ಮನೋರಂಜನೆ

ನಾಗಶರ್ಮರ ‘ಯವನ ಯಾಮಿನೀ ವಿನೋದ ಎಂಬ ಅರೇಬಿಯನ್ ನೈಟ್ಸು ಕಥೆಗಳು’

Pinterest LinkedIn Tumblr

sv15arabian-nights

– ಕೆ.ಎಸ್. ಮಧುಸೂದನ
‘ಯವನ ಯಾಮಿನೀ ವಿನೋದ ಎಂಬ ಅರೇಬಿಯನ್ ನೈಟ್ಸು ಕಥೆಗಳು’ ಎನ್ನುವ ಈ ಪುಸ್ತಕದ ಮೇಲೆ, ‘ಬೆಂಗಳೂರಲ್ಲಿರುವ ಕವಿ ನಾಗಶರ್ಮರಿಂದ ಭಾಷಾಂತರಿಸಲ್ಪಟ್ಟು ಇದರ ಸರ್ವ ಸ್ವಾತಂತ್ರ್ಯವನ್ನೂ ಪಡೆದಿರುವ ಬೆಂಗಳೂರು ಸಿಟಿ ಕಳಾನಿಧಿ ಬುಕ್ ಡಿಪೊ ಪ್ರೊಪ್ರೈಟರ್ ಟಿ.ಕೆ. ಕೃಷ್ಣಸ್ವಾಮಿ ಸೆಟ್ಟರವರ ಸ್ವಕೀಯ ಕಳಾನಿಧಿ ಮುದ್ರಾಲಯದಲ್ಲಿ ಮುದ್ರಿಸಲ್ಪಟ್ಟಿತು’ ಎನ್ನುವ ಒಕ್ಕಣೆಯಿದೆ.

ಕೃತಿಯ ಕೊನೆಯಲ್ಲಿ ‘ಸುದತೀ ಶತಕ ಗ್ರಂಥಕರ್ತನಾದ ಕಲ್ಯಾಣಪುರೀ ನಿಲಯ ಕವಿ ನಾಗಶರ್ಮನಿಂದ ತಿಳಿಗನ್ನಡದ ಸರಳ ಪದಗಳಿಂದ ರಚಿತವಾದ ಯವನ ಯಾಮಿನೀ ವಿಚಿತ್ರ ವಿನೋದಗಳೆಂಬ ಅರೇಬಿಯನ್ ನೈಟ್ಸಿನ ಕಥೆಗಳಲ್ಲಿ ಶ್ರೀ ಶಂಕರಪ್ರಸಾದ ಪುರಸ್ಸರಮಾಗಿ 234 ಕಥೆಗಳಿಂದ ಮೊದಲನೆಯ ಭಾಗವು ಮುಗಿದುದು’ ಎನ್ನುವ ಒಕ್ಕಣೆ ಇದೆ. ಅಷ್ಟಮ ಡೆಮಿ ಆಕಾರದ 750 ಪುಟಗಳ ಈ ಕೃತಿಯ ಅಂದಿನ ಬೆಲೆ ಎರಡು ರುಪಾಯಿ ನಾಲ್ಕು ಆಣೆಗಳು.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ  ಕಥೆಗಳಿಗೆ ಕೊರತೆಯಿಲ್ಲ. ‘ಬೃಹತ್ಕಥೆ’, ‘ಕಥಾಸರಿತ್ಸಾಗರ’, ‘ಪಂಚತಂತ್ರ’, ‘ವಡ್ಡಾರಾಧನೆ’ ಹಾಗೂ ಹಲವಾರು ಪುರಾಣ ಕಥೆಗಳನ್ನು ಹಳಗನ್ನಡ–ನಡುಗನ್ನಡ ಸಾಹಿತ್ಯದಲ್ಲಿ ಗಮನಿಸಬಹುದು. ಹತ್ತೊಂಬತ್ತನೆಯ ಶತಮಾನದೊಳಗೆ ವಿದೇಶೀಯ  ಕಥೆಗಳ ಭಾಷಾಂತರಗಳು ಕಾಣಿಸಿಕೊಂಡವು. ಅಂತಹವುಗಳಲ್ಲಿ ‘ರಾಬಿನ್‌ಸನ್ ಕ್ರೂಸೋ’, ‘ಈಸೋಪನ ನೀತಿಕಥೆಗಳು’, ‘ಗಲಿವರನ ಯಾತ್ರೆ’, ‘ಅರೇಬಿಯನ್ ನೈಟ್ಸ್’, ‘ಅಲಾವುದ್ದೀನ್ ಅದ್ಭುತ ದೀಪ’, ‘ಪಾರಶಿಯ ಹಗಲಿನ ವಿನೋದ ಕಥೆಗಳು’, ‘ಮಿಸ್ ಷೆರ್ವೂಡ್’ ಕಥೆಗಳು ಪ್ರಮುಖವಾದವು.

ಅದಲ್ಲದೆ ‘ರಾಜಾಮಾರ್ತಾಂಡ’, ‘ವಸಂತ ಕೋಕಿಲೆ’, ‘ಅಂತಃಪುರ ಸುಂದರೀಮಣಿ’, ‘ಶುಕ ಸಪ್ತತಿ’, ‘ಹಾಸ್ಯಸುಂದರಿ ಶುಕವಾಣಿ’, ‘ಶೃಂಗಾರಶುಕಸಪ್ತತಿ’, ‘ಬತ್ತೀಸಪುತ್ಲಿ’, ‘ಹಂಸವಿಂಶತಿ’, ‘ನಗದವರನ್ನು ನಗಿಸುವ ಕಥೆ’, ‘ಹುಚ್ಚುಮುಂಡೆಯರ ಕಥೆ’, ‘ಚಂಚಲಕುಮಾರಿ’, ‘ವಿನೋದ ರಸಮಂಜರಿ ಕಥೆ’– ಮುಂತಾದ ದೇಸೀ ಮೂಲದ ನವರಸ ಒಳಗೊಂಡಿರುವ ಅದ್ಭುತ ರಮ್ಯ ಕಥೆಗಳೂ ಕೂಡ ೧೯ನೇ ಶತಮಾನದಲ್ಲಿ ಕಾಣಿಸಿಕೊಂಡಿವೆ.  ಇಂಥ ಮಾಲಿಕೆಗಳಲ್ಲಿ ‘ಅರೇಬಿಯನ್ ನೈಟ್ಸ್’ ಕಥಾಸರಪಣಿಯು ಒಂದು ಕೊಂಡಿ.  ‘ಪ್ರಜಾವಾಣಿ’ ದೀಪಾವಳಿ ಸಂಚಿಕೆ–2014ರಲ್ಲಿ ‘ಅರೇಬಿಯನ್ ನೈಟ್ಸ್ ಎಂಬ ಅದ್ಭುತ ಕಥಾಲೋಕ’ ಎನ್ನುವ ತಮ್ಮ ಲೇಖನದಲ್ಲಿ ಎಸ್. ದಿವಾಕರ್‌ 1931ರಲ್ಲಿ ಪ್ರಕಟವಾಗಿರುವ ಎ. ಕೇಶವಯ್ಯ ಅವರ ಅರೇಬಿಯನ್ ನೈಟ್ಸ್ ಕಥೆಗಳ ಕಡೆ ವಾಚಕರ ಗಮನ ಸೆಳೆದಿದ್ದಾರೆ.

ಆದರೆ ಅದಕ್ಕೂ ಸಾಕಷ್ಟು ಹಿಂದೆಯೇ ವೆಂಕಟ ರಂಗೋ ಕಟ್ಟಿಯವರು ಅರೇಬಿಯನ್ ನೈಟ್ಸ್ ಕಥೆಯನ್ನು ‘ಅರಬ ಭಾಷೆಯಲ್ಲಿದ್ದ ಸುರಸ ಕಥೆಗಳ ಸಂಗ್ರಹವು’ ಹೆಸರಿನಲ್ಲಿ ಎರಡು ಭಾಗಗಳಲ್ಲಿ 1863ರಷ್ಟರ ಹೊತ್ತಿಗೇನೇ ಅನುವಾದಿಸಿದ್ದರು. 1901ರಲ್ಲಿ ಬಾಪು ಸುಬ್ಬರಾಯ ಎನ್ನುವವರು ಅರೇಬಿಯನ್ ನೈಟ್ಸ್ ಅಥವಾ ಯವನ ಯಾಮಿನೀ ವಿನೋದಗಳಲ್ಲಿ ಒಂದಾದ ‘ಸಿಂದಾಬಾದ ನಾವಿಕ’ ಎನ್ನುವ ಕೃತಿಯನ್ನು ಪ್ರಕಟಿಸಿದ್ದಾರೆ. ಹೀಗಾಗಿ ಕನ್ನಡದಲ್ಲಿ ಅರೇಬಿಯನ್ ನೈಟ್ಸ್ ಕಥೆಗಳ ಪ್ರಕಟಣೆಗೆ ಒಂದು ಇತಿಹಾಸವಿದೆ. ಆ ಪರಂಪರೆಯಲ್ಲಿ ನಾಗಶರ್ಮರ ಕೃತಿ ಮಹತ್ವದ ಒಂದು ಕೊಂಡಿ.

ಪ್ರಸಕ್ತ ‘ಯವನ ಯಾಮಿನೀ ವಿನೋದ’ ಕೃತಿ (ಉಸ್ಮಾನಿಯಾ ವಿಶ್ವವಿದ್ಯಾಲಯದವರು ಮಾಡಿರುವ ಡಿಜಿಟಲೈಸ್ಡ್ ಕೃತಿ) ನನಗೆ ದೊರೆತದ್ದು ಓ.ಎಲ್. ನಾಗಭೂಷಣ ಸ್ವಾಮಿ ಅವರ ಮೂಲಕ. ಅಪರೂಪದ ಈ ಕೃತಿಯನ್ನು ರಚಿಸಿರುವ ಬೆಂಗಳೂರಿನ ಕವಿ ನಾಗಶರ್ಮರೇ ಹೆಡ್‌ಮಾಸ್ಟರ ಹೆಚ್. ನಾಗಪ್ಪನವರು. ಇವರು 1932ರಲ್ಲಿ ಬೆಂಗಳೂರು ಸಿಟಿ ವಿಶ್ವೇಶ್ವರಪುರದ ಪ್ರೈಮರಿ ಬಾಯ್ಸ್ ಸ್ಕೂಲ್‌ನ ಹೆಡ್ಮಾಸ್ಟರ್ ಆಗಿದ್ದರು. ಇದನ್ನೂ ಒಳಗೊಂಡಂತೆ ನಾಗಶರ್ಮರು 17 ಕೃತಿಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ‘ಟೀಕಾ ತಾತ್ಪರ್ಯಸಹಿತ ಜೈಮಿನಿ ಭಾರತವು’ ಕೃತಿಯನ್ನು ಕಡಬದ ನಂಜುಂಡ ಶಾಸ್ತ್ರಿಗಳೊಂದಿಗೆ ರಚಿಸಿರುತ್ತಾರೆ.

ಉಳಿದ ‘ಸುದತೀ ಶತಕಂ’, ‘ಸಚಿತ್ರ ವಚನ ಭಾರತ’, ‘ಸಚಿತ್ರ ವಚನ ರಾಮಾಯಣ ಸಂಗ್ರಹ’, ‘ಧರ್ಮಾಶ್ವಮೇಧದ ಕಥೆಯು’, ‘ಕರ್ನಾಟಕ ಭಾಸ್ಕರ ಶತಕಂ’ , ‘ಶ್ರೀಕೃಷ್ಣಸಾರಬೋಧಾಮೃತವೆಂಬ ಹನ್ನೆರಡು ರಾಜಪುತ್ರರ ಕಥೆಗಳು’, ‘ಪತಿಭಕ್ತಿವಿಜಯ’, ‘ಶ್ರೀಲಲಿತಾಸಹಸ್ರನಾಮ’, ‘ನಳದಮಯಂತಿ ಪುಣ್ಯ ಚರಿತ್ರೆ’, ‘ಸಟೀಕಾ ಅಮರಕೋಶ’, ‘ಪರಾವರ್ತನ ಆನಂದವನ’ , ‘ಸುಭಾಷಿತವೆಂಬ ನೀತಿಶಾಸ್ತ್ರವು’, ‘ಭಯಂಕರ ಸೇಡು’, ‘ಶ್ರೀ ಸರ್ವಜ್ಞ ಸಂವಾದ ಪದ್ಧತಿ ಎಂಬ ಸರ್ವಜ್ಞ ಪದ್ಯಗಳು’  ಹಾಗೂ ‘ಕೀರ್ತನೆ ಮತ್ತು ತತ್ವಗಳು’ ಅವರ ಉಳಿದ ಕೃತಿಗಳು.

750 ಪುಟಗಳ 234 ಕಥೆಗಳನ್ನು ಒಳಗೊಂಡಿರುವ ನಾಗಶರ್ಮರ ಈ ಕೃತಿಯ ಆರಂಭದಲ್ಲಿ ಕಂದಪದ್ಯದೊಳಗೆ ಈಶ್ವರನ ಸ್ತುತಿ ಇದೆ. ನಂತರದ ಕಂದಪದ್ಯ ಕುತೂಹಲಕಾರಿ ಆಗಿದೆ: ‘‘ಹಬ್ಬಿದ ದುಃಖಸಮುದ್ರದೊ | ಳುಬ್ಬೆಗದಿಂ ಮುಳುಗಿಪೋದ ಮನುಜರ ಮನವ || ನ್ನುಬ್ಬಿಸುತಾಹ್ಲಾದಗೊಳಿಪ | ರಬ್ಬಿಯನೈಟ್ಸಿನ ವಿನೋದಕಥೆಗಳನೊರೆವೆಂ ||’’. ಅರೇಬಿಯನ್ ನೈಟ್ಸ್ ಕಥೆಗಳನ್ನೋದಿದರೆ ದುಃಖ ಹಾಗೂ ಉದ್ವೇಗಗಳಲ್ಲಿರುವ ಮನುಷ್ಯರ ಮನಸ್ಸನ್ನು ಉತ್ಸಾಹಿಸಿ ಆಹ್ಲಾದಗೊಳಿಸುತ್ತದೆ ಎನ್ನುವ ಮಾತು ನೈಟ್ಸ್ ಕಥೆಗಳನ್ನು ಕುರಿತ ವಿಮರ್ಶೆಯೇ ಆಗಿದೆ. ಕೃತಿಯ ಅಂತ್ಯದಲ್ಲಿ ಮೂರು ಕಂದ ಪದ್ಯಗಳಿದ್ದು ಅದರಲ್ಲಿ ಕವಿ ನಾಗಂ ಸಕಲರಿಗೂ ಸನ್ಮಂಗಳವನ್ನು ಕೋರಿರುತ್ತಾನೆ. ಅದಕ್ಕೆ ಮೊದಲಿನ ಕೊನೆಯ ಒಕ್ಕಣೆ ಇಂತಿದೆ: ‘‘ಸುದತೀಶತಕ ಗ್ರಂಥಕರ್ತನಾದ ಕಲ್ಯಾಣಪುರೀ (=ಬೆಂಗಳೂರು) ನಿಲಯ ಕವಿ ನಾಗಶರ್ಮನಿಂದ ತಿಳಿಗನ್ನಡದ ಸರಳಪದಗಳಿಂದ ರಚಿತವಾದ ಯವನ ಯಾಮಿನೀ ವಿಚಿತ್ರ ವಿನೋದಗಳೆಂಬ ಅರೇಬಿಯನ್ ನೈಟ್ಸಿನ ಕಥೆಗಳಲ್ಲಿ ಶ್ರೀ ಶಂಕರ ಪ್ರಸಾದ ಪುರಸ್ಸರಮಾಗಿ 234 ಕಥೆಗಳಿಂದ ಮೊದಲನೆಯ ಭಾಗವು ಮುಗಿದುದು’’. ಅರಬ್ ದೇಶದ ರಾತ್ರಿಯ ಕಥೆಗಳ ರಚನೆಗೆ ಕೂಡ ಆ ಕಾಲಘಟ್ಟದಲ್ಲಿ ಶ್ರೀ ಶಂಕರ ಪ್ರಸಾದದ ಸ್ಪರ್ಶ ಬೇಕಿತ್ತೆಂಬುದು ಇಲ್ಲಿನ ವಿಶೇಷ. ಈ ಐದು ಕಂದಪದ್ಯಗಳನ್ನು ಬಿಟ್ಟರೆ ಇಡೀ ಕೃತಿ ಗದ್ಯದಲ್ಲಿದೆ.

ಕೃತಿಯ ಕಥಾರಂಭದಲ್ಲಿ ಇಂಡಿಯಾದೇಶದ ಪ್ರಸ್ತಾಪ ಬಂದಿರುವುದು ಕುತೂಹಲಕಾರಿಯಾಗಿದೆ: ‘‘ಇಂಡಿಯಾ ದೇಶವೆಂದು ಕರೆಯಲ್ಪಡುವ ಈ ಭರತಖಂಡವನ್ನು, ಅದಕ್ಕೆ ಸೇರಿದ ಸಕಲದ್ವೀಪಗಳನ್ನೂ, ಗಂಗಾದಿ ಪುಣ್ಯನದಿಗಳನ್ನೂ, ಬಹುದೂರದವರೆಗೆ ಆವರಿಸಿಕೊಂಡಿರುವಂತೆ ಮಾಡಲ್ಪಟ್ಟ ಹೆಸರುಳ್ಳ ಯಾವ ದೇಶವುಂಟೋ! ಆ ದೇಶದ ಮನೆತನದವರಾದ ನಸ್ಸೇನಿಯನರೆಂಬ ಪೂರ್ವೀಕರಾಜರ ಚರಿತ್ರೆಯಿಂದ ತಿಳಿಯಬರುವುದೇನೆಂದರೆ, ಪೂರ್ವಕಾಲದಲ್ಲಿ ಅಸಸೇನಿಯನ್ ರಾಜವಂಶದಲ್ಲಿ ಬಹುಪ್ರಸಿದ್ಧನಾದ ಒಬ್ಬಾನೊಬ್ಬ ರಾಜನು ಆ ಕಾಲದ ರಾಜರುಗಳಲ್ಲೆಲ್ಲಾ ಬಹಳ ಹೆಸರುವಾಸಿಯನ್ನು ಪಡೆದಿದ್ದನು’’. ಅಂದಿನ ಕಾಲಾವಧಿಯ ಕನ್ನಡ ವಾಕ್ಯಗಳ ಕ್ರಮ ಹಾಗೂ ಗದ್ಯದ ಸ್ವರೂಪವು ಕೂಡ ಈ ಸಾಲಿನಿಂದ ತಿಳಿದುಬರುತ್ತದೆ.

ಪರ್ಷಿಯಾದ ದೊರೆ ಷಹರಿಯರನನ್ನು ಪರಿವರ್ತಿಸಲು ಅವನ ವಜೀರನ ಮಗಳು ಷಹರಜಾದಿಯು ಸಾವಿರ ದಿನಗಳ ರಾತ್ರಿ ಸಾವಿರ ಕಥೆಗಳನ್ನು ಹೇಳುತ್ತಾಳೆ. ಇದು ಅರೆಬಿಯನ್ ನೈಟ್ಸು ಕಥೆಯ ತಂತ್ರ ಈ ಕಥೆಗಳಲ್ಲೂ ಭಾರತೀಯ ಪರಂಪರೆಯ ವಡ್ಡಾರಾಧನೆ, ಪಂಚತಂತ್ರ ಕಥೆಗಳಲ್ಲಿನಂತೆ ಕಥೆಗಳೊಳಗೆ ಕಥೆಗಳ ಸರಣಿಯೇ ಬರುತ್ತವೆ.

ನಾಲ್ಕನೇ ರಾತ್ರಿಯ ಕಥೆಯ ಒಂದು ಭಾಗವನ್ನು ಮಾದರಿಗಾಗಿ ಗಮನಿಸಬಹುದು:  ‘‘ಎರಡನೇ ದಿನ ಕೆಂಬೆಳಗು ಪೂರ್ವದಿಕ್ಕಿನಲ್ಲಿ ತುಂಬುತ್ತಿರುವ ಸಮಯದಲ್ಲಿ, ದಿನರಜಾದಿ ನಿದ್ರೆಯಿಂದೆದ್ದು ಅಕ್ಕಾ! ನಿನಗೆ ನಿದ್ರೆ ತಿಳಿದಿದ್ದರೆ ನಿನ್ನೆ ಮುಗಿಸದೆ ಹಾಗೆಯೇ ಬಿಟ್ಟು ಹೋಗಿರುವ, ಕಥೆಯನ್ನು ಹೇಳು, ಎಂದು ಕೇಳಲು ಸುಲ್ತಾನನ ಅಪ್ಪಣೆಯನ್ನು ಹೊಂದಿ ಷಹರಜಾದಿಯು ಹೇಳತೊಡಗಿದಳು.

ಎಲೈ ರಾಜೇಂದ್ರನೇ! ಆ ಭೂತವು ವರ್ತಕನನ್ನು ಹಿಡಿದು ಕೊಲ್ಲುತ್ತಿರುವುದನ್ನು ನೋಡಿ ಜಿಂಕೆಯನ್ನು ತಂದ ಮುದುಕನು ಅದರ ಕಾಲಿನ ಮೇಲೆ ಬಿದ್ದು ಮುತ್ತು ಇಟ್ಟುಕೊಂಡು ಸ್ವಾಮಿ ಸ್ವಲ್ಪ ಹೊತ್ತು ನಿಮ್ಮ ಕೋಪವನ್ನಣಗಿಸಿ ನಾನು ಹೇಳುವ ಮಾತನ್ನು ಕೇಳುವುದಾದರೆ, ನನ್ನ ಮತ್ತು ಈ ಹೆಣ್ಣು ಜಿಂಕೆಯ ಕಥೆಯನ್ನು, ನಿಮಗೆ ವಿಸ್ತಾರವಾಗಿ ಹೇಳುವೆನೆಂದು ನುಡಿದನು. ಅದು ನೀವು ಕೊಲ್ಲ ಹೋಗುವ ವರ್ತಕನ ಕಥೆಗಿಂತಲೂ ಹೆಚ್ಚಾದ ಉತ್ಸಾಹವನ್ನು ಆಶ್ಚರ್ಯವನ್ನುವುಂಟು ಮಾಡುವುದಾಗಿದ್ದರೆ ಈ ನಿರ್ಭಾಗ್ಯನಾದ ವರ್ತಕನ ಮೇಲೆ ಹೊರಿಸಿರುವ ತಪ್ಪಿತದಲ್ಲಿ ಮೂರರಲ್ಲೊಂದು ಭಾಗವನ್ನು ಮನ್ನಿಸಬೇಕು, ಎಂದು ಹೇಳಲು, ಆ ಭೂತವು ಸ್ವಲ್ಪ ಹೊತ್ತು ಯೋಚಿಸಿ ಒಳ್ಳೆಯದು, ಹಾಗೆ ಆಗಲಿ ಎಂದು ಹೇಳಿ ಸುಮ್ಮನಿದ್ದಿತು’’.  ಮುಂದೆ ಹೀಗೆಯೇ ಮುಂದುವರೆದು ಒಂದನೆಯ ಮುದುಕನ ಕಥೆ ಬರುತ್ತದೆ.  ನವರಸಗಳು, ನಿಗೂಢ, ಮನೋಹರ, ವಿನೋದ, ವಿಚಿತ್ರಗಳ ಸರಮಾಲೆಯಾಗಿ ಬರುವ ಈ ಕಥೆಗಳು ಆಶ್ಚರ್ಯಕರವಾದಷ್ಟು ಮನರಂಜನೆ ನೀಡುತ್ತದೆ.

ನೂರು ವರ್ಷಗಳ ಹಿಂದೆ ಪ್ರಕಟಗೊಂಡಿರುವ ಈ ‘ಯವನ ಯಾಮಿನೀ ವಿನೋದ ಎಂಬ ಅರೇಬಿಯನ್ ನೈಟ್ಸು ಕಥೆಗಳು’ ಕನ್ನಡ ಅರೇಬಿಯನ್ ನೈಟ್ಸ್ ಕಥಾಪರಂಪರೆಯಲ್ಲಿ ಒಂದು ಮಹತ್ವದ ಕೃತಿ.

Write A Comment