ಕನ್ನಡ ವಾರ್ತೆಗಳು

ಕಾಲಕ್ಕೆ ಕಾಯದೆ ಮುನ್ನಡೆದಾಗ…

Pinterest LinkedIn Tumblr

kushi

ಎಲ್ಲದಕ್ಕೂ ಕಾಲ ಕೂಡಿಬರಬೇಕು ಎಂಬ ಗೊಡ್ಡು ಮನಸ್ಥಿತಿಯನ್ನು ಬಿಟ್ಟು ಕಾಯಕದತ್ತ ಮುಖ ಮಾಡಿ ಪ್ರಯತ್ನಶೀಲರಾಗುವವರೇ ಜೀವನದಲ್ಲಿ ಯಶಸ್ವಿಯಾಗುತ್ತಾರೆ ಮತ್ತು ಸಮಾಜದಲ್ಲಿ ಹೆಸರು ಮಾಡುತ್ತಾರೆ. ಈ ಬಾರಿ ಇಂತಹ ಸಾಧಕರ ಕಥೆಗಳು ನಿಮಗಾಗಿ…

ಅದು ಎಂಬಿಎ ಕೋರ್ಸ್‌ನ ಅಂತಿಮ ವರ್ಷ. ಎಲ್ಲಾ ವಿದ್ಯಾರ್ಥಿಗಳಂತೆ ರೋಹನ್‌ ಕೂಡ ಸಂಶೋಧನಾ ಯೋಜನೆಯೊಂದನ್ನು ವಿಶ್ವ ವಿದ್ಯಾಲಯಕ್ಕೆ ಸಲ್ಲಿಸಬೇಕಿತ್ತು. ಹಾಗಾಗಿ ರೋಹನ್‌ ‘ವೈದ್ಯರು ಮತ್ತು ಸಾಮಾಜಿಕ ಜಾಲತಾಣಗಳು’ ಎಂಬ ವಿಷಯವನ್ನು ಸಂಶೋಧನೆಗೆ ಆಯ್ದುಕೊಂಡರು. ಅದೇ ಅವರಿಗೆ ಅಡಿಪಾಯವಾಯಿತು. ಮುಂದೆ ವೈದ್ಯರಿಗಾಗಿ ಉದ್ಯೋಗ ಜಾಲತಾಣವನ್ನು ಆರಂಭಿಸಿ ಯಶಸ್ವಿ ಉದ್ಯಮಿಯಾಗಲು ಪ್ರೇರಣೆಯಾಯಿತು.

ಗುಜರಾತ್‌ ಮೂಲದ ರೋಹನ್‌ ದೇಸಾಯಿ ಎಂಬಿಬಿಎಸ್‌ ಪದವೀಧರ. ಅಪ್ಪ ಅಮ್ಮ ಕೂಡ ವೈದ್ಯರಾಗಿದ್ದು, ಸ್ವಂತ ಕ್ಲಿನಿಕ್‌ ಇತ್ತು. ಪದವಿ ಮುಗಿದ ಬಳಿಕ ರೋಹನ್‌ ವೈದ್ಯ ವೃತ್ತಿಯಲ್ಲಿ ತೊಡಗಲಿಲ್ಲ. ಕಾನ್ಪುರದಲ್ಲಿ ಎಂಬಿಎಗೆ ಸೇರಿದರು. ನಂತರ ಮೂರು ವರ್ಷ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿದರು. ಎಂಬಿಎ ಓದುವಾಗ ತಾವು ಮಂಡಿಸಿದ್ದ ಸಂಶೋಧನಾ ವರದಿಯನ್ನು ಆಧಾರವಾಗಿಟ್ಟುಕೊಂಡು ವೈದ್ಯರಿ ಗಾಗಿಯೇ  ‘ಪ್ಲೆಕ್ಸಸ್‌ ಎಂಡಿ’ ಎಂಬ ವೆಬ್‌ ಪೋರ್ಟಲ್‌ ಆರಂಭಿಸಿದರು. ಕೇವಲ ಎರಡು ವರ್ಷಗಳ ಹಿಂದಷ್ಟೇ ಆರಂಭವಾದ ಈ ಜಾಲತಾಣ ಭಾರತ ಮಾತ್ರವಲ್ಲದೆ ವಿದೇಶ ಗಳಲ್ಲೂ ಭಾರೀ ಜನಪ್ರಿಯತೆ ಹೊಂದಿದೆ. ಪ್ರತಿ ನಿತ್ಯ 60 ರಿಂದ 70 ವೈದ್ಯರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ 2500ಕ್ಕೂ ಹೆಚ್ಚು ವೈದ್ಯರು ಪ್ಲೆಕ್ಸಸ್‌ ಎಂಡಿ ಮೂಲಕ ಉದ್ಯೋಗ ಪಡೆದಿ ದ್ದಾರೆ. ಇದರಲ್ಲಿ ವೈದ್ಯರು, ತಜ್ಞವೈದ್ಯರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ದೇಶ ಮತ್ತು ವಿದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿ ರುವ ಆಸ್ಪತ್ರೆಗಳ ಮುಖ್ಯಸ್ಥರು ಇಲ್ಲಿ ನೋಂದಾ ಯಿಸಲಾಗಿರುವ ವೈದ್ಯರ ಮಾಹಿತಿಯನ್ನು ಗಮನಿಸಿ ಕೆಲಸ ನೀಡುತ್ತಾರೆ. ಪ್ಲೆಕ್ಸಸ್‌ ಕಂಪೆನಿಗೆ ಆಸ್ಪತ್ರೆಗಳಿಂದ ಮತ್ತು ವೈದ್ಯರಿಂದ ಆಕರ್ಷಕ ಕಮಿಷನ್‌ ಲಭ್ಯವಾಗುತ್ತದೆ. ‘ಈ ಉದ್ಯೋಗ ಜಾಲತಾಣ ವನ್ನು ತನ್ನ ಗೆಳೆಯರಾದ ಬಿನ್ನಾಲ್‌ ದೋಶಿ ಮತ್ತು ಕಿರಣ್‌ ಶಾ ನಿರ್ವಹಣೆ ಮಾಡುತ್ತಿದ್ದಾರೆ. ತಿಂಗಳಿಗೆ 15 ರಿಂದ 20 ಲಕ್ಷ ರೂಪಾಯಿ ಆದಾಯ ಬರುತ್ತಿದೆ’ ಎನ್ನುತ್ತಾರೆ ರೋಹನ್‌.
www.plexusmd. in

ಅಂಕುರ್‌ ಫಾಡ್ನಿಸ್‌
ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಯಶಸ್ವಿ ಸಾಧಕ ಎಂದು ಕರೆಸಿಕೊಳ್ಳುವುದು ಸುಲಭದ ಮಾತಲ್ಲ! ಮಧ್ಯಪ್ರದೇಶದ ಅಂಕುರ್‌ ಫಾಡ್ನಿಸ್ ಎಂಬ ಯುವಕ ಶೂನ್ಯ ಬಂಡವಾಳದ ಮೂಲಕ ಪ್ರಗತಿಪರ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ.

ಅಂಕುರ್‌ ಓದಿದ್ದು ಐಐಟಿ. ಪದವಿ ಬಳಿಕ ಮುಂಬೈಗೆ ವಲಸೆ ಬಂದು ಇಲ್ಲಿನ ಟಿಎಲ್‌ಸಿ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಕೆಲಸಕ್ಕೆ ಸೇರಿದರು. ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನಸ್ಸಿನಲ್ಲಿ ಸ್ವಂತ ಉದ್ಯಮ ಆರಂಭಿಸಬೇಕು ಎಂಬ ಯೋಚನೆ ಸದಾ ಕೊರೆಯುತ್ತಿತ್ತು. ಅದು ಶೂನ್ಯ ಬಂಡವಾಳದ ಮೂಲಕವೇ ಆಗಬೇಕೆಂಬ ಹಂಬಲ ಅವರದ್ದು. ಕೆಲಸಕ್ಕೆ ರಾಜೀನಾಮೆ ಕೊಟ್ಟು ತಮ್ಮ ಬಾಡಿಗೆ ರೂಮಿನಲ್ಲಿ ರಿಯಾಯಿತಿ ದರದಲ್ಲಿ ಊಟದ ಕೂಪನ್‌ಗಳನ್ನು ನೀಡುವ ‘ಡೈಲಿ ಆ್ಯಪ್’ ಕಂಪೆನಿ ಪ್ರಾರಂಭಿಸಿದರು. ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡರು. ಗ್ರಾಹಕರು ಡೈಲಿ ಆ್ಯಪ್‌ ಮೂಲಕ ಊಟ ಅಥವಾ ತಿಂಡಿಯನ್ನು ಬುಕ್‌ ಮಾಡಿದರೆ ಅವರಿಗೆ ಶೇ 25 ರಷ್ಟು ರಿಯಾಯಿತಿ ದೊರೆಯುತ್ತಿತ್ತು. ಆದರೆ ಪ್ರಚಾರದ ಕೊರೆತೆಯಿಂದ ಇದು ನೆಲ ಕಚ್ಚಿತು. ಅಂಕುರ್‌ ಮುಂಬೈ ಬಿಟ್ಟು ಇಂದೋರ್‌ಗೆ ಬಂದರು. ಮಧ್ಯಪ್ರದೇಶದಲ್ಲಿ ‘ನಮ್‌ಕೀವಾಲ್‌’ ಬೇಕರಿ ತಿನಿಸುಗಳು ಬಹಳ ಜನಪ್ರಿಯ. ಈ ತಿನಿಸು ಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವ ಯೋಜನೆ ಸಿದ್ಧಪಡಿಸಿ ಆ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಂಡರು.
ಇದಕ್ಕೆಂದು ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುವಂತಹ ಆ್ಯಪ್‌ ಅಭಿವೃದ್ಧಿಪಡಿಸಿ ದರು. ಆನ್‌ಲೈನ್‌ ಅಥವಾ ಮೊಬೈಲ್‌ ಆ್ಯಪ್‌ನಲ್ಲಿ ತಿನಿಸುಗಳನ್ನು ಬುಕ್‌ ಮಾಡಿದರೆ ಅವುಗಳನ್ನು ಕೊರಿಯರ್‌ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಹೊಣೆಯನ್ನು ‘ನಮ್‌ಕೀವಾಲ್‌’ ವಹಿಸಿಕೊಂಡಿತು. ‘ನಿತ್ಯ ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಆರ್ಡರ್‌ ಗಳು ಬುಕ್‌ ಆಗುತ್ತಿವೆ. ವಿದೇಶದಿಂದಲೂ ಆರ್ಡರ್‌ಗಳು ಬರುತ್ತಿವೆ’ ಎನ್ನುತ್ತಾರೆ ಅಂಕುರ್‌. ಈ ಯೋಜನೆಯಿಂದ ನಮ್‌ಕೀವಾಲ್‌ ವಹಿವಾಟು ಹೆಚ್ಚಳವಾಗಿರುವುದಲ್ಲದೆ ಅಂಕುರ್‌ ಈ ಬೇಕರಿ ಪಾಲು ದಾರರೂ ಆಗಿದ್ದಾರೆ.
www.namkeenwale.in

ಅಶುತೋಷ್‌ ಬರ್ನವಾಲ್‌
‘ನಾನು ಪಟ್ಟ ಕಷ್ಟವನ್ನು ಯಾವ ವಿದ್ಯಾರ್ಥಿಯೂ ಪಡಬಾರದು’ ಎಂಬ ಉದ್ದೇಶದಿಂದ ವಿದ್ಯಾರ್ಥಿ ಗಳಿಗೆ ಮತ್ತು ಅವರ ಪೋಷಕರಿಗೆ ನೆರವಾಗಲೆಂದು ‘ಬಡಿ4ಸ್ಟಡಿ’ ಎಂಬ ಶಿಕ್ಷಣ ಮತ್ತು ವಿದ್ಯಾರ್ಥಿ ವೇತನಗಳ ಮಾಹಿತಿ ಇರುವ ವೆಬ್‌ ಪೋರ್ಟಲ್‌ ಅನ್ನು ಅಶುತೋಷ್‌ ಆರಂಭಿಸಿದ್ದಾರೆ. ದೇಶದಲ್ಲಿ ವಿದ್ಯಾರ್ಥಿ ವೇತನಗಳ ಬಗ್ಗೆ ಸಮಗ್ರ ಮಾಹಿತಿ ನೀಡುವ ಏಕೈಕ್‌ ವೆಬ್‌ಸೈಟ್‌ ಇದು. ಇಲ್ಲಿ ಸ್ಕಾಲರ್‌ಶಿಪ್‌ ಅರ್ಜಿ ಫಾರಂಗಳನ್ನು ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ.

ಅಶುತೋಷ್‌ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವರು. ಚುರುಕಾಗಿದ್ದ ಅಶುತೋಷ್‌ ಅವರನ್ನು ಸಿಬಿಎಸ್‌ಸಿ ಶಾಲೆಯಲ್ಲಿ ಓದಿಸುವ ಸಲುವಾಗಿ ಮೂವರು ಅಣ್ಣಂದಿರು ಸರ್ಕಾರಿ ಶಾಲೆ ಬಿಟ್ಟು ಕೆಲಸಕ್ಕೆ ಸೇರಿಕೊಂಡರು. ಮುದ್ದಿನ ತಮ್ಮನನ್ನು ಓದಿಸುವ ಸಲುವಾಗಿ ಬಾಲ ಕಾರ್ಮಿಕರಾಗಿ ದುಡಿದರು. ಮುಂದೆ ಎಂಬಿಎ ಪದವಿ ಪಡೆದು ಪ್ರತಿಷ್ಠಿತ ಕಾರ್ಪೊರೇಟ್‌ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸಹೋದರರಿಗೆ ಸ್ವಂತ ಉದ್ಯೋಗ  ಕಲ್ಪಿಸಿಕೊಟ್ಟಿದ್ದಾರೆ. ಬಡ ಮತ್ತು ಮಧ್ಯಮ ವರ್ಗದ ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ‘ಬಡಿ4ಸ್ಟಡಿ’ ಎಂಬ ಆನ್‌ಲೈನ್‌ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದಾರೆ. ಇದಕ್ಕೆ ಭಾರತ ಸರ್ಕಾರ ಹಣಕಾಸು ನೆರವನ್ನು ನೀಡುತ್ತಿದೆ. ‘ಮಾಹಿತಿಗಳ ಕೊರತೆಯಿಂದ ಎಷ್ಟೋ ಬಡ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸ್ಕಾಲರ್‌ಶಿಪ್‌ ನೆರವಿನಿಂದ ಬಡ ಮಕ್ಕಳು ಸಹ ಉನ್ನತ ವ್ಯಾಸಂಗ ಮಾಡಬಹುದು. ಅದಕ್ಕಾಗಿಯೇ ಈ ವೆಬ್‌ಸೈಟ್‌ ಆರಂಭಿಸಲಾಗಿದೆ. ಪ್ರಸ್ತುತ 6 ಸಾವಿರ ಸ್ಕಾಲರ್‌ಶಿಪ್‌ಗಳ ಮಾಹಿತಿ ಇಲ್ಲಿದೆ. ಲಕ್ಷಾಂತರ ವಿದ್ಯಾರ್ಥಿಗಳು ‘ಬಡಿ4ಸ್ಟಡಿ’ ಮುಖಾಂತರ ಮಾಹಿತಿ ಪಡೆಯುತ್ತಿದ್ದಾರೆ. ಈ ವೆಬ್‌ಪೋರ್ಟಲ್‌ನಲ್ಲಿನ ಮಾಹಿತಿ ಸಂಪೂರ್ಣ ಉಚಿತ. ಇಲ್ಲಿ ವಿದ್ಯಾರ್ಥಿಗಳು ಹೆಸರನ್ನು ನೋಂದಾಯಿಸಿಕೊಂಡರೆ ಅವರಿಗೆ ಮೇಲ್‌ ಅಥವಾ ಎಸ್‌ಎಂಎಸ್‌ ಮೂಲಕ ಸ್ಕಾಲರ್‌ಶಿಪ್‌ ಮಾಹಿತಿ ನೀಡಲಾಗುತ್ತದೆ’ ಎನ್ನುತ್ತಾರೆ ಅಶುತೋಷ್‌. ಈ ವೆಬ್‌ಪೋರ್ಟಲ್‌ ನಿಂದ ಬರುವ ಆದಾಯವನ್ನು ವಿದ್ಯಾರ್ಥಿ ವೇತನಕ್ಕೆ ಬಳಸಿಕೊಳ್ಳುತ್ತಿ ರುವುದು ‘ಬಡಿ4ಸ್ಟಡಿ’ಯ ಮತ್ತೊಂದು ವಿಶೇಷ.
www.buddy4study.com

Write A Comment