ಅಡುಗೆ ಮಾಡುವುದೊಂದು ಕಲೆ, ತಿನ್ನುವುದು ಇನ್ನೊಂದು ಕಲೆ. ಕಲೆ ಮಾತ್ರ ಅಲ್ಲ, ಅದೊಂದು ತಂತ್ರಗಾರಿಕೆಯೂ ಹೌದು. ಶಿಸ್ತು, ಸಂಯಮ, ಪ್ರೀತಿ, ಪದ್ಧತಿಗಳನ್ನೂ ಬಯಸುವ ಜೀವನ ಕಲೆಯದು. ಅಡುಗೆ ಗೆಲ್ಲುವವರು ಜೀವನವನ್ನೇ ಗೆದ್ದಂತೆ. ಆರೋಗ್ಯ, ಆಯುಷ್ಯ ನಾವು ಮಾಡುವ ಊಟದಲ್ಲೇ ಅಡಗಿದೆ ಅಲ್ಲವೇ? ಅಂದಮೇಲೆ ಈ ಅಡುಗೆ ಮಹತ್ವವನ್ನು ಅಲ್ಲಗಳೆಯುವುದಾದರೂ ಹೇಗೆ?
ಸುಮ್ಮನೇ ಮಾಡಬೇಕಲ್ಲ ಅಂತ ಮಾಡುವುದು, ಹಸಿವಿಗೆ ಅಂತ ತಿನ್ನುವುದರಲ್ಲಿ ಅರ್ಥವಿಲ್ಲ. ನಮ್ಮ ದೈಹಿಕ ಹಾಗೂ ಮಾನಸಿಕ ಚೈತನ್ಯವನ್ನು ನಿರ್ಧರಿಸುವ ಆಹಾರ ಅಷ್ಟೇ ಸಮೃದ್ಧವಾಗಿರಬೇಕು. ನಮ್ಮ ಮನೆಮಂದಿಗೆ–ಮಕ್ಕಳಿಗೆ ನಾವು ಏನನ್ನು ತಿನ್ನಲು ಕೊಡುತ್ತೇವೆ ಅಥವಾ ಸ್ವತಃ ನಾವು ಏನು ತಿನ್ನುತ್ತೇವೆ ಎನ್ನುವುದು ನಮಗೆ ಗೊತ್ತಿರಬೇಕು. ಈ ಬಗ್ಗೆ ಮಕ್ಕಳಿಗೆ ಪಾಠ ಮಾಡಲು ಸಜ್ಜಾಗಿದೆ ‘ರಸ’.
ಇಂದಿರಾನಗರದಲ್ಲಿರುವ ಸಾವಯವ ಸಸ್ಯಾಹಾರಿ ರೆಸ್ಟೋರೆಂಟ್ ರಸ. ನಾಳೆ ಮಕ್ಕಳಿಗಾಗಿ ಆರೋಗ್ಯ–ಆಹಾರದ ನಳಪಾಠ ನಡೆಸುತ್ತಿದೆ. ‘ದಿ ಹ್ಯಾಪಿ ಬೇಕರ್’ ಎನ್ನುವ ಕಾರ್ಯಕ್ರಮದ ಹೆಸರಿನಲ್ಲಿಯೇ ಸಂತೋಷ, ಸಂಭ್ರಮ, ಸಿಹಿ ಎಲ್ಲವೂ ಅಡಗಿದೆ.
‘ಈಗ ತಾನೆ ಪರೀಕ್ಷೆ ಮುಗಿಸಿ ಹಾಯಾಗಿ ಟೀವಿ ಮುಂದಿನ ಸೋಫಾ ಮೇಲೆ ಮೈಚೆಲ್ಲಿರುವ ಮಕ್ಕಳನ್ನು ಕರೆದು ತಂದಿದ್ದೇವೆ. ಈ ರಜೆಯನ್ನು ಅವರು ಮೋಜಿನ ಜೊತೆಗೆ ಆರೋಗ್ಯಕರ ಆಹಾರದ ಜೊತೆ ಕಳೆಯಲಿ ಎನ್ನುವುದು ನಮ್ಮ ಉದ್ದೇಶ ಎನ್ನುತ್ತಾರೆ’ ಕಾರ್ಯಕ್ರಮದ ರೂವಾರಿ ಪ್ರದೀಪ್ ಗೋಪಾಲಕೃಷ್ಣ.
ರಜೆ ಶುರುವಾಗಿದೆ. ಮನೆಯಲ್ಲಿ ಮಕ್ಕಳನ್ನು ಹಿಡಿಯುವ ಕಷ್ಟಕ್ಕೆ ಪಾಲಕರು ಹೈರಾಣಾಗುವುದಿದೆ. ಸದಾ ಒಂದಿಲ್ಲ ಒಂದು ಬಗೆಯ ತಿಂಡಿ ಬೇಕು. ಬೇಕರಿ ಪದಾರ್ಥಗಳನ್ನು ಹೇಗೆ ನಂಬುವುದು ಎನ್ನುವ ಚಿಂತೆ ಒಂದೆಡೆಯಾದರೆ, ದಿನಕ್ಕೊಂದು ವಿಧದ ತಿನಿಸನ್ನು ಎಲ್ಲಿಂದ ತರುವುದು ಎನ್ನುವ ಆತಂಕ ಮತ್ತೊಂದು ಕಡೆ. ‘ಪಾಲಕರ ಈ ಹೊರೆಯನ್ನು ಇಳಿಸುವ ಜೊತೆಗೆ ತಮಗೇನು ಬೇಕು ಎಂದು ತಾವೇ ನಿರ್ಧರಿಸಿಕೊಳ್ಳುವಂತೆ ಮತ್ತು ತಯಾರಿಸಿಕೊಳ್ಳುವಂತೆ ಮಕ್ಕಳನ್ನು ಸಜ್ಜು ಮಾಡುತ್ತೇವೆ’ ಎನ್ನುತ್ತಾರೆ ಅವರು.
ಆರೋಗ್ಯಕರ ಆಹಾರ ಮತ್ತು ಸ್ವಚ್ಛತೆಯ ಮಹತ್ವ, ಸಾವಯವ ಪದಾರ್ಥಗಳ ಶ್ರೀಮಂತಿಕೆ ಮುಂತಾದ ವಿಚಾರಗಳ ಬಗ್ಗೆ ಮಕ್ಕಳಿಗೆ ತಿಳಿಹೇಳುವುದು. ಯಾವುದು ತಿನ್ನಲು ಯೋಗ್ಯ, ಯಾವುದಲ್ಲ ಎಂಬ ಬಗ್ಗೆ ಮಾಹಿತಿ ನೀಡುವುದು ಹಾಗೂ ಆರೋಗ್ಯಕರ ತಿಂಡಿಗಳನ್ನು ತಾವೇ ಮಾಡಿಕೊಳ್ಳುವ ಬಗೆಯನ್ನು ಕಲಿಸುವುದು ‘ಹ್ಯಾಪಿ ಬೇಕರ್’ ಉದ್ದೇಶ.
‘ಯಾರೇ ಆಗಲಿ, ಎಂಥದ್ದೇ ಅಡುಗೆ ಮಾಡಲಿ, ಪೂರ್ತಿ ಮನಸ್ಸಿಟ್ಟು, ಪ್ರೀತಿಯಿಂದ ತೊಡಗಿಕೊಳ್ಳಬೇಕು. ಇದೆಲ್ಲ ಅಡುಗೆ ರುಚಿಗೆ, ತಿನ್ನುವ ಖುಷಿಗೆ ಅಗತ್ಯ ಪದಾರ್ಥ ಎಂದೇ ನಾವು ನಂಬಿದ್ದೇವೆ ಮತ್ತು ಇದನ್ನೆಲ್ಲ ಮಕ್ಕಳಿಗೆ ಹೇಳ ಹೊರಟಿದ್ದೇವೆ’ ಎಂದು ವಿವರಿಸುತ್ತಾರೆ ತರಬೇತುದಾರರಾಗಿರುವ ಪಾರ್ವತಿ ಗಿರೀಶ್.
ಅಜ್ಜಿ ಇಲ್ಲದ ಮನೆಯಲ್ಲಿ…
ಹಿಂದೊಂದು ಕಾಲವಿತ್ತು. ಶಾಲೆಯಿಂದ ಮನೆಗೆ ಬಂದರೆ ಅಮ್ಮ ಇರುತ್ತಿದ್ದಳು. ಅಮ್ಮನಿಗೆ ಯಾವುದೊ ಕೆಲಸವಿದ್ದರೂ ಅಜ್ಜಿಯಂತೂ ಇದ್ದೇ ಇರುತ್ತಿದ್ದಳು. ತಾನೇ ತಯಾರಿಸಿ ಇಟ್ಟಿರುತ್ತಿದ್ದ ಬಗೆ–ಬಗೆ ತಿಂಡಿಗಳನ್ನು ತಂದು ಮುಂದಿಡುತ್ತಿದ್ದಳು.
ಆದರೆ ಇಂದು ಅಜ್ಜಿ ಇರುವ ಮನೆಗಳೆಷ್ಟು? ಅಮ್ಮ ಇದ್ದರೂ ಶಾಲೆಯಿಂದ ಮನೆಗೆ ಬರುವ ಸಮಯಕ್ಕೆ ಅವಳಿನ್ನೂ ತನ್ನ ಕಚೇರಿಯಲ್ಲಿರುತ್ತಾಳೆ. ತಿಂಡಿಯ ಹುಡುಕಾಟದಲ್ಲಿ ಮಕ್ಕಳು ಹೊಟ್ಟೆಗೆ ಯಾವುದು ಹಿತ, ಯಾವುದಲ್ಲ ಎನ್ನುವುದನ್ನೇ ಮರೆತು, ಕೈಗೆ ಸಿಕ್ಕಿದ್ದನ್ನು ಹೊಟ್ಟೆಗಿಳಿಸಿಕೊಳ್ಳುತ್ತಾರೆ. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ರಸ ಈ ಕಾರ್ಯಕ್ರಮ ಏರ್ಪಡಿಸಿದೆ.
ಪಿಜ್ಜಾದ ಗಮ್ಮತ್ತು
ಒಂದೊಂದು ಬಾರಿ ಒಂದೊಂದು ವಿಷಯವನ್ನು ಇಟ್ಟುಕೊಂಡು ಮಕ್ಕಳನ್ನು ಅಡುಗೆಮನೆಗೆ ಕರೆಯುತ್ತೇವೆ. ಈ ಬಾರಿ ಅವರೆಲ್ಲರ ಪ್ರೀತಿಯ ಪಿಜ್ಜಾ ತಯಾರಿಕೆಗೆ ಸಿದ್ಧತೆ ನಡೆದಿದೆ ಎನ್ನುತ್ತಾರೆ ಪಾರ್ವತಿ.
ಪಿಜ್ಜಾ ಎಂದರೆ ತಕ್ಷಣ ನಮ್ಮ ಮುಂದೆ ಬರುವುದು ‘ಮೈದಾ’ ಎನ್ನುವ ಭೂತ. ಮೈದಾ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಯಾರಿಗೆ ತಾನೆ ಗೊತ್ತಿಲ್ಲ. ಅದರಲ್ಲೂ ಬೆಳೆಯುವ ಮಕ್ಕಳ ಹೊಟ್ಟೆಯಲ್ಲಿ ಮೈದಾ ಮಾಡುವ ಕರಾಮತ್ತು ನಮಗೆ ಗೊತ್ತೇ ಇದೆ ಅಲ್ಲವೇ! ಆದರೂ ಅದೆಷ್ಟೋ ಬಾರಿ ಮಕ್ಕಳನ್ನು ತಡೆಯುವಲ್ಲಿ ವಿಫಲರಾಗುತ್ತೇವೆ. ಅವರ ಹಟಕ್ಕೆ ಮಣಿಯುತ್ತೇವೆ. ಬಾಯಿ ಚಪ್ಪರಿಸುತ್ತ ಹೊರಗೆ ಪಿಜ್ಜಾ ತಿಂದು ಬಂದ ಮಕ್ಕಳು ರಾತ್ರಿ ಹೊರಳಾಡಿದಾಗೊಮ್ಮೆ ನಾವು ‘ಅಯ್ಯೋ’ ಎನ್ನುತ್ತೇವೆ.
ಆದರೆ ಇಲ್ಲಿ ಅದೇ ಪಿಜ್ಜಾ ಆರೋಗ್ಯಕರ ರೂಪ ಹೊತ್ತು ಬಂದಿದೆ. ಅದಿಲ್ಲಿ ಜಂಕ್ ಫುಡ್ ಎನ್ನುವ ಅಪವಾದವನ್ನು ಕಿತ್ತೆಸೆದು ಹೊಸ ಪೋಷಾಕು ತೊಟ್ಟು ನಿಂತಿದೆ. ಆರೋಗ್ಯಕರ ಸಂಪೂರ್ಣ ಗೋಧಿಯಿಂದ ಪಿಜ್ಜಾ ತಯಾರಿಸುವ ಬಗೆಯನ್ನು ಮಕ್ಕಳಿಗೆ ಕಲಿಸಿಕೊಡಲಾಗುತ್ತದೆ ಎಂದು ವಿವರಿಸುತ್ತಾರೆ ಪಾರ್ವತಿ.
ಎಲ್ಲಾ ಆರೋಗ್ಯಕರ ಪದಾರ್ಥಗಳನ್ನೇ ಬಳಸಿ ರುಚಿಗೆ ಕುಂದಿಲ್ಲದಂತೆ ಪಿಜ್ಜಾ ತಯಾರಿಸಿ ತಮ್ಮ ಸ್ನೇಹಿತರಿಗೂ, ಪಾಲಕರಿಗೂ ಆಶ್ಚರ್ಯ ಹುಟ್ಟಿಸಲು ಸಜ್ಜಾಗಿದ್ದಾರೆ ನಗರದ ಮಕ್ಕಳು. ಬೇಕಿದ್ದರೆ ಪಾಲಕರೂ ಅವರ ಜೊತೆಗೂಡಬಹುದು.
ದಿನಾಂಕ: ಮಾರ್ಚ್ 28, ಶನಿವಾರ
ಸಮಯ: ಸಂಜೆ 4.30ರಿಂದ 6.30.
ನೋಂದಣಿ ಶುಲ್ಕ: 650
(ಎಲ್ಲಾ ಪದಾರ್ಥಗಳನ್ನು ಒಳಗೊಂಡು)
ಸ್ಥಳ: ರಸ ರೆಸ್ಟೋರೆಂಟ್, ಸಿಎಂಎಚ್ ರಸ್ತೆ, ಇಂದಿರಾನಗರ.
ವೆಬ್‌ಸೈಟ್: www.rasaindia.com