ಕೈರೋ: ಚಿಕ್ಕ ವಯಸ್ಸಿನಲ್ಲಿಯೇ ತನ್ನ ಗಂಡನನ್ನು ಕಳೆದುಕೊಂಡಿದ್ದ ಮಹಿಳೆಯೊಬ್ಬರು ಪುರುಷರ ಕಾಮದ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹಾಗೂ ತನ್ನ ಮತ್ತು ಮಗಳ ತುತ್ತಿನ ಚೀಲ ತುಂಬಿಸಿಕೊಳ್ಳುವ ಸಲುವಾಗಿ 43 ವರ್ಷಗಳ ಕಾಲ ಪುರುಷ ವೇಷಧಾರಿಯಾಗಿದ್ದ ಆಶ್ಚರ್ಯಕರ ಘಟನೆ ಬೆಳಕಿಗೆ ಬಂದಿದೆ.
ಈಜಿಪ್ಟಿನ ಕೈರೋ ನಿವಾಸಿ 64 ವರ್ಷ ಸಿಸಾ ಅಬು ದಾವೂ ಎಂಬ ಈ ಮಹಿಳೆ ಚಿಕ್ಕ ಪ್ರಾಯದಲ್ಲೇ ತಮ್ಮ ಪತಿಯನ್ನು ಕಳೆದುಕೊಂಡು ವಿಧವೆಯಾಗಿದ್ದು, ಧಾರ್ಮಿಕ ಕಾರಣಗಳಿಗಾಗಿ ಮಹಿಳೆಯರು ಕೆಲಸ ಮಾಡುವುದಕ್ಕೆ ಕಠಿಣ ಕಾನೂನುಗಳಿರುವ ಕಾರಣ ತನ್ನ ಹಾಗೂ ಮಗಳ ಜೀವನ ನಿರ್ವಹಣೆಗಾಗಿ ಪುರುಷರಂತೆ ವೇಷ ಧರಿಸಿ ಕಟ್ಟಡ ನಿರ್ಮಾಣ ಸ್ಥಳಗಳಲ್ಲಿ ಇಟ್ಟಿಗೆ ಹೊರುವಂತಹ ಶ್ರಮದ ಕೆಲಸವನ್ನು ಮಾಡಿದ್ದಾರೆ.
ಸಿಸಾ ಅಬು ದಾವೂ ತಮ್ಮ ಮಗಳ ವಿವಾಹ ನೆರವೇರಿಸಿದ ವೇಳೆ ಈ ವಿಷಯ ಬೆಳಕಿಗೆ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ತಾನು ಈ ರೀತಿ ಮಾಡದಿದ್ದರೆ ಭಿಕ್ಷೆ ಬೇಡಿ ಜೀವನ ಸಾಗಿಸಬೇಕಾಗಿತ್ತು. ಈ ಕಾರಣಕ್ಕಾಗಿ ಪುರುಷರಂತೆ ವೇಷ ಧರಿಸಿ ಅವರುಗಳೊಂದಿಗೇ ಇಟ್ಟಿಗೆ ಹೊರುವಂತಹ ಕೆಲಸ ಮಾಡಿ ಈ 43 ವರ್ಷಗಳ ಕಾಲ ತಾನು ಹಾಗೂ ಮಗಳು ಜೀವನ ನಿರ್ವಹಿಸಿದ್ದೇವೆ. ಕೆಲವೊಮ್ಮೆ ಶೂ ಪಾಲೀಶ್ ಸಹ ಮಾಡಿದ್ದೇನೆ ಎಂದಿದ್ದಾರೆ.