ಈ ವರ್ಷ ಮುಗಿಯುವುದರೊಳಗೆ ತಾನು ‘ಚತುರ್ಭುಜ’ ಆಗುವುದಾಗಿ ಹಿಂದಿ ನಟ ಶಾಹಿದ್ ಕಪೂರ್ ಪ್ರಶ್ನೆಯೊಂದಕ್ಕೆ ಉತ್ತರದ ರೂಪದಲ್ಲಿ ಹೇಳಿದ್ದಾರೆ.
ದೆಹಲಿ ವಿದ್ಯಾರ್ಥಿನಿ ಮೀರಾ ರಜಪೂತ್ ಜೊತೆ ಶಾಹಿದ್ ನಿಶ್ಚಿತಾರ್ಥ ಆಗಿದೆ ಎನ್ನುವ ಸುದ್ದಿ ಬಿ–ಟೌನ್‌ನಲ್ಲಿ ಹಬ್ಬಿದೆ. ಮುಂಬೈನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಅನೌಪಚಾರಿಕ ಮಾತುಕತೆಗೆ ಸಿಕ್ಕಾಗ ಶಾಹಿದ್ ಐಎಎನ್‌ಎಸ್ ಸುದ್ದಿಸಂಸ್ಥೆಗೆ ತನ್ನ ಮದುವೆ ನಿರ್ಧಾರವನ್ನು ತಿಳಿಸಿದರು.
ಯಾರು ಆ ಅದೃಷ್ಟವಂತ ಹೆಣ್ಣುಮಗಳು ಎಂದು ಕೇಳಿದಾಗ, ಹೆಸರು ಹೇಳಲು ಅವರು ನಿರಾಕರಿಸಿದರು. ‘ನನ್ನ ಮದುವೆ ಬಗೆಗೆ ಕೆಲವು ವದಂತಿಗಳು ಹರಿದಾಡುತ್ತಿವೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಎನ್ನುವುದು ಈ ವಿಷಯದಲ್ಲಿ ನಿಜ. ನಾನು ಈ ವರ್ಷದೊಳಗೆ ಮದುವೆಯಾಗುತ್ತೇನೆ. ಅದು ಖಾಸಗಿ ವಿಷಯ. ಮಾಧ್ಯಮಗಳಿಗೆ ವಿಷಯ ತಿಳಿಸಬೇಕಾದದ್ದು ನನ್ನ ಕರ್ತವ್ಯ. ವಿವರಗಳನ್ನು ಗುಟ್ಟಾಗಿ ಇಟ್ಟುಕೊಳ್ಳುವುದು ಖಾಸಗೀತನದ ದೃಷ್ಟಿಯಿಂದ ಮುಖ್ಯ’ ಎಂದು ಶಾಹಿದ್ ಜಾಣತನದಿಂದ ಮಾತನಾಡಿದರು.
ವಿಶಾಲ್ ಭಾರದ್ವಾಜ್ ನಿರ್ದೇಶನದ ‘ಹೈದರ್’ ಹಿಂದಿ ಸಿನಿಮಾಗೆ ಐದು ರಾಷ್ಟ್ರ ಪ್ರಶಸ್ತಿಗಳು ಲಭಿಸಿದ್ದು, ಶಾಹಿದ್ ಅದರ ನಾಯಕ ಎನ್ನುವುದು ಅಗ್ಗಳಿಕೆ. ಹಿಂದೆ ನಟಿ ಕರೀನಾ ಕಪೂರ್ ಜೊತೆ ಶಾಹಿದ್‌ಗೆ ಪ್ರೇಮಾಂಕುರವಾಗಿದೆ ಎಂಬ ಸುದ್ದಿ ಇತ್ತು. ಅವರಿಬ್ಬರೂ ಆಮೇಲೆ ಸಂಬಂಧ ಕಡಿದುಕೊಂಡದ್ದೂ ಸುದ್ದಿಯಾಯಿತು. ಸದ್ಯಕ್ಕೆ ‘ಉಡ್ತಾ ಪಂಜಾಬ್’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿರುವ ಶಾಹಿದ್ ಸಿನಿಮಾ ಬದುಕು, ವೈವಾಹಿಕ ಬದುಕು ಎರಡನ್ನೂ ತೂಗಿಸಿಕೊಂಡು ಹೋಗುವ ಯೋಚನೆಯಲ್ಲಿದ್ದಾರೆ.