ಸಿನಿಮಾವೊಂದು ಬಿಡುಗಡೆಯಾಗುವ ಹೊತ್ತಿನಲ್ಲೇ ಮತ್ತೊಂದಷ್ಟು ಅವಕಾಶಗಳು ಹುಡುಕಿಕೊಂಡು ಬಂದಿವೆ. ಅದು ಕನ್ನಡಕ್ಕಷ್ಟೇ ಸೀಮಿತವಾಗಿಲ್ಲ. ಆಕಸ್ಮಿಕವಾಗಿ ಬಣ್ಣದ ಲೋಕ ಪ್ರವೇಶಿಸಿರುವ ಅಮೃತ, ಈಗಾಗಲೇ ಮೂರು ಚಿತ್ರಗಳಿಗೆ ನಾಯಕಿ. ಆ ಪೈಕಿ ಕನ್ನಡದಲ್ಲಿ ಒಂದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ತೆಲುಗು, ತಮಿಳಿನಲ್ಲಿ ಕೂಡ ಅವಕಾಶ ಸಿಕ್ಕಿದೆ. ಅಂತೂ ಇಂತೂ ಪರಭಾಷಾ ಚಿತ್ರಗಳಲ್ಲಿ ಕನ್ನಡದ ಬೆಡಗಿಯರಿಗೂ ಅವಕಾಶ ಸಿಗುತ್ತಿದೆ ಎಂದಾಯ್ತು!
ಹಾಗೆ ನೋಡಿದರೆ, ಚಿತ್ರರಂಗಕ್ಕೆ ಅಮೃತ ಬಂದಿದ್ದೂ ಆಕಸ್ಮಿಕವೇ. ಅವರ ಅಮ್ಮ ರಾಗಿಣಿ ರಾವ್ ಹಲವು ಚಿತ್ರಗಳಲ್ಲಿ ಪಾತ್ರ ನಿರ್ವಹಿಸಿದವರು. ಕಾರ್ಯಕ್ರಮವೊಂದಕ್ಕೆ ಮಗಳು ಅಮೃತ ಜತೆಗೆ ಹೋಗಿದ್ದರು. ಅಲ್ಲಿಗೆ ಬಂದಿದ್ದ ನಿರ್ದೇಶಕ ವಾರ್ಧಿಕ್ ಜೋಸೆಫ್, ಆಗ ‘ಮಂಡ್ಯ ಟು ಮುಂಬೈ’ ಚಿತ್ರ ನಿರ್ದೇಶಿಸುವ ಸಿದ್ಧತೆಯಲ್ಲಿದ್ದರು. ಹಳ್ಳಿ ಹುಡುಗಿ ಪಾತ್ರಕ್ಕೆ ಯಾರನ್ನು ಹಾಕಿಕೊಳ್ಳಬಹುದು ಎಂದು ಹುಟುಕಾಟವನ್ನೂ ನಡೆಸಿದ್ದರು. ಅಮೃತಳನ್ನು ನೋಡಿದ ಅವರಿಗೆ, ಆ ಪಾತ್ರಕ್ಕೆ ಈಕೆಯೇ ಸರಿ ಅನಿಸಿತು. ತಕ್ಷಣ ಸಂಪರ್ಕಿಸಿ, ಚಿತ್ರಕಥೆಯನ್ನೂ ಪಾತ್ರದ ಸಾರಾಂಶವನ್ನೂ ತೆರೆದಿಟ್ಟರು. ‘ಬೆಂಗಳೂರಿನಲ್ಲೇ ಹುಟ್ಟಿ ಬೆಳೆದ ನನಗೆ ಹಳ್ಳಿಯ ಸಾಂಪ್ರದಾಯಿಕ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಆಸೆಯಿತ್ತು. ಮಂಡ್ಯ ಟು ಮುಂಬೈ ಸಿನಿಮಾದಲ್ಲಿನ ಆ ಪಾತ್ರ ಅದಕ್ಕೆ ಹೇಳಿ ಮಾಡಿಸಿದಂತಿತ್ತು. ಹೀಗಾಗಿಯೇ ಒಪ್ಪಿಕೊಂಡೆ’ ಎಂದು ನೆನಪಿಸಿಕೊಳ್ಳುತ್ತಾರೆ ಅಮೃತ.
ಹಲವು ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿರುವ ಅವರಿಗೆ, ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದಾಗ ಯಾವುದೇ ಅಳುಕು ಆಗಲಿಲ್ಲವಂತೆ. ಹೆದರಲಿಲ್ಲ, ಅಂಜಲಿಲ್ಲ. ಅದಕ್ಕೆ ಬದಲಾಗಿ ಖುಷಿಯಾಯಿತು ಎಂಬ ಅನಿಸಿಕೆ ಅವರದು! ‘ಅಭಿನಯದ ತರಬೇತಿ ಇಲ್ಲದೇ ಕ್ಯಾಮೆರಾ ಎದುರಿಸಿದ ನನ್ನ ಆತ್ಮವಿಶ್ವಾಸದ ಹಿಂದೆ ನಿರ್ದೇಶಕ ವಾರ್ಧಿಕ್ ಅವರ ಮಾರ್ಗದರ್ಶನ ಇತ್ತು’ ಎನ್ನುವ ಅಮೃತ, ತಮ್ಮ ನಟನೆಗೆ ಚಿತ್ರತಂಡದಿಂದ ಸಿಕ್ಕ ಪ್ರತಿಕ್ರಿಯೆಯನ್ನು ಸಂತಸದಿಂದ ಹಂಚಿಕೊಳ್ಳುತ್ತಾರೆ. ಆ ಸಿನಿಮಾದ ಶೂಟಿಂಗ್ ಮುಗಿದು ಟ್ರೇಲರ್ ಬಿಡುಗಡೆಯಾಗುತ್ತಲೇ ಹಲವು ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಆದರೆ ಚಿತ್ರಕಥೆ ಹಾಗೂ ಪಾತ್ರ ಒಪ್ಪಿಗೆಯಾಗದೇ ‘ಒಲ್ಲೆ’ ಅನ್ನಬೇಕಾಯಿತಂತೆ.
ಈ ಸಮಯದಲ್ಲೇ ನಿರ್ದೇಶಕ ಶ್ರೀಶೈಲ ‘ಲಿಕ್ವಿಡ್’ ಚಿತ್ರದ ನಾಯಕಿ ಪಾತ್ರಕ್ಕೆ ಅಮೃತ ಆಯ್ಕೆಯಾದರು. ವೈದ್ಯಕೀಯ ಕ್ಷೇತ್ರದ ರೋಚಕ ಕಥೆಯುಳ್ಳ ಈ ಸಿನಿಮಾದಲ್ಲಿ ವೈದ್ಯ ವಿದ್ಯಾರ್ಥಿನಿ ಪಾತ್ರ ಅವರದು. ‘ಮಂಡ್ಯ ಟು ಮುಂಬೈ ಸಿನಿಮಾದ ಟ್ರೈಲರ್ ನೋಡಿದ ಶ್ರೀಶೈಲ ನನ್ನನ್ನು ಸಂಪರ್ಕಿಸಿ, ನಾಯಕಿ ಪಾತ್ರಕ್ಕೆ ಅವಕಾಶ ನೀಡುವುದಾಗಿ ಹೇಳಿದರು. ಅದು ಮಾಮೂಲಿ ಕಥೆ ಅಲ್ಲ. ಹೀಗಾಗಿ ತಕ್ಷಣ ಒಪ್ಪಿಕೊಂಡೆ’ ಎನ್ನುತ್ತಾರೆ.
ಕನ್ನಡದ ಎರಡು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಲೇ, ತೆಲುಗು ಚಿತ್ರರಂಗಕ್ಕೂ ಪ್ರವೇಶ ಪಡೆದಿರುವುದು ಅಮೃತ ಅವರಿಗೆ ಡಬಲ್ ಖುಷಿ ಕೊಟ್ಟಿದೆ. ಕಲ್ಯಾಣ್ ನಿರ್ದೇಶನದಲ್ಲಿ ಸುಭಾಷ್ ರಾಯಲ್ ಜತೆ ‘ನಾ ಪ್ರೇಮ’ ಸಿನಿಮಾಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಮಿಳಿನ ನಿರ್ಮಾಪಕರೊಬ್ಬರು ಈಚೆಗಷ್ಟೇ ಭೇಟಿ ಮಾಡಿ, ಚಿತ್ರಕಥೆಯನ್ನು ಅಮೃತ ಕೈಗೆ ಕೊಟ್ಟಿದ್ದಾರಂತೆ. ‘ಅದಿನ್ನೂ ಚರ್ಚೆಯ ಹಂತದಲ್ಲಿದೆ. ಅದೇನೇ ಇದ್ದರೂ ಇಷ್ಟೊಂದು ಅಲ್ಪ ಅವಧಿಯಲ್ಲಿ ಮೂರು ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದು ಖುಷಿ ಸಂಗತಿ ಅಲ್ಲವೇ?’ ಎಂದು ಮುಗುಳ್ನಗುತ್ತ ಪ್ರಶ್ನಿಸುತ್ತಾರೆ.
ಭರತನಾಟ್ಯ ಕಲಾವಿದೆಯಾಗಿರುವ ಅಮೃತ ಅವರಿಗೆ, ಸಿನಿಮಾದಲ್ಲಿ ಆ ಕಲೆಯನ್ನು ಅಭಿವ್ಯಕ್ತಿಸಲು ಹೆಚ್ಚು ಅವಕಾಶವಿಲ್ಲ ಎಂಬುದು ಗೊತ್ತಿದೆ. ‘ಹಾಗೆಂದು ಸಂಪೂರ್ಣವಾಗಿ ಅದನ್ನು ತಳ್ಳಿ ಹಾಕುವಂತಿಲ್ಲ. ಅಭಿನಯದಲ್ಲಿ ಬಗೆಬಗೆಯ ಭಾವನೆಗಳನ್ನು ವ್ಯಕ್ತಪಡಿಸಬೇಕಲ್ಲವೇ? ನಾನು ಕಲಿತಿರುವ ಭರಟನಾಟ್ಯ ನನಗೆ ಹೀಗೆ ನೆರವಾಗುತ್ತಿದೆ’ ಎನ್ನುತ್ತಾರೆ. ‘ಗ್ಲಾಮರ್ ಆಗಿರಲಿ, ಸಾಂಪ್ರದಾಯಿಕವಾಗಲಿ. ನನಗೆ ಇಂಥದೇ ಪಾತ್ರ ಬೇಕು ಅಂತೇನೂ ಇಲ್ಲ. ಈಗ ದೊರಕಿರುವ ಅವಕಾಶಗಳಲ್ಲಿ ಎರಡೂ ಬಗೆಯ ಪಾತ್ರಗಳನ್ನು ನಿರ್ವಹಿಸಲಿದ್ದೇನೆ’ ಎನ್ನುವ ಅವರಿಗೆ, ಮಿನುಗು ತಾರೆ ಕಲ್ಪನಾ ಬಲು ಇಷ್ಟವಂತೆ.