ಮನೋರಂಜನೆ

ಹೋರಾಡಿ ಸೋತ ವೆಸ್ಟ್‌ ಇಂಡೀಸ್ ತಂಡ, ನ್ಯೂಜಿಲೆಂಡ್‌ಗೆ 143 ರನ್‌ಗಳ ಅಮೋಘ ಜಯ; ಗುಪ್ಟಿಲ್‌ ದ್ವಿಶತಕ, ಸೆಮಿಗೆ ಆತಿಥೇಯರು

Pinterest LinkedIn Tumblr

pvec23xguptill3

ವೆಲಿಂಗ್ಟನ್: ಚೊಚ್ಚಲ ಟ್ರೋಫಿ ಎತ್ತಿ ಹಿಡಿಯುವ ನ್ಯೂಜಿಲೆಂಡ್‌ ತಂಡದ ಆಸೆ ಕೈಗೂಡುವ  ಸಮಯ ಹತ್ತಿರ ಬಂದಿದೆ. ಈ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್‌ ಎದುರು 143 ರನ್‌ಗಳ ಜಯ ಪಡೆದು  ವಿಶ್ವಕಪ್‌ ಟೂರ್ನಿಯಲ್ಲಿ ಸತತ ಮೂರನೇ ಬಾರಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಲೀಗ್‌ ಹಂತದಲ್ಲಿ ಆಡಿದ ಆರೂ ಪಂದ್ಯಗಳಲ್ಲಿ ಗೆಲುವು ಪಡೆದಿರುವ ಆತಿಥೇಯ ತಂಡ ಈ ಪಂದ್ಯದಲ್ಲೂ ಗೆಲುವು ಪಡೆಯುವ ನೆಚ್ಚಿನ ತಂಡವೆನಿಸಿತ್ತು. ಕಿವೀಸ್‌ ಪಡೆ ಈ ಗೆಲುವಿನ ಮೂಲಕ ವಿಶ್ವಕಪ್‌ನಲ್ಲಿ ಒಟ್ಟಾರೆ ಏಳನೇ ಬಾರಿ ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿತು.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ನ್ಯೂಜಿಲೆಂಡ್‌ ತಂಡದ ನಾಯಕ ಬ್ರೆಂಡನ್‌ ಮೆಕ್ಲಮ್‌ ಮೊದಲು ಬ್ಯಾಟ್‌ ಮಾಡುವ ನಿರ್ಧಾರ ಕೈಗೊಂಡರು. ತವರಿನ ಅಂಗಳದ ಬಗ್ಗೆ ಚೆನ್ನಾಗಿ ತಿಳಿದಿದ್ದ ಆತಿಥೇಯರು ನಿಗದಿತ ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 393 ರನ್‌ ಕಲೆ ಹಾಕಿದರು. ಇದು ವಿಶ್ವಕಪ್‌ ಟೂರ್ನಿಯ ನಾಕೌಟ್‌ ಹಂತದಲ್ಲಿ ದಾಖಲಾದ ಗರಿಷ್ಠ ರನ್‌ ಎನಿಸಿದೆ. 2003ರ ಟೂರ್ನಿಯ ಫೈನಲ್‌ನಲ್ಲಿ ಭಾರತ ಎದುರು ಆಸ್ಟ್ರೇಲಿಯಾ 329 ರನ್‌ ಗಳಿಸಿದ್ದು ಹಿಂದಿನ ದಾಖಲೆ ಎನಿಸಿತ್ತು.

ಎರಡು ಬಾರಿ  ವಿಶ್ವಕಪ್‌ ಗೆದ್ದಿರುವ ವಿಂಡೀಸ್‌ ತಂಡ ಸವಾಲಿನ ಗುರಿಯ ಎದುರು ದಿಟ್ಟ ಆಟವಾಡಿ ಸೋಲು ಕಂಡಿತು. ಈ ತಂಡ 30.3
ನನ್ನ ಕ್ರಿಕೆಟ್‌ ಜೀವನದಲ್ಲಿ ನೋಡಿದ ಅತ್ಯದ್ಭುತ ಇನಿಂಗ್ಸ್ ಇದು. ಎಂದಿಗೂ ಮರೆಯಲು ಸಾಧ್ಯವಿಲ್ಲ.
ಬ್ರೆಂಡನ್‌ ಮೆಕ್ಲಮ್‌,
ನ್ಯೂಜಿಲೆಂಡ್‌ ತಂಡದ ನಾಯಕ‌

ಓವರ್‌ಗಳಲ್ಲಿ 250 ರನ್‌ ಗಳಿಸಿ ಆಲೌಟ್‌ ಆಯಿತು.

ಗುಪ್ಟಿಲ್‌ ರನ್‌ ಹೊಳೆ: ತವರಿನ ಅಂಗಳದಲ್ಲಿ ವಿಶ್ವಕಪ್‌ ಚಾಂಪಿಯನ್‌ ಎನಿಸಿಕೊಳ್ಳಬೇಕು ಎನ್ನುವ ಆಸೆ ಹೊತ್ತಿರುವ ಕಿವೀಸ್ ತಂಡಕ್ಕೆ ಉತ್ತಮ ಆರಂಭ ಲಭಿಸಲಿಲ್ಲ. ನಾಯಕ ಮೆಕ್ಲಮ್‌ (12) ಐದನೇ ಓವರ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಆದರೆ, ಗುಪ್ಟಿಲ್‌ ಸಿಡಿಸಿದ ದ್ವಿಶತಕದ ರನ್‌ ಹೊಳೆಯಲ್ಲಿ ಈ ತಂಡದ ಆರಂಭದ ನಿರಾಸೆಯೆಲ್ಲಾ ಕೊಚ್ಚಿ ಹೋಯಿತು.

ಆರಂಭಿಕ ಬ್ಯಾಟ್ಸ್‌ಮನ್‌ ಗುಪ್ಟಿಲ್‌ 163 ಎಸೆತಗಳಲ್ಲಿ 237 ರನ್‌ ಗಳಿಸಿದರು.  ಏಕದಿನ ಕ್ರಿಕೆಟ್‌ನಲ್ಲಿ ಇವರು ಗಳಿಸಿದ ಚೊಚ್ಚಲ ದ್ವಿಶತಕ ಇದು. ಬೌಂಡರಿ (24) ಮತ್ತು ಸಿಕ್ಸರ್‌ಗಳ (11) ಮೂಲಕವೇ 162 ರನ್ ಬಾರಿಸಿದರು.  ಗುಪ್ಟಿಲ್‌ ಅಬ್ಬರ ಹೇಗಿತ್ತು ಎನ್ನುವುದಕ್ಕೆ ಈ ಅಂಕಿಅಂಶಗಳೇ ಸಾಕ್ಷಿ. ಇದು ವಿಶ್ವಕಪ್‌ನಲ್ಲಿ ದಾಖಲಾದ ಎರಡನೇ ದ್ವಿಶತಕವಾಗಿದೆ. ಕ್ರಿಸ್‌ ಗೇಲ್‌ ಲೀಗ್‌ ಪಂದ್ಯದಲ್ಲಿ ಜಿಂಬಾಬ್ವೆ ಎದುರು 215 ರನ್‌ ಬಾರಿಸಿದ್ದರು.

ಜೀವದಾನ ತಂದ ಲಾಭ: ಇನಿಂಗ್ಸ್‌ ಆರಂಭಿಸಿದ 28 ವರ್ಷದ ಗುಪ್ಟಿಲ್‌ ಮೊದಲ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದರು. ಮೂರನೇ ಎಸೆತದಲ್ಲಿ ಸ್ಕ್ವಾಯರ್‌ ಲೆಗ್‌ ಬಳಿ ಕ್ಯಾಚ್‌ ನೀಡಿದ್ದರು. ಆದರೆ, ಮರ್ಲಾನ್ ಸ್ಯಾಮುಯೆಲ್ಸ್‌ ಈ ಅವಕಾಶವನ್ನು ಕೈಚೆಲ್ಲಿದರು. ಇದರ ಲಾಭವನ್ನು ಚೆನ್ನಾಗಿಯೇ ಬಳಸಿಕೊಂಡ ಗುಪ್ಟಿಲ್‌ ವಿಶ್ವಕಪ್‌ನಲ್ಲಿ ಗರಿಷ್ಠ ರನ್‌ ಗಳಿಸಿದ ಸಾಧನೆ ಮಾಡಿದರು.

ಈ ಬ್ಯಾಟ್ಸ್‌ಮನ್‌ ಅರ್ಧಶತಕ ಗಳಿಸಲು 64 ಎಸೆತಗಳನ್ನು ತೆಗೆದುಕೊಂಡರು. ಮೂರಂಕಿ ಮುಟ್ಟಲು 111 ಎಸೆತಗಳು ಬೇಕಾಯಿತು. 200 ರನ್‌ ಗಳಿಸಲು ಗುಪ್ಟಿಲ್‌ ಒಟ್ಟು 152 ಎಸೆತಗಳಲ್ಲಿ ತೆಗೆದುಕೊಂಡರು. 47ನೇ ಓವರ್‌ನ ಮೊದಲ ಎಸೆತದಲ್ಲಿ ಆ್ಯಂಡ್ರೆ ರಸೆಲ್‌ ಎಸೆತದಲ್ಲಿ ಲಾಂಗ್‌ ಆಫ್‌ ಬಳಿ ಬೌಂಡರಿ ಬಾರಿಸಿ ದ್ವಿಶತಕ ಗಳಿಸಿದರು.

ನ್ಯೂಜಿಲೆಂಡ್ ಮೊದಲ 25 ಓವರ್‌ಗಳು ಪೂರ್ಣಗೊಂಡಾಗ 138 ರನ್‌ಗಳನ್ನಷ್ಟೇ ಗಳಿಸಿತ್ತು. ಉಳಿದ ಓವರ್‌ಗಳಲ್ಲಿ  255 ರನ್‌ಗಳನ್ನು ಕಲೆ ಹಾಕಿತು. ಕೊನೆಯ 60 ಎಸೆತಗಳಲ್ಲಿ 153 ರನ್‌ಗಳನ್ನು ಸಿಡಿಸಿತು.

ವೈಫಲ್ಯ, ಅಬ್ಬರ: ಒಂದೆಡೆ ವಿಂಡೀಸ್‌ ತಂಡದ ಎಲ್ಲಾ ಬೌಲರ್‌ಗಳನ್ನು ಗುಪ್ಟಿಲ್‌ ದಂಡಿಸುತ್ತಿದ್ದರೆ ಉಳಿದ ಬ್ಯಾಟ್ಸ್‌ಮನ್‌ಗಳು ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು.

ಕೇನ್‌ ವಿಲಿಯಮ್ಸನ್‌ (33), ಕೋರಿ ಆ್ಯಂಡರ್‌ಸನ್‌ (15), ಎಲಿಯಟ್‌ (27), ಲೂಕ್‌ ರೊಂಚಿ (9) ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಇರಲಿಲ್ಲ. ಆದರೆ, ಗುಪ್ಟಿಲ್‌ ಆಟಕ್ಕೆ ರಾಸ್‌ ಟೇಲರ್ ಉತ್ತಮ ಬೆಂಬಲ ನೀಡಿದರು.

ಟೇಲರ್‌ (42, 61ಎಸೆತ, 2 ಬೌಂಡರಿ) ಒಂದೂವರೆ ಗಂಟೆ ಕ್ರೀಸ್‌ನಲ್ಲಿದ್ದು ಗುಪ್ಟಿಲ್‌ ಆಟಕ್ಕೆ ನೆರವಾದರು. ಈ ಜೋಡಿ ಮೂರನೇ ವಿಕೆಟ್‌ಗೆ 22.3 ಓವರ್‌ಗಳಲ್ಲಿ 143 ರನ್‌ ಕಲೆ ಹಾಕಿತು. ಹತ್ತು ಓವರ್‌ಗಳಲ್ಲಿ 96 ರನ್‌ ನೀಡಿದ ವೇಗಿ ಆ್ಯಂಡ್ರೆ ರಸೆಲ್‌ ದುಬಾರಿಯೆನಿಸಿದರು.

ದಿಟ್ಟ ಹೋರಾಟ: ಸವಾಲಿನ ಗುರಿಯ ಎದುರು ವಿಂಡೀಸ್‌ ಉತ್ತಮವಾಗಿ ಹೋರಾಡಿತು. ಈ ತಂಡ  8.19ರ ಸರಾಸರಿಯಲ್ಲಿ ರನ್‌ ಕಲೆ ಹಾಕಿತು.

ಆರಂಭಿಕ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಜಾನ್ಸನ್‌ ಚಾರ್ಲ್ಸ್‌ (3), ಲಿಂಡ್ಲ್‌ ಸಿಮೊನ್ಸ್‌ (12), ಸ್ಯಾಮುಯೆಲ್ಸ್‌ (27), ದಿನೇಶ್ ರಾಮ್ದಿನ್‌ (0), ಕಾರ್ಟರ್‌ (32), ಡರೆನ್‌ ಸಮಿ (27) ಅವರಿಗೆ ದೊಡ್ಡ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅಬ್ಬರಿಸಿ ಉತ್ತಮ ಆರಂಭ ತಂದುಕೊಟ್ಟರು.

ಎಡಗೈ ಆಟಗಾರ ಗೇಲ್‌ 33 ಎಸೆತಗಳಲ್ಲಿ 61 ರನ್‌ ಗಳಿಸಿದರು. ಸಿಕ್ಸರ್‌ಗಳ (8) ಮೂಲಕವೇ 48 ರನ್‌ ಬಾರಿಸಿದರು. ಎರಡು ಬೌಂಡರಿ ಕೂಡಾ ಸಿಡಿಸಿದರು. ಗೇಲ್‌ ಅಬ್ಬರಕ್ಕೆ ಕಿವೀಸ್‌ ಬೌಲರ್‌ಗಳಲ್ಲಿ ನಡುಕು ಉಂಟಾಗಿತ್ತು. ಆದರೆ, ಆತಿಥೇಯ ಆಟಗಾರರಲ್ಲಿ ಈ ಆತಂಕ ಹೆಚ್ಚು ಹೊತ್ತು ಉಳಿಯಲಿಲ್ಲ.

ಆ್ಯಡಮ್‌ ಮಿಲ್ನ್‌ 16ನೇ ಓವರ್‌ನ ಮೊದಲ ಎಸೆತದಲ್ಲಿ ಗೇಲ್‌ ಅವರನ್ನು ಬೌಲ್ಡ್‌ ಮಾಡುತ್ತಿದ್ದಂತೆ ನ್ಯೂಜಿಲೆಂಡ್ ತಂಡ ಪಂದ್ಯ ಗೆದ್ದಷ್ಟೇ ಸಂಭ್ರಮಿಸಿತು. ಈ ವೇಳೆ ವಿಂಡೀಸ್‌ ತಂಡ ಒಟ್ಟು 120 ರನ್‌ ಗಳಿಸಿತ್ತು.

ಕೆರಿಬಿಯನ್‌ ನಾಡಿನ ತಂಡ 25 ಓವರ್‌ಗಳು ಪೂರ್ಣಗೊಂಡಾಗ 201 ರನ್‌ ಕಲೆ ಹಾಕಿತ್ತು. ಆದರೆ, ಪ್ರಮುಖ ಬ್ಯಾಟ್ಸ್‌ಮನ್‌ಗಳೆಲ್ಲರೂ ಬೇಗನೆ ಔಟಾಗಿದ್ದ ಕಾರಣ ತಂಡ ಸೋಲು ಕಾಣಬೇಕಾಯಿತು. ವೇಗಿ ಟ್ರೆಂಟ್‌ ಬೌಲ್ಟ್‌ ನಾಲ್ಕು ವಿಕೆಟ್ ಪಡೆದರೆ, ಟಿಮ್‌ ಸೌಥಿ ಮತ್ತು ಎಡಗೈ ಸ್ಪಿನ್ನರ್‌ ಡೇನಿಯಲ್‌ ವೆಟೋರಿ ತಲಾ ಎರಡು ವಿಕೆಟ್‌ ಕಬಳಿಸಿ ವಿಂಡೀಸ್‌ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು.

ಎರಡು ಶತಕ; ಮೊದಲ ಆಟಗಾರ
ವಿಶ್ವಕಪ್‌ನಲ್ಲಿ ಮೇಲಿಂದ ಮೇಲೆ ಎರಡು ಶತಕಗಳನ್ನು ಬಾರಿಸಿದ ನ್ಯೂಜಿಲೆಂಡ್‌ನ ಮೊದಲ ಆಟಗಾರ ಎನ್ನುವ ಕೀರ್ತಿಯನ್ನು ಗುಪ್ಟಿಲ್‌ ತಮ್ಮದಾಗಿಸಿಕೊಂಡರು.

ಅವರು ಕೊನೆಯ ಲೀಗ್‌ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು 105 ರನ್‌ ಗಳಿಸಿದ್ದರು. ಜೊತೆಗೆ, ವೈಯಕ್ತಿಕ ಅತ್ಯಧಿಕ ಮೊತ್ತದ ದಾಖಲೆಯನ್ನು ಸುಧಾರಿಸಿಕೊಂಡರು. ಗುಪ್ಟಿಲ್‌ 2013ರಲ್ಲಿ ಸೌಥ್‌ ಹ್ಯಾಂಪ್ಟನ್‌ನಲ್ಲಿ ಇಂಗ್ಲೆಂಡ್‌ ಎದುರು ಗಳಿಸಿದ್ದ 189 ರನ್‌ ಅವರ ಹಿಂದಿನ ಗರಿಷ್ಠ ಮೊತ್ತವಾಗಿತ್ತು.

‘ಒತ್ತಡವಿಲ್ಲದೇ ಆಡಿದೆ’‌
ವೆಲಿಂಗ್ಟನ್‌ (ಐಎಎನ್‌ಎಸ್‌): ‘ದೊಡ್ಡ ಮೊತ್ತ ಗಳಿಸಬೇಕೆನ್ನುವ ಯಾವ ಒತ್ತಡ ಇರಲಿಲ್ಲ. ದ್ವಿಶತಕ ಗಳಿಸಿದ ಬಳಿಕ ಕ್ರಿಸ್‌ ಗೇಲ್‌ ನನ್ನ ಬಳಿ ಬಂದು ಅಭಿನಂದಿಸಿದರು. ನನಗೆ ತುಂಬಾ ಖುಷಿಯಾಯಿತು. ರಾಸ್‌ ಟೇಲರ್‌ ಅವರೊಂದಿಗೆ ಉತ್ತಮ ಜೊತೆಯಾಟವಾಡಿದೆ’ ಎಂದು ಮಾರ್ಟಿನ್‌ ಗುಪ್ಟಿಲ್‌ ಹೇಳಿದ್ದಾರೆ.

ಸ್ಕೋರ್‌ಕಾರ್ಡ್‌
ನ್ಯೂಜಿಲೆಂಡ್‌ 393/6   (50 ಓವರ್‌)

ಮಾರ್ಟಿನ್‌ ಗುಪ್ಟಿಲ್‌ ಔಟಾಗದೆ  237
ಬ್ರೆಂಡನ್‌ ಮೆಕ್ಲಮ್‌ ಸಿ ಜಾಸನ್‌ ಹೋಲ್ಡರ್‌ ಬಿ ಜೆರೋಮ್‌ ಟೇಲರ್  12
ಕೇನ್‌ ವಿಲಿಯಮ್ಸನ್‌ ಸಿ ಕ್ರಿಸ್‌ ಗೇಲ್‌ ಬಿ ಆ್ಯಂಡ್ರೆ ರಸೆಲ್‌  33
ರಾಸ್ ಟೇಲರ್‌ ರನ್‌ ಔಟ್‌ (ದಿನೇಶ್‌ ರಾಮ್ದಿನ್‌/ಸುಲೆಮನ್ ಬೆನ್‌)  42
ಕೋರಿ ಆ್ಯಂಡರ್‌ಸನ್‌ ಸಿ ಕ್ರಿಸ್‌ ಗೇಲ್‌ ಬಿ ಆ್ಯಂಡ್ರೆ ರಸೆಲ್‌  15
ಗ್ರಾಂಟ್‌ ಎಲಿಯಟ್ ಎಲ್‌ಬಿಡಬ್ಲ್ಯು ಬಿ ಜೆರೋಮ್ ಟೇಲರ್‌ 27
ಲೂಕ್‌ ರೊಂಚಿ ಸಿ ಸುಲೆಮನ್ ಬೆನ್‌ ಬಿ ಜೆರೋಮ್‌ ಟೇಲರ್ 09
ಡೇನಿಯಲ್‌ ವೆಟೋರಿ ಔಟಾಗದೆ  08
ಇತರೆ: (ಲೆಗ್ ಬೈ–2 ವೈಡ್–7, ನೋ ಬಾಲ್‌–1)  10

ವಿಕೆಟ್‌ ಪತನ: 1–27 (ಮೆಕ್ಲಮ್‌; 4.2), 2–89  (ವಿಲಿಯಮ್ಸನ್‌; 15.6), 3–232 (ಟೇಲರ್‌; 38.3), 4–278 (ಆ್ಯಂಡರ್‌ಸನ್‌; 43.2), 5–333 (ಎಲಿಯಟ್‌; 46.3), 6–365 (ರೊಂಚಿ; 48.4)
ಬೌಲಿಂಗ್‌: ಜೆರೋಮ್ ಟೇಲರ್‌ 7–0–71–3, ಜಾಸನ್‌ ಹೋಲ್ಡರ್‌ 8–0–76–0, ಸುಲೆಮನ್ ಬೆನ್‌ 10–1–66–0, ಆ್ಯಂಡ್ರೆ ರಸೆಲ್‌ 10–0–96–2, ಡರೆನ್‌ ಸಮಿ 8–0–38–0, ಮರ್ಲಾನ್‌ ಸ್ಯಾಮುಯೆಲ್ಸ್‌ 7–0–44–0

ವೆಸ್ಟ್‌ ಇಂಡೀಸ್‌ 250   (30.3 ಓವರ್‌)
ಕ್ರಿಸ್‌ ಗೇಲ್‌ ಬಿ ಆ್ಯಡಮ್‌ ಮಿಲ್ನ್‌   61
ಜಾನ್ಸನ್‌ ಚಾರ್ಲ್ಸ್‌ ಬಿ ಟ್ರೆಂಟ್‌ ಬೌಲ್ಟ್‌  03
ಲಿಂಡ್ಲ್‌ ಸಿಮೊನ್ಸ್‌ ಸಿ ಮಾರ್ಟಿನ್‌ ಗುಪ್ಟಿಲ್‌ ಬಿ ಟ್ರೆಂಟ್‌ ಬೌಲ್ಟ್‌   12
ಮರ್ಲಾನ್‌ ಸ್ಯಾಮುಯೆಲ್ಸ್‌ ಸಿ ಡೇನಿಯರ್‌ ವೆಟೋರಿ ಬಿ ಟ್ರೆಂಟ್‌ ಬೌಲ್ಟ್‌್  27
ದಿನೇಶ್‌ ರಾಮ್ದಿನ್‌ ಎಲ್‌ಬಿಡಬ್ಲ್ಯು ಬಿ ಟ್ರೆಂಟ್‌ ಬೌಲ್ಟ್‌   00
ಜೊನಾಥನ್‌ ಕಾರ್ಟರ್‌ ಬಿ ಡೇನಿಯಲ್‌ ವೆಟೋರಿ  32
ಡರೆನ್‌ ಸಮಿ ಸಿ ಲೂಕ್‌ ರೊಂಚಿ ಬಿ ಕೋರಿ ಆ್ಯಂಡರ್‌ಸನ್‌  27
ಆ್ಯಂಡ್ರೆ ರಸೆಲ್‌ ಬಿ ಟಿಮ್ ಸೌಥಿ  20
ಜಾಸನ್‌ ಹೋಲ್ಡರ್‌ ಸಿ ಕೋರಿ ಆ್ಯಂಡರ್‌ಸನ್‌ ಬಿ ಡೇನಿಯಲ್ ವೆಟೋರಿ  42
ಜೆರೋಮ್ ಟೇಲರ್‌ ಸಿ ಮಾರ್ಟಿನ್‌ ಗುಪ್ಟಿಲ್‌ ಬಿ ಟಿಮ್‌ ಸೌಥಿ  11
ಸುಲೆಮನ್ ಬೆನ್‌ ಔಟಾಗದೆ  09
ಇತರೆ: (ವೈಡ್‌–6)  06

ವಿಕೆಟ್‌ ಪತನ: 1–4 (ಚಾರ್ಲ್ಸ್‌; 1.2), 2–27  (ಸಿಮೊನ್ಸ್‌; 5.3), 3–80 (ಸ್ಯಾಮುಯೆಲ್ಸ್‌; 9.1), 4–80 (ರಾಮ್ದಿನ್‌; 9.5), 5–120 (ಗೇಲ್‌; 16.1), 6–166 (ಸಮಿ; 21.1), 7–173 (ಕಾರ್ಟರ್‌; 22.3), 8–201 (ರಸೆಲ್‌; 25.1), 9–221 (ಟೇಲರ್‌; 27.6), 10–250 (ಹೋಲ್ಡರ್‌; 30.3)
ಬೌಲಿಂಗ್‌: ಟಿಮ್‌ ಸೌಥಿ 8–1–82–2, ಟ್ರೆಂಟ್‌ ಬೌಲ್ಟ್‌  10–3–44–4, ಡೇನಿಯಲ್ ವೆಟೋರಿ 6.3–0–58–2, ಆ್ಯಡಮ್‌ ಮಿಲ್ನ್‌್ 4–0–42–1, ಕೋರಿ ಆ್ಯಂಡರ್‌ಸನ್‌ 2–0–24–1

ಫಲಿತಾಂಶ: ನ್ಯೂಜಿಲೆಂಡ್‌ಗೆ 143 ರನ್‌ ಗೆಲುವು ಹಾಗೂ ಸೆಮಿಫೈನಲ್‌ ಪ್ರವೇಶ
ಪಂದ್ಯಶ್ರೇಷ್ಠ: ಮಾರ್ಟಿನ್ ಗುಪ್ಟಿಲ್‌

Write A Comment