಾಡುತ್ತಿರುವ ಸಚಿನ್‌ನ ಚಿತ್ರವನ್ನು ಯಾರಿಗಾದರೂ ಮರೆಯಲು ಸಾಧ್ಯವೆ? ಕ್ರಿಕೆಟ್ ಹಾಗೂ ದೇಶದ ಮೇಲಿರುವ ಅವರ ಅರ್ಪಣಾ ಮನೋಭಾವವನ್ನು ನಾವು ಅವತ್ತು ನೋಡಿದ್ದೆವು. ಅದೇ ರೀತಿಯ ಅನುಭವ ವಿರಾಟ್ ಕೊಹ್ಲಿ ಜೀವನದಲ್ಲೂ ನಡೆದಿದೆ.

2006 ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ದೆಹಲಿ ಪರವಾಗಿ ಕೊಹ್ಲಿ ಆಟವಾಡುತ್ತಿದ್ದರು. ಆಗ ಅವರ ವಯಸ್ಸು 18. ಆ ದಿನದ ಪಂದ್ಯ ಅಂತ್ಯವಾದಾಗ  40 ರನ್ ಪಡೆದು ಕೊಹ್ಲಿ ಕ್ರೀಸ್‌ನಲ್ಲಿದ್ದರು. ಅದು ಉತ್ತಮ ಜತೆಯಾಟವಾಗಿತ್ತು. ಅಲ್ಲೊಂದು ವಿಕೆಟ್ ಬಿದ್ದರೆ ಟೀಂ ಫಾಲೋ ಆನ್ ಮಾಡಬೇಕಾಗಿತ್ತು.

ಟೀಂ ಎಲ್ಲಿ ಸೋಲುತ್ತೋ ಎಂಬ ಚಿಂತೆಯಿಂದಲೇ ಕೊಹ್ಲಿ ಅಂದು ನಿದ್ದೆ ಮಾಡಲು ಯತ್ನಿಸಿದ್ದರು. ಎಷ್ಟೇ ಯತ್ನಿಸಿದರೂ ನಿದ್ದೆ ಸುಳಿಯಲಿಲ್ಲ. ಮುಂಜಾನೆ 3 ಗಂಟೆಯ ಹೊತ್ತಿಗೆ ಕೊಹ್ಲಿಗೆ ಒಂದು ಕರೆ ಬಂತು. ಅದು ಅಪ್ಪ ಪ್ರೇಮ್ ಕೊಹ್ಲಿ ತೀರಿದ್ದಾರೆ ಎಂಬ ಸುದ್ದಿಯಾಗಿತ್ತು.  ಅಪ್ಪನ ಮರಣ ವಾರ್ತೆ ಕೇಳಿ ಕೊಹ್ಲಿ ಅಕ್ಷರಶಃ ಕುಸಿದು ಹೋದರು. ಬೆಳಗ್ಗೆ ಪಂದ್ಯ ಆರಂಭವಾದಾಗ ದೆಹಲಿ ಟೀಂ ಮ್ಯಾನೇಜ್‌ಮೆಂಟ್ ಇನ್ನೊಬ್ಬ ಬ್ಯಾಟ್ಸ್‌ಮೆನ್‌ನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸಿತ್ತು, ಆದರೆ ಎಲ್ಲರನ್ನೂ ದಿಗ್ಬ್ರಮೆಗೊಳಿಸಿ ಕೊಹ್ಲಿ ಕ್ರೀಸ್‌ಗಿಳಿಯಲು ಸಿದ್ಧರಾಗಿ ನಿಂತಿದ್ದರು. ಅಮ್ಮನ ಮಾತಿನ ಪ್ರಕಾರ ಕೊಹ್ಲಿ ಕಣಕ್ಕಿಳಿದಿದ್ದರು. ಅಂದು 251 ನಿಮಿಷ ಕ್ರೀಸ್‌ನಲ್ಲಿ ನಿಂತ ಕೊಹ್ಲಿ 90 ರನ್ ಗಳಿಸಿ, ಅಂಪೈರ್‌ನ ತಪ್ಪು ನಿರ್ಧಾರಕ್ಕೆ ವಿಕೆಟ್ ಕಳೆದು ಕೊಂಡು ಪೆವಿಲಿಯನ್‌ಗೆ ಮರಳುವಾಗ ದೆಹಲಿ ಟೀಂ ಉತ್ತಮ ಸ್ಥಿತಿ ಕಂಡುಕೊಂಡಿತ್ತು.

ಆ ಅರ್ಪಣಾ ಮನೋಭಾವವೇ ಕೊಹ್ಲಿಯನ್ನು ಕ್ರಿಕೆಟ್ ಲೋಕದಲ್ಲಿ ಈ ಹಂತಕ್ಕೆ ಬೆಳೆಸಿದ್ದು. ಆಸ್ಟ್ರೇಲಿಯಾ ಪ್ರವಾಸವನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಒಂದರ ಹಿಂದೆ ಒಂದು ಸೆಂಚುರಿ ಬಾರಿಸಿ ಅವರು ಟೆಸ್ಟ್‌ನಲ್ಲಿ ಮಿಂಚಲಿಲ್ಲವೆ?  ಭಾರತದ ಬ್ಯಾಟ್ಸ್ ಮೆನ್‌ಗಳ ಹಿನ್ನೆಲೆಯನ್ನು ಪರಿಶೀಲಿಸಿದರೆ ವಿದೇಶಿ ನೆಲದಲ್ಲಿ ಅದ್ಭುತ ಪ್ರದರ್ಶನ ನೀಡಿದವರು ಕೆಲವೇ ಕೆಲವರು. ಕಳೆದ ಕೆಲವು ವರ್ಷಗಳಲ್ಲಿ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಕೊಹ್ಲಿ ಎಂಬುದನ್ನು ಅಷ್ಟು ಬೇಗ ಮರೆಯಲು ಸಾಧ್ಯವೇ?. ಈ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೊಹ್ಲಿ ಸೆಂಚುರಿ ಬಾರಿಸಿ ಅಬ್ಬರಿಸಿದಾಗ ಕೊಹ್ಲಿ ಮೇಲಿನ ಭರವಸೆ ಇನ್ನಷ್ಟು ಹೆಚ್ಚಾಗಿತ್ತು.  ಆದರೆ ಆ ಭರವಸೆಯನ್ನು ಕೊನೆಯವರೆಗೆ ಕಾಪಿಡಲು ಅವರಿಂದ ಸಾಧ್ಯವಾಗಲಿಲ್ಲ. ಹಾಗಂತ ಎಲ್ಲದಕ್ಕೂ ಅವರ ಮೇಲೆ ಟೀಕಾಸ್ತ್ರ ಪ್ರಯೋಗಿಸುವುದು ಎಷ್ಟು ಸರಿ?. ಮುಂದಿನ ವರ್ಷಗಳಲ್ಲಿ ಭಾರತದ ತಂಡದ ಬೆನ್ನೆಲುಬು ಕೊಹ್ಲಿ ಎಂಬುದನ್ನು ನಾವು ತಳ್ಳಿಹಾಕುವಂತಿಲ್ಲ.

ಭಾರತದ ಪರಾಭವವನ್ನು ಕಂಡು ಟೀಕೆ ಮಾಡುವವರು, ಹೀಯಾಳಿಸುವವರು, ಭಾರತ ಗೆಲವು ಸಾಧಿಸಿದಾಗ ವಿಜಯೋತ್ಸಹ ಆಚರಿಸಲು ಅರ್ಹತೆ ಪಡೆಯುವುದಿಲ್ಲ ಎಂದು ಸಚಿನ್ ಹೇಳಿದ ಮಾತುಗಳನ್ನು ಇಲ್ಲಿ ನೆನಪಿಟ್ಟುಕೊಳ್ಳಬೇಕಾಗಿದೆ.

Write A Comment