ಮನೋರಂಜನೆ

ವರ್ಣರಂಜಿತ ರಂಜನೀಯ ನಾಟಕ ‘ಟೆಂಪೆಸ್ಟ್’

Pinterest LinkedIn Tumblr

psmec29Tempest2

-ವೈ.ಕೆ.ಸಂಧ್ಯಾಶರ್ಮ
ವಿಲಿಯಂ ಶೇಕ್ಸ್‌ಪಿಯರ್‌ನ ಪ್ರಸಿದ್ಧ ನಾಟಕ ‘ಟೆಂಪೆಸ್ಟ್’ ನಗರದ ‘ರಂಗಶಂಕರ’ದಲ್ಲಿ ಇತ್ತೀಚೆಗೆ ಪ್ರದರ್ಶನಗೊಂಡಿದ್ದು, ‘ಸಂಚಯ’ ರಂಗತಂಡದವರು ಇದನ್ನು ಅಭಿನಯಿಸಿದರು. ಇದರ ಕನ್ನಡ ರಂಗರೂಪ: ಬಿ.ಆರ್.ಶ್ರೀಕಾಂತ್. ನಿರ್ದೇಶನ: ಜೋಸೆಫ್. ಸುಮಾರು ನಲವತ್ತೈದಕ್ಕೂ ಹೆಚ್ಚು ಕಲಾವಿದರ ಶ್ರಮವನ್ನೊಳಗೊಂಡ ಈ ಅದ್ದೂರಿ ನಾಟಕ ವರ್ಣರಂಜಿತ ಪ್ರಸ್ತುತಿಯಲ್ಲಿ, ಆಕರ್ಷಕ ವೇಷಭೂಷಣ-ವಿಪುಲ ರಂಗಪರಿಕರಗಳಿಂದ, ಪ್ರಸಾಧನ ಕಲಾವಿನ್ಯಾಸದಿಂದ ಶೋಭಿಸಿತು. ಜೊತೆಗೆ ಸಂಭ್ರಮ ತುಳುಕುವ ಕೆಲ ವಿಶಿಷ್ಟ    ಮನಮೋಹಕ ದೃಶ್ಯ ರಚನೆಗಳು ಮನಸ್ಸಿಗೆ ಮುದನೀಡಿದವು.

ಎಲ್ಲಾ ಪ್ರೇಮಕಥೆಗಳಲ್ಲೂ ಇರುವಂಥದೇ ಇಲ್ಲಿ ಇದೆ. ಹಗೆ ಸಾಧಿಸುವ ರಾಜರಿಬ್ಬರ ಮಕ್ಕಳು ತಮಗರಿವಿಲ್ಲದೆ ಪ್ರೇಮಪಾಶದಲ್ಲಿ ಬೀಳುವುದು, ಅದಕ್ಕೆ ಹಿರಿಯರ ವಿರೋಧ, ಶತ್ರುತ್ವ, ದ್ವೇಷಗಳ ಸಂಘರ್ಷದಲ್ಲಿ ಯುವಪ್ರೇಮಿಗಳ ನರಳಾಟ-ಪ್ರೇಮಪರೀಕ್ಷೆ ಇತ್ಯಾದಿ. ಮಿಲನ್ ರಾಜ್ಯದ ದೊರೆ ಪ್ರಾಸ್ಪೆರೊ, ತನ್ನ ತಮ್ಮ ಆಂಟೊನಿಯ ಅಧಿಕಾರಲಾಲಸೆಗೆ ಬಲಿಯಾಗಿ ರಾಜ್ಯಭ್ರಷ್ಟನಾಗಿ ಹಸುಗಂದಮ್ಮನೊಡನೆ ದೂರದ ದ್ವೀಪ ತಲುಪಿ, ಅಲ್ಲಿ ಮಾಟಗಾತಿಯ ನೆರವಿನಿಂದ ಮಂತ್ರವಿದ್ಯೆ ಕಲಿತು ಶಕ್ತಿಶಾಲಿಯಾಗುತ್ತಾನೆ.

ಆಗೊಮ್ಮೆ ತನ್ನ ರಾಜ್ಯ ಕಸಿದುಕೊಳ್ಳಲು ಸಹಕರಿಸಿದ ರಾಜ ಅಲೊನ್ಸೋ, ತನ್ನ ಮಗಳ ಮದುವೆ ಮುಗಿಸಿಕೊಂಡು ದಿಬ್ಬಣದೊಂದಿಗೆ ಕಡಲಿನಲ್ಲಿ ಪಯಣಿಸುತ್ತಿರುವ ವಿಷಯ ತಿಳಿದು ತನ್ನ ಮಾಂತ್ರಿಕಶಕ್ತಿ ಮತ್ತು ಭಂಟ ಬಿರುಗಾಳಿಯನ್ನು ಉಪಯೋಗಿಸಿಕೊಂಡು ಹಡಗು ಬುಡಮೇಲು ಮಾಡಿ, ಅವನೊಂದಿಗಿದ್ದವರೆಲ್ಲ ಮೂರು ಭಾಗಗಳಾಗಿ ದಡ ಸೇರುವಂತೆ ಮಾಡುವನು. ಹಾಗೆ ಈಜಿಬಂದ ಶತ್ರುರಾಜನ ಮಗ ತನ್ನ ಮಗಳನ್ನು ಪ್ರೀತಿಸಲು ತೊಡಗಿದಾಗ, ಅದನ್ನೇ ಬಳಸಿಕೊಂಡು ಸೇಡು ತೀರಿಸಿಕೊಳ್ಳಲು ಅವರನ್ನು ಪ್ರೋತ್ಸಾಹಿಸುತ್ತಾನೆ.

ಆದರೆ ಕೊನೆಯಲ್ಲಿ ಅವನಲ್ಲಿ ಪರಿವರ್ತನೆಯುಂಟಾಗುವುದು ನಾಟಕದ ತಿರುವು. ಆ ಯುವಪ್ರೇಮಿಗಳನ್ನು ಅಗಲಿಸಲಾರದೆ ಪ್ರಾಸ್ಪೆರೊ, ತಾನೇ ಬದಲಾಗಿ, ತನ್ನೆದೆಯ ಕೋಪ-ದ್ವೇಷಗಳನ್ನೆಲ್ಲ ನೀಗಿಕೊಂಡು ಅದರ  ಜಾಗದಲ್ಲಿ ಶಾಂತಿ-ಸೌಹಾರ್ದತೆ ತುಂಬಿಕೊಂಡು ಶತ್ರುವನ್ನು ಕ್ಷಮಿಸಿ, ಎಲ್ಲಕ್ಕಿಂತ ಪ್ರೀತಿ ದೊಡ್ಡದು ಎಂದರಿತು ಸುಖಾಂತ್ಯಕ್ಕೆ ಎಡೆ ಮಾಡಿಕೊಡುತ್ತಾನೆ. ಇಲ್ಲಿ ‘ಟೆಂಪೆಸ್ಟ್’ ಎನ್ನುವುದು ಪ್ರೀತಿ-ಸಂಬಂಧಗಳ ರೂಪಕವಾಗಿದೆ. ಜಾನಪದ ರೀತಿಯಲ್ಲಿ ಸಾಗುವ ಈ ನಾಟಕದ ಘಟನಾವಳಿಗಳ ಮಧ್ಯೆ ಶೇಕ್ಸ್‌ಪಿಯರ್ ಕೂಡ ಕಾಣಿಸಿಕೊಂಡು ತನ್ನ ಪಾತ್ರಗಳನ್ನು ಚಿತ್ರಿಸುತ್ತ, ಕೆಲವೊಮ್ಮೆ ಅವು ಅಂಕೆ ಮೀರಿ ವರ್ತಿಸುವುದನ್ನೂ ಮನಗಾಣುತ್ತಾ ನಾಟಕದಲ್ಲೊಂದಾಗುವುದು ವಿಶೇಷ.

ನಾಟಕದ ಪ್ರಾರಂಭ ತೂಗಾಡುತ್ತ ಸಾಗುತ್ತಿದ್ದ ಹಡಗಿನ ತುಂಬ ದಿಬ್ಬಣದ ಜನ ಕುಳಿತು ಪಯಣಿಸುವ ದೃಶ್ಯ ತುಂಬ ರೋಚಕವಾಗಿತ್ತು. ಕಡಲಿನಲೆಗಳ ಲಾಸ್ಯಕ್ಕೆ ಬಳುಕುತ್ತ, ಅಂಬಿಗರು ಹುಟ್ಟು ಹಾಕುತ್ತ, ಹಡಗಿನ ಬಾವುಟ ಹಾರಾಡುತ್ತ, ಎಲ್ಲರ ಮುಖಗಳಲ್ಲಿ ಹಿಗ್ಗು ತುಂಬಿಕೊಂಡಿದ್ದ ನೋಟ ಅನನ್ಯ ಅನುಭವ ಕಟ್ಟಿಕೊಟ್ಟಿತು. ಒಮ್ಮೆಲೆ ಬಿರುಗಾಳಿ ಎದ್ದಾಗ ಉಂಟಾಗುವ ಅಲ್ಲೋಲಕಲ್ಲೋಲ, ಹಾರಾಟಚೀರಾಟ, ಪಯಣಿಗರೆಲ್ಲ ಚೆಲ್ಲಾಪಿಲ್ಲಿಯಾಗಿ, ಓಲಾಡಿ, ಮಗುಚಿ, ಹೆದರಿ ಪ್ರಾಣಭಯದಿಂದ ತಮ್ಮೆರಡೂ ಕೈಗಳನ್ನು ಬೀಸಿಕೊಂಡು ದಡದತ್ತ ಈಜಿಬಂದ ಪರಿ ನೈಜ ಎನಿಸುವಂತಿತ್ತು. ನಾಟಕ ಮುಂದೆ ಸಾಗುತ್ತ ಒಳ್ಳೆಯ ‘ಟೆಂಪೋ’ ಸೃಷ್ಟಿಯಾಗಿತ್ತು.

ಪ್ರೊಸ್ಪೆರೋ (ಕೃಷ್ಣ ಹೆಬ್ಬಾಳೆ) ಕಂಚಿನಕಂಠದಿಂದ ಸ್ಫುಟವಾಗಿ, ತನ್ನ ಖಚಿತ ನಿಲುವಿನ ಮಾತುಗಳನ್ನು ಹೇಳುತ್ತ, ಆ ಪಾತ್ರದ ಘನತೆಯನ್ನು ಕಾಪಾಡುವಂತೆ ನಟಿಸಿದರು. ಜೊತೆಗೆ ಅವರ ಅಂಗಸೌಷ್ಟವ, ಆಂಗಿಕ ಅಭಿನಯವೂ ಅದಕ್ಕೆ ಪೂರಕವಾಗಿತ್ತು. ಗುಂಪಿನಿಂದ ಬೇರೆಯಾದ ಅಡುಗೆ ಭಟ್ಟ, ಅವನ ಸಹಾಯಕ ಮತ್ತು ದ್ವೀಪದ ವಾರಸುದಾರನ ಜೊತೆಗಿನ ಘಟನೆ  ರಂಜನೀಯವಾಗಿತ್ತು. ಅಡುಗೆಭಟ್ಟನಾಗಿ (ರಾಘವೇಂದ್ರ) ತಮ್ಮ ವಿಶಿಷ್ಟ ದೇಹಭಾಷೆ ಬಳಸಿಕೊಂಡು ಅಭಿನಯಿಸಿದ ಶೈಲಿ ಬಹಳ ಖುಷಿಕೊಟ್ಟಿತು. ತಮ್ಮ ವಿದೂಷಕನ ಮಾದರಿಯ ಪಾತ್ರವನ್ನು ಅತ್ಯುತ್ತಮವಾಗಿ ಅಭಿನಯಿಸಿ ಹೊಟ್ಟೆ ಹುಣ್ಣಾಗುವಂತೆ ನಗಿಸುವಲ್ಲಿ ಯಶಸ್ವಿಯಾದರು.ಸಹಾಯಕನಾಗಿ ಮನೋಹರ್ ಮತ್ತು ಕ್ಯಾಲಿಬನ್ ಪಾತ್ರಧಾರಿ ಕೂಡ ಉತ್ತಮ ಅಭಿನಯ ನೀಡಿದರು.

ಈ ನಾಟಕದೊಳಗೆ ಎದ್ದುಕಂಡ ಅಂಶವೆಂದರೆ ಶಿಸ್ತುಬದ್ಧತೆ ಮತ್ತು ಅಚ್ಚುಕಟ್ಟುತನ. ಸಮೂಹದೃಶ್ಯಗಳಲ್ಲಿ ಕಂಡುಬಂದ ಹೊಂದಾಣಿಕೆಯ ಚಲನೆ, ನೃತ್ಯ, ರಂಗದ ಮೇಲಿನ ಆಗಮನ-ನಿರ್ಗಮನ ಕ್ರಿಯೆಗಳು ಪರಿಪೂರ್ಣವಾಗಿದ್ದುದು ನಾಟಕದ ಪರಿಣಾಮ ಹೆಚ್ಚಿಸಿತು. ಇಲ್ಲಿ ಬರುವ ಅನೇಕ ಪಾತ್ರಗಳು ಅಂಗಾಭಿನಯಕ್ಕೆ ಕೊಟ್ಟಷ್ಟು ಪ್ರಾಧಾನ್ಯವನ್ನು ಭಾವಾಭಿವ್ಯಕ್ತಿಗೆ ಕೊಡಲಿಲ್ಲ ಎನಿಸಿತು. ರಂಗದ ಮೇಲೆ ಸಂಭ್ರಮದ ವಾತಾವರಣ- ಮಾಯಾಲೋಕವನ್ನು ಕಟ್ಟಿಕೊಡುವಲ್ಲಿ ಮತ್ತು ಇನ್ನಿತರ ಪರಿಸರ ನಿರ್ಮಾಣದ ಸಂದರ್ಭಗಳಲ್ಲಿ ಕಿನ್ನರಯಕ್ಷರ ಗುಂಪು ವಹಿಸಿದ ಪಾತ್ರ  ಮನೋಜ್ಞ.

ಇದಕ್ಕೆ ಮುಖ್ಯ ಕಾರಣ ಅವರುಗಳ ಖಚಿತ ಚಲನೆಯ ಜೊತೆಗೆ ಆಕರ್ಷಕ ವರ್ಣರಂಜಿತ ಉಡುಪುಗಳು (ಚೆನ್ನಕೇಶವ) ಮತ್ತು ರಂಗಪರಿಕರಗಳು. ಈ ನಾಟಕದಲ್ಲಿ ಬಳಸಿದ ರಂಗಪರಿಕರಗಳು ಅನೇಕ. ಸಂದರ್ಭಕ್ಕನುಗುಣ ರೂಪಿತ ವಿಶೇಷ ಪರಿಕರಗಳು ಅಪೂರ್ವ ಪರಿಸರ ನೇಯ್ದಿದ್ದವು. ರಂಗಸಜ್ಜಿಕೆಯೂ ಅರ್ಥವತ್ತಾಗಿತ್ತು. ಕಲಾವಿನ್ಯಾಸ (ವಿಶ್ವಾಸ್ ಕಶ್ಯಪ್) ಸುಂದರವಾಗಿತ್ತು. ಬೆಳಕು ಮತ್ತು ಸಂಗೀತ ಇಲ್ಲಿ ದಾಖಲಿಸಲೇಬೇಕಾದ ಮುಖ್ಯಾಂಶಗಳು. ಪಾತ್ರ-ಸನ್ನಿವೇಶಗಳ ಮೇಲೆ ನೋಡುಗರ ಗಮನ ಕೇಂದ್ರೀಕರಿಸುವಂತೆ ಅವರ ಅವಗಾಹನೆಗೆ ಎತ್ತಿಕೊಡುವ ನಿಖರತೆಯ ಕಾರ್ಯಕ್ಷಮತೆ ತೋರಿದ್ದು ಉತ್ತಮ ಬೆಳಕಿನ ವಿನ್ಯಾಸ ನಿರ್ವಹಿಸಿದ ಸುನೀಲ್ ಕುಮಾರ್ ಮತ್ತು ಪೃಥ್ವಿ ವೇಣುಗೋಪಾಲ್.

ರಂಗದ ಮುಂಭಾಗದಲ್ಲಿ ಕುಳಿತ ವಾದ್ಯಸಮೂಹ, ಮೇಳದ ಗುಂಪಿನ ಒಕ್ಕೊರಲಗಾನ ಗಾಢ ಪರಿಣಾಮ ಬೀರಿತ್ತು. ಸಂಗೀತ ಸಂಯೋಜನೆ: ಎಸ್.ಆರ್.ರಾಮಕೃಷ್ಣ ಮತ್ತು ಉತ್ಥಾನ ಭಾರೀಘಾಟ್. ನಾಟಕದಲ್ಲಿ ಪಂಜೆ ಮಂಗೇಶರಾವ್, ಕು.ರಾ.ಸೀ., ಪು.ತಿ.ನ. ಮುಂತಾದವರ ಗೀತೆಗಳನ್ನು ಬಳಸಿಕೊಂಡದ್ದು ವಿಶೇಷ. ನಾಟಕವನ್ನು ಉತ್ತಮವಾಗಿ, ಕಲಾತ್ಮಕವಾಗಿ ನಿರ್ದೇಶಿಸಿದ ಜೋಸೆಫ್‌ರ ಕಾರ್ಯಬದ್ಧತೆ ಸ್ತುತ್ಯರ್ಹ. ನಾಟಕ ಮುಗಿದ ನಂತರವೂ ನೋಡುಗರ ನೆನಪಿನಲ್ಲುಳಿಯುವುದು, ಕಣ್ಮನಸೂರೆಗೊಂಡ ನವಚೈತನ್ಯದ ಕಿನ್ನರರು ಸೃಷ್ಟಿಸಿದ ಆ ಮನಮೋಹಕ ಗಂಧರ್ವಲೋಕ.

Write A Comment