ಅಂತರಾಷ್ಟ್ರೀಯ

ಬರ್ಮುಡಾ ತ್ರಿಕೋನದ ನೀರದಾರಿಯಲ್ಲಿ…

Pinterest LinkedIn Tumblr

svec29Bermuda4_0

-ಜಯಶ್ರೀ ದೇಶಪಾಂಡೆ
ಅಟ್ಲಾಂಟಿಕ್‌ ಮಹಾಸಾಗರದ ‘ಬರ್ಮುಡಾ ತ್ರಿಕೋನ’ ಸಾವಿನ ಬಾಯಿಯೆಂದೇ ಕುಖ್ಯಾತಿ ಪಡೆದಿದೆ. ಈ ತ್ರಿಕೋನದಲ್ಲಿ ಹಲವು ವಿಮಾನ, ಹಡಗುಗಳು ಪ್ರಯಾಣಿಕರ ಸಮೇತ ಮುಳುಗಿ ವಿಳಾಸ ಕಳೆದುಕೊಂಡಿವೆ. ಒಗಟಿನಂಥ ಈ ನೀರದಾರಿಯಲ್ಲಿ ಈಗ ಮನುಷ್ಯನ ಹೆಜ್ಜೆಗಳು ಮೂಡತೊಡಗಿವೆ. ಕ್ರೂಸ್‌ಗಳ ಮೂಲಕ ಅಟ್ಲಾಂಟಿಕ್‌ ಒಡಲಿನ ಅದ್ಭುತ ದ್ವೀಪಗಳನ್ನು ನೋಡಿಬರುವ ಪ್ರವಾಸಿಗರು ಹೆಚ್ಚುತ್ತಿದ್ದಾರೆ. ಇಲ್ಲಿರುವ ಕ್ರೂಸ್‌ ಪಯಣವೊಂದರ ಖುಷಿಯ ಕಥನ ‘ಬರ್ಮುಡಾ ತ್ರಿಕೋನ’ದ ಕುಖ್ಯಾತಿಯನ್ನು ಹೋಗಲಾಡಿಸುವ ಪ್ರಯತ್ನದಂತಿದೆ.

ಅಲ್ಲೊಂದು ಕಥೆಯಿತ್ತು, ಊಹಾಪೋಹಗಳಿಂದ ಕೂಡಿದ ರಹಸ್ಯವಾರ್ತೆಗಳಿದ್ದವು, ಮೂಗಿನ ಮೇಲೆ ಬೆರಳು ಇಡಿಸಬಲ್ಲ ಬೆರಗಿನ ವಾರ್ತೆಗಳು ಕಂತೆ ಕಂತೆಗಳಿದ್ದವು!

ಅಟ್ಲಾಂಟಿಕ್ ಮಹಾಸಾಗರದ ವಿಶಾಲವಾದ ನೀರ ಹರಹು. ಆ ನೀರದಾರಿಯಲ್ಲಿ ಸುಖವಾಗಿ ತೇಲಿಕೊಂಡು ಬಂದ ಹಡಗುಗಳು, ನೌಕೆಗಳು, ನಿರ್ದಿಷ್ಟ ಸ್ಥಳವೊಂದರ ಸಮೀಪ ಒಡೆದು ಚೂರು ಚೂರಾಗಿ, ನಾವಿಕರು, ಪ್ರಯಾಣಿಕರು ಇದ್ದಕ್ಕಿದ್ದಂತೆ ಆ ಮಹಾಸಾಗರದಲ್ಲಿ ಅದೃಶ್ಯರಾಗಿಬಿಡುತ್ತಿದ್ದರಂತೆ! ದೋಣಿ-ಹಡಗುಗಳಷ್ಟೇ  ಅಲ್ಲ, ಅಲ್ಲಿನ ಆಗಸದಲ್ಲಿ ಹಾರಿ ಬಂದ ವಿಮಾನಗಳು, ಹೆಲಿಕಾಪ್ಟರುಗಳು, ಅವುಗಳೊಳಗಿನ ಜನ– ಎಲ್ಲವೂ ಎಲ್ಲರೂ ತರಗೆಲೆಗಳಂತೆ ಗಿರಗಿರನೆ ಸುತ್ತಿ ಸುಳಿದು ಸಾಗರಗರ್ಭ ಹೊಕ್ಕು ಕಣ್ಮರೆಯಾಗಿ…. ಜಗತ್ತನ್ನು ಬೆಚ್ಚಿಬೀಳಿಸಲು, ಬೆರಗುಗೊಳಿಸಲು ಇಷ್ಟು ಸಾಲದೇ? ಅಂದಹಾಗೆ, ಇದೇನಿದು ರಹಸ್ಯ? ಈ ದುರಂತ ನಡೆಯುತ್ತಿರುವುದಾದರೂ ಹೇಗೆ? ಇದೇನು ಮಾಯೆಯೋ ಮಾಟವೋ? ಅತೀಂದ್ರಿಯ ಶಕ್ತಿಗಳ ಆಟವೋ? ಹಿಂದೆ ಎಂದೋ ಅಲ್ಲಿನ ಸಾಗರಗರ್ಭಕ್ಕೆ ಮುಳುಗಿ ಮಲಗಿರುವ ‘ಅಟ್ಲಾಂಟಿಸ್’ ಭೂಖಂಡದ ಶಾಪವೋ… ಹೀಗೆ ಪ್ರಶ್ನೆಗಳನ್ನು ಎದುರಿಗಿಟ್ಟುಕೊಂಡು ಸಂಶೋಧನೆಗಳ ಪರ್ವ ಶುರುವಾಯಿತು.

1900ರ ಶತಮಾನದ ಉತ್ತರಾರ್ಧದಲ್ಲಿ ‘ಬರ್ಮುಡಾ ಟ್ರಯಾಂಗಲ್‘ ಬಗ್ಗೆ ಪುಂಖಾನು ಪುಂಖವಾಗಿ ಸುದ್ದಿಗಳ ಸುರಿಮಳೆಯಾಗಿದ್ದನ್ನು ನಾನು ಕೇಳಿದ್ದು ವಿದ್ಯಾರ್ಥಿಯಾಗಿದ್ದಾಗ. ಇಂಥ ವಿಷಯಗಳು ಕಿವಿಗೆ ಬಿದ್ದಾಗ ವಿವರ ತಿಳಿಯಲು ನನ್ನ ಅಣ್ಣಂದಿರನ್ನು ಸಾಕಷ್ಟು ಪೀಡಿಸಿದ್ದೆ! (ಟೀವಿ ಗೀವಿ ಇಲ್ಲದ ಕಾಲವದು). ಅವರು ಆ ಬಗ್ಗೆ  ಹೇಳುವುದನ್ನೆಲ್ಲ ಕಿವಿಗೊಟ್ಟು ಕೇಳುತ್ತಿದ್ದೆ. ಆದರೆ ಮುಂದೊಂದು ದಿನ ನಾನು ಇದೇ ಬರ್ಮುಡಾ ಟ್ರ್ಯಾಂಗಲ್ಲನ್ನೇ ಹಾದು ಬರಮುಡಾ / ಬಹಾಮಾ ದ್ವೀಪಗಳಲ್ಲಿ ಅಲೆದಾಡಿ ಬಂದಾಗ  ಪ್ರಪಂಚ ಆಗಲೇ ಅಂತರಿಕ್ಷದ ಕಕ್ಷೆಯನ್ನು ಮೀರಿ ಮುಂದಕ್ಕೆ ಹಾರಿತ್ತು. ಬರ್ಮುಡಾ ಟ್ರಯಾಂಗಲ್ ಎಂಬುದೊಂದು ಕಾಲ್ಪನಿಕ ರಮ್ಯವಾರ್ತೆಯಲ್ಲದೇ ಇನ್ನೇನೂ ಅಲ್ಲ, ಅಲ್ಲಿ ಹಡಗುಗಳು – ವಿಮಾನಗಳು ಮುಳುಗಿ ಹೋಗಿದ್ದು ಚಾಲಕರ ತಪ್ಪಿನ ದುರಂತವೇ ಹೊರತು ಬೇರೇನಲ್ಲ ಎಂಬ ಸತ್ಯಗಳು ಜಗತ್ತಿನೆದುರು ತೆರೆದುಕೊಂಡಿದ್ದವು.

ಮೇಲಿನ ವಿಚಾರಗಳನ್ನು ಮೆಲುಕು ಹಾಕುತ್ತ ನಾನು ಫ್ಲೋರಿಡಾದ ಬಂದರುನಗರ ಓರ್ಲ್ಯಾಂಡೋನ ಪೋರ್ಟ್ ಕ್ಯನೆವೆರಲ್‌ನಿಂದ ‘ರಾಯಲ್ ಕೆರೀಬಿಯನ್’ನವರ ENCHANTMENT OF THE SEAS ಎನ್ನುವ ಹಡಗನ್ನು ಏರಿದ್ದು. 875 ಸಿಬ್ಬಂದಿ ಹೊಂದಿದ್ದ ಆ ಹಡಗಿನಲ್ಲಿ 170 ಭಾರತೀಯ ನೌಕರರಿದ್ದರು. ಹಡಗು ಪ್ರವೇಶಿಸುವಾಗ ನನ್ನ ಮನಸ್ಸಿನಲ್ಲಿ ‘ಬರ್ಮುಡಾ ತ್ರಿಕೋನ’ದಲ್ಲೇ  ವಾಸವಾಗಿರುವ ಕೆರಿಬಿಯನ್ / ಬಹಾಮಾ ದ್ವೀಪಗಳಿಗೆ ಹೊರಟಿದ್ದೇನೆ ಎಂಬ ಖುಷಿಯಿತ್ತು. ಆದರಾತಿಥ್ಯದಲ್ಲಿ ತುಂಬಾ ಪಳಗಿದಂತಿದ್ದ ಹಡಗಿನ ಸಿಬ್ಬಂದಿ ನಮ್ಮನ್ನು ನಯ-ವಿನಯಗಳಿಂದ  ಬರಮಾಡಿಕೊಂಡರು. ಕ್ರೂಸ್ ಏರಿದ ಕ್ಷಣದಿಂದ ಪ್ರವಾಸ ಮುಗಿಸಿ ಹೊರಬರುವವರೆಗೂ ಒಂದೇ ಒಂದು ಅಹಿತ ಪ್ರಸಂಗವೂ ನಮಗಾಗಲಿಲ್ಲ..

ಕ್ರೂಸ್ ಯಾನಗಳನ್ನು ಕೈಗೊಳ್ಳುವ ಉದ್ದೇಶವೇ ದೈನಂದಿನ ಬದುಕಿನ ಒತ್ತಡದಿಂದ ಆಚೆಗಿಳಿದು ನಡೆದು ಒಂದಷ್ಟು ವಿಹಾರ, ಒಂಚೂರು ವಿನೋದ, ಹೊಸ ಅನುಭವಗಳ ಹುಡುಕಾಟದ ಬಯಕೆಯಲ್ಲಿ. ಕ್ರೂಸ್ ಪಯಣದಲ್ಲಂತೂ ಕೊಟ್ಟ ಹಣಕ್ಕೆ ಖಂಡಿತ ಮೋಸವಿಲ್ಲ, ಹೊಸ ಅನುಭವಗಳಿಗೆ ಬರವಿಲ್ಲ.

ಕ್ರೂಸ್‌ ಪ್ರಯಾಣದ ಸ್ವರ್ಗಸುಖ
ರಾಯಲ್ ಕೆರಿಬಿಯನ್ ಸಂಸ್ಥೆಯ ಹಡಗುಗಳು ಬಲು ಚಂದ. ವೈಭವೋಪೇತ ಒಳಾಂಗಣ ಅಲಂಕಾರವನ್ನು ನೋಡಿಯೇ ಸವಿಯಬೇಕು. ಹನ್ನೆರಡು ಅಂತಸ್ತುಗಳ (ಕೊನೆಯದೇ ಓಪನ್ ಡೆಕ್) ಡೆಕ್‌ಗಳಲ್ಲಿ ಏನೆಲ್ಲವೂ ಉಂಟು. ಅನೇಕ ಬಗೆಯ ರೆಸ್ಟುರಾಗಳು ಅಲ್ಲಿ ಬೆಳಗಿನ 5ರಿಂದ ರಾತ್ರಿ ಹನ್ನೆರಡರವರೆಗೂ ತೆರೆದಿರುತ್ತವೆ. ಮೂರು ಸರ್ವಾಲಂಕೃತ ಡೈನಿಂಗ್ ಹಾಲ್‌ಗಳಲ್ಲಿ ವಿವಿಧ ತಿನಿಸು, ಚಹಾ, ಕಾಫಿ, ಹಲವೆಂಟು ಬಗೆಯ ಜ್ಯೂಸ್‌ಗಳು, ತರಹೇವಾರಿ ಹಣ್ಣು… ಆಹಾರಪ್ರಿಯರಿಗಂತೂ ಇಲ್ಲಿ ಭೂರಿಭೋಜನದ ಸುಖ. ಯಾವಾಗ ಬೇಕಾದರೂ ಎಷ್ಟು ಬೇಕಿದ್ದರೂ ತಿನ್ನಬಹುದು. ಇಂಥ ಹಡಗಿನಲ್ಲಿ ಸಹಜವಾಗಿಯೇ ನಮ್ಮನ್ನು ಸೆಳೆದದ್ದು ನಮ್ಮ ದೇಶದ ಧ್ವಜದ ಚಿತ್ರದೊಂದಿಗೆ ‘ಭಾರತೀಯ ಸ್ವಾದಗಳು ಇಲ್ಲಿ ಲಭ್ಯ’ ಎಂಬ  ಬೋರ್ಡು. ಅಲ್ಲಿದ್ದದ್ದೆಲ್ಲ ಉತ್ತರ ಭಾರತದ ಹಾಗೂ ಒಂದೆರಡು ದಕ್ಷಿಣದ ಸ್ವಾದಗಳು!
ಕ್ರೂಸ್‌ಗಳ ಆಕರ್ಷಣೆಗಳಲ್ಲಿ ಕ್ಯಾಸಿನೋಗಳ ಭರಾಟೆಯೂ ಒಂದು. ಅಮೆರಿಕದ ಉದ್ದಗಲಕ್ಕೂ ಹಣ ಸಂಪಾದನೆಯ ‘ಕಾನೂನುಬದ್ಧ’ ಮಾರ್ಗವಾಗಿಯೇ ಕ್ಯಾಸಿನೊಗಳು ತೆರೆದುಕೊಂಡಿವೆ. ಈ ಜೂಜುಮನೆಗಳಲ್ಲಿ ಹಣ ಪಡೆದುಕೊಳ್ಳುವ ಸಂಭ್ರಮ ಹಾಗೂ ಹಣ ಕಳೆದುಕೊಂಡ ಸಂಕಟಗಳು ನವೀಕರಣಗೊಳ್ಳುತ್ತಲೇ ಇರುತ್ತವೆ.

ಸಾಗರದಲೆಗಳ ಮೇಲೆ ತೇಲುವ ಈ ಅರಮನೆಯಲ್ಲಿ ಸಿನಿಮಾ, ನಾಟಕ, ಇತ್ಯಾದಿ ಪ್ರದರ್ಶನಗಳಿಗಾಗಿ ಥಿಯೇಟರುಗಳಿವೆ. ಜಿಮ್, ಸ್ಪಾಗಳು ಇವೆ. ಬಿಸಿ-ತಣ್ಣೀರ ಈಜುಕೊಳಗಳೂ ಹಗಲು ರಾತ್ರಿಯೆನ್ನದೆ ತೆರೆದಿರುವ ಮದ್ಯದ ಕೌಂಟರುಗಳು, ಡಾನ್ಸಿಂಗ್ ಫ್ಲೋರ್‌ಗಳು, ಮಕ್ಕಳಿಗೆ ವಾಟರ್ ಪಾರ್ಕ್, ಬಿಸಿಲು ಕಾಯಿಸಲೊಂದು ಡೆಕ್, ದೊಡ್ಡವರು ಓಡಲು ರನ್ನಿಂಗ್ ಟ್ರ್ಯಾಕ್… ಹೀಗೆ ಕ್ರೂಸ್‌ ಸವಲತ್ತುಗಳು ಮುಗಿಯುವುದೇ ಇಲ್ಲ.

ಬೇರೊಂದೇ ವಿಶ್ವದರ್ಶನ ಮಾಡಿಸುವ ಕ್ರೂಸುಗಳು ಜನರನ್ನು ಸೆಳೆಯುವುದಕ್ಕಾಗಿ ಇತರ ಸಂಸ್ಥೆಯ ಹಡಗುಗಳೊಡನೆ ಪೈಪೋಟಿಯಲ್ಲಿರುತ್ತವೆ. ಜಗತ್ತಿನ ಸಾಗರ – ಮಹಾಸಾಗರಗಳಲ್ಲಿ ಅವಿತಿರುವ, ನಿಸರ್ಗದ ಮೂಲಸ್ವರೂಪವನ್ನು ಈಗಲೂ ಬಹುಪ್ರಮಾಣದಲ್ಲಿ ಉಳಿಸಿಕೊಂಡಿರುವ ದ್ವೀಪಗಳು, ನಡುಗಡ್ಡೆಗಳು ಪ್ರವಾಸಿಗರನ್ನು ಬಹುವಾಗಿ ಆಕರ್ಷಿಸುವುದು ಸುಳ್ಳಲ್ಲ. ಈ ದ್ವೀಪಗಳನ್ನು ತೋರಿಸುವ ಕ್ರೂಸ್‌ಗಳು ಹೊಸತೊಂದು ಲೋಕವನ್ನೇ ಸಹೃದಯರ ಎದುರು ಅನಾವರಣಗೊಳಿಸುತ್ತವೆ. ಸಾಗರದಲ್ಲಿ ಸುತ್ತಾಡಿಸುತ್ತ ಅಲ್ಲಲ್ಲಿ ಲಂಗರು ಹಾಕಿ– ಪ್ಯಾರಾಸೇಲಿಂಗ್, ಡೀಪ್ ವಾಟರ್ ಡೈವ್, ಬಲೂನ್‌ ರೈಡಿಂಗ್ ರೀತಿಯ ಮೋಜುಗಳಿಗೂ ಅಲ್ಲಿ ಅವಕಾಶವಿದೆ.

ಗುಲ್‌ಮೊಹರ್‌ಗಳ ನಸ್ಸಾವು!
ಬಹಾಮಾ ಕಾಮನ್ವೆಲ್ತ್ ದೇಶಗಳಲ್ಲೊಂದು. ಅದರ ರಾಜಧಾನಿ ನಸ್ಸಾವು. ನಮ್ಮ ಧಾರವಾಡವನ್ನು ನೆನಪಿಸುವ ಪುಟ್ಟ ಪ್ರಶಾಂತ ಊರಿದು. ನಗರದ ಎಲ್ಲೆಲ್ಲೂ ಗುಲ್‌ಮೊಹರ್ ಮರಗಳು! ಚಿಕ್ಕ ಶಾಲೆಯಂತೆ ಕಾಣುವ ಇಲ್ಲಿನ ಪಾರ್ಲಿಮೆಂಟಿನೆದುರು ಕೋಲಂಬಸ್‌ನ ಶಿಲಾಪ್ರತಿಮೆ ನಿಲ್ಲಿಸಿದ್ದಾರೆ. ಅವನೇ ಈ ದ್ವೀಪ ಸಮೂಹವನ್ನು ಕಂಡು ಹಿಡಿದವನಂತೆ. ಇಲ್ಲಿ ಸುತ್ತಮುತ್ತಲೂ ಹರಡಿಕೊಂಡಿರುವ ಕೆರೀಬಿಯನ್ ದ್ವೀಪಗಳ ನಿಸರ್ಗಸಿರಿ, ಪ್ರಶಾಂತ ವಾತಾವರಣ ಅನನ್ಯ. ನಾವಿಲ್ಲಿಗೆ ಬಂದಿಳಿದಾಗ ಬೆಳಗಿನ ಸಮಯ. ಧಾರಾಳವಾಗಿ ಬಿಸಿಲು ಚೆಲ್ಲಿದ್ದ ಸೂರ್ಯ ಸಮುದ್ರದ ಧಗೆ ಹೆಚ್ಚಿಸಿದ್ದ. ಆದರೂ ಉತ್ತರದಿಂದ ಬೀಸಿ ಬರುತ್ತಿದ್ದ ಗಾಳಿ ಹಿತವೆನಿಸುತ್ತಿತ್ತು. ಪುಟ್ಟ ದ್ವೀಪದೇಶದ ಸರಳ ನಡೆನುಡಿಯ ಕಪ್ಪುಜನಾಂಗದ ಅಲ್ಲಿನ ಜನ ಹಡಗು–ವಿಮಾನಗಳಲ್ಲಿ ಬಂದಿಳಿಯುವ ಪ್ರವಾಸಿಗರನ್ನೇ ನೆಚ್ಚಿಕೊಂಡು ತಮ್ಮ ವ್ಯಾಪಾರೋದ್ಯಮ ಬೆಳೆಸಿಕೊಂಡಿದ್ದಾರೆ. ಪ್ರತಿದಿನ ಸಾವಿರಾರು ಯಾತ್ರಿಕರು ಬಂದಿಳಿದಾಗ ಊರು ಸುತ್ತಲು ಅನುವಾಗುವ ಟ್ಯಾಕ್ಸಿಗಳ ಸಾಲು ಸಾಲು… ಇಂಗ್ಲಿಷ್‌, ಮೆಕ್ಸಿಕನ್ (ಸ್ಪ್ಯಾನಿಶ್) ಜೊತೆಗೆ ಇನ್ನೂ ಕೆಲವು ಭಾಷೆಗಳನ್ನು ಇಲ್ಲಿನ ಟ್ಯಾಕ್ಸಿ ಡ್ರೈವರುಗಳು ಮಾತನಾಡುತ್ತಾರೆ. ನಮ್ಮ ನ್ನು ಊರು ಸುತ್ತಾಡಿಸಲು ಕರೆದೊಯ್ದ ಜಾನ್ ಡಿಕಾಸ್ಟ್, ತನ್ನ ಆಫ್ರಿಕನ್ ಮೂಲದ ಬಗ್ಗೆ ಬಲು  ಅಭಿಮಾನವಿಟ್ಟುಕೊಂಡವನು. ‘ಸಹಾಯ ಮಾಡುವ ನೆಪದಲ್ಲಿ ನಮ್ಮಲ್ಲಿಗೆ ಬರುವ ವಿದೇಶೀಯರು ತಮ್ಮ ಲಾಭಕ್ಕಾಗಿ ಮಾತ್ರ ಬರ್ತಾರೆ’ ಎಂದು ಗೊಣಗಿದ ಆತ,  ‘ಆಫ್ರಿಕಾವನ್ನು ಯಾರೂ ಉದ್ಧಾರ ಮಾಡುತ್ತಿಲ್ಲ’ ಎಂದ.

ಕೋಕೋ ಕೇ ಎನ್ನುವ ಪುಟ್ಟ ದ್ವೀಪ
ಕೋಕೋ ಕೇ ದ್ವೀಪಕ್ಕೆ ಹೋದಾಗ ನಮ್ಮ ಹಡಗು ಸಾಗರದ ಮಧ್ಯದಲ್ಲೇ ಲಂಗರು ಹಾಕಿತು. ನಮ್ಮನ್ನು ಪುಟ್ಟ ದೋಣಿಗಳಲ್ಲಿ ದಂಡೆಗೆ ಕರೆದೊಯ್ದರು. ಹಸುರು ನೀಲಿಯ ತಿಳಿನೀರಿನ ಸಾಗರ ಮನಮೋಹಕವಾಗಿತ್ತು. ಎತ್ತರೆತ್ತರಕ್ಕೆ ಬೆಳೆದು ನಿಂತ ತೆಂಗಿನ ಮರಗಳಿಂದ ಇಳಿಸಿದ ಎಳನೀರಿನ ವ್ಯಾಪಾರ ಭರಾಟೆಯಿಂದ ನಡೆದಿತ್ತು. ಎಗ್ಗಿಲ್ಲದೆ ಬಿಕಿನಿಯಲ್ಲಿ ಇಡೀ ದಿನ ಸುತ್ತುವ ಮಹಿಳೆಯರು,  ಇದ್ದಕ್ಕಿದ್ದಂತೆ ಆಕಾಶ ಕಳಚಿಕೊಂಡು ಬಿದ್ದಂತೆ ಸುರಿಯುವ ಮಳೆ, ಅಂಗಡಿಗಳ ಗುಂಪು, ಆಫ್ರಿಕನ್ ವ್ಯಾಪಾರಿಗಳು… ಕೋಕೋ ಕೇ ದ್ವೀಪದಲ್ಲಿ ಆಕರ್ಷಣೆಗಳು ಒಂದೆರಡಲ್ಲ.

ಕ್ರೂಸ್ ಮೋಜು ಮುಗಿಸಿಕೊಂಡು ಮರಳುವ ಹೊತ್ತಿಗೆ ಮತ್ತೆ ನೆನಪಿಗೆ ಬಂದದ್ದು ಬರ್ಮುಡಾ ತ್ರಿಕೋನದ ಕುರಿತ ಕಥೆಗಳು. ಆ ಕಥೆಗಳ ಬೆರಗನ್ನು ಅಳಿಸುವಂತೆ, ಬರ್ಮುಡಾ ಟ್ರಯಾಂಗಲ್‌ನ ಸಾಗರಭಾಗವನ್ನೇ ಹಾದು ಸುರಕ್ಷಿತವಾಗಿ ಹಿಂತಿರುಗಿದ ಖುಷಿ ನಮ್ಮದಾಗಿತ್ತು! ಮನಸ್ಸಿಡೀ ಅಟ್ಲಾಂಟಿಕ್‌ನ ಹಸಿರು – ನೀಲಿ ನೀರು.

ಬರ್ಮುಡಾ ಟ್ರಯಾಂಗಲ್‌ನ ಸಾಗರಭಾಗದಲ್ಲಿ ನಮ್ಮನ್ನು ಸುತ್ತಾಡಿಸಿದ ಕ್ರೂಸ್‌ನ ಒಳಾಡಳಿತ ಮೇಲ್ವಿಚಾರಕರಾಗಿ ಕನ್ನಡಿಗರೊಬ್ಬರು ಕಾರ್ಯ ನಿರ್ವಹಿಸುತ್ತಿದ್ದರು. ಮೈಸೂರಿನ ಕುವೆಂಪುನಗರ ನಿವಾಸಿಯಾದ ಅವರ ಹೆಸರು ಸಂಪತ್ ಕುಮಾರ್. ಅವರು ಕ್ರೂಸ್ ಪ್ರಪಂಚದ ಹಲವೆಂಟು ಸಂಗತಿಗಳನ್ನು ನನ್ನೆದುರು ಬಿಚ್ಚಿಟ್ಟರು. ಕಳೆದ ಆರು ವರ್ಷಗಳಿಂದ ರಾಯಲ್ ಕೆರೀಬಿಯನ್ ಸಂಸ್ಥೆಯ ಹಡಗುಗಳಲ್ಲಿ ಅವರು ಉದ್ಯೋಗಿ. ಅವರೊಂದಿಗಿನ ಮಾತುಕತೆಯ ಕೆಲ ಭಾಗ ಇಲ್ಲಿದೆ:

* ಇದೇ ಅಟ್ಲಾಂಟಿಕ್ ಸಾಗರದಲ್ಲೇ ಅಲ್ಲವೇ ಟೈಟಾನಿಕ್ ಮುಳುಗಿದ್ದು! ಇಲ್ಲಿ ಐಸ್ಬರ್ಗ್‌ಗಳು ತುಂಬಾ ಮಾಮೂಲಿ ಅಲ್ಲವೇ? ಅವುಗಳನ್ನು ನಿಭಾಯಿಸುವುದು ಹೇಗೆ?
ಟೈಟಾನಿಕ್‌ ಮುಳುಗಿದ್ದು ವಿಜ್ಞಾನ ಅಥವಾ ಟೆಲಿಕಮ್ಯೂನಿಕೇಷನ್ ಬಾಲ್ಯಾವಸ್ಥೆಯಲ್ಲಿದ್ದ ದಿನಗಳಲ್ಲಿ. ಇಂದಿನ ಮಾತೇ ಬೇರೆ. ನಾವೀಗ ಅತ್ಯಾಧುನಿಕ ಸಂಪರ್ಕ ಸಾಧನಗಳನ್ನು ಬಳಸುತ್ತೇವೆ, ಅಪಘಾತಗಳನ್ನು ತಡೆಯುವಲ್ಲಿ ಅವುಗಳ ಪಾತ್ರವೇ ಹೆಚ್ಚಿನದು. ಉಪಗ್ರಹಗಳಿಂದ ಮಹತ್ವದ ವೈಜ್ಞಾನಿಕ ಮಾಹಿತಿಗಳು ದೊರೆಯುತ್ತವೆ. ಅಲಾಸ್ಕಾ ವಿಭಾಗದಲ್ಲಿ ಹೆಚ್ಚಿನ ಪ್ರಮಾಣದ ಹಿಮಖಂಡಗಳು ನಮಗೆ ಎದುರಾಗುತ್ತವೆ, ಅವುಗಳನ್ನು ಮೊದಲೇ ಗುರುತಿಸಿ ನಿರ್ದಿಷ್ಟ ಮಾರ್ಗದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುತ್ತೇವೆ.

* ಕೆಲವೊಮ್ಮೆ ಹಡಗು ಅಲ್ಲಾಡಿದ ಅನುಭವ ಆಗುತ್ತದೆ. ಯಾಕೆ?
ಸಾಗರದಾಳದಲ್ಲಿ ವಿಚಿತ್ರವಾದ ಅಂತರ್ ಪ್ರವಾಹಗಳಿರುತ್ತವೆ. ಇವು ಕೆಲವೊಮ್ಮೆ ಅಚಾನಕ್ಕಾಗಿ ತಮ್ಮ ದಾರಿ ಬದಲಿಸಿ ಬೇರೆತ್ತಲೋ ಹರಿಯತೊಡಗುತ್ತವೆ. ಅಂಥ ಸಂದರ್ಭದಲ್ಲಿ ಹಡಗು ನಡುಗಿದಂತೆ ಅನ್ನಿಸಬಹುದು. ಈಗೀಗ ಸಾಗರದಾಳದಲ್ಲಿನ ಬದಲಾವಣೆಯ ಸೂಕ್ಷ್ಮ ಸನ್ನಿವೇಶವನ್ನೂ ಮೊದಲೇ ಪತ್ತೆ ಹಚ್ಚಿ ಹಡಗಿನ ದಿಶೆಯನ್ನು ಕೊಂಚ ಬಲಿಸಿಕೊಳ್ಳುತ್ತೇವೆ. ಸುರಕ್ಷಿತ ಆಗಿರುವ ದಾರಿಗಳನ್ನು ಮೊದಲೇ ಗುರುತಿಸಿಕೊಳ್ಳುತ್ತೇವೆ.

* ಇಷ್ಟೆಲ್ಲ ಸುರಕ್ಷತಾ ಸಾಧ್ಯತೆಗಳಿದ್ದರೂ ಇತ್ತೀಚೆಗೆ ಇಟಲಿಯ ಬಳಿ ‘ಕೋಸ್ಟಾ ಕಾನ್ ಕಾರ್ಡಿಯಾ’ ಹೊರಳಿಕೊಂಡು ಬಿದ್ದುದು ಯಾಕೆ?
ಆ ದುರಂತಕ್ಕೆ ಮಾನವ ಪ್ರಮಾದ ಕಾರಣವಾಯಿತು. ಕೋಸ್ಟಾ ಕಾನ್ ಕಾರ್ಡಿಯಾದ ಸಿಬ್ಬಂದಿಗೆ ನಿಪುಣ ತರಬೇತಿಯ ಕೊರತೆ ಇರಬಹುದು.

* ಸಾಗರಗಳಲ್ಲಿ ಬಿರುಗಾಳಿಗಳು, ಚಂಡಮಾರುತಗಳು, ಸುಂಟರಗಾಳಿಗಳ ಆಕಸ್ಮಿಕಗಳನ್ನು ಹೇಗೆ ನಿಭಾಯಿಸುವಿರಿ?
ಭೂಮಿಯ ಮೇಲಿನ ಬಂದರುಗಳ ಅಧಿಕಾರಿಗಳು ತಾವು ಹೊಂದಿರುವ ಚಂಡಮಾರುತ, ಬಿರುಗಾಳಿಗಳ ಖಚಿತ ಮಾಹಿತಿಯನ್ನು ಸಾಗರದಲ್ಲಿರುವ ಹಡಗುಗಳೊಂದಿಗೆ ಹಂಚಿಕೊಳ್ಳುತ್ತಾರೆ. ಪ್ರತಿ ಎರಡು ಗಂಟೆಗೊಮ್ಮೆ ನಮಗೆ ಬಿರುಗಾಳಿಗಳ ಬಗ್ಗೆ ಖಚಿತ ಮಾಹಿತಿ ದೊರೆಯುತ್ತಿರುತ್ತದೆ. ಅದನ್ನು ಅನುಸರಿಸಿ ನಾವು ನಿರ್ಧಾರ ಕೈಗೊಳ್ಳುತ್ತೇವೆ.

* ವರ್ಷದ ಬಹುತೇಕ ದಿನಗಳಲ್ಲಿ ದೇಶದಿಂದ ಹೊರಗೆ, ಅದರಲ್ಲೂ ಸಮುದ್ರದ ಮೇಲೆ ಇರುವುದು ಹಾಗೂ ಮನೆಯವರಿಂದ ದೂರ ಇರುವುದು ಕಠಿಣವಲ್ಲವೇ?
ಪ್ರಪಂಚದಲ್ಲಿ ಯಾವುದು ಸುಲಭ ಹೇಳಿ? ಬೇರೆ ಉದ್ಯೋಗದಲ್ಲಿಯೂ ಇಂಥ ಸಮಸ್ಯೆ ಇದೆ. ಆದರೂ ನಮಗೆ ವರ್ಷದಲ್ಲಿ ಎರಡು ತಿಂಗಳು ಪೂರ್ಣ ರಜೆ ದೊರೆಯುತ್ತದೆ. ಅಲ್ಲದೇ ನಮ್ಮ ಕುಟುಂಬದವರನ್ನು ಯಾವುದೇ ಕ್ರೂಸ್‌ನಲ್ಲಿ ವರ್ಷಕ್ಕೊಮ್ಮೆ ಕರೆದೊಯ್ಯಬಹುದು. ಇನ್ನು ಕೆಲಸದ ಅನುಭವ ಬೆಳೆದಂತೆ ಸಮುದ್ರ ಅಭ್ಯಾಸವಾಗಿಬಿಡುತ್ತದೆ.

Write A Comment