ಮನೋರಂಜನೆ

‘ಹರಿವು’ ಅತ್ಯುತ್ತಮ ಪ್ರಾದೇಶಿಕ ಚಿತ್ರ: ‘ನಾನು ಅವನಲ್ಲ ಅವಳು’ -ಅತ್ಯುತ್ತಮ ನಟ– ಸಂಚಾರಿ ವಿಜಯ್

Pinterest LinkedIn Tumblr

film-reelweb

ಚಿತ್ರ:  ‘ಹರಿವು’ (ಅತ್ಯುತ್ತಮ ಪ್ರಾದೇಶಿಕ ಚಿತ್ರ)
ನಿರ್ಮಾಪಕ: ಗಿರೀಶ್ ಗೌಡ
ನಿರ್ದೇಶಕ: ಮಂಸೋರೆ

‘ಪ್ರಜಾವಾಣಿ’ಯ ‘ಸಾಪ್ತಾಹಿಕ ಪುರವಣಿ’ಯಲ್ಲಿ ಪ್ರಕಟವಾದ ಡಾ. ಆಶಾ ಬೆನಕಪ್ಪ ಅವರ ‘ಅಂತಃಕರಣ’ ಅಂಕಣದಲ್ಲಿನ ನೈಜ ಘಟನೆಯೊಂದನ್ನು ಆಧರಿಸಿ ತಯಾರಿಸಿದ ಚಿತ್ರ ‘ಹರಿವು’. ಮನುಷ್ಯ ಸಂಬಂಧಗಳು ಕಾಲದ ಹರಿವಿನಲ್ಲಿ ಹೇಗೆ ವಿಕ್ಷಿಪ್ತಗೊಳ್ಳುತ್ತವೆ ಎಂಬುದನ್ನು ಎರಡು ಕಥನಗಳ ಮೂಲಕ ಹೇಳುವ ಪ್ರಯತ್ನ ಈ ಚಿತ್ರದಲ್ಲಿದೆ.

ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ಮಗನಿಗೆ ಚಿಕಿತ್ಸೆ ಕೊಡಿಸಲು ಜೀವನೋಪಾಯಕ್ಕೆ ಇದ್ದ ಹೊಲವನ್ನೇ ಮಾರಿ ನಗರಕ್ಕೆ ಬರುವ ಬಡ ರೈತ, ಆತನನ್ನು ಉಳಿಸಿಕೊಳ್ಳಲು ಹೆಣಗಾಡುವ ಪರಿ ಒಂದೆಡೆಯಾದರೆ, ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ತಂದೆಯನ್ನು ನಿರ್ಲಕ್ಷಿಸಿ ತನ್ನ ವೃತ್ತಿಗೇ ಆದ್ಯತೆ ನೀಡುವ ಪತ್ರಕರ್ತ ಇನ್ನೊಂದೆಡೆ. ಈ ಎರಡೂ ವಿಭಿನ್ನ ಮನಸ್ಥಿತಿಗಳು ಸಂಧಿಸುವ ಸನ್ನಿವೇಶದಲ್ಲಿ ದುರಂತವಿದ್ದರೂ, ಬದಲಾಗುವ ದೃಷ್ಟಿಕೋನದ ಸಕಾರಾತ್ಮಕ ಚಿತ್ರಣವೂ ಇದೆ.

ಚಿತ್ರ: ‘ನಾನು ಅವನಲ್ಲ ಅವಳು’ (ಅತ್ಯುತ್ತಮ ನಟ– ಸಂಚಾರಿ ವಿಜಯ್)
ನಿರ್ಮಾಪಕ: ರವಿ ಗರಣಿ
ನಿರ್ದೇಶಕ: ಬಿ.ಎಸ್‌.ಲಿಂಗದೇವರು
‘ನಾನು ಅವನಲ್ಲ, ಅವಳು’ ಚಿತ್ರ ಲೈಂಗಿಕ ಅಲ್ಪಸಂಖ್ಯಾತರ ಕುರಿತಾದದ್ದು. ಲೈಂಗಿಕ ಅಲ್ಪಸಂಖ್ಯಾತೆ ವಿದ್ಯಾ ಅವರ ಆತ್ಮಕಥನ ‘I am Vidya’ ಕೃತಿಯ ಸಿನಿಮಾ ರೂಪಾಂತರ. 150ಕ್ಕೂ ಅಧಿಕ ಲೈಂಗಿಕ ಅಲ್ಪಸಂಖ್ಯಾತರು ಚಿತ್ರದಲ್ಲಿ ನಟಿಸಿರುವುದು ವಿಶೇಷ.

ಹಳ್ಳಿ ಪ್ರತಿಭೆ…
ವಿಜಯ್, ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲ್ಲೂಕಿನ ಪಂಚನಹಳ್ಳಿ ಗ್ರಾಮದವರು. ಮಂಗಳಾ ಅವರು ನಡೆಸುತ್ತಿರುವ ‘ಸಂಚಾರಿ’ ರಂಗತಂಡದಲ್ಲಿ ಗುರುತಿಸಿಕೊಂಡ ಕಾರಣ ಅವರು ರಂಗಭೂಮಿಯಲ್ಲಿ ‘ಸಂಚಾರಿ’ ವಿಜಯ್ ಎಂದು ಪರಿಚಿತರಾದರು. ಕಂಪ್ಯೂಟರ್ ಸೈನ್ಸ್ ಪದವೀಧರರಾದ ವಿಜಯ್ ನಾಲ್ಕು ವರ್ಷಗಳ ಕಾಲ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದಾರೆ.

ನಟನೆಯ ತುಡಿತ ಪ್ರಬಲವಾಗುತ್ತಲೇ ಉಪನ್ಯಾಸಕ ವೃತ್ತಿಗೆ ರಾಜೀನಾಮೆ ನೀಡಿ ರಂಗಭೂಮಿಯಲ್ಲಿ ಸಕ್ರಿಯರಾದರು.  ವಿಜಯ್ ಮೊದಲು ಕ್ಯಾಮೆರಾ ಎದುರಿಸಿದ್ದು ‘ಕಾಮಿಡಿ ಕಿಲಾಡಿಗಳು’ ರಿಯಾಲಿಟಿ ಷೋದಲ್ಲಿ. ಚಂದನ ವಾಹಿನಿಯಲ್ಲಿ ‘ನಗುನಗುತಾ ನಲಿ’ ಮತ್ತು ‘ಹೊಸ ಬಾಳಿಗೆ ನೀ ಜೊತೆಯಾದೆ’ ಧಾರಾವಾಹಿಗಳು ಅಭಿನಯಕ್ಕೆ ವೇದಿಕೆ ಒದಗಿಸಿದವು.

‘ಪಂಚರಂಗಿ ಪೋಂ ಪೋಂ’, ‘ಪಾಂಡುರಂಗ ವಿಠಲ’, ‘ಪಾರ್ವತಿ ಪರಮೇಶ್ವರ’ ಮತ್ತಿತರ ಧಾರಾವಾಹಿಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡರು. ಹಿರಿತೆರೆಗೆ ಕಾಲಿಟ್ಟಾಗಲೂ ಅದೃಷ್ಟ ಖುಲಾಯಿಸಲಿಲ್ಲ. ಮೊದಲು ಬಣ್ಣಹಚ್ಚಿದ ‘ರಂಗಪ್ಪ ಹೋಗ್ಬಿಟ್ನಾ’ ಚಿತ್ರದಲ್ಲಿ. ‘ದಾಸ್ವಾಳ’ ಬೆಳ್ಳಿ ಪರದೆಯಲ್ಲಿ ಅವರನ್ನು ಗುರ್ತಿಸಿದ ಚಿತ್ರ. ‘ಒಗ್ಗರಣೆ’ ಚಿತ್ರದ ಪಾತ್ರ ಮೆಚ್ಚುಗೆ ಗಳಿಸಿತ್ತು. 25ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿರುವ ವಿಜಯ್, ಹಲವು ನಾಟಕಗಳನ್ನು ನಿರ್ದೇಶಿಸಿದ್ದಾರೆ.

ಈ ಸಮಯದಲ್ಲಿ ನನಗೆ ಖುಷಿ, ಉದ್ವೇಗ, ಆಶ್ಚರ್ಯವಾಗುತ್ತಿದೆ. ‘ನಾನು ಅವನಲ್ಲ ಅವಳು’ ಚಿತ್ರ ನೋಡಿದ ಕೆಲವು ಹಿರಿಯ ನಿರ್ದೇಶಕರು ‘ನಿಮಗೆ ಪ್ರಶಸ್ತಿ ಖಂಡಿತಾ ಸಿಗುತ್ತದೆ’ ಎಂದು ವಿಶ್ವಾಸದಿಂದ ಹೇಳಿದ್ದರು. ಆ ಮಾತು ನನ್ನಲ್ಲೂ ಒಂದು ಸಣ್ಣ ಮಟ್ಟದ ವಿಶ್ವಾಸ ಮತ್ತು ಆಶಾಭಾವವನ್ನು ಹುಟ್ಟಿಸಿತ್ತು. ಇದು  ಲೈಂಗಿಕ ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಚಿತ್ರ. ಆರಂಭದಲ್ಲಿ ನಟನೆ ಕಷ್ಟ ಎನಿಸಿತು. ಅದು ನನ್ನದಲ್ಲದ ಜಗತ್ತು. ಆ ಚಿತ್ರದಲ್ಲಿ ಅಭಿನಯಿಸಲು ಶುರುವಾಗುತ್ತಲೇ ಲೈಂಗಿಕ ಅಲ್ಪಸಂಖ್ಯಾತರ ಜಗತ್ತು, ಅವರ ಸಂಕಷ್ಟದ ಬದುಕಿನ ಪರಿಚಯವಾಯಿತು. ನನ್ನ ನಟನೆಯ ‘ಹರಿವು’ ಚಿತ್ರಕ್ಕೂ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಸಿಕ್ಕಿದೆ. ಈ ರೀತಿಯ ಮನ್ನಣೆ ಮತ್ತು ಪ್ರಶಸ್ತಿಗಳು ನಟನ ವಿಶ್ವಾಸವನ್ನು ಇಮ್ಮಡಿಸುತ್ತವೆ.
–‘ಸಂಚಾರಿ’ ವಿಜಯ್, ಅತ್ಯುತ್ತಮ ನಟ ಪ್ರಶಸ್ತಿ ಪುರಸ್ಕೃತ

‘ನಾನು ಅವನಲ್ಲ ಅವಳು’ ಚಿತ್ರದಲ್ಲಿನ ವಿಜಯ್ ನಟನೆಗೆ ಸೂಕ್ತವಾದ ಗೌರವ ದೊರೆಯುತ್ತದೆ ಎನ್ನುವ ನಿರೀಕ್ಷೆ ನನ್ನಲ್ಲಿ ಇತ್ತು. ವಿಜಯ್ ಒಬ್ಬ ಬದ್ಧತೆಯ ಪ್ರಬುದ್ಧ ನಟ. ಇದರ ಜತೆಗೆ ಮೇಕಪ್‌ (ಪ್ರಸಾಧನ) ವಿಭಾಗದಲ್ಲೂ ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿರುವುದು ಸಂತಸ ಹೆಚ್ಚಲು ಕಾರಣವಾಗಿದೆ. 15 ವರ್ಷದ ಬದುಕಿನ ಪಯಣದ ಪಾತ್ರಕ್ಕೆ ವಿವಿಧ ಆಯಾಮಗಳು ಇವೆ. ಅದಕ್ಕೆ ತಕ್ಕಂತೆಯೇ ಮೇಕಪ್ ಮಾಡಬೇಕಿದ್ದು, ನಾಗರಾಜ್ ಮತ್ತು ರಾಜು ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ವಿಭಾಗದಲ್ಲಿ ಪ್ರಶಸ್ತಿ ಬಂದಿರುವುದಕ್ಕೆ ಹೆಚ್ಚು ಖುಷಿಯಾಗಿದೆ. ಇಂಥ ಮನ್ನಣೆಗಳು ನಮ್ಮ ಕೆಲಸವನ್ನು ಗುರ್ತಿಸುತ್ತವೆ.
–ಬಿ.ಎಸ್‌.ಲಿಂಗದೇವರು,
‘ನಾನು ಅವನಲ್ಲ ಅವಳು’ ಚಿತ್ರದ ನಿರ್ದೇಶಕ

ಅನಿರೀಕ್ಷಿತವಾಗಿ ನಮ್ಮ ಚಿತ್ರತಂಡಕ್ಕೆ ದೊರೆತ ಪ್ರಶಸ್ತಿ. ಅಪಾರ ಖುಷಿಯಾಗುತ್ತಿದೆ. ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಪ್ರಕಟವಾದ ಆಶಾ ಬೆನಕಪ್ಪ ಅವರ ‘ಅಂತಃಕರಣ’ ಅಂಕಣವೇ ನಮ್ಮ ಚಿತ್ರಕ್ಕೆ ಸ್ಫೂರ್ತಿ. ಆ ಕಾರಣಕ್ಕೆ ‘ಪ್ರಜಾವಾಣಿ’ಗೆ ಕೃತಜ್ಞತೆಗಳು. ಇಡೀ ಚಿತ್ರತಂಡಕ್ಕೆ ಈ ಪ್ರಶಸ್ತಿಯ ಮುಕುಟ ಸಲ್ಲುತ್ತದೆ.
–ಮಂಸೋರೆ, ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪುರಸ್ಕೃತ,‘ಹರಿವು’ ಚಿತ್ರದ ನಿರ್ದೇಶಕ

ಕಥೆಯಲ್ಲ, ನಿಜವಾದ ಘಟನೆ
ತುಂಬಾ ಸಂತೋಷ ಆಗಿದೆ. ಅದು ಕಥೆ ಅಲ್ಲ. ನಿಜವಾದ ಘಟನೆ. ಬಡವರ ಜೀವನದಲ್ಲಿ ಇಂತಹ ಎಷ್ಟೋ ಘಟನೆಗಳು ನಡೆಯುತ್ತವೆ. ಅವುಗಳು ಜನಸಾಮಾನ್ಯರಿಗೆ ತಟ್ಟಬೇಕು ಎಂಬುದು ನನ್ನ ಅಪೇಕ್ಷೆಯಾಗಿತ್ತು. ‘ಹರಿವು’ ಚಿತ್ರ ಅಪ್ಪ ಮತ್ತು ಮಗನ ಬಾಂಧವ್ಯವನ್ನು ತೋರಿಸುತ್ತದೆ. ಎಲ್ಲರೂ ಮಕ್ಕಳು ಎಂದಾಕ್ಷಣ ತಾಯಿಯ ಬಗ್ಗೆ ಮಾತ್ರ ಮಾತನಾಡುತ್ತಾರೆ. ತಂದೆಯಂದಿರೂ ಎಷ್ಟು ಕಷ್ಟ ಪಡುತ್ತಾರೆ ಎಂಬ ಸಂದೇಶ ಈ  ಚಿತ್ರದಲ್ಲಿದೆ.
–ಆಶಾ ಬೆನಕಪ್ಪ, ಅಂಕಣಗಾರ್ತಿ

ಈ ಕಥೆಯು ‘ಪ್ರಜಾವಾಣಿ’ಯ ಸೋದರ ಪತ್ರಿಕೆ ‘ಡೆಕ್ಕನ್‌ ಹೆರಾಲ್ಡ್‌’ನ ಪನೋರಮಾ ವಿಭಾಗದಲ್ಲಿ 2011ರ ಏಪ್ರಿಲ್‌ 30ರಂದು ‘ಫಾರ್‌ ದ ಪುವರ್‌, ಡೆತ್‌ ಈಸ್ ಆ್ಯಸ್‌ ಮಿಸರೇಬಲ್‌ ಆ್ಯಸ್‌ ಲಿವಿಂಗ್‌’ ಎಂಬ ತಲೆಬರಹದ ಅಡಿಯಲ್ಲಿ  ಪ್ರಕಟವಾಗಿತ್ತು.

ಅತ್ಯುತ್ತಮ ಮಕ್ಕಳ ಚಿತ್ರ
ನವದೆಹಲಿ (ಪಿಟಿಐ): ಅತ್ಯುತ್ತಮ ಮಕ್ಕಳ ಚಿತ್ರಕ್ಕಾಗಿ ಇರುವ ಪ್ರಶಸ್ತಿಯನ್ನು ತಮಿಳಿನ ‘ಕಾಕ್ಕಾ ಮುತ್ತೈ’ ಹಾಗೂ ಮರಾಠಿಯ ‘ಎಲಿಜಬೆತ್‌ ಏಕಾದಶಿ’ ಹಂಚಿಕೊಂಡಿವೆ. ಸ್ವರ್ಣ ಕಮಲ ಹಾಗೂ ₨ 1.5 ಲಕ್ಷ ನಗದು ಬಹುಮಾನವನ್ನು ಇದು ಒಳಗೊಂಡಿದ್ದು, ನಗದು ಬಹುಮಾನವನ್ನು ಎರಡೂ ಚಿತ್ರಗಳಲ್ಲಿ ಹಂಚಲಾಗುತ್ತದೆ.

ಚೊಚ್ಚಲ ಶ್ರೇಷ್ಠ ನಿರ್ದೇಶನಕ್ಕಾಗಿ ನೀಡುವ ಇಂದಿರಾ ಗಾಂಧಿ ಪ್ರಶಸ್ತಿಗೆ ಬಂಗಾಳಿ ನಿರ್ದೇಶಕ ಆದಿತ್ಯ ವಿಕ್ರಮ್‌ ಸೇನ್‌ಗುಪ್ತ ಅವರ ‘ಆಶಾ ಜಾವೊರ್‌ ಮಾಝೆ’  ಚಿತ್ರ ಆಯ್ಕೆಯಾಗಿದೆ. ಸ್ವರ್ಣ ಕಮಲ ಹಾಗೂ ₨ 1.25 ಲಕ್ಷ ನಗದನ್ನು ಈ ಪ್ರಶಸ್ತಿ ಒಳಗೊಂಡಿದೆ. ಕನ್ನಡ ಚಿತ್ರಗಳ ಪೈಕಿ ‘ಹರಿವು’ ಶ್ರೇಷ್ಠ ಚಿತ್ರ ಎಂಬ ಹೆಗ್ಗಳಿಕೆ ಪಡೆದಿದೆ.

ವಿಶಾಲ್‌ ಭಾರಧ್ವಾಜ್‌ ನಿರ್ದೇಶನದ ‘ಹೈದರ್‌’ ಚಿತ್ರ ಹಿನ್ನೆಲೆ ಗಾಯನ, ಸಂಭಾಷಣೆ, ವಸ್ತ್ರವಿನ್ಯಾಸ ಸೇರಿದಂತೆ ಐದು ವಿಭಾಗಗಳಲ್ಲಿ ಪ್ರಶಸ್ತಿಗೆ ಪಾತ್ರವಾಗಿದೆ.

Write A Comment