ಮನೋರಂಜನೆ

ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಅರ್ಜುನ…

Pinterest LinkedIn Tumblr

crec20Arjun

-ಅಮಿತ್ ಎಂ.ಎಸ್.
‘ಸಿನಿಮಾ ಎಲ್ಲಿವರೆಗೆ ಬಂತು?’ ಎಂದು ಕೇಳಿದರು ಯೋಗರಾಜ ಭಟ್ಟರು.
‘ಇನ್ನೂ ಹುಡುಗಿ ಹುಡುಕುತ್ತಿದ್ದೇನೆ’ ಎಂಬ ಉತ್ತರ ಅರ್ಜುನ್‌ ಅವರದು.

‘ಎಂಥ ಮದುವೆಯಾಗಲಿಕ್ಕಾ?’ ಎಂದು ತಮಾಷೆ ಮಾಡಿದ ಭಟ್ಟರು, ನನ್ನ ಕಚೇರಿಗೆ ಬನ್ನಿ ಎಂಬ ಆಹ್ವಾನವಿತ್ತರು. ಮರುದಿನ ಅರ್ಜುನ್‌ ಎದುರಿಗೆ ಇಟ್ಟದ್ದು ನಾಯಕಿಯ ಫೋಟೊವನ್ನು.

ಆಗಲೇ ಸುಮಾರು 50–60 ಮುಖಗಳನ್ನು ನಾಯಕಿಯ ಪಾತ್ರಕ್ಕೆ ನೋಡಿ ತಿರಸ್ಕರಿಸಿದ್ದ ಅವರಿಗೆ, ಈ ನಾಯಕಿಯನ್ನು ಬೇಡ ಎನ್ನಲು ಕಾರಣಗಳೇ ಇರಲಿಲ್ಲ. ಈ ವಾರ ತೆರೆ ಕಾಣುತ್ತಿರುವ ‘ರಾಟೆ’ ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಸಿದ ಪ್ರಸಂಗವನ್ನು ನೆನಪಿಸಿಕೊಂಡರು ನಿರ್ದೇಶಕ ಎ.ಪಿ. ಅರ್ಜುನ್. ಬದುಕನ್ನು ತಿರುಗಿಸುವ ‘ರಾಟೆ’ಯ ಸುತ್ತ ಕಥೆ ಹೆಣೆದ ಎ.ಪಿ. ಅರ್ಜುನ್ ಅವರಿಗೆ ಸಿನಿಮಾದಲ್ಲಿನ ಕಥನ ಹಾಗೂ ಸಿನಿಮಾ ಚಿತ್ರೀಕರಣದ ವೇಳೆಯ ಅನುಭವಕ್ಕೂ ಸಾಮ್ಯತೆ ಕಂಡಿವೆ. ನಾಯಕಿಯಷ್ಟು ನಾಯಕನ ಹುಡುಕಾಟ ಅವರಿಗೆ ಕಷ್ಟ ಎನಿಸಿರಲಿಲ್ಲ.

ನಾಯಕ ಧನಂಜಯ್  ನಟಿಸಿದ್ದ ‘ಡೈರಕ್ಟರ್ಸ್‌ ಸ್ಪೆಷಲ್‌’ ಇನ್ನೂ ಬಿಡುಗಡೆ ಆಗಿರಲಿಲ್ಲ. ಅವರ ಹಿನ್ನೆಲೆಯೂ ಅರ್ಜುನ್‌ ಅವರಿಗೆ ತಿಳಿದಿರಲಿಲ್ಲ. ಆದರೆ ಅವರ ಫೋಟೊ ನೋಡಿದಾಕ್ಷಣ ಇವರೇ ನನ್ನ ಚಿತ್ರದ ನಾಯಕ ಎಂದು ನಿರ್ಧರಿಸಿದರು ಅರ್ಜುನ್. ಚಿತ್ರದ ಕಥೆಗೆ ಸೂಕ್ತವಾಗುವ ಅಮಾಯಕತನ ಧನಂಜಯ್ ಅವರ ಮುಖದಲ್ಲಿತ್ತು. ಹೀಗಾಗಿ ಚಿಕ್ಕ ಆಡಿಷನ್ ಕೂಡ ನಡೆಸದೆಯೇ ನಾಯಕನನ್ನು ಆಯ್ಕೆ ಮಾಡಿದರು.

ಆದರೆ ಚಿತ್ರೀಕರಣ ಸುಸೂತ್ರವಾಗಿರಲಿಲ್ಲ. ನೂರೆಂಟು ವಿಘ್ನಗಳ ಕಾರಣ ಈ ಚಿತ್ರ ತೆಗೆದುಕೊಂಡಿದ್ದು ಬರೋಬ್ಬರಿ ಎರಡು ವರ್ಷ. ಹೊಸಬರ ಚಿತ್ರವೆಂದಾಗ ನಿರ್ಮಾಪಕರು ಹಿಂದೇಟು ಹಾಕುತ್ತಾರೆ. ಆ ಅನುಭವ ಇಲ್ಲಿಯೂ ಆಯಿತು. ಅರ್ಜುನ್‌ ‘ಅಂಬಾರಿ’ ಮತ್ತು ‘ಅದ್ದೂರಿ’ ಚಿತ್ರಗಳ ಮೂಲಕ ಯಶಸ್ವಿ ನಿರ್ದೇಶಕ ಎನಿಸಿಕೊಂಡವರು.

‘ಅಂಬಾರಿ’ ವೇಳೆ ನಟ ಯೋಗೇಶ್‌ ಚಿತ್ರರಂಗಕ್ಕೆ ಇನ್ನೂ ಹೊಸಬರಾಗಿದ್ದರು. ‘ಅದ್ದೂರಿ’ಯ ಧ್ರುವ ಸರ್ಜಾರ ಮೊದಲ ಚಿತ್ರ. ಆದರೆ ಈ ಚಿತ್ರಗಳಿಗೆ ಎದುರಾಗದಿದ್ದ ಸಮಸ್ಯೆ ‘ರಾಟೆ’ಯಲ್ಲಿ ಎದುರಾಯಿತು. ‘ಸ್ಟಾರ್‌ಗಳ ಸಿನಿಮಾ ಎಂದಾಗ ಸುಲಭವಾಗಿ ದುಡ್ಡು ಹುಟ್ಟುತ್ತವೆ. ಆದರೆ ಹೊಸ ನಾಯಕರ ಮೇಲೆ ನಿರ್ದೇಶಕನಿಗೆ ನಂಬಿಕೆ ಇರಬಹುದು, ನಿರ್ಮಾಪಕರಿಗೆ ಇರಬೇಕಲ್ಲ? ಅನೇಕರೂ ಅದೇ ಪ್ರಶ್ನೆ ಮುಂದಿಟ್ಟರು. ಹೊಸ ನಟನನ್ನು ಏಕೆ ಹಾಕಿಕೊಳ್ಳಬೇಕು ಎಂದು ಕೇಳಿದರು. ಆದರೆ ಕಥೆಗೆ ಈ ರೀತಿಯ ಕಲಾವಿದ ಬೇಕು ಎಂಬ ಕಲ್ಪನೆ ಹೊಂದಿರುವಾಗ ಅದರೊಂದಿಗೆ ರಾಜಿಯಾಗುವ ಮನಸು ಇರಲಿಲ್ಲ. ಹಾಗೂ ಹೀಗೂ ಗೆಳೆಯರು ಸೇರಿಕೊಂಡು ಸಿನಿಮಾ ಮಾಡುವ ಅನಿವಾರ್ಯತೆ ಎದುರಾಯಿತು’ ಎನ್ನುತ್ತಾರೆ ಅರ್ಜುನ್‌.

ಸ್ಟಂಟ್‌ ಮಾಸ್ಟರ್‌ ರವಿವರ್ಮ ಅವರ ಡೇಟ್ಸ್‌ಗಾಗಿ ಕಾದಿದ್ದು, ನಾಯಕ ಧನಂಜಯ್‌ ಪೆಟ್ಟುಮಾಡಿಕೊಂಡದ್ದು, ನಾಯಕಿ ಶ್ರುತಿ ಹರಿಹರನ್ ಜ್ವರದಿಂದ ಬಳಲಿದ್ದು, ಹೀಗೆ ಸಿನಿಮಾ ಮುಗಿಯಲು ಅಡ್ಡಿಯಾದವು. ಈಗ ಅಡೆತಡೆಗಳೆಲ್ಲಾ ನಿವಾರಣೆಯಾಗಿದೆ ಎನ್ನುವ ಅರ್ಜುನ್‌, ಪ್ರೇಕ್ಷಕರ ಅಭಿಪ್ರಾಯಕ್ಕೆ ಕಾದಿದ್ದಾರೆ.

‘ರಾಟೆ’ ನಿಸ್ವಾರ್ಥವಾಗಿ ಪ್ರೀತಿಸುವ ಪ್ರೇಮಿಗಳಿಗೆ ತಮ್ಮದೇ ಕಥೆಯಿದು ಎನಿಸುವ ಚಿತ್ರ ಎಂದು ಅವರು ವಿವರಿಸುತ್ತಾರೆ. ಬಾವಿಯಿಂದ ನೀರು ಸೇದಲು ಹಗ್ಗವನ್ನು ಇಳಿಸಲು ರಾಟೆ ತಿರುಗುವಂತೆ, ಬದುಕಿನ ಒಳಿತು ಕೆಡಕುಗಳನ್ನು ತಿರುಗಿಸುವ ರಾಟೆ ಒಂದಿದೆ. ಗೆದ್ದಾಗ ಅಂದುಕೊಂಡದ್ದು ಆಯಿತು ಎನ್ನುವ ಜನರು, ಸೋತಾಗ ದೇವರನ್ನು ದೂಷಿಸುತ್ತಾರೆ. ಆದರೆ ಒಳಿತು–ಕೆಡಕು ಎರಡೂ ದೇವರ ಕ್ರಿಯೆ. ಚಿತ್ರ ಈ ಎರಡನ್ನೂ ಆಪ್ತವಾಗಿ ಕಟ್ಟಿಕೊಡುತ್ತದೆ ಎನ್ನುತ್ತಾರೆ ಅರ್ಜುನ್.

ಪ್ರೀತಿ, ಪ್ರೇಮ, ಭಾವುಕತೆ, ಖುಷಿ, ಹೊಡೆದಾಟ ಹೀಗೆ ಪ್ರೇಕ್ಷಕರಿಗೆ ಇಷ್ಟವಾಗುವ ಸಂಗತಿಗಳೆಲ್ಲವೂ ‘ರಾಟೆ’ಯಲ್ಲಿದೆ ಎನ್ನುತ್ತಾರೆ ಅವರು. ತಮ್ಮ ಚಿತ್ರಗಳು ಭಾವನೆಗಳ ಮೇಲೆ ಹೆಚ್ಚು ಕೇಂದ್ರಿತವಾಗುವ ಕಾರಣವನ್ನು ಹೀಗೆ ತೆರೆದಿಡುತ್ತಾರೆ– ‘ಭಾವನೆಗಳಿಲ್ಲದ ಮನುಷ್ಯನೇ ಭೂಮಿಯಲ್ಲಿಲ್ಲ. ಹೀಗಾಗಿ ನಮ್ಮ ಕಣ್ಣೆದುರಿಗೆ ನಡೆಯುವ ಘಟನೆಗಳಿಗೆ ಎಲ್ಲರೂ ಭಾವನಾತ್ಮಕವಾಗಿ ಸ್ಪಂದಿಸುತ್ತಾರೆ. ಸಿನಿಮಾಗಳೂ ಇದರಿಂದ ಹೊರತಲ್ಲ.’

ಕಾಡಿನ ಸನ್ನಿವೇಶದ ಚಿತ್ರೀಕರಣದಲ್ಲಿ ಹೆಣಗಾಡಿನ ಅನುಭವ ಈಗಲೂ ಅವರ ಕಣ್ಣಮುಂದಿದೆ. ಯಲ್ಲಾಪುರ ಬಳಿಯ ದಟ್ಟ ಕಾಡಿನ ಒಳಹೊಕ್ಕದ್ದು ಜೂನ್‌ ತಿಂಗಳಲ್ಲಿ. ಹೇಳಿ ಕೇಳಿ ಮಳೆಗಾಲದ ಸಮಯ. 10–11 ದಿನ ಎಂದು ಯೋಜನೆ ರೂಪಿಸಿಕೊಂಡಿದ್ದವರು ಅಲ್ಲೇ 22 ದಿನ ಇರುವಂತಾಯಿತು. ಮಳೆ ಚಿತ್ರೀಕರಣಕ್ಕೆ ಅನುವು ಮಾಡಿಕೊಡದಂತೆ ಬಿಡದೆ ಸುರಿಯುತ್ತಿತ್ತು. ಅದರ ನಡುವೆಯೇ ಹಾಗೂ ಹೀಗೂ ಚಿತ್ರೀಕರಣ ಮುಗಿಸಿದ್ದಾಯಿತು. ಜಿಗಣೆ ಕಾಟ ತಡೆಯಲು ಮೈಗೆ ಎಣ್ಣೆ, ಡಿಡಿಟಿ ಹಚ್ಚಿಕೊಂಡು ಒದ್ದಾಡಿದ್ದು, ಕಾರನ್ನು ಚಿರತೆಗಳು ಸುತ್ತುವರಿದಿದ್ದು ಈಗಲೂ ಅವರ ಕಣ್ಣಮುಂದಿದೆ.

‘ರಾಟೆ’ಯ ಬೆನ್ನಲ್ಲೇ ‘ಐರಾವತ’ ಚಿತ್ರದ ಚಿತ್ರೀಕರಣವನ್ನೂ ಮುಗಿಸುವ ಉತ್ಸಾಹದಲ್ಲಿದ್ದಾರೆ ಅರ್ಜುನ್‌. ಮೊದಲ ಬಾರಿಗೆ ‘ಸ್ಟಾರ್‌’ ನಟರಿಗೆ ಆ್ಯಕ್ಷನ್‌ ಕಟ್‌ ಹೇಳುವ ಅವಕಾಶ ಅವರದು. ದರ್ಶನ್‌ ತಾವೊಬ್ಬ ಸ್ಟಾರ್‌ ಎಂದು ಒಮ್ಮೆಯೂ ತೋರಿಸಿಕೊಳ್ಳುವುದಿಲ್ಲ. ನಿರ್ದೇಶಕರ ಮಾತಿಗೆ ಮನ್ನಣೆ ನೀಡುತ್ತಾರೆ ಎಂಬ ಖುಷಿ ಅರ್ಜುನ್‌ ಅವರದು. ‘ಐರಾವತ’ ದರ್ಶನ್‌ ಅವರ ಸ್ಟಾರ್‌ ಇಮೇಜ್‌, ಗಟ್ಟಿಯಾದ ಕಥೆ, ಅರ್ಜುನ್ ಸಿನಿಮಾ ಶೈಲಿಯ ಮಿಶ್ರಣ ಎನ್ನುತ್ತಾರೆ ಅವರು.

‘ನನ್ನ ಸಿನಿಮಾಗಳ ಬಗ್ಗೆ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದಿಲ್ಲ. ಏಕೆಂದರೆ ಒಳ್ಳೆಯ ಅಥವಾ ಕೆಟ್ಟ ಸಿನಿಮಾಗಳು ಎಂಬ ವರ್ಗೀಕರಣದ ಮೇಲೆ ಸೋಲು ಗೆಲುವು ನಿರ್ಧಾರವಾಗುವುದಿಲ್ಲ. ಜನ ಯಾವ ರೀತಿ ಸ್ವೀಕರಿಸುತ್ತಾರೋ ಹೇಳಲು ಸಾಧ್ಯವಿಲ್ಲ’ ಎನ್ನುವ ಅವರು, ತಮ್ಮ ಮೂರನೇ ಕೂಸನ್ನು ಜನ ಒಪ್ಪಿಕೊಳ್ಳುತ್ತಾರೆ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.

Write A Comment