ಚಿತ್ರ:
ಕೃಷ್ಣ–ಲೀಲಾ
ತಾರಾಗಣ:
ಅಜೇಯ್ ರಾವ್, ಮಯೂರಿ, ರಂಗಾಯಣ ರಘು, ಅಚ್ಯುತ್ ಕುಮಾರ್, ಧರ್ಮೇಂದ್ರ ಅರಸ್, ತಬಲಾ ನಾಣಿ, ಸಿಂಧು ಲೋಕನಾಥ್, ಮತ್ತಿತರರು
ನಿರ್ದೇಶನ:
ಶಶಾಂಕ್
ನಿರ್ಮಾಪಕರು:
ಅಜೇಯ್ ರಾವ್
2010ರಲ್ಲಿ ವಾಹಿನಿಯೊಂದರಲ್ಲಿ ಪ್ರಸಾರವಾದ ಸುದ್ದಿಯ ಸ್ಫೂರ್ತಿಯ ಸಿನಿಮಾ ‘ಕೃಷ್ಣ–ಲೀಲಾ’. ಮೊಬೈಲ್ ಮಿಸ್ಡ್ ಕಾಲ್ ಸುತ್ತ ಸರಳ, ಸಾಮಾನ್ಯ ಕೌಟುಂಬಿಕ ಕಥೆ ಇದೆ. ಹೊಡೆದಾಟ–ಬಡಿದಾಟ, ಅಬ್ಬರದ ಸ್ಪರ್ಶದ ಲೇಪನದ ಸೂತ್ರಕ್ಕೆ ವಿರುದ್ಧವಾಗಿ ಈ ಕಥೆಯನ್ನು ನಿರೂಪಿಸಿದ್ದಾರೆ ನಿರ್ದೇಶಕ ಶಶಾಂಕ್. ಮಧ್ಯಮ ವರ್ಗದ ಹುಡುಗನೊಬ್ಬನ ಬದುಕಿನ ಹೋರಾಟ ಸಿನಿಮಾ ಕೂಡ ಆಗಿರುವ ಇದರಲ್ಲಿ ಭಾವ ತೀವ್ರವಾದಾಗ, ಮುದದ ಸಂಭಾಷಣೆ ಮೂಡಿ ರಿಲೀಫ್ ಎನ್ನಿಸುತ್ತದೆ. ಮೊಬೈಲ್ ಬಳಕೆಯ ಒಳಿತು–ಕೆಡಕುಗಳನ್ನೂ ಪ್ರೇಕ್ಷಕನಿಗೆ ಸರಳವಾಗಿ ದಾಟಿಸುತ್ತದೆ.
ಕೃಷ್ಣ ಮತ್ತು ಲೀಲಾ ಮಧ್ಯಮ ವರ್ಗದ ಕುಡಿಗಳು. ಸದಾ ಸಿಡುಕುವ, ಕೆಟ್ಟ ಬೈಗುಳ ಆಡುವ ಅಪ್ಪ, ನಿಸ್ಸಹಾಯಕ ತಾಯಿ– ಇದು ಲೀಲಾ ಮನೆಯ ವಾತಾವರಣ. ಅಪ್ಪ ಕುಡುಕನಾದ ಕಾರಣಕ್ಕೆ ಚಿಕ್ಕ ವಯಸ್ಸಿನಲ್ಲಿಯೇ ದುಡಿಮೆಗೆ ಒಡ್ಡಿಕೊಳ್ಳಬೇಕಾದ ಕೃಷ್ಣನದ್ದು ಇನ್ನೊಂದು ರೀತಿಯ ಹಿನ್ನೆಲೆ. ಈ ಕೌಟುಂಬಿಕ ವಾತಾವರಣಗಳು ನಮ್ಮ ಸುತ್ತಲಿನ ಪರಿಸರದಲ್ಲಿವೆ. ಇಂಥ ಪೋಷಕರ ನಡತೆ ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನೂ ‘ಕೃಷ್ಣ–ಲೀಲಾ’ ಸೂಕ್ಷ್ಮವಾಗಿ ಅಭಿವ್ಯಕ್ತಿಸುತ್ತದೆ.
ಮೊಬೈಲ್ ಕರೆ ಮತ್ತು ತಪ್ಪಿದ ಕರೆಯೇ ಚಿತ್ರದ ಪ್ರಮುಖ ಎಳೆ. ನಿತ್ಯ ‘ಮೊಬೈಲ್ ಮಹಾತ್ಮೆ’ಯಿಂದ ನಮ್ಮ ನೆರೆಹೊರೆಯವರಲ್ಲಿ ಹಲವು ಹೃದಯಗಳು ರಿಂಗಣಿಸುತ್ತವೆ. ಮಿಸ್ಡ್ ಕಾಲ್‌ನಲ್ಲಿ ಪರಿಚಿತವಾಗುವ ಕೃಷ್ಣ–ಲೀಲಾ ಪ್ರೀತಿಸುವರೇ, ಮದುವೆಯಾಗುತ್ತಾರೆಯೇ, ಅವರ ಬದುಕು ಹೇಗೆ ಸಾಗುತ್ತದೆ ಎನ್ನುವ ಸರಳ ರೇಖೆಯ ಮೇಲೆ ಎಚ್ಚರಿಕೆಯಿಂದ ಸಿನಿಮಾವನ್ನು ಸಾಗಿಸಿದ್ದಾರೆ ನಿರ್ದೇಶಕರು. ‘ಮಾತಾಡ್ರೋ ಮಾತಾಡ್ರಿ… ಫೋನ್ ಇಲ್ದೆ ಇದ್ರೆ ಓಡಲ್ಲ ಬ್ರೈನು’ ಎನ್ನುವ ಸಾಹಿತ್ಯ ಸಿನಿಮಾದ ತಿರುಳನ್ನು ತೋರುವ ಜತೆಗೆ ‘ಮೊಬೈಲ್ ಮಹಾತ್ಮೆ’ಯನ್ನು ಪರಿಚಯಿಸುತ್ತದೆ. ಮೊದಲಾರ್ಧಕ್ಕಿಂತ ದ್ವಿತೀಯಾರ್ಧದ ಕಥೆ ಬಿಗಿಯಾಗಿದೆ.
ಸನ್ನಿವೇಶ ಮತ್ತು ಮನಸ್ಥಿತಿಗಳನ್ನೇ ಆದಷ್ಟು ಖಳನಾಯಕನನ್ನಾಗಿಸುವ ನಿರ್ದೇಶಕರ ಪ್ರಯತ್ನವನ್ನು ಮೆಚ್ಚಬೇಕು. ಸುದ್ದಿಮನೆಯಿಂದ ಹೊರ ಬರುವ ಬ್ರೇಕಿಂಗ್ ನ್ಯೂಸ್ ಮತ್ತೊಬ್ಬರ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದನ್ನೂ ‘ಕೃಷ್ಣ–ಲೀಲಾ’ ತೋರುತ್ತದೆ.
ಅಭಿನಯದಲ್ಲಿ ಅಜೇಯ್ ರಾವ್ ಇಷ್ಟವಾಗುತ್ತಾರೆ, ಚಿತ್ರವನ್ನು ಅವರು ಆವರಿಸಿಕೊಂಡಿದ್ದಾರೆ. ಮಧ್ಯಾಂತರಕ್ಕೆ ಮುನ್ನ ನಾಯಕಿ ಮಯೂರಿಗೆ ಹೆಚ್ಚಿನ ಸ್ಥಾನವಿಲ್ಲ. ದ್ವಿತೀಯಾರ್ಥದಲ್ಲಿ ತಮ್ಮ ಪಾತ್ರದ ಚೌಕಟ್ಟಿಗೆ ಅವರು ಅರ್ಥ ತುಂಬಿದ್ದಾರೆ. ಧರ್ಮೇಂದ್ರ ಅರಸ್, ಅಚ್ಯುತ್ ಕುಮಾರ್, ರಂಗಾಯಣ ರಘು ಪಾತ್ರಗಳು ಚೆನ್ನಾಗಿವೆ. ಕೆಲವು ಪಾತ್ರಗಳು ನಮ್ಮ ನಡುವಿನ ವ್ಯಕ್ತಿತ್ವಗಳಂತೆಯೇ ಕಾಣಿಸಿರುವುದು ಸಿನಿಮಾದ ಹೆಚ್ಚುಗಾರಿಕೆ.