ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಿ.ಹೊನ್ನಪ್ಪ ಭಾಗವತರ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಛಾಯಾಚಿತ್ರ ಪ್ರದರ್ಶನವನ್ನು ಯುವತಿಯರು ವೀಕ್ಷಿಸಿದರು ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಸೂಕ್ತ ಸಂರಕ್ಷಣೆ ಮಾಡದ ಕಾರಣ 1,500 ಹಳೆಯ ಕನ್ನಡ ಚಲನಚಿತ್ರಗಳ ನೆಗೆಟಿವ್‌ಗಳು ನಾಶವಾಗಿವೆ’ ಎಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಬಹಿರಂಗಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗಾನ ಕಲಾವಿಭೂಷಣ ಸಿ.ಹೊನ್ನಪ್ಪ ಭಾಗವತರ್ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಈಗ ಒಂದು ಸಾವಿರ ಹಳೆಯ ಚಲನಚಿತ್ರಗಳ ನೆಗೆಟಿವ್‌ಗಳು ಮಾತ್ರ ಉಳಿದಿವೆ. ಸಂರಕ್ಷಣೆ ಮಾಡದಿದ್ದರೆ ಕೆಲವೇ ಸಮಯದಲ್ಲಿ ಬೇಡರ ಕಣ್ಣಪ್ಪ, ಕವಿರತ್ನ ಕಾಳಿದಾಸ ಚಿತ್ರಗಳ ನೆಗೆಟಿವ್‌ಗಳು ಸಹ ನಾಶವಾಗಲಿವೆ’ ಎಂದು ಅವರು ಎಚ್ಚರಿಸಿದರು.
‘ವಿದೇಶ ಹಾಗೂ ಬೇರೆ ರಾಜ್ಯಗಳಲ್ಲಿ ಹಳೆಯ ಚಿತ್ರಗಳನ್ನು ಡಿಜಿಟಲೀಕರಣ ಮಾಡಿ ಸಂರಕ್ಷಣೆ ಮಾಡಲಾಗಿದೆ. ರಾಜ್ಯದಲ್ಲೂ ಡಿಜಿಟಲೀಕರಣ ಮಾಡಬೇಕು’ ಎಂದು ಆಗ್ರಹಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ‘ಕನ್ನಡ ಚಿತ್ರಗಳ ಡಿಜಿಟಲೀಕರಣ ಮಾಡಲು ಮುಖ್ಯಮಂತ್ರಿ ಹಾಗೂ ವಾರ್ತಾ ಸಚಿವರ ಮೇಲೆ ಒತ್ತಡ ತರಲಾಗುವುದು’ ಎಂದರು.
‘ಹೊನ್ನಪ್ಪ ಭಾಗವತರ್ ಸೇರಿದಂತೆ ಹಿರಿಯ ಕಲಾವಿದರು ಕಷ್ಟದಲ್ಲೇ ಜೀವನ ಸವೆಸಿದ್ದರು. ಅವರಿಗೆ ಹಣದ ಬೆಲೆ ಗೊತ್ತಿತ್ತು. ಈಗಿನ ಕಲಾವಿದರು ಒಂದೇ ಚಿತ್ರದಲ್ಲಿ ಕೋಟಿಗಟ್ಟಲೆ ಸಂಪಾದಿಸುತ್ತಾರೆ. ಅವರಿಗೆ ಹಣದ ಬೆಲೆ ಗೊತ್ತಿಲ್ಲ’ ಎಂದರು.
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ‘ನಗರದಲ್ಲಿ ಹೊನ್ನಪ್ಪ ಭಾಗವತರ ಭವನವನ್ನು ನಿರ್ಮಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.