ಮನೋರಂಜನೆ

ಆಸ್ಟ್ರೇಲಿಯಾದ ದಿಟ್ಟ ಹೆಜ್ಜೆಗಳು…

Pinterest LinkedIn Tumblr

kpec30xaustralia1

-ಪ್ರಮೋದ್‌ ಜಿ.ಕೆ.
ನಮ್ಮದು ವಿಶ್ವವೇ ಮೆಚ್ಚುವಂಥ ತಂಡ… ಹೋದ ವಾರ ನಡೆದ ವಿಶ್ವಕಪ್‌ ಟೂರ್ನಿಯ ಭಾರತದ ಎದುರಿನ ಸೆಮಿಫೈನಲ್‌ ಪಂದ್ಯದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್‌ ಹೆಮ್ಮೆಯಿಂದ ಹೇಳಿದ ಮಾತಿದು. ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ. ಕ್ರಿಕೆಟ್‌ ಅನ್ನು ಇಂಗ್ಲೆಂಡ್‌ ಜಗತ್ತಿಗೆ ಪರಿಚಯಿಸಿತಾದರೂ, ಈ ಆಟವನ್ನು ಹೇಗೆ ಆಡಬೇಕು ಎನ್ನುವುದನ್ನು ಹೇಳಿಕೊಟ್ಟಿದ್ದು ಆಸ್ಟ್ರೇಲಿಯಾ. 1975ರಲ್ಲಿ ವಿಶ್ವಕಪ್‌ ಆರಂಭವಾಗಿ ಇದುವರೆಗೂ ಹನ್ನೊಂದು ಟೂರ್ನಿಗಳು ನಡೆದಿವೆ. ಕಾಂಗರೂ ನಾಡಿನ ಪಡೆ ನಾಲ್ಕು ಸಲ (ಈ ಬಾರಿಯ ಫೈನಲ್‌ ಬಿಟ್ಟು) ವಿಶ್ವ ಕಿರೀಟ ಧರಿಸಿದೆ.

ಒಂದು ಕಾಲದಲ್ಲಿ ಕ್ರಿಕೆಟ್‌ ಜಗತ್ತನ್ನು ಆಳಿದ್ದ ವೆಸ್ಟ್‌ ಇಂಡೀಸ್‌ ವಿಶ್ವಕಪ್ ಚಾಂಪಿಯನ್‌ ಆಗಿದ್ದು ಎರಡು ಬಾರಿ ಮಾತ್ರ. ಹೆಚ್ಚು ಏಕದಿನ ಪಂದ್ಯಗಳನ್ನು ಆಡಿದ ದಾಖಲೆಯಲ್ಲಿ ಎರಡನೇ ಸ್ಥಾನ ಹೊಂದಿರುವ ಆಸ್ಟ್ರೇಲಿಯಾ ಅತ್ಯಧಿಕ ಟ್ರೋಫಿ ಗೆದ್ದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಈ ವಿಷಯದಲ್ಲಿ ಯಾವ ತಂಡಗಳೂ ಆಸ್ಟ್ರೇಲಿಯಾಕ್ಕೆ ಸಾಟಿಯಾಗಿ ನಿಲ್ಲಲು ಆಗದು. ಆಟಗಾರರು ಹೊಂದಿರುವ ವೃತ್ತಿಪರತೆ, ಬದ್ಧತೆ ಮತ್ತು ಫಿಟ್‌ನೆಸ್‌ ಯಶಸ್ಸಿನ ಗುಟ್ಟು. ವಿಶ್ವದ ಅದ್ಭುತಗಳಲ್ಲಿ ಕಾಂಗರೂಗಳ ನಾಡಿನ ತಂಡವೂ ಒಂದು. ಪ್ರತಿಯೊಬ್ಬ ಕ್ರಿಕೆಟ್‌ ಅಭಿಮಾನಿ ಬೆರಗುಗೊಳ್ಳುವಂಥ ಸಾಧನೆ ಆಸ್ಟ್ರೇಲಿಯಾದ್ದು. ಬೇರೆ ತಂಡಗಳು ಇವರಂತೆ ಸಾಧನೆ ಮಾಡಲು ಸಾಕಷ್ಟು ವರ್ಷ ಆಡಬೇಕು.

ಆಸ್ಟ್ರೇಲಿಯಾದವರು ಆಡುವ ರೀತಿಯೇ ಕೋಟ್ಯಂತರ ಅಭಿಮಾನಿಗಳ ಮನಸ್ಸು ಗೆದ್ದಿದೆ. ಬೇರೆ ತಂಡಗಳ ಕಣ್ಣು ಕುಕ್ಕುವಂತೆ ಮಾಡಿದೆ. ಎದುರಾಳಿ ತಂಡದವರೂ ಮುದಗೊಳ್ಳುವಂತೆ ಆಡುವ ಕೌಶಲ ಸರಾಗವಾಗಿ ಒಲಿದು ಬಿಟ್ಟಿದೆ. ವಿಶ್ವಕಪ್‌ ಮಟ್ಟಿಗೆ ಹೇಳುವುದಾದರೆ ‘ಪಂಟರ್‌’ ಖ್ಯಾತಿಯ ರಿಕಿ ಪಾಂಟಿಂಗ್‌ ಆಸ್ಟ್ರೇಲಿಯಾ ಕಂಡ ಯಶಸ್ವಿ ನಾಯಕ. ಇವರ ಮುಂದಾಳತ್ವದ ತಂಡ ವಿಶ್ವಕಪ್‌ನಲ್ಲಿ ಒಂದೂ ಪಂದ್ಯದಲ್ಲಿ ಸೋಲು ಕಂಡಿಲ್ಲ. ಸತತ ಎರಡು ಬಾರಿ ಚಾಂಪಿಯನ್ ಪಟ್ಟ ತಂದುಕೊಟ್ಟ ಏಕೈಕ ನಾಯಕ ಎನ್ನುವುದು ಪಾಂಟಿಂಗ್‌ಗೆ ಇರುವ ಹೆಮ್ಮೆ. ವಿಶ್ವಕಪ್‌ನಲ್ಲಿ ಸತತ ಮೂರು ವರ್ಷ ಟ್ರೋಫಿ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡವನ್ನು ನೋಡುವ ದೃಷ್ಟಿಕೋನವೇ ಬದಲಾಗಿ ಹೋಗಿದೆ.

ಎದುರಾಳಿ ಯಾವುದೇ ಇರಲಿ, ಆಸ್ಟ್ರೇಲಿಯಾವೇ ಗೆಲ್ಲುವುದು ಎಂದು ಪಂದ್ಯದ ಮೊದಲೇ ಭವಿಷ್ಯ ನುಡಿಯುವವರ ಸಂಖ್ಯೆ ಹೆಚ್ಚಿದೆ. ಹಲವು ವರ್ಷ ಈ ತಂಡ ಏಕದಿನ ಕ್ರಿಕೆಟ್‌ನ ಸಾರ್ವಭೌಮನಾಗಿ ಮೆರೆದಾಡುತ್ತಿದೆ. ಸರ್‌ ಡಾನ್ ಬ್ರಾಡ್ಮನ್‌, ಆ್ಯಡಮ್‌ ಗಿಲ್‌ಕ್ರಿಸ್ಟ್‌, ರಿಕಿ ಪಾಂಟಿಂಗ್‌, ಸ್ಪಿನ್‌ ಮೋಡಿಗಾರ ಶೇನ್‌ ವಾರ್ನ್‌, ಗ್ಲೆನ್ ಮೆಕ್‌ ಗ್ರಾ, ಮೈಕಲ್‌ ಹಸ್ಸಿ, ಶೇನ್ ವಾಟ್ಸನ್‌, ಸ್ಟೀ ವಾ ಮತ್ತು ಈಗಿನ ನಾಯಕ ಕ್ಲಾರ್ಕ್ ಅವರಂಥ ದಿಟ್ಟ ಹೋರಾಟಗಾರರು ತಂಡದಲ್ಲಿರುವುದರಿಂದ ಆಸ್ಟ್ರೇಲಿಯಾ ಸರ್ವಕಾಲಕ್ಕೂ ಚಾಂಪಿಯನ್‌ ತಂಡ ಎನಿಸಿಕೊಳ್ಳುತ್ತದೆ.

ಈ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಶ್ರೇಷ್ಠ ಆಟವಾಡುವುದು ಅಗತ್ಯವಿತ್ತು. ಈ ರಾಷ್ಟ್ರ ನ್ಯೂಜಿಲೆಂಡ್‌ ಜೊತೆ ಜಂಟಿಯಾಗಿ ಟೂರ್ನಿಗೆ ಆತಿಥ್ಯ ವಹಿಸಿತ್ತು. 23 ವರ್ಷಗಳ ಹಿಂದೆಯೂ ಕಿವೀಸ್ ಮತ್ತು ಕಾಂಗರೂಗಳ ನಾಡಿನಲ್ಲಿಯೇ ಟೂರ್ನಿ ಆಯೋಜನೆಯಾಗಿತ್ತು. ಜೊತೆಗೆ, ಹಾಲಿ ಚಾಂಪಿಯನ್‌ ಎನ್ನುವ ಕಿರೀಟವೂ ಇತ್ತು. ಭಾರತ ಮತ್ತು ಪಾಕಿಸ್ತಾನದ ಆತಿಥ್ಯದಲ್ಲಿ ನಡೆದಿದ್ದ 1987ರ ಟೂರ್ನಿಯಲ್ಲಿ ಆಸ್ಟ್ರೇಲಿಯಾ ಮೊದಲ ಬಾರಿಗೆ ಚಾಂಪಿಯನ್‌ ಆಗಿತ್ತು. ಆದ್ದರಿಂದ ನಂತರದ ಟೂರ್ನಿಯಲ್ಲೂ ಟ್ರೋಫಿ ಉಳಿಸಿಕೊಳ್ಳುವ ಒತ್ತಡವಿತ್ತು. ಜೊತೆಗೆ, ತವರಿನ ಅಂಗಳದಲ್ಲಿ ಮಿಂಚುವ ಆಸೆಯಿತ್ತು.

ಆದರೆ, ಆಗ ಆದದ್ದೇ ಬೇರೆ. ಟಾಮ್‌ ಮೂಡಿ, ಸ್ಟೀವ್‌ ವಾ, ಮಾರ್ಕ್‌ ವಾ, ಡೇವಿಡ್ ಬೂನ್‌, ಅಲನ್‌ ಬಾರ್ಡನ್‌ ಅವರಂಥ ಶ್ರೇಷ್ಠ ಆಟಗಾರರನ್ನು ಹೊಂದಿದ್ದ ತಂಡ ಸೆಮಿಫೈನಲ್‌ನಲ್ಲಿ ಪಾಕಿಸ್ತಾನದ ಎದುರು ಮುಗ್ಗರಿಸಿತ್ತು. ತವರಿನ ಅಭಿಮಾನಿಗಳ ಮುಂದೆಯೇ ಆಸ್ಟ್ರೇಲಿಯಾದ ಮಾನ ಹರಾಜಾಗಿತ್ತು. ಆ ಬಳಿಕ ನಡೆದ ಮೊದಲ ವಿಶ್ವಕಪ್‌ ಟೂರ್ನಿಯಿದು. ಆದ್ದರಿಂದ ಕಾಂಗರೂ ನಾಡಿಗೆ ಮಹತ್ವವೆನಿಸಿತ್ತು. ಈ ತಂಡದವರು ಫೈನಲ್‌ವರೆಗೂ ಅಪೂರ್ವ ಆಟವಾಡಿದರು.

ಪಂದ್ಯದಲ್ಲಿ ಸೋಲು ಗೆಲುವು ಎರಡೂ ಸಹಜ ಎನ್ನುವ ವಾದವೇನೂ ನಿಜ. ಆದರೆ, ವಿಶ್ವದ ಶ್ರೇಷ್ಠ ತಂಡವನ್ನು ನಿರ್ಧರಿಸುವ ಸ್ಪರ್ಧೆಯಲ್ಲಿ ಗೆಲ್ಲುವುದು ಅನಿವಾರ್ಯ. ಈ ವಿಷಯದಲ್ಲಿ ಆಸ್ಟ್ರೇಲಿಯಾ ಎಂದಿಗೂ ಹಿಂದೆ ಬಿದ್ದಿಲ್ಲ. ಈ ಬಾರಿಯ ವಿಶ್ವಕಪ್‌ನ ಪ್ರತಿ ಪಂದ್ಯದಲ್ಲಿಯೂ ಕಂಡುಬಂದ ಸಾಂಘಿಕ ಹೋರಾಟ ಇದಕ್ಕೆ ಸಾಕ್ಷಿ.  ಆದ್ದರಿಂದಲೇ ಕಾಂಗರೂ ನಾಡಿನ ತಂಡ ಸರ್ವಕಾಲಕ್ಕೂ ಚಾಂಪಿಯನ್‌ ಎನಿಸಿಕೊಳ್ಳುತ್ತದೆ. ಈ ಕಾರಣಕ್ಕಾಗಿಯೇ ಕ್ಲಾರ್ಕ್‌ ‘ನಮ್ಮದು ಜಗತ್ತೇ ಮೆಚ್ಚುವ ತಂಡ’ ಎಂದು ಹೆಮ್ಮೆಯಿಂದ ಬೀಗಿದ್ದಾರೆ.
***
*ನಾಲ್ಕು ಸಲ ಟ್ರೋಫಿ ಗೆದ್ದ ಏಕೈಕ ತಂಡ
*ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾಕ್ಕೆ ಒಂದೂ ಸೋಲಿಲ್ಲ
*‘ಪಂಟರ್‌’ಗೆ ಎರಡು ವಿಶ್ವಕಪ್‌ ಗೆಲ್ಲಿಸಿಕೊಟ್ಟ ಹೆಗ್ಗಳಿಕೆ

Write A Comment