ಈಗ ಬೇಸಿಗೆ ಕಾಲ. ಆದರೂ ಮಳೆ ಬರುವ ಸಾಧ್ಯತೆಗಳು ಇವೆ ಎಂದರೆ ಅಚ್ಚರಿಗೊಳ್ಳಬೇಡಿ. ಹೌದು, ಈ ಮಳೆಯ ಸೂತ್ರಧಾರ ನಟ ಕಂ ನಿರ್ದೇಶಕ ಮೋಹನ್. `ಮಳೆ ನಿಲ್ಲುವವರೆಗೂ’ ಎನ್ನುವ ಹೆಸರಿನಲ್ಲಿ ಸಿನಿಮಾ ಮಾಡಿರುವ ಮೋಹನ್, ಈ ಚಿತ್ರವನ್ನು ಸದ್ಯದಲ್ಲೇ ಪ್ರೇಕ್ಷಕರ ಮುಂದಿಡುವುದಕ್ಕೆ ತಯಾರಿ ನಡೆಸಿಕೊಂಡಿದ್ದಾರೆ. ಹೀಗಾಗಿ ಪ್ರೇಕ್ಷಕರಿಗೆ ಬೇಸಿಗೆ ಕಾಲದಲ್ಲಿ ಮಳೆ ಕಂಡ ಅನುಭವಾಗುತ್ತದೆ ಎಂಬುದು ಚಿತ್ರತಂಡದ ಅಭಿಪ್ರಾಯ.
ಈ ತಿಂಗಳ ಕೊನೆ ಅಥವಾ ಮುಂದಿನ ತಿಂಗಳು ಮೊದಲ ವಾರದಲ್ಲಿ ತೆರೆಗೆ ಬರಲಿರುವ ಈ ಚಿತ್ರವನ್ನು ಎನ್.ಕುಮಾರ್ ವಿತರಣೆ ಮಾಡುತ್ತಿದ್ದಾರೆ. ನಟಿಯರಾದ ಭೂಮಿಕಾ ಹಾಗೂ ಕವಿತಾ ಚಿತ್ರದ ನಾಯಕಿ ಪಾತ್ರಧಾರಿಗಳು. ಈ ಚಿತ್ರದಲ್ಲಿ ಮಳೆ ಕೂಡ ಮಹತ್ವದ ಪಾತ್ರ ನಿರ್ವಹಿಸಲಿದೆ. ಅಲ್ಲದೆ ಐದು ಮಂದಿ ಹಿರಿಯ ಕಲಾವಿದರು ಅಭಿನಯಿಸಿರುವುದು ಚಿತ್ರದ ವಿಶೇಷವಂತೆ. ದೊಡ್ಡಣ್ಣ ನ್ಯಾಯವಾದಿ ಪಾತ್ರ ಮಾಡಿದರೆ, ಶ್ರೀನಾಥ್ ಹಾಗೂ ಲೋಹಿತಾಶ್ವ ನಿವೃತ್ತ ಸರ್ಕಾರಿ ವಕೀಲರ ಪಾತ್ರ ಮಾಡಿದ್ದು, ಕರಿಸುಬ್ಬು ನಿವೃತ್ತ ಹ್ಯಾಂಗ್‍ಮೆನ್ ಪಾತ್ರ, ಶ್ರೀನಿವಾಸ ಪ್ರಭು ನಿವೃತ್ತ ವಕೀಲರಾಗಿ ಕಾಣಿಸಿಕೊಂಡಿದ್ದಾರೆ.
ಇವರೇ ಚಿತ್ರದ ಮುಖ್ಯ ಪಿಲ್ಲರ್ ಗಳು ಎಂಬುದು ನಿರ್ದೇಶಕ ಮೋಹನ್ ಮಾತು. ಒಟ್ಟಿನಲ್ಲಿ ಇಲ್ಲಿ ಯಾರು ಹಾಲಿಗಳಲ್ಲ. ಎಲ್ಲರು ನಿವೃತ್ತರೇ. ಹೀಗಾಗಿ ಒಂದು ರೀತಿಯಲ್ಲಿ ಇದು ನಿವೃತ್ತರ ಸಿನಿಮಾ ಅಂತಲೂ ಬೇಕಾದರೂ ಕರೆಯಬಹುದು. ನಟ ಮೋಹನ್ ಅವರ ಪತ್ನಿ ವಿದ್ಯಾ ಈ ಚಿತ್ರದಲ್ಲಿ ಒಂದು ಹಾಡನ್ನು ಹಾಡಿದ್ದಾರೆ. ಚಿತ್ರದ ಸಂಗೀತ ಕೂಡ ತುಂಬಾ ಚೆನ್ನಾಗಿದೆಯಂತೆ. 1960ರಲ್ಲಿ ಬಂದ ಡೆಡ್ಲಿ ಗೇಮ್ ನಾಟಕದ ಕಥೆಯನ್ನು ಆಯ್ಕೆ ಮಾಡಿಕೊಂಡು ಈ ಚಿತ್ರವನ್ನು ಮಾಡಲಾಗಿದೆ. ಅಲ್ಲದೆ ಇಡೀ ಚಿತ್ರ ಹಾಸ್ಯದ ನೆಲೆಯಲ್ಲಿ ಸಾಗುತ್ತದೆ.
ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ಕೊಡಲಾಗಿದ್ದು, ಎಲ್ಲ ವರ್ಗದ ಪ್ರೇಕ್ಷಕರು ಈ ಚಿತ್ರವನ್ನು ನೋಡಬಹುದು ಎಂಬುದು ಮೋಹನ್ ಅವರು ಕೊಡುವ ಭರವಸೆ. ಈ ಚಿತ್ರದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿದೆ. ನನಗೆ ಇದು ಮೊದಲ ಸಿನಿಮಾ ಅನಿಸಲಿಲ್ಲ. ಅಷ್ಟು ಚೆನ್ನಾಗಿ ಇಡೀ ತಂಡ ಒಂದಾಗಿ ಈ ಚಿತ್ರವನ್ನು ಮಾಡಿದ್ದೇವೆ ಎಂಬುದು ನಾಯಕಿ ಕವಿತಾ ಅವರ ಮಾತು. ಚಿತ್ರಕ್ಕೆ ಲಯೇಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಎಲ್ಲ ಹಾಡುಗಳು ಚೆನ್ನಾಗಿ ಮೂಡಿಬಂದಿವೆ ಎಂದರು ಲಯೇಂದ್ರ.