ಮನೋರಂಜನೆ

ನವನವೀನ ಗಾನ: ಬಾಲ್ಯದ ನೆನಪೇ ಸಿಹಿ

Pinterest LinkedIn Tumblr

21Dance

ರಸ್ತೆಯಂಚಿನಲ್ಲಿ ತನ್ನ ಪಾಡಿಗೆ ತಾನಿದ್ದ ಮರವೊಂದರ ಎತ್ತರದ ರೆಂಬೆಗಳು ವಿದ್ಯುತ್ ತಂತಿಗಳಿಗೆ ತಾಗುವುದೆಂದು ವಿದ್ಯುತ್ ಇಲಾಖೆಯವರು ಅಡ್ಡಾದಿಡ್ಡಿ ಕಡಿದು, ಗಾಯಗೊಳಿಸಿದ್ದಾರೆ. ರಸ್ತೆ ಡಿವೈಡರ್‌ನಲ್ಲಿ ಹಾಕಿದ್ದ ಅಲಂಕಾರಿಕ ಗಿಡಗಳ ಜೊತೆ ತಾನಾಗಿಯೇ ಹುಟ್ಟಿಬೆಳೆದು, ಎತ್ತರವಾಗಿದ್ದ ಗಿಡದ ಕೊಂಬೆಗಳು ಅಕ್ಕಪಕ್ಕದ ವಾಹನಗಳಿಗೆ ತಗುಲುತ್ತದೆಯೆಂದು ಮಹಾನಗರ ಪಾಲಿಕೆಯವರು ಕರಕರನೆ ಕತ್ತರಿಸಿ ಹಾಕಿದ್ದಾರೆ. ಉದ್ಯಾನವೊಂದರ ಹೊರ ಮೂಲೆಯಲ್ಲಿರುವ ಚಿಕ್ಕ ಮರವೊಂದರ ಬುಡದಲ್ಲಿ ಇದ್ದಬಿದ್ದ ಎಲೆ, ಪುರುಲೆ ಸೇರಿಸಿ ಆಗಾಗ ಬೆಂಕಿಹಾಕಿದ್ದರಿಂದ ಮರದ ಬೊಡ್ಡೆ ಸುಟ್ಟುಕರಕಲಾಗಿದೆ. ಬಾಲ್ಕನಿಯಲ್ಲಿಟ್ಟ ಕುಂಡದಲ್ಲಿ ಅಡ್ಡಾದಿಡ್ಡಿ ಬೆಳೆದಿದ್ದ ಶಂಖಪುಷ್ಪದ ಬಳ್ಳಿಗೆ ಕತ್ತರಿಯಾಡಿಸಿ, ಬಾಬ್‌ಕಟ್ ಮಾಡಿದ್ದೇನೆ.

ಇದೆಲ್ಲ ಒಂದೆರಡು ತಿಂಗಳ ಹಿಂದಿನ ದೃಶ್ಯ… ಇಂದು ನೋಡಿದರೆ ರಸ್ತೆಯಂಚಿನ ಮರ ಎಲೆ ಕಾಣದಂತೆ ಹೂ ಹೊದ್ದುನಿಂತು, ಹಳದಿ ತೇರಾಗಿದೆ. ರಸ್ತೆ ಡಿವೈಡರ್‌ನಲ್ಲಿದ್ದ ಗಿಡ ಅಕ್ಕಪಕ್ಕ ರೆಂಬೆಯ ಹಂಗಿಲ್ಲದೆ, ಚೂಪಗೆ ನಿಂತು, ತುದಿಯಲ್ಲಿ ನೇರಳೆ ಹೂವರಳಿಸಿದೆ. ಬೊಡ್ಡೆ ಸುಟ್ಟುಕರಕಲಾದ ಮರವೂ ಹಚ್ಚಹಸಿರಾಗಿ, ಬುಡದಲ್ಲಿ ಬೆಂಕಿ ಹಾಕಿದವರಿಗೆ ನೆರಳಾಗುವಂತೆ ನಿಂತಿದೆ. ಬಾಲ್ಕನಿಯಲ್ಲಿದ್ದ ಶಂಖಪುಷ್ಪದ ಬಳ್ಳಿ ಮೇಲಿನ ಟೆರೇಸ್‌ನಿಂದ ಇಳಿಬಿದ್ದಿದ್ದ ದೂರವಾಣಿ ಕೇಬಲ್‌ ವೈರನ್ನು ಸುತ್ತಿಕೊಂಡು, ಅದನ್ನು ಎಲೆಗಳಿಂದ ಮುಚ್ಚಿ, ಮೇಲೆ ನೀಲಿ ಹೂವರಳಿಸಿ ಅರುಣೋದಯಕ್ಕೆ ಮುತ್ತಿಡುವಂತೆ ನಿಂತಿದೆ. ಇವೆಲ್ಲ  ವಸಂತಾಗಮನದ ನಿರೀಕ್ಷೆಯಲ್ಲಿ ನಿಸರ್ಗ  ಬಿಡಿಸಿದ ರಂಗೋಲಿ ಮಾತ್ರವಲ್ಲ… ‘ನೀವು ಯಾರು ಏನೇ ಮಾಡಿ, ಎಷ್ಟೇ ಗಾಯಗೊಳಿಸಿ, ಕಡಿದುಕೊಚ್ಚಿ ನನ್ನನ್ನು, ಚಿಗುರುವುದು ನನ್ನ ಸಹಜಸ್ವಭಾವ… ಕಸಿಯಲಾರಿರಿ ನೀವು ಈ ನನ್ನ ಹುಟ್ಟು ಗುಣ… ಕುಂದಿಸಲಾರಿರಿ ನೀವು ಚಿಗುರುವ ಚೈತನ್ಯವನ್ನು ಎಂಬ ಮರಗಿಡಗಳ ಮೂಲಮಂತ್ರದ ಸಾಲುಗಳೂ ಕೂಡ ಹೌದು. ಅರೆ… ಹೌದಲ್ಲ… ಎಷ್ಟೆಲ್ಲ ಹೊಡೆತ, ಕಡಿತಗಳಿಗೆ ಪಕ್ಕಾಗಿಯೂ, ಹೀಗೆ ಮತ್ತೆ ಚಿಗುರುವುದು ಎಂದರೆ ಮರಗಿಡ ಎಷ್ಟು ಆಳದ ಸಕಾರಾತ್ಮಕ ಭಾವನೆಯಲ್ಲಿ ಬೇರೂರಿವೆ ಅಲ್ಲವೇ? ಯಾವುದೇ ಹೈಟೆಕ್ ಸ್ವಾಮಿಗಳ, ವ್ಯಕ್ತಿತ್ವ ವಿಕಸನ ಗುರುಗಳ ಉಪನ್ಯಾಸಕ್ಕೆ ಕಿವಿಯೊಡ್ಡದ ಮರಗಿಡಗಳಿಗೆ ಈ ಸಕಾರಾತ್ಮಕ ನಿಲುವಿನ ಪಾಠ ಹೇಳಿದವರಾರಂತೆ?

ನಿಜವೆಂದರೆ ಮನುಷ್ಯನನ್ನು ಹೊರತುಪಡಿಸಿ ನಿಸರ್ಗದ ಬೇರೆಲ್ಲ ಜೀವಿಗಳು ಪ್ರಾಣಿ, ಪಕ್ಷಿಗಳು, ಸಸ್ಯಸಂಕುಲ ಎಲ್ಲವೂ ತಮ್ಮ ಪಾಡಿಗೆ ತಾವು ಇರುತ್ತ, ಯಾವುದರ ಕುರಿತೂ ನಕಾರಾತ್ಮಕ ಧೋರಣೆಯನ್ನೇ ತಳೆಯದೆ ಬದುಕುತ್ತವೆ. ಪ್ರಾಣಿ, ಪಕ್ಷಿಗಳು ಸೇಡಿನ ಮನೋಭಾವ ತೋರುವುದಾದರೂ ಅದು ತನ್ನ ಮತ್ತು ತನ್ನ ಸಂತತಿಯ ಜೀವ ರಕ್ಷಣೆಗೆಮಾತ್ರ ಸೀಮಿತ. ವಿಕಾಸದ ಏಣಿಯ ತುದಿಮೆಟ್ಟಲಿನ ಮೇಲೆ ನಿಂತು, ಇದೀಗ ಮಂಗಳ, ಚಂದ್ರನಂಗಳಕ್ಕೆ ಲಗ್ಗೆ ಹಾಕಿದ ನಮಗೆ ನಕಾರಾತ್ಮಕ ಮನೋಭಾವವನ್ನು ಮೊಳಕೆಯಲ್ಲಿಯೇ ಚಿವುಟಲು ಸಾಧ್ಯವಾಗುತ್ತಿಲ್ಲ ಯಾಕೆ? ಒಮ್ಮೆ ಮನಸ್ಸಿನ ಕಣ್ಣು ತೆರೆದು ಸುತ್ತ ನೋಡಿದರೆ ನಿಸರ್ಗ ತನ್ನ ಪಠ್ಯಪುಸ್ತಕ ಹರವಿಟ್ಟಿದ್ದು ಕಾಣತೊಡಗುತ್ತದೆ. ಒಂದೊಂದು ಪಾಠವೂ, ಪಾಠದ ಒಂದೊಂದು ಸಾಲೂ ಹೊಸತಾಗಿ ಚಿಗಿಯುವ ಕಲೆಯನ್ನು, ಸಕಾರಾತ್ಮಕವಾಗಿ ಬದಲಾಗುತ್ತ ಸಾಗಬೇಕೆಂಬುದನ್ನು ಕಲಿಸುತ್ತದೆ. ನಮಗೆ ಹಾಗೆ ಕಾಣುವ, ಕಲಿಯುವ ವ್ಯವಧಾನ ಬೇಕಷ್ಟೆ.  ಪ್ರತಿ ಬೆಳಗೂ ಬರುವವ ಅದೇ ಸೂರ್ಯನಾದರೂ ಮೂಡಣದಲ್ಲಿ ಮೋಡಗಳ ಅಂಚಿನಲ್ಲಿ ತೆರೆದುಕೊಳ್ಳುವ ಕೆಂಪುಚಿತ್ತಾರ ಪ್ರತಿದಿನವೂ ಹೊಸತೇ… ಪ್ರತೀ ಹುಣ್ಣಿಮೆಯೂ ಮೂಡುವವ ಅದೇ ಚಂದಿರನಾದರೂ ಭುವಿಗಿಳಿದ ಬೆಳದಿಂಗಳ ತಂಪಿಗೆ ಏನೋ ಹೊಸ ಗಂಧ… ಪ್ರತೀ ಅಮವಾಸ್ಯೆಗೂ ಅವೇ ನಕ್ಷತ್ರಗಳೇ ಆಗಸದಲ್ಲಿ ಕಣ್ಣುಮಿಟುಕಿಸಿದರೂ ಮಂತ್ರಮಾಯಕದಲ್ಲಿ ಸೆಳೆಯುವುದು ಮಾತ್ರ ಬೇರೆಯದೇ ನಿಶ್ಯಬ್ದರಾತ್ರಿ…

ಪ್ರತೀ ವಸಂತವೂ ಅದೇ ಚಿಗುರು, ಅದೇ ಹೂಹಣ್ಣು ಹೊತ್ತು ಬಂದರೂ, ನವಪಲ್ಲವದ ಕುಂಚದಲ್ಲಿ ತೆರೆದುಕೊಳ್ಳುವುದು ಪ್ರತೀ ಸಲವೂ ಹೊಸ ಚಿತ್ರಿಕೆಯೇ. ನದಿಯಲ್ಲಿ ಪ್ರತಿದಿನ ನೀರು ಹರಿಯುತ್ತಿದ್ದರೂ, ಪ್ರತಿಕ್ಷಣ ಹರಿಯುವ ನೀರು ಹೊಸತೇ. ಎಲ್ಲವೂ ನಿನ್ನೆಯಂತೆಯೇ ಇವೆ ಎಂದು ನಮಗನ್ನಿಸುವ ಇಂದಿನ ಕ್ಷಣಗಳಿಗೆ ನಿಸರ್ಗ ಎಲ್ಲಿಯಾದರೂ, ಏನಾದರೂ ಒಂದಿಷ್ಟು ಹೊಸತನದ ರಂಗು ಬಳಿದಿರುತ್ತದೆ, ಏನೋ ಒಂದಿಷ್ಟು ಗುಣಾತ್ಮಕ ಬದಲಾವಣೆ ಇದ್ದೇ ಇರುತ್ತದೆ.  ಈ ಹೊಸತನ, ಈ ಜೀವ ಚೈತನ್ಯ ನಮ್ಮೊಳಗೂ ಒಂದು ಸಕಾರಾತ್ಮಕ ಬದಲಾವಣೆಯ ಕಿಡಿ ಹೊತ್ತಿಸಬೇಕಲ್ಲವೇ?

ಬದಲಾವಣೆ ಜಗದ ನಿಯಮ, ಪ್ರಕೃತಿ ಗಡಿಯಾರದಲ್ಲಿ ಕ್ಷಣದ ಮುಳ್ಳು ಬದಲಾಗುತ್ತಲೇ ಇರುತ್ತದೆ. ಬದಲಾಗಲಾರೆ, ಇದ್ದಂತೆಯೇ ಇರುತ್ತೇನೆ ಎಂದು ಪ್ರಕೃತಿ ಎಂದಾದರೂ ಹಟ ತೊಟ್ಟಿದ್ದುಂಟೇ? ಬೇಸಿಗೆ ಹೋಗಿ ಮಳೆಗಾಲ, ಮಳೆಗಾಲದ ನಂತರ ಚಳಿಗಾಲ, ಮತ್ತೆ ಬೇಸಿಗೆ, ಹೀಗೆ ಯಾವುದೇ ಋತುವಿರಲಿ… ಎಲ್ಲ ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತಲೇ, ‘ನವ ನವೋನ್ಮೇಷ ಶಾಲಿನಿ’ಯಾಗಿ ಪ್ರಕೃತಿಯು ದೈನಂದಿನ ವ್ಯವಹಾರದಲ್ಲಿಯೇ ಯಾವುದೋ ಅಗೋಚರ ಹೊಸ ರಾಗದ ಹುಡುಕಾಟಕ್ಕೆ ಸಜ್ಜಾಗಿರುತ್ತದೆ. ಮಾನವನ ಅತಿಕ್ರಮಣದಿಂದಾಗಿ ನಲುಗಿರುವ ಪ್ರಕೃತಿ ಆಗೀಗ ಮುನಿಸಿಕೊಂಡರೂ, ಮತ್ತೆ ಹಸಿರಾಗಿ ನಮ್ಮನ್ನು ಪೊರೆಯುವುದನ್ನು ಬಿಟ್ಟಿಲ್ಲ. ಮರಗಿಡಗಳು ಎಲೆಯುದುರಿಸಿದಂತೆ ಹಳೆಯದರ ತೊಟ್ಟುಕಳಚಿಕೊಂಡು, ಹೊಸ ಆಲೋಚನೆಗಳನ್ನು ಚಿಗುರಿಸುತ್ತ, ಆಗಸಚುಂಬಿಸುವ ಆಶಯ ನಮ್ಮದಾಗಿರಬೇಕು, ಕಾಲು ಮಾತ್ರ ಸ್ವಂತಿಕೆಯ ನೆಲದಲ್ಲಿ ಬೇರೂರಿರಬೇಕಷ್ಟೆ.

ಸುತ್ತಲಿನವರಲ್ಲಿ ತಪ್ಪು ಹುಡುಕಿ ಬೆರಳು ತೋರುವಾಗ ಅರೆ, ಮಡಚಿದ ನಾಲ್ಕು ಬೆರಳು ನನ್ನತ್ತಲೇ ಇದೆಯಲ್ಲ ಎಂಬುದು ಅರಿವಾದರೆ ತಪ್ಪು ಹುಡುಕುವುದು ಬಿಟ್ಟು, ಮೆಚ್ಚುವ ಅಂಶಗಳನ್ನು ಹೆಕ್ಕಿ ಹೇಳಬಹುದು. ಜಗತ್ತೇ ಹೀಗೆ, ಈ ಜನರೆಲ್ಲ ಇಂಥವರೇ ಎಂದು ರೂಢಮಾದರಿಯ ಚಿಂತನೆಯಲ್ಲಿ, ಎಲ್ಲೆಲ್ಲೂ ನಕಾರಾತ್ಮಕ ಅಂಶಗಳನ್ನೆ ಕಾಣುವ ಬದಲಿಗೆ ಕಣ್ಣಿಗೆ ಧನಾತ್ಮಕತೆಯ ತಂಪುಕನ್ನಡಕ ಏರಿಸಿದರೆ ಜಗತ್ತೂ ಸುಂದರವೆನ್ನಿಸುತ್ತದೆ, ನಮ್ಮ ಬದುಕೂ ಸಹನೀಯವಾಗುತ್ತದೆ. ಯಾರೋ ನಮ್ಮನ್ನು ಅವಮಾನಿಸಿದರೆಂದು, ಟೀಕಿಸಿದರೆಂದು, ನಮ್ಮ ಕುಂದುಕೊರತೆಗಳ ಪಟ್ಟಿಯನ್ನು ಕಣ್ಣೆದುರು ಹಿಡಿದರೆಂದು, ಋಣಾತ್ಮಕವಾಗಿ ಯೋಚಿಸುತ್ತ ಕುಸಿಯುವ ಬದಲು, ಛಲದ ಚಿಗುರನ್ನು ಹೊದ್ದು, ಸಾಧನೆಯ ಹೂವರಳಿಸುವುದು ನಮ್ಮ ಅಂಗೈಯಲ್ಲಿಯೇ ಇದೆ. ಒಮ್ಮೆ ನಮ್ಮೊಳಗೆ ಸಕಾರಾತ್ಮಕ ಮನೋಧರ್ಮ ಬೇರೂರಿದರೆ, ಮೈಮನಸ್ಸು ಕೂಡ ಯುವಚೈತನ್ಯದಿಂದ ನಸುನಗುತ್ತದೆ. ಕೊಳದಲ್ಲಿ ಎದ್ದ ಒಂದು ಅಲೆ ಹತ್ತಾರು ಅಲೆಗಳನ್ನು ಹುಟ್ಟುಹಾಕುವಂತೆ ಒಂದು ಸಕಾರಾತ್ಮಕ ನಿಲುವು ಹತ್ತಾರು ಗುಣಾತ್ಮಕ ಬದಲಾವಣೆಗಳನ್ನು ಸುತ್ತ ಹರಡುತ್ತದೆ.

ನಮ್ಮ ‘ವಾಸ್ತವ’ವನ್ನು ಬದಲಿಸಲು ನಮಗೆ ಸಾಧ್ಯವಾಗದಿರಬಹುದು, ಆದರೆ ವಾಸ್ತವವನ್ನು ಕಾಣುವ ‘ದೃಷ್ಟಿಕೋನ’ ಬದಲಿಸಬಹುದಲ್ಲವೇ? ನಿನ್ನೆಗಳು ನಮ್ಮ ಕೈಜಾರಿವೆ, ನಾಳೆಗಳು ನಮ್ಮ ಕೈಯಲ್ಲಿಲ್ಲ, ಆದರೆ ನಮ್ಮ ‘ಇವತ್ತಿಗೆ’ ಒಂದಿಷ್ಟು ರಂಗು ತುಂಬುವ ಕುಂಚ ನಮ್ಮ ಬೆರಳಲ್ಲಿಯೇ ಇದೆ. ಹಾಗಿದ್ದಾಗ ಬೂದು ಬಣ್ಣ ತುಂಬುವುದೇಕೆ? ಒಂದಿಷ್ಟು ಹಸಿರು, ಒಂದಿಷ್ಟು ನೀಲಿ, ಗುಲಾಬಿ ಇನ್ನಿತರ ಬಣ್ಣಗಳ ರಂಗನ್ನು ಇವತ್ತಿನ ದಿನಕ್ಕೆ ಬಳಿಯಬಹುದಲ್ಲವೇ… ಎಲ್ಲದಕ್ಕೆ ಋಣಾತ್ಮಕ ಚೌಕಟ್ಟು ಹಾಕುವುದು ಬಿಟ್ಟು, ಸಕಾರಾತ್ಮಕ ಚೌಕಟ್ಟಿನಲ್ಲಿ ನೋಡತೊಡಗಿದರೆ, ಚೌಕಟ್ಟಿನೊಳಗಿನ ಚಿತ್ರಗಳಿಗೆ ಹೊಸದೇ ಅರ್ಥ ಹೊಳೆಯುತ್ತದೆ. ಬದುಕಿನಲ್ಲಿ ಮಾಡಿಕೊಳ್ಳುವ ಸಕಾರಾತ್ಮಕ ಬದಲಾವಣೆಗಳು ವರ್ತಮಾನ  ಸಹ್ಯವಾಗಿಸುತ್ತ, ನೆಮ್ಮದಿಯ ನಾಳೆಗಳನ್ನು ತೆರೆಯುತ್ತದೆ.

ಯುಗಾದಿ ಎಂದರೆ ನವಪಲ್ಲವದ ಚಿತ್ತಾರ, ಬೇಸಿಗೆಯ ಬೆವರಿನೊಂದಿಗೆ ಬೆರೆತ ಮಾವು ಬೇವುಗಳ ಕಂಪು,  ಕೋಗಿಲೆಯ ಆಲಾಪ, ವಸಂತದ ಲಾಸ್ಯ ಮತ್ತು ಬೇಂದ್ರೆಯವರ ಚಿರನೂತನ ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ ಎಂಬ ಗಾನ. ಆದರೆ ಯುಗಾದಿ ಎಂದರೆ ಇಷ್ಟೇ ಆಗದಿರಲಿ, ನವವಸಂತ ಋತುವಿನಲ್ಲಿ ಎಲ್ಲೆಡೆ ಎದ್ದುಕಾಣುವ ಹೊಸತನ ನಮ್ಮೊಳಗೆ ಒಂದು ಸಕಾರರಾತ್ಮಕ ಬದಲಾವಣೆಯನ್ನೂ ಮೂಡಿಸಲಿ. ಬದುಕೆಂದರೆ ಬರಿಯ ಕಳೆಯುವ ಲೆಕ್ಕವಾಗದಿರಲಿ; ಮನಸ್ಸುಗಳನ್ನು, ಭಾವನೆಗಳನ್ನು ಕೂಡಿಸುವ ಲೆಕ್ಕವಾಗಲಿ; ಸುತ್ತಲಿನ ಸಮಾಜದಿಂದ, ಬದುಕಿನಿಂದ ಪಡೆದಿದ್ದನ್ನು ಗುಣಿಸುವ ಲೆಕ್ಕವಾಗಲಿ, ನಮ್ಮಲ್ಲಿರುವುದನ್ನು ಸುತ್ತ  ಇದ್ದವರಿಗೆ ಹಂಚುವ ಭಾಗಾಕಾರದ ಲೆಕ್ಕವಾಗಲಿ. ಜಯನಾಮ ಸಂವತ್ಸರವನ್ನು ಕಳಿಸಿ, ಮನ್ಮಥನಾಮ ಸಂವತ್ಸರವನ್ನು ಒಂದಿಷ್ಟು ರಮ್ಯತೆಯಿಂದಲೇ ಎದುರುಗೊಳ್ಳೋಣ!

‘ಸುರೀಲಿ’ ಬೆಲ್ಲ
ನನಗೆ ಕಹಿ ಘಟನೆಗಳೇ ನೆನಪಾಗುತ್ತಿಲ್ಲ. ಆದರೆ ಸಿಹಿ ಘಟನೆ ಹೇಳಬಹುದು. ಬಹಳ ವರ್ಷಗಳ ನಂತರ ಮಗಳು ಹುಟ್ಟಿದ್ದು ಸಿಹಿ ಘಟನೆಯಾಗಿದೆ. ಅವಳಿಗೆ ಸುರೀಲಿ ಅಂಥ ಹೆಸರಿಟ್ಟಿದ್ದೇವೆ. ಮಗ ಷಡ್ಜನಿಗೆ 12 ವರ್ಷ. ದೇವರ ದಯೆಯಿಂದ ಹೇಳಿಕೊಳ್ಳುವಂಥ ಕೆಟ್ಟ ಘಟನೆ ನಡೆದಿಲ್ಲ. ಆದರೆ ನನಗೆ ದಿನನಿತ್ಯ ಪತ್ರಿಕೆ, ಟೀವಿಗಳಲ್ಲಿ ಬರುವ ಅತ್ಯಾಚಾರ ಸುದ್ದಿಗಳು ಕಹಿ ಎನಿಸುವ ಘಟನೆಗಳು. ಉದಾಹರಣೆಗೆ ಐಎಎಸ್‌ ಅಧಿಕಾರಿ ರವಿ ಅವರ ಘಟನೆ ಹೇಳಬೇಕೆನಿಸುತ್ತದೆ. ಇಂಥ ಸುದ್ದಿಗಳು ಎಲ್ಲರ ಜೀವನದಲ್ಲೂ ಕಹಿ ಉಂಟು ಮಾಡುವಂಥದ್ದು. ಆದ್ದರಿಂದ ಈ ಬಾರಿಯ ಯುಗಾದಿಯಿಂದ ಕಹಿ ಘಟನೆಗಳು ಕಡಿಮೆಯಾಗಿ ಎಲ್ಲ ಸಿಹಿಸುದ್ದಿಗಳೇ ಇರಲಿ.
– ಪ್ರವೀಣ್‌ ಗೋಡ್ಖಿಂಡಿ, ಬಾನ್ಸುರಿ ವಾದಕ

ಕಹಿ ಯಾಕ್ರೀ ನೆನಪಿಸಿಕೊಳ್ಳಬೇಕು..
ಬದುಕಿನಲ್ಲಿ ಇಂದು ನಮಗೆ ಕಹಿ ಘಟನೆ ಅನ್ನಿಸಿದ್ದು, ಸ್ವಲ್ಪ ದಿನಗಳ ನಂತರ ಸಿಹಿ ಘಟನೆಯಾಗಬಹುದು. ಬೇವು–ಬೆಲ್ಲ ಎರಡನ್ನೂ ಸಮನಾಗಿ ತಿನ್ನುವಂತೆ ಸಿಹಿ ಕಹಿ ಎರಡೂ ಘಟನೆಗಳನ್ನು ಸಮಾನವಾಗಿ ಸ್ವೀಕರಿಸಬೇಕು. ನನಗೆ ಬಹಳ ಸಂತೋಷ ಹಾಗೂ ಸಿಹಿಯಾದ ಘಟನೆ ಎಂದರೆ ತಂಗಿಗೆ ಮಗು ಆಗಿದ್ದು. ಅದೂ ಯಾವುತ್ತೂ ಮರೆಯದ ಸಿಹಿ ನೆನಪು. ಹಬ್ಬದ ಸಂದರ್ಭದಲ್ಲಿ ಸಣ್ಣಪುಟ್ಟ ಕಹಿ ಘಟನೆಗಳನ್ನು ನೆನಪು ಮಾಡಿಕೊಳ್ಳದೇ ಒಳ್ಳೆಯದನ್ನೇ ಬಯಸೋಣ.
– ಯಶ್‌, ನಟ

ಬಾಲ್ಯದ ನೆನಪೇ ಸಿಹಿ
ಜೀವನದಲ್ಲಿ ಏರಿಳಿತ ಸಾಮಾನ್ಯ.   ನನ್ನ ಜೀವನದಲ್ಲಿ ಕಹಿ ಘಟನೆ ನಡೆದಿರುವುದು ತೀರಾ ಕಡಿಮೆ. ಕಾಲೇಜಿ ನಲ್ಲಿದ್ದಾಗ ಗಂಟಲು ಸಮಸ್ಯೆ ಯಿಂದ ಬಳಲುತ್ತಿದ್ದೆ. ಒಂದು ವರ್ಷ ಹಾಡುವುದಕ್ಕಿರಲ್ಲಿ ಸರಿಯಾಗಿ ಮಾತನಾಡಲೂ ಆಗುತ್ತಿರಲಿಲ್ಲ. ಇದರಿಂದ ಖಿನ್ನತೆಗೆ ಒಳ್ಳಾಗಾಗಿದ್ದೆ. ನನ್ನ ಕೆರಿಯರ್‌ ಮುಗಿದೇ ಹೋಯಿತು ಎಂದು ಪ್ರತಿದಿನ ಅಳುತ್ತಿದ್ದೆ. ಮನೋರೋಗ ಹಿಡಿದಂತೆ  ಸೊರಗಿ ಹೋಗಿದ್ದೆ. ಆದರೆ ನನ್ನ ಅದೃಷ್ಟ ಚೆನ್ನಾಗಿತ್ತು.  ಪರಿಚಯಸ್ಥರೊಬ್ಬರು   ಅವರಿಗೆ ತಿಳಿದ ಹೋಮಿಯೋಪಥಿ ವೈದ್ಯರ ಬಳಿ ಹೋಗುವಂತೆ ಸಲಹೆ ನೀಡಿದರು. ನಾಲ್ಕು ತಿಂಗಳು ಔಷಧಿ ಪಡೆದ ನಂತರ ದನಿ ಸರಿಯಾಯಿತು. ಪುನರ್ಜನ್ಮ  ದೊರಕಿದ ಅನುಭವಾಗಿತ್ತು.

ಆದರೆ ನನ್ನ ಜೀವನದಲ್ಲಿ ಬೇವಿಗಿಂತ ಬೆಲ್ಲವನ್ನೇ ಹೆಚ್ಚಾಗಿ ಸವಿದಿದ್ದೇನೆ. ಹೊಸನಗರ ತಾಲ್ಲೂಕಿನ ನಗರ ಸಮೀಪದ ಬಿದನೂರಿನಲ್ಲಿ ನಾನು ಬಾಲ್ಯ ಕಳೆದಿದ್ದು, ಅಲ್ಲಿಯ ನದಿ, ಹಸಿರು, ಬೆಟ್ಟ… ಅಬ್ಬಾ ಒಂದಾ ಎರಡಾ… ಆ ಪರಿಸರವನ್ನು ನೆನೆದರೆ ಈಗಲೂ ನಾನು ಪುಳಕಿತಳಾಗುತ್ತೇನೆ. ಇನ್ನು ವೃತ್ತಿಯಲ್ಲಿಯೂ ಕೂಡ ದಿಗ್ಗಜರ ಜತೆ ಹಾಡುವ ಅವಕಾಶ ದೊರಕಿದೆ. ಜತೆಗೆ ಒಳ್ಳೆಯ ಪತಿ, ಮಕ್ಕಳು ಇದ್ದಾರೆ. ದೇವರು ನನಗೆ ಎಲ್ಲವನ್ನೂ ಹಿತವಾಗಿ ಕೊಟ್ಟಿದ್ದಾನೆ.
– ಅರ್ಚನಾ ಉಡುಪ, ಗಾಯಕಿ

ಬೇವಿನಿಂದ ಬೆಲ್ಲ  ಉಂಡವನು
ನನ್ನ ಪಾಲಿಗೆ ಬೇವಿನ ಕಾಲವೇ ಬಹಳ ಸಿಹಿಯಾಗಿತ್ತು. ಕೆಲಸದ ಹಸಿವು, ಅದಕ್ಕಾಗಿ ಪಟ್ಟ ಪರದಾಟಗಳು ಹೆಚ್ಚು ಮಜಾ ಕೊಡುತ್ತವೆ. ಆ ಸಂದರ್ಭದಲ್ಲಿ ನಾನು ಪಡೆದ ಅನುಭವ ಬೇರೆ ಯಾವುದರಿಂದಲೂ ನನಗೆ ಸಿಕ್ಕಿಲ್ಲ.  ಬೇವು ಬದುಕಿನ ಪಾಠ ಕಲಿಸುತ್ತ ಹೋಯಿತು.

ಹೆಂಡತಿ ನನ್ನ ಜೀವನದಲ್ಲಿ ಪ್ರವೇಶ ಪಡೆದಿದ್ದು ಬೆಲ್ಲದ ಕ್ಷಣಗಳಲ್ಲಿ ಒಂದು. ಇದರ ಜತೆಗೆ ಕಾರಂತರ ಕೈಯಲ್ಲಿ ನಾನು ಪಳಗಿದ್ದು, ಅಮ್ಮನ ಮಮತೆ, ರಾಜ್ಯದ ಜನತೆಯ ಪ್ರೀತಿ ನನಗೆ ಬೆಲ್ಲದಂತಹ ಅನುಭವ ನೀಡಿದೆ.
– ಅರುಣ್‌ ಸಾಗರ್‌, ನಟ

ಅಪ್ಪನ ಸಾವು ಬೇವು
ನನ್ನ ಜೀವನದಲ್ಲಿ ಬಹಳಷ್ಟು ಸಿಹಿ ಘಟನೆಗಳು ನಡೆದಿವೆ. ಅವುಗಳಲ್ಲಿ ಹೇಳಲೇಬೇಕಾದ ಘಟನೆ ಎಂದರೆ ನಮ್ಮ ತಂದೆ ತೀರಿಕೊಂಡ ಸಮಯದಲ್ಲಿ ನನಗೆ ದಿಕ್ಕೇ ತೋಚದಂತಾಗಿತ್ತು. ಕಣ್ಣು ತುಂಬಾ ಆಸೆಗಳಿದ್ದವು. ಆಗ ದಾರಿದೀಪವಾಗಿ ಅಗ್ನಿ ಶ್ರೀಧರ್‌ ಮತ್ತು ಅವರ ಕುಟುಂಬ ಸಿಕ್ಕಿದ್ದು. ಅಂದಿನಿಂದ ಇಂದಿನವರೆಗೂ ಲತಾ ಶ್ರೀಧರ್‌ ಹಾಗೂ ಅಗ್ನಿಶ್ರೀಧರ್‌ ಅವರು ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಅದು ಬದುಕಿನ ತಿರುವೂ ಹೌದು. ಹಳ್ಳಿಯಿಂದ ಬಂದ ನಾನು ಅನೇಕ ಕಷ್ಟಗಳನ್ನು ಅನುಭವಿಸಿದ್ದೇನೆ. ನಾವು ನೋಡುವ ಸಮಾಜ ನಾವಂದುಕೊಂಡಂತೆ ಇರುವುದಿಲ್ಲ. ನಾವು ಒಂದು ಅರ್ಥದಲ್ಲಿ ಮಾತನಾಡಿದರೆ ಜನ ಬೇರೊಂದು ರೀತಿ ಅರ್ಥ ಮಾಡಿಕೊಂಡಿರುತ್ತಾರೆ. ನಾಗರಿಕ  ಸಮಾಜ ಹೆಣ್ಣನ್ನು ನಡೆಸಿಕೊಳ್ಳುವ ರೀತಿ ನೋವು ತಂದಿದೆ. ಕಹಿ ಘಟನೆ ಅನ್ನುವುದು ಆ ಕ್ಷಣದಲ್ಲಿ ಆಗುವಂಥದ್ದು. ಅಂಥ ಘಟನೆಗಳನ್ನು ಅಲ್ಲಿಯೇ ಬಿಡಬೇಕು ಅಷ್ಟೇ.
– ಸುಮನಾ ಕಿತ್ತೂರ್, ಸಿನಿಮಾ ನಿರ್ದೇಶಕಿ

ಕಹಿ ಅನುಭವವೇ ಹೆಚ್ಚು
ಸಿನಿಮಾ ಕ್ಷೇತ್ರಕ್ಕೆ ಬಂದ ನಂತರ ಬೇರೆ, ಬೇರೆ ಕಾರಣಗಳಿಗಾಗಿ ಸಾಕಷ್ಟು ಸಂಬಂಧಗಳನ್ನು ಕಡೆದುಕೊಂಡಿದ್ದೇನೆ. ಇದು ನನ್ನ ಜೀವನದ ಬೇವಿನ ಕ್ಷಣಗಳು. ಸಂಬಂಧಗಳು ಕಡಿದುಕೊಂಡರೂ ಅದರಿಂದ ಪಡೆದುಕೊಂಡಿರುವ ಅನುಭವಗಳು ನನಗೆ ಸಿಹಿಯನ್ನು ನೀಡಿವೆ. ಇಂತಹ ಘಟನೆಗಳೇ ನಮ್ಮನ್ನು ಪಕ್ವಗೊಳಿಸುತ್ತದೆ. ಇದರ ಜೊತೆಗೆ ಗುರುಪ್ರಸಾದ್‌ ಅವರ ಜತೆಗೆ ಅನಿಮೇಷನ್‌ ಸಿನಿಮಾ ಶೂಟ್‌ ಮಾಡಬೇಕಾದರೆ ಅವರು ನಿನ್ನಲ್ಲಿ ಹೀರೊ ಆಗುವ ಎಲ್ಲಾ ಲಕ್ಷಣಗಳು ಇವೆ. ಜಿಮ್‌ಗೆ ಹೋಗಿ ದೇಹವನ್ನು ಹುರಿಗೊಳಿಸಿಕೊಂಡು ಬಾ, ನಾನು ನಿನ್ನನ್ನು  ಸಿನಿಮಾ ಹೀರೊ ಮಾಡುತ್ತೇನೆ ಎಂದಿದ್ದರು. ಆ ಕ್ಷಣ ನನ್ನ ಸಿಹಿ ನೆನಪಿನ ಬತ್ತಳಿಕೆಯಲ್ಲಿ ಹಸಿರಾಗಿದೆ.
– ಧನಂಜಯ್‌, ನಟ

– ನಿರೂಪಣೆ: ರಮೇಶ ಕೆ, ವಿದ್ಯಾಶ್ರೀ ಎಸ್‌

Write A Comment