ಕರ್ನಾಟಕ

ಕಸ ಎತ್ತುವ ಕಷ್ಟ–ಸುಖ

Pinterest LinkedIn Tumblr

psmec29badukubani

-ಯೋಗಿತಾ ಬಿ.ಆರ್.
‘ನಾಗರಾಜು ಅಂತ ನನ್ನ ಹೆಸರು… ಸುಮಾರು ಒಂಬತ್ತು ವರ್ಷದಿಂದ ಕಸ ಎತ್ತೋ ಕೆಲಸ ಮಾಡ್ತೀದ್ದೀನಿ. ನಮಗೆ ಅಂತ ಒಂದು ಗಾಡಿ ಕೊಟ್ಟವ್ರೆ. ಅದಕ್ಕೆ ಡೀಸೆಲ್‌ ಹಾಕಿಸ್ತಾರೆ… ಫುಲ್‌ ಶ್ರೀನಿಧಿ ಲೇಔಟ್‌ ನಾನೇ ನೋಡ್ಕೊಳೋದು. ಒಂದು ದಿನ ಅರ್ಧ ಏರಿಯಾಗೆ ಹೋದ್ರೆ ಮಾರನೇ ದಿನ ಇನ್ನರ್ಧ ಏರಿಯಾಗೆ ಹೋಗ್ತೀನಿ. ಹಿಂಗೆ ಜೀವನ ನಡೀತಯ್ತೆ ಮೇಡಂ.

ನನ್ನೂರು ಆಂಧ್ರಪ್ರದೇಶ. ಬೆಂಗಳೂರಿಗೆ ಬಂದು ಹತ್ತು ವರ್ಷ ಆಯ್ತು. ಹೊಟ್ಟೆ ಪಾಡಿಗೆ ಅಂತ ಊರು ಬಿಟ್ಟು ಇಲ್ಲಿಗೆ ಬಂದೆ. ಬಿಬಿಎಂಪಿಲಿ ಹೆಂಗೋ ಕೆಲಸ ಸಿಕ್ತು. ಅಪ್ಪ–ಅಮ್ಮ ಎಲ್ಲಾ ಊರಲ್ಲೇ ಅವ್ರೆ. ನಾನು, ನನ್ನ ಹೆಂಡತಿ ಇಬ್ರು ಗಂಡು ಮಕ್ಕಳು ಕೊತ್ತನೂರು ದಿಣ್ಣೆಯಲಿ ಬಾಡಿಗೆ ಮನೆ ಮಾಡ್ಕೊಂಡಿದೀವಿ. ನನ್ನ ಮಕ್ಕಳು ಇಲ್ಲೇ ಪುಟ್ಟೇನಹಳ್ಳಿ ಗೌರ್ಮೆಂಟ್‌ ಸ್ಕೂಲಲ್ಲಿ ಓದ್ತಾವ್ರೆ. ಒಬ್ಬ ಮೂರನೇ ಕ್ಲಾಸು, ಇನ್ನೊಬ್ಬ ಐದನೇ ಕ್ಲಾಸು.

ನನಗೆ ಬರೋ ಸಂಬಳ ಆರು ಸಾವಿರ. ಮನೆ ಬಾಡಿಗೆಗೆ ಎರಡೂವರೆ ಸಾವಿರ ಕೊಡ್ಬೇಕು. ಬೆಳೆಯೋ ಮಕ್ಕಳು, ಖರ್ಚು ಜಾಸ್ತಿ.  ಸಂಬಳ ಬಿಟ್ರೆ ಕಸ ಹಾಕೋವ್ರು ಸ್ವಲ್ಪ ದುಡ್ಡು ಕೊಡ್ತಾರೆ. ಅದೂ ನಮ್ಮ ಜೀವನಕ್ಕೆ ಸಹಾಯ ಆಗುತ್ತೆ. ಸಂಬಳ ಬಂದ್ರೆ ತಿಂಗಳ ಜೀವನ ಹೆಂಗೋ ನಡೆಯುತ್ತೆ. ಆದ್ರೆ ಏನು ಉಳ್ಸಕ್ಕಾಗಲ್ಲ. ಬೆಂಗ್ಳೂರಲ್ಲಿ ಜೀವನ ಮಾಡೋದು ತುಂಬಾ ಕಷ್ಟ.  ಇದ್ರಲ್ಲಿ ನಂಗೆ ಸಿಗರೇಟ್‌ ಸೇದೋ ಕೆಟ್ಟ ಅಭ್ಯಾಸ ಬೇರೆ. ಎಷ್ಟು ಅನ್ಕೊಂಡ್ರೂ ನಿಲ್ಸಕ್ಕೆ ಆಗಲ್ಲ. ಈ ಸಿಗರೇಟ್‌ ಫ್ಯಾಕ್ಟರಿ ಎಲ್ಲಾ ಮುಚ್ಬಿಡ್ಬೇಕು, ಆಗ ಚೆನ್ನಾಗಿರುತ್ತೆ. ನಂಗೆ ಸ್ವಲ್ಪ ದುಡ್ಡು ಉಳಿಯುತ್ತೆ.

ನಮಗೆಲ್ಲಾ ಒಂದು ದಿನಾನೂ ರಜೆ ಇರಲ್ಲ. ನಾವು ಹುಷಾರು ತಪ್ಪಿ ಮಲ್ಕೊಂಡ್ರೂ ಕೆಲಸ ಮಾಡ್ಬೇಕು. ಇಲ್ಲಾ ಅಂದ್ರೆ ಬೇರೆ ಯಾರನ್ನಾದ್ರೂ ಕೆಲಸಕ್ಕೆ ಕಳುಹಿಸಬೇಕು. ನನಗೆ ಸಹಾಯ ಆಗ್ಲಿ ಅಂತ ಒಮ್ಮೊಮ್ಮೆ ನನ್ನ ಹೆಂಡತಿ ಕೂಡ ನನ್ನ ಜತೆ ಬರ್ತಾಳೆ. ಅದ್ರಲ್ಲಿ ಒಣ ಕಸ, ಹಸಿ ಕಸ ಅಂತ ಬೇರೆ ಬೇರೆ ಮಾಡಿ ಹಾಕುಸ್ಕೋಬೇಕು. ಅದಕ್ಕೆಲ್ಲಾ ಒಬ್ಬನೆ ಬಂದ್ರೆ ಆಗಲ್ಲ. ಯಾರಾದ್ರೂ ಸಹಾಯಕ್ಕೆ ಬೇಕೇಬೇಕು. ಕೆಲವರಂತೂ ಕಸ ಬೇರೆ ಬೇರೆ ಮಾಡೋದೇ ಇಲ್ಲ. ಅದನ್ನ ಹಾಕೊಸ್ಕೊಂಡಿಲ್ಲ ಅಂದ್ರೆ ಖಾಲಿ ಸೈಟಲ್ಲೋ, ಯಾವ್ದಾದ್ರೂ ಖಾಲಿ ಜಾಗದಲ್ಲೋ ಎಸೆದು ಹೋಗ್ಬಿಡ್ತಾರೆ. ಆ ಕಸನೂ ನಾವೇ ಕ್ಲೀನ್‌ ಮಾಡ್ಬೇಕು.

ಕಸ ಡಂಪಿಂಗ್‌ ಆಗಿಲ್ಲ ಅಂದ್ರೆ ಇನ್ನೊಂದ್‌ ಥರಾ ಸಮಸ್ಯೆ. ಗಾಡಿ ಎಲ್ಲಿ ತೊಗೊಂಡೋಗಿ ನಿಲ್ಲಿಸಿದ್ರೂ ಜನ ನಮ್ಗೆ ಬಾಯಿಗೆ ಬಂದಂಗೆ ಉಗಿತಾರೆ. ಎಲ್ಲಾದಕ್ಕೂ ನಾವೇ ಹೊಣೆ ಅನ್ನೋ ಥರ ಮಾತಾಡ್ತಾರೆ. ಈ ಜನ ಸರಿಯಾಗಿ ಕಸ ಸಪರೇಟ್‌ ಮಾಡಿದ್ರೆ ಮತ್ತೆ ದಿನಾ ಡಂಪಿಂಗ್‌ ಆದ್ರೆ ನಮ್ಮ ಅರ್ಧ ಕೆಲಸ ಆಗೋಗುತ್ತೆ.

ಕಸದ ವಾಸನೆಗೆ ಎಷ್ಟೋ ಸಲ ಏನೇನೋ ಜ್ವರ ಎಲ್ಲಾ ಬರುತ್ತೆ. ನಾವೇನಾರ ಆಗಿ ಮಲ್ಕೊಂಡ್ರೂ ಯಾರೂ ಬಂದು ನೋಡಲ್ಲ. ಆದ್ರೆ ಕೆಲಸ ಮಾತ್ರ ಎತ್ಲೇಬೇಕು. ನಾವು ಒಂದು ದಿನ ಬಂದಿಲ್ಲ ಅಂದ್ರೆ ಇಲ್ಲಿ ಜನ ಬೈತಾರೆ, ಯಾಕಪ್ಪ ಬಂದಿಲ್ಲ ಅಂತ. ಸರ್ಕಾರ ನಮ್ಗೆ ಟೈಂ ಟೈಂಗೆ ಪೇಮೆಂಟ್‌ ಮಾಡ್ಬಿಟ್ರೆ ಸಾಕು. ಅದೇನ್‌ ರಾಜಕೀಯ ಮಾಡ್ತಾರೋ. ಎಲೆಕ್ಷನ್‌ ಬಂದ್ರೆ ಮಾತ್ರ ಬಂದ್ಬಿಡ್ತಾರೆ ಎಲ್ರೂ. ಆಮೇಲೆ ತಿರ್ಗೂ ನೋಡಲ್ಲ. ನಮಗೆಲ್ಲಾ ಮೂರು ತಿಂಗಳಿಂದ ಪೇಮೆಂಟ್‌ ಬಂದಿಲ್ಲ… ಇದ್ರು ಬಗ್ಗೆ ಏನಾದ್ರೂ ಬರೀರಿ. ನಮಗೆಲ್ಲ ಉಪಕಾರ ಆಗುತ್ತೆ’

Write A Comment