ಕಳೆದ ವರ್ಷ ತುಪ್ಪದ ಬೆಡಗಿ ರಾಗಿಣಿ ಹುಟ್ಟುಹಬ್ಬದಂದು ‘ಅಮ್ಮ’ ಚಿತ್ರ ಸೆಟ್ಟೇರಿತ್ತು. ಇದೀಗ ‘ಅಮ್ಮ’ನ ಫಸ್ಟ್ ಲುಕ್ ಟ್ರೇಲರ್ ನೋಡುವ ಚಾನ್ಸ್ ಸಿನಿ ಪ್ರಿಯರಿಗೆ ಸಿಕ್ಕಿದೆ.
‘ಅಮ್ಮ’….ಟೈಟಲ್ ಕೇಳಿದ ತಕ್ಷಣ ದಕ್ಷಿಣ ಭಾರತದ ಜನರಿಗೆ ಥಟ್ ಅಂತ ನೆನಪಾಗುವುದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ. ಮೊದಲು ಸಿನಿ ತಾರೆಯಾಗಿ ನಂತರ ರಾಜಕೀಯಕ್ಕೆ ಧುಮುಕಿದ ಜಯಲಲಿತಾ, ಸೆರೆವಾಸ ಕೂಡ ಅನುಭವಿಸಿದ್ದಾರೆ.
‘ಅಮ್ಮ’ ಚಿತ್ರ ಸೆಟ್ಟೇರಿದಾಗಿನಿಂದಲೂ ಇದು ತಮಿಳು ಮಾಜಿ ಸಿ.ಎಂ ಜಯಲಲಿತಾ ಅವರ ಜೀವನಗಾಥೆ ಅಂತಲೇ ಭಾವಿಸಲಾಗಿತ್ತು. ಇದೀಗ ರಿಲೀಸ್ ಆಗಿರುವ ಟ್ರೇಲರ್ ನಲ್ಲಿ ರಾಗಿಣಿ ಪಾತ್ರಕ್ಕೂ, ಜಯಲಲಿತಾ ನಿಜಕಥೆಗೂ ಹೆಚ್ಚು ವ್ಯತ್ಯಾಸ ಇಲ್ಲ ಅಂತ ತಳ್ಳಿ ಹಾಕುವಂತಿಲ್ಲ. ಬೇಕಾದ್ರೆ, ಟ್ರೇಲರ್ ನ ನೀವೇ ನೋಡಿ….
ಮಾರ್ಡನ್ ಲುಕ್ ನಲ್ಲಿ ಸಿನಿಮಾ ಹೀರೋಯಿನ್ ಆಗಿ ಮೊದ ಮೊದಲು ಕಾಣುವ ರಾಗಿಣಿ, ನಂತರ ಬಂಡಾಯಗಾರ್ತಿಯಾಗಿ, ರಾಜಕಾರಣಿಯಾಗಿ ಜೈಲು ಪಾಲಾಗುತ್ತಾರೆ.
ರಾಗಿಣಿ ಪಾತ್ರದ ಮೂರು ಶೇಡ್ ಗಳು ಕರ್ಟನ್ ರೇಸರ್ ಟ್ರೇಲರ್ ನಲ್ಲಿ ಬಹಿರಂಗವಾಗಿದೆ. ಆದ್ರೆ, ಪಾತ್ರ ನಿಜಕ್ಕೂ ಜಯಲಲಿತಾ ಜೀವನವನ್ನ ಆಧರಿಸಿದೆಯಾ ಅನ್ನೋದು ಸ್ಪಷ್ಟವಾಗಿಲ್ಲ. ಈ ಬಗ್ಗೆ ರಾಗಿಣಿ ಮತ್ತು ನಿರ್ದೇಶಕ ಫೈಸಲ್ ಎಲ್ಲೂ ತುಟಿ ಬಿಚ್ಚಿಲ್ಲ.
ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಚಿತ್ರದಲ್ಲಿ ರಾಗಿಣಿ ಹೆಸರು ‘ಜಯಮಾಲಿನಿ’. ಜಯಲಲಿತಾ ಹಾಗು ಜಯಮಾಲಿನಿ ಒಂದ್ಕಾಲದ ಜನಪ್ರಿಯ ನಟಿಯರು. ಹೀಗಾಗಿ ಟ್ರೇಲರ್ ನೋಡಿ ‘ಅಮ್ಮ’ ಯಾರ ಕಥೆ ಅಂತ ಕನ್ನಡ ಸಿನಿ ಪ್ರಿಯರು ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ಮಂಗಳಮುಖಿ ಪಾತ್ರದಲ್ಲಿ ಬಾಲಿವುಡ್ ನ ಖ್ಯಾತ ಹಾಸ್ಯ ನಟ ರಾಜ್ ಪಾಲ್ ಯಾದವ್ ಮಿಂಚಿರುವುದು ಟ್ರೇಲರ್ ನ ಹೈಲೈಟ್. ಹಿಂದಿ, ಕನ್ನಡ, ತೆಲುಗು, ತಮಿಳು ಮತ್ತು ಮಲೆಯಾಳಂನಲ್ಲಿ ‘ಅಮ್ಮ’ ರೆಡಿಯಾಗುತ್ತಿರುವುದರಿಂದ ಪಂಚಭಾಷೆಯ ಖ್ಯಾತ ಕಲಾವಿದರಾದ ಕವಿತಾ ರಾಧೇಶ್ಯಾಮ್, ಪ್ರಶಾಂತ್ ನಾರಾಯಣನ್, ಪೂಜಾ ಮಿಶ್ರಾ ಪ್ರಮುಖ ರೋಲ್ ನಲ್ಲಿ ಮಿಂಚಿದ್ದಾರೆ.
‘ಅಮ್ಮ’ ಚಿತ್ರಕ್ಕೆ ಬಾಲಿವುಡ್ ನಿರ್ದೇಶಕ ಫೈಸಲ್ ಸೈಫ್ ಆಕ್ಷನ್ ಕಟ್ ಹೇಳಿದ್ದಾರೆ. ಟ್ರೇಲರ್ ಮತ್ತು ಟೈಟಲ್ ಮಾತ್ರದಿಂದಲೇ ಸುದ್ದಿಯಾಗುತ್ತಿರುವ ‘ಅಮ್ಮ’ ವಿವಾದಗಳನ್ನ ಮೈಮೇಲೆ ಎಳೆದುಕೊಳ್ಳದಿದ್ದರೆ ರಾಗಿಣಿ ಆರಾಮ್ ಆಗಿರುವುದು ಗ್ಯಾರೆಂಟಿ.