ಮನೋರಂಜನೆ

ಫ್ಯಾಷನ್ ಲೋಕದಲ್ಲಿ ವಿನ್ಯಾಸಕಿಯ ‘ಶ್ಲೋಕ’

Pinterest LinkedIn Tumblr

psmec27shloka

-ಯೋಗಿತಾ ಬಿ.ಆರ್‌.
ವಿನ್ಯಾಸ ಕ್ಷೇತ್ರಕ್ಕೆ ಕಾಲಿರಿಸಿ ಎರಡು ವರ್ಷಗಳು ಕಳೆದಿವೆ ಅಷ್ಟೆ. ಆಗಲೇ  ಸ್ವಂತ ಮಳಿಗೆ ಪ್ರಾರಂಭಿಸಿ ಮತ್ತೊಂದು ಮಳಿಗೆಯನ್ನು ಆರಂಭಿಸುವ ಚಿಂತನೆಯಲ್ಲಿರುವ ಈ ವಿನ್ಯಾಸಕಿ, ಫ್ಯಾಷನ್‌ ಲೋಕದಲ್ಲಿ ತನ್ನ ನೆಲೆ ಕಂಡುಕೊಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಈಗಾಗಲೇ ಎರಡು ಯಶಸ್ವಿ ಪ್ರದರ್ಶನಗಳನ್ನು ನೀಡಿರುವ 25ರ ವರ್ಷದ  ಶ್ಲೋಕಾ, ಭರವಸೆಯ ಯುವ ವಿನ್ಯಾಸಕಿಯಾಗುವ ಎಲ್ಲಾ ಲಕ್ಷಣಗಳನ್ನೂ ಹೊಂದಿದ್ದಾರೆ.

ವಿನ್ಯಾಸ ಕ್ಷೇತ್ರದತ್ತ…
‘ಅದೇನೋ ಗೊತ್ತಿಲ್ಲ… ನನಗೆ ಈ ಕ್ಷೇತ್ರದಲ್ಲಿ ಮೊದಲಿನಿಂದಲೂ ಆಸಕ್ತಿ. ನಾನು ಜೈನ್‌ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ವಿಷಯದಲ್ಲಿ ಪದವಿ ಮುಗಿಸಿದೆ.  ಮುಂದೆ ಓದುವುದಕ್ಕೆ ಆಸಕ್ತಿ ಮೂಡಲಿಲ್ಲ. ಕಾಲೇಜಿನಲ್ಲಿ ಓದುವಾಗಲೇ ನನ್ನ ಗೆಳತಿಯರಿಗೆ ಹಾಗೂ ಸಂಬಂಧಿಕರಿಗೆ  ವಿಶೇಷ ಸಂದರ್ಭಗಳಿಗೆ ವಸ್ತ್ರವಿನ್ಯಾಸ ಮಾಡಿಕೊಟ್ಟಿದ್ದೆ, ಮನಸ್ಸಿಗೆ ತೋಚಿದ ಡಿಸೈನ್ಸ್ ಸ್ಕೆಚ್‌ ಮಾಡುತ್ತಿದ್ದೆ… ಆಗ ಅನ್ನಿಸುತ್ತಿತ್ತು ನಾನ್ಯಾಕೆ ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳಬಾರದು ಅಂತ.  2011ರಲ್ಲಿ ನಾನು ಪದವಿ ಮುಗಿಸಿದೆ. 2013ಕ್ಕೆ ಸಂಪೂರ್ಣವಾಗಿ ವಿನ್ಯಾಸ ಕ್ಷೇತ್ರಕ್ಕೆ ಕಾಲಿರಿ ಸಿದೆ’ ಎಂದು ವಿನ್ಯಾಸ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ ಬಗೆಯನ್ನು ವಿವರಿಸುತ್ತಾರೆ ಶ್ಲೋಕಾ.

ವಿನ್ಯಾಸದ ವಿಶೇಷತೆ
‘ಭಾರತೀಯ ಉಡುಪುಗಳಿಗೆ ಪಾಶ್ಚಿಮಾತ್ಯ ಶೈಲಿಯ ಟಚ್‌ ಕೊಡುವುದರಿಂದ ಎಲ್ಲರಿಗೂ ನನ್ನ ವಿನ್ಯಾಸ ಹೆಚ್ಚು ಇಷ್ಟವಾಗುತ್ತದೆ. ದೀಪಾ ಸನ್ನಿಧಿ, ಐಶ್ವರ್ಯ ಸಿಂಧೋಗಿ, ನಯನ ಇನ್ನು ಕೆಲ ನಟಿಯರು ನನ್ನ ವಿನ್ಯಾಸ ಮೆಚ್ಚಿ ಬರುತ್ತಾರೆ. ಸೀರೆ, ಲೆಹೆಂಗಾ, ಅನಾರ್ಕಲಿ, ಮಿನಿ ಸೀರೆ, ಹಾಫ್‌ ಸೀರೆ, ಗೌನ್‌ಗಳು, ಸ್ಕರ್ಟ್ಸ್‌, ಕಾಕ್‌ಟೇ ಲ್ಸ್‌ಗಳಂತಹ ವಸ್ತ್ರಗಳನ್ನು ವಿನ್ಯಾಸ ಮಾಡುತ್ತೇನೆ’ ಎಂದು ಖುಷಿಯಿಂದ ಹೇಳುತ್ತಾರೆ ಶ್ಲೋಕಾ.

ಮೊದಲ ಷೋ ಇಷ್ಟ
‘ಬೆಂಗಳೂರು ಫ್ಯಾಷನ್‌ ವೀಕ್‌’ ನನ್ನ ವಿನ್ಯಾಸದ ಮೊದಲ ಷೋ. ಇದನ್ನು ನಾನು ಎಂದಿಗೂ ಮರೆಯುವುದಿಲ್ಲ. ನನ್ನ ವಿನ್ಯಾಸದ ಮೊದಲ ಪ್ರದರ್ಶನ ಆದ್ದರಿಂದ ಕೊಂಚ ಭಯ ಇತ್ತು. ಹೇಗಪ್ಪಾ ಇದೆಲ್ಲಾ ನಿಭಾಯಿಸುವುದು ಅಂತ. ಅನುಭವವಾಗುತ್ತಿದ್ದಂತೆ ಎಲ್ಲವೂ ಅರ್ಥವಾಗತೊಡಗಿತು. ಬ್ಲೆಂಡರ್ಸ್ ಪ್ರೈಡ್‌ ಪ್ರದರ್ಶನ ಕೂಡ ನೆನಪಿನಲ್ಲಿ ಉಳಿಯುವಂತದ್ದು’ ಎನ್ನುತ್ತಾರೆ.

ಕುಟುಂಬದ ಬೆಂಬಲ
‘ಅಪ್ಪ ಚಿಕ್ಕಮಗಳೂರಿನಲ್ಲಿ ಕಾಫಿ ಪ್ಲಾಂಟರ್‌, ಅಮ್ಮ ಗೃಹಿಣಿ. ಕುಟುಂಬವೆಲ್ಲಾ ಊರಿನಲ್ಲೇ ಇದೆ. ನನ್ನನ್ನು ವಿದ್ಯಾಭ್ಯಾಸದ ದೃಷ್ಟಿಯಿಂದ ಬೆಂಗಳೂರಿನಲ್ಲಿ ಬಿಟ್ಟರು. ಬಿಷಪ್‌ ಕಾಟನ್‌ ಶಾಲೆಯಲ್ಲಿ ಓದಿದ್ದು. ಹಾಸ್ಟೆಲ್, ಚಿಕ್ಕಮ್ಮನ ಮನೆಯಲ್ಲಿ ಉಳಿದುಕೊಂಡೇ ಇಲ್ಲಿಯವರೆಗೂ ಬೆಳೆದಿದ್ದೇನೆ. ಇದಕ್ಕೆಲ್ಲಾ ನನ್ನ ತಂದೆ, ತಾಯಿ, ತಮ್ಮ, ಚಿಕ್ಕಪ್ಪ ಹಾಗೂ ಚಿಕ್ಕಮ್ಮನ ಸಂಪೂರ್ಣ ಬೆಂಬಲವೇ ಕಾರಣ.

‘ಶ್ಲೋಕಾ ಸುಧಾಕರ್‌’ ಬ್ರಾಂಡ್‌
‘ನಾನು ವಿನ್ಯಾಸ ಮಾಡುವ ವಸ್ತ್ರಗಳಿಗೆ ಬೇಕಾದ ಲೇಬಲ್‌ಗಾಗಿ ನನ್ನ  ಹೆಸರಿನಲ್ಲಿಯೇ  ಬ್ರಾಂಡ್‌   ಆರಂಭಿಸಿದೆ. ಮಾರುಕಟ್ಟೆಯಲ್ಲಿ ಈಗ ನನ್ನ ಬ್ರಾಂಡ್‌ ಗುರುತಿಸುವ ಜತೆಗೆ ಬೇಡಿಕೆಯೂ ಇದೆ. ಕನ್ನಡ ಇಂಡಸ್ಟ್ರಿಯಲ್ಲಿ ನನ್ನ ಬ್ರಾಂಡ್‌ ಗುರುತಿಸುತ್ತಾರೆ. ಇದನ್ನು ಮತ್ತಷ್ಟು ಜನಪ್ರಿಯಗೊಳಿಸಲು ನನ್ನ ಮಳಿಗೆಗೂ ಇದೇ ಹೆಸರು ಇಟ್ಟಿದ್ದೇನೆ’ ಎಂದು ಭರವಸೆಯಿಂದ ನುಡಿಯುತ್ತಾರೆ ಯುವ ವಿನ್ಯಾಸಕಿ.

ಸೃಜನಶೀಲತೆ ಮುಖ್ಯ
‘ಮಹಿಳೆಯರಿಗೆ ಈ ಕ್ಷೇತ್ರ ಹೆಚ್ಚು ಸೂಕ್ತ ಎನ್ನಬಹುದು. ಒತ್ತಡ ಇರದ ಸುರಕ್ಷಿತ ಕ್ಷೇತ್ರ ಇದು. ಎಷ್ಟೇ ಡಿಸೈನಿಂಗ್‌ ಕೋರ್ಸ್‌ ಮಾಡಿದರೂ ಈ ಕ್ಷೇತ್ರಕ್ಕೆ ಸೃಜನಶೀಲತೆ ಮುಖ್ಯ. ಶೇಕಡ 80ರಷ್ಟು ಕ್ರಿಯೆಟಿವಿಟಿಯೇ ವರ್ಕ್‌ ಆಗೋದು. ಬದಲಾಗುವ ಟ್ರೆಂಡ್‌ಗಳ ಬಗ್ಗೆ ಸ್ವಲ್ಪ ಗಮನವಿದ್ದರೆ ಸಾಕು ಈ ಕ್ಷೇತ್ರದಲ್ಲಿ ಯಶಸ್ವಿಯಾಗಬಹುದು’ ಎನ್ನುತ್ತಾರೆ.

ಮುಂದಿನ ಯೋಜನೆ
‘ಕಿಸ್ಮತ್‌’ ಹಾಗೂ ‘ಫಸ್ಟ್‌ ರ್‍ಯಾಂಕ್‌ ರಾಜು’ಎನ್ನುವ ಸಿನಿಮಾಗಳಿಗೆ ವಸ್ತ್ರ ವಿನ್ಯಾಸ ಮಾಡಿದ್ದೇನೆ. ಹಲವಾರು ನಟಿಯರಿಗೆ ವಸ್ತ್ರವಿನ್ಯಾಸ   ಮಾಡಿಕೊಡುತ್ತಿದ್ದೇನೆ. ಸದಾಶಿವ  ನಗರದಲ್ಲಿರುವ ನನ್ನ ಮಳಿಗೆಯ ಜತೆ ವಸಂತನಗರದಲ್ಲಿ ಮತ್ತೊಂದು ಮಳಿಗೆ ಪ್ರಾರಂಭಿಸುವ ತಯಾರಿಯಲ್ಲಿದ್ದೇನೆ’ ಎಂದು ಶ್ಲೋಕಾ ತಮ್ಮ ಯೋಜನೆಗಳನ್ನು      ಹಂಚಿಕೊಳ್ಳುತ್ತಾರೆ.

Write A Comment