ಮನೋರಂಜನೆ

ಸತ್ಕವಿ ಅರಿಯುವ, ಓದುಗ ಪೊರೆಯುವ ಕವಿತಾ ರಹಸ್ಯ!

Pinterest LinkedIn Tumblr

p6

-ಎಸ್. ನಟರಾಜ ಬೂದಾಳು
ಎಚ್.ಎಸ್. ವೆಂಕಟೇಶಮೂರ್ತಿಯವರು ‘ಪಂಪಭಾರತದ ತಿಳಿಗನ್ನಡದ ಅವತರಣಿಕೆ’ಯ ನಂತರ ಪಂಪನ ‘ಆದಿಪುರಾಣದ ತಿಳಿಗನ್ನಡದ ಅವತರಣಿಕೆ’ಯನ್ನು ನಮ್ಮೆಲ್ಲರೆದುರಿಗೆ ಇಟ್ಟಿದ್ದಾರೆ. ಅವರ ಪಂಪಭಾರತದ ಪ್ರಯತ್ನದಂತೆಯೇ ನಿಶ್ಚಿತವಾಗಿ ಇದೂ ಕೂಡ ಅವರ ಸಂಕಥನವಾಗಿದೆ. ಇಂತಹ ಪ್ರಯತ್ನಗಳನ್ನು ಕುರಿತು ಕನ್ನಡದ ವಿದ್ವತ್ ವಲಯದಲ್ಲಿ ಗಂಭೀರವಾದ ಪ್ರಶ್ನೆಗಳು ಹರಿದಾಡುತ್ತಿವೆ. ಇದೇನು ಭಾಷೆಯ ಮಟ್ಟದಲ್ಲಿ ತಿಳಿಯಾಗಿಸುವ ಪ್ರಯತ್ನವೋ ಅಥವಾ ಪಂಪನ ಅಸಾಧಾರಣ ಪ್ರತಿಭೆಯ ಸತ್ವವನ್ನೇ ತೆಳುವಾಗಿಸುವ ಪ್ರಯತ್ನವೋ ಎಂಬ ಪ್ರತಿಕ್ರಿಯೆಗಳಿಗೆ ಉತ್ತರ ನೀಡಲೇಬೇಕಾದ ಜವಾಬ್ದಾರಿ ಇಂತಹ ಪ್ರಯತ್ನಗಳಿಗೆ ಇದೆ. ಏಕೆಂದರೆ ಕಥನವಷ್ಟೇ ಕಾವ್ಯವಲ್ಲ.

ಅದರ ಧ್ವನಿ, ಬಂಧ, ಲಯ, ಓಘ, ಪಲುಕು, ಮೌನ, ಲಾಲಿತ್ಯ, ನುಡಿಸಂದರ್ಭ, ಮೀಮಾಂಸಾನಿಲುವು, ಸಾಂಸ್ಕೃತಿಕ ರಾಜಕಾರಣಗಳ ಒಟ್ಟು ಪ್ರವಾಹದಲ್ಲಿ ಪಂಪನಂತಹ ಕವಿ ತಾನು ಈಜುವಾಗಲೂ, ಇದು ವ್ಯಾಸಸಮುದ್ರವೆಂಬ ವೈಶಾಲ್ಯದ ವೈಯಕ್ತಿಕ ಎಚ್ಚರದ ಜೊತೆಗೆ ಈಜುವ ಅಧಿಕಾರ ಎಲ್ಲರದ್ದೆಂಬ ಸಾಮೂಹಿಕ ಎಚ್ಚರದೊಡನೆಯೂ ಈಜಿದ್ದಾನೆ. ಅಲ್ಲಮಗುರುವು ಎಲ್ಲರ ವ್ಯಾಖ್ಯಾನಗಳಿಗೆ ಒಡ್ಡಿಕೊಂಡು ಕೂಡ ಎಲ್ಲರ ವ್ಯಾಖ್ಯಾನವನ್ನು ದಾಟಿದ ಮುಕ್ತತೆಯನ್ನು ಕಾಯ್ದುಕೊಳ್ಳುತ್ತಾನೆ. ಹೇಳಿಕೇಳಿ ಪಂಪ ಅನೇಕಾಂತವಾದಿ. ಅವನ ನಡೆಯೇ ಹರಿವ ನದಿಗೆ ಮೈಯೆಲ್ಲಾ ಕಾಲು ಎಂಬ ರೀತಿಯದ್ದು. ಇಲ್ಲಿಯ ವಿಸ್ತರಣೆ ಅನೇಕಗಳು ಮತ್ತೂ ಅನೇಕಗಳಾಗುವ ಮಾದರಿಯೇ ಹೊರತು ತೆಳುವಾಗುವ, ತಿಳಿಯಾಗುವ, ಕಿರಿದಾಗುವ, ಸಲಿಲವಾಗುವ ಮಾದರಿಯಲ್ಲ. ಅಲ್ಲಮನ ವಚನಗಳನ್ನು ತಿಳಿಯಾಗಿಸುವ ಪ್ರಯತ್ನವು ಹೇಗೆ ಆತಂಕ ಹುಟ್ಟಿಸುವುದೋ ಪಂಪನನ್ನು ಹೀಗೆ ತಿಳಿಯಾಗಿಸುವ ಪ್ರಯತ್ನವೂ ಆತಂಕಕಾರಿಯಾದುದರಿಂದ ಇದನ್ನು ಗಂಭೀರವಾಗಿ ನೋಡಬೇಕಾಗಿದೆ. ಇಂತಹ ಸರಳ ವ್ಯಾಖ್ಯಾನಗಳ ಅನೇಕ ಮಾದರಿಗಳು ಇವೆ. ಡಿ.ಎಲ್.ಎನ್. ಅವರಿಂದ ಹಿಡಿದು ಎಲ್.ಬಸವರಾಜುವರೆಗೆ ಬಂದಿರುವ ವ್ಯಾಖ್ಯಾನಗಳು, ದೀಪಿಕೆಗಳು, ಸರಳ ಗದ್ಯಾನುವಾದಗಳು ಪಂಪನ ಕಾವ್ಯಗಳ ಅನುಸಂಧಾನದ ಕೆಲವು ಮಾದರಿಗಳನ್ನು ಒದಗಿಸಿವೆ.

ಇಷ್ಟಾಗಿಯೂ ಇಂತಹ ಪ್ರಯತ್ನಗಳ ಬಗೆಗೆ ಮೊದಲಿನಿಂದಲೂ ಇರುವ ಸಕಾರಣವಾದ ಅಸಹನೆಯೊಂದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಏಕಾಕಿ ಸಂಕಥನಗಳೆಂದೇ (ಡಿಸ್‌ಕೋರ್ಸ್) ಪರಿಭಾವಿಸಬೇಕಾದ ಇಂತಹ ಅನುಸಂಧಾನಗಳನ್ನು ಸಾರ್ವತ್ರಿಕಗೊಳಿಸಲಾಗದು ಎಂಬುದೇ ಇಲ್ಲಿರುವ ತಕರಾರು. ಇನ್ನೂ ಗಂಭೀರವಾದ ತಕರಾರೆಂದರೆ ಇಂತಹ ತಿಳಿಯಾಗಿಸುವ ಪ್ರಯತ್ನಗಳು ಪರೋಕ್ಷವಾಗಿ ಪಂಪ ಕಠಿಣನೆಂಬ ಸಂದೇಶವನ್ನು ನೀಡುತ್ತವೆ. ಹಾಗಾದರೆ ಪಂಪ ಕಠಿಣನೆ? ಅಲ್ಲಮ ಕಠಿಣನೆ? ಯಾರಿಗೆ ಮತ್ತು ಯಾಕೆ ಇವರು ಕಠಿಣ? ಇವರು ಯಾಕೆ ಸರಳವಾಗಬೇಕು? ಸರಳವಾಗುವುದು ಎಂದರೇನು? ಇತ್ಯಾದಿ ಪ್ರಶ್ನೆಗಳ ಸರಮಾಲೆಯೇ ಇದಿರಾಗುತ್ತದೆ. ಈ ಪ್ರಶ್ನೆಗಳನ್ನು ಪಂಪನಿಗೇ ಕೇಳಿದರೆ ಏನೆಂದು ಉತ್ತರ ಕೊಟ್ಟಾನು?

ಮೃದುಮಧುರವಚನರಚನೆಯೊ
ಳುದಾತ್ತಮರ್ಥಪ್ರತೀತಿಯಂ ಕೇಳ್ವ ಜನ
ಕ್ಕಿದೊರೊಳ್ಕುಡದಂದದು ಕ
ಬ್ಬದೊಳಿರ್ದುಂ ಕವಿಯ ಮನದೊಳಿರ್ದಂತೆ ವಲಂ

ಇದರ ಕೆ.ಎಲ್. ನರಸಿಂಹಶಾಸ್ತ್ರಿಗಳ ಗದ್ಯಾನುವಾದ: ಮೃದುವೂ ಮಧುರವೂ ಆದ ವಚನ ರಚನೆಯಲ್ಲಿ ಉದಾತ್ತವಾದುದು ಕೇಳುವ ಜನಕ್ಕೆ ನೇರವಾಗಿ ಅರ್ಥಪ್ರತೀತಿಯನ್ನು ಮಾಡಿಸದಿದ್ದಲ್ಲಿ ಅದು ಕಾವ್ಯದಲ್ಲಿದ್ದರೂ ಕವಿಯ ಮನಸ್ಸಿನಲ್ಲಿದ್ದಂತೆಯೇ ಸರಿ! ಎಚ್ಚೆಸ್ವಿಯವರ ಅವತರಣ:

ಮೃದುಮಧುರವಚನರಚನೆಯಿಂ-
ದುದಾತ್ತವಾದುರ್ಥಪ್ರತೀತಿಯನು ಕೇಳುಗರಿಗೆ
ಇದಿರಾ ಇದಿರು ಕೊಡದಿದ್ದಲ್ಲಿ, ಕಾ-
ವ್ಯದಲಿದ್ದೂ ಕವಿಯ ಮನದಲ್ಲಿದ್ದಂತಲ್ಲವೆ?

ಈ ಮೂಲಕ ಕಾವ್ಯವೆನ್ನುವುದು ಕವಿ, ಕಾವ್ಯ ಮತ್ತು ಓದುಗರು ಸೇರಿ ನಡೆಸಬೇಕಾದ ಪ್ರಕ್ರಿಯೆ ಎಂಬ ಸ್ಪಷ್ಟ ನಿಲುವನ್ನು ಪಂಪ ಪ್ರತಿಪಾದಿಸುತ್ತಾನೆ. ಕಾವ್ಯದ ಅಂತ್ಯಪಠ್ಯ ಉಂಟಾಗುವುದು ಕೇಳುಗನ ತುದಿಯಲ್ಲಿ. ಹಾಗಾಗಿ ಕವಿಯಷ್ಟೇ ಜವಾಬ್ದಾರಿ ಓದುಗನಿಗೂ ಇದೆ. ಕವಿಯಷ್ಟೆ ಸಮರ್ಥನಿದ್ದರೆ ಕಾವ್ಯ ಉಂಟಾಗದು. ಓದುಗನ ಸಾಮರ್ಥ್ಯವೂ ಮುಖ್ಯ. ಕಾವ್ಯದ ಕಾಠಿಣ್ಯಕ್ಕೆ ಕವಿ, ಕಾವ್ಯ, ಕಾವ್ಯ ಉಂಟಾಗುತ್ತಿರುವ ಪರಿಸ್ಥಿತಿ ಮತ್ತು ಓದುಗ ಸಮಾನ ಹೊಣೆಗಾರರು. ಪ್ರತಿ ಓದಿನ ಸಂದರ್ಭ ಬೇರೆಯೇ ಆಗಿರುವುದರಿಂದ ‘ಇದು ನಿಚ್ಚಂ ಪೊಸತರ್ಣವಂಬೊಲತಿಗಂಭೀರಂ ಕವಿತ್ವಂ’. ಈ ನಿತ್ಯ ಹೊಸತಿಗೆ ಕಾರಣವು ಏಕಮೂಲದ ನಿರಾಕರಣೆಯಲ್ಲಿ ಮತ್ತು ಪಠ್ಯವೆನ್ನುವುದು ನಿರಂತರ ಆಗುವಿಕೆಯಲ್ಲಿಯೇ ಇರುವುದು ಎಂಬ ಪ್ರಕ್ರಿಯಾ ಮೀಮಾಂಸೆಯ ನಿಲುವಿನಲ್ಲಿದೆ. ಮೀಮಾಂಸೆಯ ದೃಷ್ಟಿಯಿಂದ ಇದು ಭಾರತೀಯ ಕಾವ್ಯಮೀಮಾಂಸೆಯ ಏಕಮೂಲವಾದದ ಸ್ಪಷ್ಟ ನಿರಾಕರಣೆಯಾಗಿದೆ. ‘ಕೋಗಿಲೆಯ ಕಮನೀಯವಾದ ಕೂಗು ಕಾಡಿನಲ್ಲೇನು ಮಾಡಬಲ್ಲದು? ಮೂರ್ಖರೂ ಜಡರೂ ಆದ ಜನರಿಂದ ತುಂಬಿದ ಅರಣ್ಯದಲ್ಲಿ ಇಂಪುಗೆಟ್ಟ ಆ ಕವಿಯ ಕವಿತೆಯು ಏನನ್ನು ತಾನೆ ಮಾಡಬಲ್ಲದು? ಅದು ಅರಣ್ಯರುದಿತಕ್ಕೆ ಸಮಾನ’ ಎನ್ನುವ ಪಂಪನ ನಿಲುವು ಇದನ್ನು ಸಮರ್ಥಿಸುತ್ತದೆ.

ಪಂಪನ ಆದಿಪುರಾಣ ವ್ಯಾಪ್ತಿ ವಿಸ್ತಾರ ದೊಡ್ಡದು. ಸುಮಾರು ೧೬೨೬ ಪದ್ಯಗಳೂ (ಆವೃತ್ತಿಗನುಸಾರ ತುಸು ಹೆಚ್ಚು ಅಥವಾ ಕಮ್ಮಿ) ನೂರಾರು ವಚನರೂಪದ ನಿರೂಪಣೆಯೂ ಇದೆ. ಈ ಕೃತಿಯನ್ನು ಕೇವಲ ೩೬೬ ಪದ್ಯಗಳಿಗೆ ಸೀಮಿತಗೊಳಿಸಿ ನಿರೂಪಿಸಿ, ಕಥಾಸಾರವನ್ನು  ಗದ್ಯರೂಪದಲ್ಲಿ ತೀರಾ ಸಂಕ್ಷಿಪ್ತರೂಪದಲ್ಲಿ ನೀಡಲಾಗಿದೆ. ಹಾಗಾಗಿ ಇದನ್ನು ಒಂದು ‘ಸಂಗ್ರಹ ಆವೃತ್ತಿ’ ಎನ್ನಲು ಕೂಡಾ ಆಗದು. ಆದಿಪುರಾಣದ ಭಿತ್ತಿಯಲ್ಲಿ ಕತೆಗಾರ, ತಾತ್ವಿಕ, ಧಾರ್ಮಿಕ, ಕವಿ, ಲೌಕಿಕ, ಸಾಧಕ- ಹೀಗೆ ಅನೇಕರಿದ್ದಾರೆ. ಪ್ರತಿ ಪದ್ಯವೂ, ವಚನವೂ ಸಂದರ್ಭಬಂಧಿತ ಆಗಿರುವುದರಿಂದ, ಅವುಗಳಲ್ಲಿ ಕೆಲವನ್ನು ಸಂದರ್ಭಮುಕ್ತಗೊಳಿಸಿ ಓದುಗನೆದುರಿಗೆ ಇಡುವುದಾಗಲೀ, ಕಥಾಹಂದರಕ್ಕೆ ಕುಂದಿಲ್ಲವೆಂದು ಹಲವನ್ನು ಬಿಡುವುದಾಗಲೀ ಒಟ್ಟಾರೆ ಕಾವ್ಯಕ್ಕೆ ತೋರುವ ನಿಷ್ಠೆಯ ಪ್ರಶ್ನೆಯಾಗುತ್ತದೆ.

‘ಆದಿಪುರಾಣ’ದಂತಹ ಮಹಾಕಾವ್ಯದ ಓದಿಗೆ ಕ್ರಮವೊಂದನ್ನು ಹಿಡಿಯಬೇಕಾದ ನಿರ್ಬಂಧವಿದೆ. ಅದು ಏಕಾಕಿಯಲ್ಲ; ಕಾವ್ಯದ್ವಯದಲ್ಲಿ ಒಂದು. ಗ್ರೀಕ್ ನಾಟಕತ್ರಯಗಳ ಮಾದರಿಯಲ್ಲಿ ಜೈನ ಲೌಕಿಕ-ಆಗಮಿಕ ಕಾವ್ಯಗಳನ್ನು ಒಂದು ಸೆಟ್ ಎಂದು ಒಟ್ಟಾಗಿ ಪರಿಭಾವಿಸಿ ಓದಬೇಕು. ಹಾಗೆ ಓದಿದಾಗ ಸಮಗ್ರ ಭಾರತವನ್ನೇ ಕ್ಯಾನ್ವಾಸ್‌ ಆಗಿಸಿಕೊಂಡಿರುವ ಅನೇಕ ಚಿತ್ರಗಳು ಕಣ್ಣೆದುರಿಗೆ ಬರುತ್ತವೆ.  ಒಂದು: ಇದಿರಿಗೆ ನಿಂತ ಸೋದರರನ್ನು, ಗುರುಗಳನ್ನು, ಮಾವಂದಿರನ್ನು, ತಾತ ಮುಂತಾದ ಹಿರಿಯರನ್ನು ಹೇಗೆ ಕೊಲ್ಲಲಿ? ಎಂದು ಕಂಗಾಲಾಗಿ ನಿಂತ ಅರ್ಜುನನನ್ನು ಅವರನ್ನೆಲ್ಲ ಕೊಲ್ಲಲು ಹುರಿದುಂಬಿಸುತ್ತಿರುವ ಕೃಷ್ಣನ ಚಿತ್ರ. ಇನ್ನೊಂದು: ಯುದ್ಧ ರಾಜರ ನಡುವಿನದ್ದು, ಅದಕ್ಕೆ ಸಾಮಾನ್ಯರನ್ನು ಏಕೆ ಕೊಲ್ಲಬೇಕು ಎಂದು ತಾವಿಬ್ಬರೇ ಹೋರಾಡಿ ಕಡೆಗೆ ತಮ್ಮನು ಅಣ್ಣನನ್ನು ಸೋಲಿಸಿ, ಸಾಮ್ರಾಜ್ಯಶಾಹಿ ಪ್ರವೃತ್ತಿಯ ಮೂರ್ತರೂಪವನ್ನು ಅನಾಮತ್ತು ಮೇಲೆತ್ತಿ ಆಚೆಗೆ ಒಗೆಯಬೇಕು, ಅಷ್ಟರಲ್ಲಿ ಅಯ್ಯೋ ತಾನು ಮಾಡುತ್ತಿರುವುದೇನು? ಸ್ವಂತ ಅಣ್ಣನನ್ನು ಲೋಕದೆದುರಿಗೆ ಅಪಮಾನಿಸಿ ಅವನ ಬದುಕನ್ನು  ಅಪಮಾನಿಸುವುದೆ? ಅದೂ ಯಾತಕ್ಕಾಗಿ? ಹೀಗೆ ಒಗೆದ ನಂತರ ತಾನೇ ಅವನಾಗುವುದಿಲ್ಲವೆ? ಇದೇನು ಮಾಡಿಬಿಡುತ್ತಿದ್ದೆ ಎಂದು ಕಸಿವಿಸಿಪಟ್ಟು, ಎತ್ತಿದ ಭರತನನ್ನು ಹಾಗೆಯೇ ಮೆಲ್ಲಗೆ ಕೆಳಗಿಳಿಸಿ, ಎಲ್ಲ ಕೇಡಿನ ಮೂಲ ಅಧಿಕಾರ ಮತ್ತು ದುರಾಸೆಯೇ ಎಂಬುದನ್ನು ತಾನೂ ಅರಿತು, ಲೋಕವೂ ಅರಿವಂತೆ ಮಾಡಿದ ಬಾಹುಬಲಿಯ ಚಿತ್ರ.. ಭರತನನ್ನು ಬಾಹುಬಲಿಯು ಎತ್ತಿ ಇಳಿಸಿದ ಈ ನಡೆಗೆ ಸಮಾನವಾದ ನಡೆಯೊಂದನ್ನು ಮಹಾಭಾರತದಲ್ಲಿ ಕಾಣಲು ಸಾಧ್ಯವಿಲ್ಲ. ಮಹಾಭಾರತದಲ್ಲಿ ಗೆದ್ದವರು ಯಾರೂ ಇಲ್ಲ. ಅದು ಲೋಕವೇ ಸೋತ ಯುದ್ಧ. ಅದನ್ನು ಮನಗಾಣಿಸುವ ಆದಿಪುರಾಣದ ನುಡಿಗಳು:

ಸೋದರರೊಡನೆ ಸೋದರರ
ಕಾದಿಸುವುದು, ತಂದೆ ಮಕ್ಕಳ ನಡುವೆಯೂ ಬಿಡದೆ ಉ-
ತ್ಪಾದಿಸುವುದು ಕೋಪವನು.
ಇದಿಂತೆಂದು ತಿಳಿದೂ ತೊಡಗಲಿ ಹೇಗೆ ರಾಜ್ಯಶ್ರೀಯೊಡನೆ?

ಇನಿದು ಮೊಮೊದಲು. ನಂಜಿನ
ಹನಿಯಂತೆ ಸ್ವೀಕರಿಸಿದ ಬಳಿಕ ಮುಳಿದು ಕೊಲುವುವು. ಇ-
ದನರಿದರಿದೂ ವಿಷಯಸುಖಾಸ್ವಾದಕ್ಕೆ
ಮನವನದೇಕೆ ಕೊಡುವರೋ ನರಪಶುಗಳಾದ ಲಂಪಟರು?
(ಎಚ್ಚೆಸ್ವಿ ಅವರ ಅವತರಣ )

ಅಂತಹ ಇನ್ನೊಂದು ಚಿತ್ರವೆಂದರೆ ಮಹಾಭಾರತದಲ್ಲಿ ಗಿಡ, ಮರ, ಬಳ್ಳಿ, ಖಗಮೃಗತತಿಗಳನ್ನು ಧಗಧಗಿಸುವ ಬೆಂಕಿಗೆ ಆಹುತಿಯನ್ನಿತ್ತ ಖಾಂಡವವನದಹನಕ್ಕೆ ಪ್ರತಿಯಾಗಿ ಆದಿಪುರಾಣದ ದೃಶ್ಯವೊಂದನ್ನು ಇದಿರಾ ಇದಿರು ಇಡಬೇಕು. ಒಮ್ಮೆ ತಾನು ಮಾಡಲಿರುವ ‘ಜಿನಪೂಜೋತ್ಸವ’ ಎಂಬ ಮಹಾಮಹದಲ್ಲಿ ದಾನ ಸ್ವೀಕರಿಸಲು ತಕ್ಕವರು ಯಾರೆಂದು ತಿಳಿಯಲು ಭರತ ಒಂದು ಉಪಾಯವನ್ನು ಕೈಗೊಂಡನು. ಹಚ್ಚ ಹಸುರು ಚಿಗುರನ್ನೂ ಹಣ್ಣುಗಳನ್ನೂ, ಹೂಗಳನ್ನೂ ಮೊಳಕೆ ಕಟ್ಟಿದ ಧಾನ್ಯಗಳನ್ನೂ ಅರಮನೆಯ ಹೊರಗೆಲ್ಲಾ ಹರಡಿಸಿ ದಾನ ಸ್ವೀಕರಿಸಲು ಕರೆದರೆ ವಿವೇಕವಿಲ್ಲದ ಅನೇಕರು ಅವುಗಳನ್ನು ತುಳಿದುಕೊಂಡೇ ಅರಮನೆಯನ್ನು ಪ್ರವೇಶಿಸಿದರೆ ಮತ್ತೆ ಕೆಲವರು;

ವಂದ್ಯರೂ ಪಾಪಭೀರುಗಳೂ ಆದ
ಮಂದಿ ವಿವಿಧ ಫಲಪುಷ್ಟ ಪಲ್ಲವ ತತಿಗಳ ಕರುಣೆ
ಯಿಂದ ತುಳಿಯದೆ, ಅರಮನೆಯಾಚೆ
ಬಂದಲ್ಲೇ ನಿಂತರು ಹೂ ಹಣ್ಣುಗಳ ಮೆಟ್ಟಲೊಲ್ಲದೆ ||
(ಎಚ್ಚೆಸ್ವಿ ಅವತರಣ)

ಜೈನ ತಾತ್ವಿಕತೆಯಲ್ಲಿನ ಲೋಕನಿವೃತ್ತಿಯ ಆಶಯವು ಸಾಮೂಹಿಕ ಬದುಕನ್ನು ಒಂದು ತುದಿಗೆ ಒತ್ತರಿಸಿಬಿಡುತ್ತದೆ. ಇದನ್ನು ನಿರಾಕರಿಸಲೋಸುಗವೋ ಎನ್ನುವಂತೆ ರಚಿತವಾಗಿರುವ ಆದಿಪುರಾಣವು ಲೌಕಿಕದ ವೈಭವವನ್ನು ಕಟ್ಟರೆಯಾಗುವಂತೆ ನೀಡುತ್ತದೆ. ಆದರೆ ಲೋಕಸಂಘರ್ಷಕ್ಕೆ ಪ್ರಮುಖ ಕಾರಣವಾದ ಲೌಕಿಕ ಮತ್ತು ಪಾರಮಾರ್ಥಿಕ ಸಂಗತಿಗಳನ್ನು ಅವಳಿ ವಿರುದ್ಧಗಳಾಗಿ ನೋಡದೆ ಒಂದಕ್ಕೊಂದು ಪೂರಕವೆಂಬ ನಿಲುವಿನೊಡನೆ ಅವೆರಡರ ಅನುಸಂಧಾನವನ್ನು ಮಾಡುತ್ತದೆ. ಅತಿಯಾದ ದೇಹ ನಿಯಂತ್ರಣ ಮತ್ತು ವಿಪರೀತ ಮೋಹ ಇವೆರಡೇ ಜೀವನ ಮೀಮಾಂಸೆಯನ್ನು ಆವರಿಸಿರುವ ಬಗೆಗೆ ಆತಂಕವಿದೆ. ಅದೊಂದು ರೀತಿಯಲ್ಲಿ ಮಧ್ಯಮಮಾರ್ಗದ ಅನುಸಂಧಾನ. ಯಾವುದನ್ನು ತ್ಯಜಿಸದೆ, ಯಾವುದಕ್ಕೂ ಮೋಹದಿಂದ ಅಂಟಿಕೊಳ್ಳದ ಟ್ರಾನ್ಸೆಂಡೆಂಟಲಿಸ್ಟ್ ದೃಷ್ಟಿಕೋನವೊಂದು ಉದ್ದಕ್ಕೂ ಇಲ್ಲಿ ಕ್ರಿಯಾಶೀಲವಾಗಿರುವುದನ್ನು ಕಾಣಬಹುದು. ಇಂತಹ ಅವತರಣಗಳು ಓದಿನ ಅನೇಕ ಸಾಧ್ಯತೆಗಳಲ್ಲಿ ತಾನು ಇದಿರಾಗುತ್ತಿರುವುದು ಯಾವುದನ್ನು ಎಂಬುದರ ಸ್ಪಷ್ಟತೆಯನ್ನಾದರೂ ನೀಡಬೇಕಾಗುತ್ತದೆ. ಅದನ್ನು ಎಚ್ಚೆಸ್ವಿ ಹೀಗೆಂದು ಸೂಚಿಸುತ್ತಾರೆ: ‘‘ಅಳಿದ ಮೇಲೆ ಉಳಿಯುವುದೇನು ಎಂಬ ಅತ್ಯಾಧುನಿಕ ಜೀವ ಮೂಲ ಪ್ರಶ್ನೆಯು ಇಲ್ಲಿ ರೂಪಕ ಭಾಷೆಯಲ್ಲಿ ಉತ್ತರಕ್ಕೆ ಹಲುಬುತ್ತಾ ಇದೆ. ಅಂತಿಮವಾಗಿ ನಿಲ್ಲುವುದು ಯಾವುದು ಎಂಬುದನ್ನು ಆದಿನಾಥನ ಧರ್ಮಶಾಸನವೂ, ಆದಿಚಕ್ರಿಯ ದಿಗ್ವಿಜಯ ಶಾಸನವೂ ಪ್ರತಿಮಾತ್ಮಕವಾಗಿ ಅಭಿನಯಿಸಿ ತೋರಿಸುತ್ತವೆ. ಬದುಕಿನ ಲೀಲಾವೈಭವದ ನಾಭಿಯಲ್ಲಿ ನಿಂತಿರುವುದು ಒಂದು ಪರಮ ನಿರ್ವೇಗ; ಆಳಕ್ಕಿಳಿವ ವಿಷಾದ’’.

ಇದರ ಇನ್ನೊಂದು ನೋಟವನ್ನು ಡಿ.ಆರ್. ನಾಗರಾಜ್ ಹೀಗೆ ನೀಡಿದ್ದಾರೆ: ‘‘ಜೈನ ಸಂವೇದನೆಯ ಮಹತ್ವವಿರುವುದೇ ಮಾನವ ಬದುಕಿನ ತೀವ್ರ ವಾಸ್ತವಗಳನ್ನು ಹೇಳುವಲ್ಲಿ. ಇದು ಅಪಾಯಕರ ಪ್ರಣಯ ಎಂದು ಗೊತ್ತಿದ್ದೂ ಮನುಷ್ಯರು ಪ್ರೀತಿಸುತ್ತಾರೆ. ಅನೈತಿಕ ಎಂದು ಗೊತ್ತಿದ್ದೂ ಅದರ ಬಗ್ಗೆ ಆಕರ್ಷಿತರಾಗುತ್ತಾರೆ. ಮನುಷ್ಯರಲ್ಲಿ ನಿಸರ್ಗ ವಿವೇಕ ಎನ್ನುವುದು ಇದ್ದರೂ ಅದನ್ನು ನಿರುಪಯುಕ್ತಗೊಳಿಸುವ ಪ್ರೇಮ, ಅಧಿಕಾರ, ಸಾಹಸ, ಗರ್ವ, ಅಹಂಗಳನ್ನು ನಿರ್ವಹಿಸುವುದು ಒಂದು ಸವಾಲು. ಕಳಕೊಂಡಾಗಲೇ ಇದ್ದುದರ ಬೆಲೆ ತಿಳಿಯೋದು’’.  ಇದನ್ನು ಮಹಾ ಕಣ್ಮರೆ ಎಂದು ಡಿ.ಆರ್. ಸೂಚಿಸುತ್ತಾರೆ.

ಈ ಮಹಾಕಣ್ಮರೆ ಕ್ಷಣಾರ್ಧದಲ್ಲಿ ಪ್ರತ್ಯಕ್ಷವಾಗುವ ಪರಿ ಜೈನ ಕೃತಿಗಳ ವಿಶೇಷ. ಕೆನ್ನೆಯ ಬಳಿ ಮೂಡಿದ ನರೆಗೂದಲುಗಳು ನೇರವಾಗಿ ಕಿವಿಯೊಳಗೇ ಈ ಅಶಾಶ್ವತತೆಯನ್ನು ಉಸುರುತ್ತವೆ. ಅರಮನೆಯ ಉಪ್ಪರಿಗೆಯ ಮೇಲಿಂದ ಕಂಡ ಬೆಳ್ಮುಗಿಲಿನಂತಹದ್ದೇ ಆಲಯವೊಂದನ್ನು ಕಟ್ಟಲು ಬಯಸುವಷ್ಟರಲ್ಲಿ ಮುಗಿಲು ಕರಗಿಹೋದದ್ದನ್ನು ಕಂಡು ಆ ಕ್ಷಣವೇ ಸಂಸಾರ ತ್ಯಾಗ ಮಾಡಿ ತಪಸ್ಸಿಗೆ ಹೊರಡುವುದು; ಸೂರ್ಯಾಸ್ತದ ಸಮಯಕ್ಕೆ ತಾವರೆಯನ್ನು ಪ್ರವೇಶಿಸಿ ಅದರೊಳಗೆ ಸಿಕ್ಕಿ ಸತ್ತ ದುಂಬಿಯನ್ನು ಕಂಡ ರಾಜ ವೈರಾಗ್ಯಮುಖಿಯಾಗುವುದು ಒಂದಾದರೆ, ನಿರ್ವೇಗವಶನಾಗಿ ತನ್ನ ತಲೆಗೂದಲುಗಳನ್ನು ಕಿತ್ತು ಅವುಗಳನ್ನು ಹುತ್ತವೊಂದರಲ್ಲಿ ವಿಸರ್ಜಿಸಲು ಹೋದಾಗ ಹಾವು ಕಚ್ಚಿ ಸಾವು ಇದಿರಾದಾಗ ಆಕಾಶದಲ್ಲಿ ಸುಖಿಸುವ ವಿದ್ಯಾಧರನನ್ನು ಕಂಡು ಮುಂದಿನ ಜನ್ಮದಲ್ಲಾದರೂ ತಾನು ಸುಖವ ಅನುಭವಿಸುವಂತಾಗಲಿ ಎಂಬು ಬಯಸುವುದಿದೆಯಲ್ಲಾ! ಮನಸ್ಸು ಯಾವಾಗ ನಿರ್ವೇಗಪರವೋ ಯಾವಾಗ ಸುಖಸಂವೇದಿಯೋ! ಎಲ್ಲವೂ ಕ್ಷಣಾರ್ಧದಲ್ಲಿ ನಡೆದುಹೋಗುವ ಬದಲಾವಣೆ.

ಜೈನ ಕವಿಗಳಿಗೆ ರಾಮಾಯಣ ಮಹಾಭಾರತಗಳು ಲೌಕಿಕ ಕಾವ್ಯಗಳಾದುದು ಹೇಗೆ? ಎನ್ನುವ ಪ್ರಶ್ನೆಗೆ ಅನೇಕ ಉತ್ತರಗಳು ಈಗ ಚಾಲ್ತಿಯಲ್ಲಿವೆ. ಆದರೆ ಜೈನ-ವೈದಿಕ ಮುಕ್ತ ಓದಿಗೆ ಎದುರಾಗುವ ಒಂದು ಪ್ರಶ್ನೆಯೂ ಇದೆ. ಅದೇನೆಂದರೆ: ಈ ಕಾವ್ಯಗಳು ಧಾರ್ಮಿಕ ಕಾವ್ಯಗಳಾದದ್ದು ಹೇಗೆ? ಕೃಷ್ಣನ ಮೇಲೆ, ರಾಮನ ಮೇಲೆ ಆವಾಹಿಸಲ್ಪಟ್ಟಿರುವ ವೈದಿಕ ವಿಷ್ಣುತತ್ವವನ್ನು ಹೊರತುಪಡಿಸಿದರೆ ಉಳಿಯುವುದು ಏನು? ಆಗಲೂ ಈ ಕಾವ್ಯಗಳು ಧಾರ್ಮಿಕ ಅನ್ನಿಸಿಕೊಳ್ಳಲು ಸಾಧ್ಯವೆ? ಆದರೆ ಜೈನರ ಧಾರ್ಮಿಕ ಕಾವ್ಯಗಳು ಹಾಗೆಂದು ಕರೆಸಿಕೊಳ್ಳಲು ನಿಶ್ಚಿತವಾಗಿ ಜೈನ ತಾತ್ವಿಕತೆಯ ಗಂಭೀರ ಅನುಸಂಧಾನದ ಜೊತೆಗೆ ಆ ಧರ್ಮದ ಸಮಯಾಚಾರಗಳ ವಿಸ್ತಾರವಾದ ವಿವರಗಳನ್ನೂ ಒಳಗೊಂಡಿವೆ. ಆದಿಪುರಾಣದ ಕೊನೆಯ ಆಶ್ವಾಸದಲ್ಲಿ ಎಂಬತ್ತು ಪದ್ಯಗಳಿವೆ. ಅದನ್ನು ಆರು ವಚನಗಳಿಗೆ ಈ ಕೃತಿ ಸೀಮಿತಗೊಳಿಸಿಕೊಂಡಿದೆ. ಈ ಪದ್ಯಗಳು  ಶೈವ ಮತ್ತು ವೈಷ್ಣವ ಪರಂಪರೆಯ ಅನೇಕ ರೂಪಕಗಳನ್ನು ಮರುರಚಿಸುವುದರ ಜೊತೆಗೆ ಜೈನ ಧಾರ್ಮಿಕಪರಂಪರೆಯ ಪ್ರಮುಖ ಹೆಜ್ಜೆಗುರುತುಗಳನ್ನು ದಾಖಲಿಸುತ್ತವೆ. ಅಲ್ಲಿ ಭರತ ಕಂಡ ಕನಸುಗಳ ವಿವರಣೆಗಳ ಜೊತೆಗೆ ಅನೇಕ ಧಾರ್ಮಿಕ ವಿಧಿಗಳ ವಿಸ್ತಾರವಾದ ವರ್ಣನೆಗಳಿವೆ. ಜೈನ ಧರ್ಮೀಯನೊಬ್ಬ ನಡೆಸುವ ಓದಿಗೆ ಇವು ಮುಖ್ಯವೆನಿಸುವುದು ಸಹಜವೇ ಇದೆ. ಹಾಗಾಗಿ ಪಂಪನ ನೇರ ಅನುಸಂಧಾನದ ಸಾಧ್ಯತೆಗಳನ್ನು ಮುಕ್ತವಾಗಿಡುವುದೇ ಮೇಲು. ಪಂಪಭಾರತದ ಹತ್ತಿರದ ಓದಿಗೆ ಪಂಪನು ಇದಿರಿನಲ್ಲಿ ಕೂತಿರುವ ಭಾಸವನ್ನುಂಟುಮಾಡಿದರೆ, ಈ ತಿಳಿಗನ್ನಡದ ಅವತರಣವು ಎಚ್ಚೆಸ್ವಿಯವರನ್ನು ಕಿವಿ ಮನಸ್ಸುಗಳೆರಡರ ಹತ್ತಿರ ಕೂರಿಸುತ್ತದೆ. ಅವರದ್ದೇ ದನಿ ‘ಆದಿಪುರಾಣ’ವಾಗಿ ಹರಿಯುತ್ತದೆ.

ಕೃತಿ: ಪಂಪನ ಆದಿಪುರಾಣ ತಿಳಿಗನ್ನಡ ಅವತರಣ
ಲೇ: ಎಚ್.ಎಸ್. ವೆಂಕಟೇಶಮೂರ್ತಿ
ಪು: 304, ರೂ. 200
ಪ್ರ: ಅಭಿನವ, 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40

Write A Comment