ಕರ್ನಾಟಕ

ರಾಜ್ಯಕ್ಕೆ ಕೇಂದ್ರದ ಅನುದಾನ; ಮೋದಿ ತಪ್ಪು ಮಾಹಿತಿ: ದಿನೇಶ್ ಗುಂಡೂರಾವ್

Pinterest LinkedIn Tumblr

dinesh_gundu_roa

ಬೆಂಗಳೂರು,ಏ.6- ರಾಜ್ಯಕ್ಕೆ ಕೇಂದ್ರದಿಂದ ನೀಡಲಾಗುವ ಅನುದಾನದ  ವಿವರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಪ್ಪು ಮಾಹಿತಿ ನೀಡಿದ್ದಾರೆ. ಆ ಮೂಲಕ ಜನರನ್ನು ತಪ್ಪು ದಾರಿಗೆಳೆದಿದ್ದಾರೆ. ಈ ಬಗ್ಗೆ ಅಂಕಿಅಂಶಗಳ ಸಹಿತ ಚರ್ಚೆ ಮಾಡಲು ಸಿದ್ಧ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸವಾಲು ಹಾಕಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದಾಗ ರಾಜ್ಯಕ್ಕೆ ಒದಗಿಸುವ ಅನುದಾನ ಕುರಿತಂತೆ ನೀಡಿದ ಮಾಹಿತಿ ಸತ್ಯಕ್ಕೆ ದೂರವಾಗಿದೆ.

ಬಡ ಮತ್ತು ರೈತರ ಬಗ್ಗೆ ಕಾಳಜಿ ಇಲ್ಲದೆ ಈ ಮೊದಲು ನೀಡುತ್ತಿದ್ದ ಅನುದಾನದಲ್ಲಿ ಸಾಕಷ್ಟು ಕಡಿತ ಮಾಡಲಾಗಿದೆ ಎಂದು ಆರೋಪಿಸಿದರು.

ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿಲ್ಲ. ಶಿಕ್ಷಣ ಅಭಿಯಾನ, ಮಧ್ಯಾಹ್ನದ ಬಿಸಿಯೂಟ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ತ್ವರಿತ ನೀರಾವರಿ ಸೇರಿದಂತೆ ಇನ್ನಿತರ ಅತ್ಯಗತ್ಯ ಯೋಜನೆಗಳ ಅನುದಾನ ಕಡಿತಗೊಳಿಸಲಾಗಿದೆ ಎಂದರು.  ಮುಖ್ಯಮಂತ್ರಿ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕೆಂದು ಸಿ.ಟಿ.ರವಿ ಹೇಳಿದ್ದರು. ಹಾಗೆ ನೋಡಿದರೆ ಪ್ರಧಾನಿ ವಿರುದ್ಧವೂ ಹಕ್ಕುಚ್ಯುತಿ ಮಂಡಿಸಬೇಕಾಗುತ್ತದೆ ಎಂದ ಅವರು, ಈ ಬಗ್ಗೆ ಸಂಸತ್ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆ ಮತ್ತಿತರರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.  ಕುಡಿಯುವ ನೀರು, ಸರ್ವಶಿಕ್ಷಣ ಅಭಿಯಾನ, ಸ್ವಚ್ಚ ಭಾರತ ಸೇರಿದಂತೆ ಇನ್ನಿತರ ಯೋಜನೆಗಳಿಗೆ ಕಳೆದ ವರ್ಷಕ್ಕಿಂತ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕಡಿಮೆ ಹಣ ನೀಡಲಾಗಿದೆ. ಆದರೆ ಇಂತಹ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. 13ನೇ ಹಣಕಾಸು ಯೋಜನೆಯಿಂದ 7,90,912 ಕೋಟಿ ರೂ. ಇದ್ದ ಕಡೆ 14ನೇ ಹಣಕಾಸು ಯೋಜನೆಯಡಿ 7,36,237 ಕೋಟಿ ರೂ. ಮಾತ್ರ ಒದಗಿಸಲಾಗಿದೆ. 1,504 ಕೋಟಿ ರೂ. ಸಾಲ ಕಡಿಮೆಯಾಗಿದೆ ಎಂದು ವಿವರಿಸಿದರು.

ಮುಂದಿನ 2019-20ರ ವೇಳೆಗೆ 1.86 ಲಕ್ಷ ಕೋಟಿ ಕೇಂದ್ರದ ಪಾಲು ಬರುತ್ತದೆ ಎಂದು ಮೋದಿಯವರು ಭಾಷಣದ ವೇಳೆ ತಿಳಿಸಿದ್ದಾರೆ. ಆದರೆ ಈ ವರ್ಷವೇ ಬರಬೇಕಿದ್ದ 27,302 ಕೋಟಿ ರೂ.ಗಳಲ್ಲಿ 24,790 ಕೋಟಿ ಮಾತ್ರ ಬಂದಿದೆ. ಒಟ್ಟಾರೆ ರಾಜ್ಯಕ್ಕೆ ನೀಡಿರುವ ಯೋಜನೆಗಳ ಅನುದಾನದಲ್ಲಿ ಕಡಿತವಾಗಿದ್ದು ಈ ಬಗ್ಗೆ ಅಂಕಿಅಂಶಗಳ ಸಮೇತ ಚರ್ಚೆಗೆ ನಾವು ಸಿದ್ಧವಾಗಿದ್ದೇವೆ  ಎಂದರು.

Write A Comment