ಕರ್ನಾಟಕ

ಅರಣ್ಯ ಭೂಮಿ ಹೆಸರಿನಲ್ಲಿ ರೈತರಿಗೆ ನೋಟಿಸ್ : ನಟಿ ಲೀಲಾವತಿ, ರೈತ ಸಂಘದ ಪ್ರತಿಭಟನೆ

Pinterest LinkedIn Tumblr

Leelav-athi-Actress

ಬೆಂಗಳೂರು, ಏ.6-ಅರಣ್ಯ ಭೂಮಿ ಹೆಸರಿನಲ್ಲಿ ರೈತರಿಗೆ ನೋಟಿಸ್ ನೀಡಿರುವುದನ್ನು ಖಂಡಿಸಿ ಸೋಲದೇವನಹಳ್ಳಿಯಲ್ಲಿಂದು ನಟಿ ಲೀಲಾವತಿ, ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಸ್ಥಳೀಯ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.

ಕಳೆದ 1917ರಿಂದಲೂ ಇಲ್ಲಿ ನೆಲೆಸಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸವನ್ನು ಅರಣ್ಯ ಇಲಾಖೆ ಮಾಡುತ್ತಿದೆ. ಈಗಾಗಲೇ ಈ ಜಮೀನುಗಳನ್ನು ಖರೀದಿಸಿ ಸರ್ಕಾರ ನೀಡಿರುವ  ಕ್ರಯ ಪತ್ರ ಸೇರಿದಂತೆ ಎಲ್ಲ ದಾಖಲೆಗಳಲ್ಲೂ ರೈತರ ಮಾಲೀಕತ್ವದ ಹೆಸರಿದ್ದರೂ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿ ಒತ್ತಡ ಹೇರುತ್ತಿದೆ ಎಂದು

ನಟಿ ಲೀಲಾವತಿ ಆರೋಪಿಸಿದ್ದಾರೆ. ಯಾವುದೇ ಕಾರಣಕ್ಕೂ ಜಮೀನನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಮುಗ್ಧ ರೈತರ ಭೂಮಿ ವಶಪಡಿಸಿಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ನೆಲಮಂಗಲ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಯಿಂದ ಸುಮಾರು 600 ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದ್ದು, ಅದನ್ನು ವಶಕ್ಕೆ ಪಡೆಯುವ ಸಂಬಂಧ ನೋಟಿಸ್ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ಹೈಕೋರ್ಟ್ ಆದೇಶದ ಮೇರೆಗೆ 4 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿದ ರೈತರನ್ನು ಒಕ್ಕಲೆಬ್ಬಿಸಬಾರದು ಎಂಬ ಸೂಚನೆ ನೀಡಲಾಗಿದೆ. ಅದನ್ನು ಪಾಲಿಸಲಾಗುತ್ತಿದೆ.  ಈಗಾಗಲೇ ಕಳೆದ 2005ರಲ್ಲಿ ಡಿಎಫ್‌ಒ ಅವರು ನೀಡಿರುವ ವರದಿ ಅನ್ವಯ ಅರಣ್ಯ ಒತ್ತುವರಿಯ 134 ಪ್ರಕರಣಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಅದರಲ್ಲಿ 30 ಪ್ರಕರಣಗಳನ್ನು ಈಗಾಗಲೇ ಇತ್ಯರ್ಥ ಪಡಿಸಿ ಭೂಮಿ ವಶಪಡಿಸಿಕೊಳ್ಳಲಾಗಿದೆ.  ಬಾಕಿ ಉಳಿದಿರುವ 104 ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.

Write A Comment