ಕರ್ನಾಟಕ

JDSನಲ್ಲಿ ಅಸಮಾಧಾನಕ್ಕೆ ಕಾರಣವಾದ 60ಕೋಟಿ ವೆಚ್ಚದ ಚಿತ್ರ

Pinterest LinkedIn Tumblr

Nikhi-Gouda-Film

ಬೆಂಗಳೂರು,ಮಾ.30- ಪಕ್ಷದ ನೂತನ ಕಚೇರಿಗೆ ದೇಣಿಗೆ ಸಂಗ್ರಹಿಸುತ್ತಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರ ದ್ವಂದ್ವ ನಿಲುವು ಬಹುತೇಕ ಶಾಸಕರಲ್ಲಿ ಅಸಮಾಧಾನದ ಕಿಡಿ ಹೊತ್ತಿಸಿದೆ. ಕಾರಣ ಪಕ್ಷದ ರಾಜ್ಯಾಧ್ಯಕ್ಷ  ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್‌ಗೌಡ ಅವರ ಅದ್ದೂರಿ ಚಿತ್ರ ನಿರ್ಮಾಣವೇ ಈ  ಅಸಮಾಧಾನಕ್ಕೆ ಮೂಲ ಕಾರಣವಾಗಿದೆ.  ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್‌ಗೌಡ ನಟಿಸುವ ಚಿತ್ರವನ್ನು ಕನ್ನಡ ಚಿತ್ರರಂಗ ಇತಿಹಾಸದಲ್ಲೇ ಹಿಂದೆಂದೂ ಕಾಣದ ರೀತಿಯಲ್ಲಿ

ಸುಮಾರು 60 ಕೋಟಿ ವೆಚ್ಚದಲ್ಲಿ ಚಿತ್ರ ನಿರ್ಮಿಸಲು ಮುಂದಾಗಿದ್ದಾರೆ. ಆದರೆ ದೇವೇಗೌಡರು ತಮ್ಮ ಬಳಿ ಆಗಲಿ ಅಥವಾ ತಮ್ಮ ಕುಟುಂಬದವರ ಬಳಿಯಾಗಲಿ ಪಕ್ಷದ ಕಚೇರಿ ನಿರ್ಮಾಣಕ್ಕೆ ಹಣವಿಲ್ಲ ಎಂದು ಹೇಳುತ್ತಿರುವುದು ಶಾಸಕರ ಕೋಪವನ್ನು ಕೆರಳುವಂತೆ ಮಾಡಿದೆ.

ಮೊಮ್ಮಗನ ಚಿತ್ರಕ್ಕೆ 60 ಕೋಟಿ ಬಂಡವಾಳ ಹೂಡಲು ಸಜ್ಜಾಗಿರುವ ಗೌಡರಿಗೆ ಒಂದಿಷ್ಟು ಹಣ ಖರ್ಚು ಮಾಡಿ ಕಚೇರಿ ನಿರ್ಮಿಸಲು ಸಾಧ್ಯ ಇಲ್ಲವೇ ಎಂದು ಶಾಸಕರು ಮಾತನಾಡುತ್ತಿದ್ದಾರೆ. ಬೆಂಗಳೂರಿನ ಕೆ.ಆರ್.ಕೃಷ್ಣ ಫ್ಲೋರ್‌ಮಿಲ್ ಬಳಿ ಜೆಡಿಎಸ್ ನೂತನ ಕಚೇರಿ ನಿರ್ಮಾಣವಾಗುತ್ತಿದೆ. ಸದ್ಯಕ್ಕೆ ತಾತ್ಕಾಲಿಕವಾಗಿ ಶೆಡ್‌ವೊಂದನ್ನು ನಿರ್ಮಾಣ ಮಾಡಲಾಗಿದೆ. ಬಿಬಿಎಂಪಿ ಅನುಮತಿ ನೀಡಿದರೆ ಇಲ್ಲಿ ಪೂರ್ಣ ಪ್ರಮಾಣದ ಕಚೇರಿಯನ್ನು ನಿರ್ಮಿಸಬೇಕೆಂದು ಗೌಡರ ಲೆಕ್ಕಾಚಾರವಾಗಿದೆ. ಪೂರ್ಣ ಪ್ರಮಾಣದಲ್ಲಿ ಕಚೇರಿ ನಿರ್ಮಿಸಿದರೆ ಪಕ್ಷದ ಸಂಘಟನೆ ಹಾಗೂ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಇದಕ್ಕಾಗಿ ಶಾಸಕರು ಪಕ್ಷದ ಮುಖಂಡರು ದೇಣಿಗೆ ನೀಡಬೇಕೆಂದು ಗೌಡರು ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದ್ದಾರೆ.

ಕಚೇರಿ ನಿರ್ಮಾಣವಾಗುತ್ತಿರುವ ಜಾಗದಲ್ಲಿ ದೇಣಿಗೆಗಾಗಿ ನಿಧಿಯೊಂದನ್ನು ಸ್ಥಾಪಿಸಲಾಗಿದ್ದು ಪಕ್ಷದ ಹಿತ ಬಯಸುವವರು ಚೆಕ್ ಇಲ್ಲವೇ ನಗದನ್ನು  ಹುಂಡಿಗೆ ಹಾಕುವಂತೆ ಗೌಡರು ಮನವಿ ಮಾಡಿದ್ದಾರೆ. ಗೌಡರ ಈ ಮನವಿ ಶಾಸಕರನ್ನು ಕೆರಳುವಂತೆ ಮಾಡಿದೆ. ಸಾಧ್ಯವಾದರೆ ಪ್ರತಿಯೊಬ್ಬ ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ ಹಾಗೂ ಲೋಕಸಭಾ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳಿಗೆ ಇಂತಿಷ್ಟು ಕೊಡುವಂತೆ ನೇರವಾಗಿ ಕೇಳಿದರೆ ದೇಣಿಗೆ ನೀಡಲು ಸಿದ್ಧರಿದ್ದೇವೆ. ಆದರೆ ನಮ್ಮ ಕುಟುಂಬದ ಬಳಿ ಹಣವಿಲ್ಲವೆಂದು ಗೌಡರು ಹೇಳಿದರೆ ಪಕ್ಷದ ಸಿದ್ಧಾಂತಗಳು ಅಪಹಾಸ್ಯಕ್ಕೆ ಈಡಾಗುವುದಿಲ್ಲವೆ ಎಂಬುದು ಶಾಸಕರ ಅಳಲು.

ಮೊಮ್ಮಗನ ಚಿತ್ರಕ್ಕೆ 60 ಕೋಟಿ ಹಣ ಖರ್ಚು ಮಾಡುವವರಿಗೆ ಒಂದಿಷ್ಟು ಹಣ ತೆಗೆದು ಪಕ್ಷದ ಕಚೇರಿ ನಿರ್ಮಿಸಲು ಸಾಧ್ಯವಿಲ್ಲವೇ? ಕುಮಾರಸ್ವಾಮಿ, ರೇವಣ್ಣ ಪಕ್ಷದ ಹೆಸರಿನಲ್ಲಿ ಲಾಭ ಮಾಡಿಕೊಂಡಿಲ್ಲವೆ? ಎಂಬ ಮೂಲ ಪ್ರಶ್ನೆಯನ್ನು ಹಲವು ಶಾಸಕರು ಮುಂದಿಡುತ್ತಾರೆ.
ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ನೀಡುವ ದೇಣಿಗೆಯನ್ನು ಗೌಡರ ಕುಟುಂಬದವರೇ ಪಡೆಯುತ್ತಾರೆ. ಇದು  ರಾಮನ  ಲೆಕ್ಕ ,ಕೃಷ್ಣನ ಲೆಕ್ಕ ಎನ್ನುವಂತಾಗಿದೆ. ಗೌಡರ ಈ ರೀತಿ ಕಚೇರಿ ಮುಂಭಾಗದಲ್ಲಿ ಹುಂಡಿ ಇಡುವುದು ಇಲ್ಲವೇ ನಮ್ಮ  ಬಳಿ ಹಣವಿಲ್ಲ ಕಚೇರಿ ಕಟ್ಟಲು ವಂತಿಗೆ ನೀಡಬೇಕೆಂದು ಮನವಿ ಮಾಡುತ್ತಿರುವುದು ನಮಗೆ ತಲೆ ತಗ್ಗಿಸುವಂತಾಗಿದೆ  ಎನ್ನುತ್ತಾರೆ ಅನೇಕ ಶಾಸಕರು.

ರಾಜಕಾರಣಿಗಳ ಮಕ್ಕಳು ಚಿತ್ರ ನಿರ್ಮಿಸಬಾರದೆಂಬ ನಿಯಮವಿಲ್ಲ ಆದರೆ ಚಿತ್ರ ಸೆಟ್ಟೇರುವ ಮೊದಲೇ 60 ಕೋಟಿ, 70 ಕೋಟಿ ಎಂದು ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದೆ. ಇಷ್ಟು ದೊಡ್ಡ ಮೊತ್ತದ ಹಣ ಖರ್ಚು ಮಾಡುವವರಿಗೆ ಯಕಶ್ಚಿತ್ ಒಂದೆರಡು ಕೋಟಿ ರೂ.ಗಳಲ್ಲಿ  ಕಚೇರಿ ಕಟ್ಟಲು ಅಡ್ಡಿಯಾದರೂ ಏನು ಎಂಬುದು ಶಾಸಕರೊಬ್ಬರ ಪ್ರಶ್ನೆ. ನಾವು ಗೌಡರು ಕೇಳಿದಷ್ಟು ವಂತಿಗೆ ನೀಡಲು ಸಿದ್ಧರಿದ್ದೇವೆ, ಆದರೆ ಅವರ ಮಾತಿನಲ್ಲಿ ದ್ವಂದ್ವ ನಿಲುವು ಇರಬಾರದು ಮಾತಿಗೂ ಮತ್ತು ಕೃತಿಗೂ ವ್ಯತ್ಯಾಸ ಕಂಡರೆ ನಮ್ಮ ಪಕ್ಷಕ್ಕೂ ಬೇರೆ ಪಕ್ಷಕ್ಕೂ ವ್ಯತ್ಯಾಸವಿರುವುದಿಲ್ಲ . ಕಚೇರಿ ಮುಂದಿರುವ ಹುಂಡಿಯನ್ನು ತೆಗೆದು ಹಾಕಿ ಪ್ರತಿಯೊಬ್ಬರೂ ಕಡ್ಡಾಯವಾಗಿ ವಂತಿಗೆ ನೀಡುವಂತೆ ಸೂಚಿಸುವ ಫಲಕ ಹಾಕಿದರೆ ಕಡ್ಡಾಯವಾಗಿ ವಂತಿಗೆ ನೀಡಲಾಗುವುದು ಎಂದು ಹೇಳಿಕೊಂಡಿದ್ದಾರೆ.

ಪಕ್ಷದಿಂದ ಲಾಭ ಪಡೆದುಕೊಂಡವರ ಬಳಿ ವಂತಿಗೆ ಪಡೆಯಬೇಕು, ಆದರೆ ಯಾವ ಪ್ರತಿಫಲಾಕ್ಷೆ ಪಡೆಯದೇ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವವರಿಗೆ ವಂತಿಗೆ ನೀಡುವಂತೆ ಒತ್ತಡ ಹಾಕಿದರೆ ಎಲ್ಲಿಂದ ಕೊಡಲು ಸಾಧ್ಯ. ಗೌಡರು ಈಗಿನ ಜನಮಾಸಕ್ಕೆ ತಕ್ಕಂತೆ ನಡೆದುಕೊಳ್ಳದಿದ್ದರೆ ಕಚೇರಿ ನಿರ್ಮಿಸಿಯೂ ಲಾಭವಿಲ್ಲ ಎಂಬುದು ಶಾಸಕರ ಒಕ್ಕೊರಲ ಅಭಿಪ್ರಾಯವಾಗಿದೆ.

Write A Comment