ಮನೋರಂಜನೆ

ರಿದಂ ಅಡ್ಡಾ ಎವಲ್ಯೂಷನ್‌; ಪ್ರಕೃತಿಯ ನಾದ ನೆಚ್ಚಿಕೊಂಡು…

Pinterest LinkedIn Tumblr

kbec19Rhythm-Adda1_0

-ನೇಸರ ಕಾಡನಕುಪ್ಪೆ
ಇವರಿಗೆ ಸಂಗೀತದ ಮೂಲವನ್ನು ಅರಿಯುವ ಆಸೆ! ಆದ್ದರಿಂದಲೇ ಯಾವಾಗಲೂ ಸಂಗೀತದಲ್ಲಿ ವಿವಿಧ ಪ್ರಯೋಗಗಳನ್ನು ಮಾಡುತ್ತಲೇ ಇರುತ್ತಾರೆ. ಒಂದು ಚಿಕ್ಕ ಕಡ್ಡಿ ನೆಲದ ಮೇಲೆ ಬಿದ್ದರೂ ಅದರ ಸದ್ದನ್ನು ಕೇಳಿಸಿಕೊಂಡು ಅದಕ್ಕೊಂದು ಸ್ವರವನ್ನು ಅಂಟಿಸಿ ನುಡಿಸುತ್ತಾರೆ. ಕಲ್ಲು ಎಸೆದು ಅದರಿಂದಲೂ ಸಂಗೀತದ ಇಂಪನ್ನು ಸವಿಯುತ್ತಾರೆ.

ಸಂಗೀತದ ಮೂಲವನ್ನು ಅರಿಯುತ್ತಾ ಇವರು ಅಲೆಯದ ಊರಿಲ್ಲ, ಸುತ್ತದ ಜಾಗವಿಲ್ಲ. ಹೀಗೆ ಸುತ್ತಾಟ ನಡೆಸುತ್ತ ಇವರು ಚರ್ಮವಾದ್ಯಗಳ ಮೋಹಕ್ಕೆ ಸಿಲುಕಿದರು. ಭಾರ­ತದಾದ್ಯಂತ ತಿರುಗಿ ನೂರಾರು ವಾದ್ಯಗಳನ್ನು ತಮ್ಮ ಬತ್ತಳಿಕೆಗೆ ಇಳಿಸಿಕೊಂಡರು. ಇವರನ್ನು ಸಂಗೀತದಲ್ಲಿ ‘ಚರ್ಮವಾದ್ಯ ಸ್ಪೆಷಲಿಸ್ಟ್‌’ ಅನ್ನಬಹುದು. ಶಾಸ್ತ್ರೀಯ, ಜಾನಪದ ಹಾಗೂ ಪಾಶ್ಚಿಮಾತ್ಯ ಸಂಗೀತದ ಜುಗಲ್‌ಬಂದಿ ಮಾಡುವುದರಲ್ಲಿ ಇವರು ನಿಸ್ಸೀಮರು. ಮಂಡ್ಯದ ಶ್ರೀಕಂಠಸ್ವಾಮಿ ಇವರ ಟೀಮ್‌ಲೀಡರ್‌.

ದಕ್ಷಿಣ ಕನ್ನಡದ ಅನೂಷ್‌ ಶೆಟ್ಟಿ (ಹುಣಸೂರಿನಲ್ಲಿ ವಾಸ), ಪುತ್ತೂರಿನ ಕೃಷ್ಣ ಚೈತನ್ಯ (ಮೈಸೂರಿನ ಕಾವಾ ವಿದ್ಯಾರ್ಥಿ) ಹಾಗೂ ಮೈಸೂರಿನ ಸುಂದರೇಶ ದೇವಪ್ರಿಯಂ (ಮುನ್ನ) ಮಿಕ್ಕಂತೆ ಸದಸ್ಯರು! ಇವರೆಲ್ಲರೂ  ಕಳೆದೆರಡು ವರ್ಷಗಳಿಂದ ಸಂಗೀತವನ್ನೇ ಉಸಿರಾಡುತ್ತ ಇದೀಗ ‘ರಿದಂ ಅಡ್ಡಾ’ ಎನ್ನುವ ಸಂಗೀತ ತಂಡವನ್ನು ಕಟ್ಟಿಕೊಂಡಿದ್ದಾರೆ. ಇವರ ವಿಶೇಷವೆಂದರೆ, ಚರ್ಮವಾದ್ಯಗಳನ್ನು ಬಿಟ್ಟರೆ ಮಿಕ್ಕಾವ ವಾದ್ಯವನ್ನೂ ಬಳಸದಿರುವುದು!.

ಹಸುವಿನ ಕೊರಳಿನ ಗೆಜ್ಜೆಯ ಸದ್ದು…:‘ಸಂಗೀತ ಎಂದರೆ ಅದು ವಾದ್ಯದ ಮೂಲಕವೇ ಬರಬೇಕು ಎಂದು ಹೇಳಿದವರಾರು?’ ಇದು ಇವರು ಕೇಳುವ ಪ್ರಶ್ನೆ! ಅದಕ್ಕೇ ಇವರು ತಬಲಾ, ಡ್ರಮ್‌, ಮೃದಂಗಗಳನ್ನು ಮಾತ್ರ ಸಂಗೀತಕ್ಕೆ ಬಳಸಿಕೊಳ್ಳದೇ, ಯಾರೇ ಆದರೂ ಅಚ್ಚರಿ ಪಡುವಂತೆ ಕಲ್ಲು, ಮರ, ಚಕ್ಕೆ, ಆಟಿಕೆಗಳು, ಹಸುವಿನ ಕೊರಳಿಗೆ ಕಟ್ಟುವ ಗೆಜ್ಜೆಗಳಲ್ಲೇ ಸಂಗೀತವನ್ನು ಹೊರಡಿಸುತ್ತಾರೆ. ಪರಿಸರದಲ್ಲೇ ಸಂಗೀತವಿರುತ್ತದೆ.

ಬೀಸುವ ಗಾಳಿ, ಬಿದಿರುಗಳು ಒಂದಕ್ಕೊಂದು ತಗುಲಿ ಹೊಮ್ಮುವ ಶಬ್ದ, ತರಗೆಲೆಗಳು ಹೊರಳುವ ಸದ್ದು, ಫ್ಯಾನ್‌ ತಿರುಗುವುದು, ವಾಹನ ಚಲಿಸುವುದು, ಹೀಗೆ ಪ್ರತಿಯೊಂದಕ್ಕೂ ಒಂದು ಲಯವಿರುತ್ತದೆ. ಅವನ್ನು ಅವುಗಳದೇ ಶಬ್ದದ ಮೂಲಕ ಹೊಮ್ಮಿಸುತ್ತ, ನಂತರ ತಮ್ಮಲ್ಲಿರುವ ವಿಶೇಷ ವಾದ್ಯಗಳ ಮೂಲಕ ಅವುಗಳನ್ನು ಅನುಕರಿಸುತ್ತ ಸಂಗೀತವು ಹುಟ್ಟಿದ ಕಥೆಯನ್ನು ಹೇಳುವ ಕಥೆಗಾರರಾಗಿ ಬಿಡುತ್ತಾರೆ ಈ ಸಂಗೀತಪ್ರಿಯರು.

ಈ ಕಥೆಗಾರರ ಕಥೆ: ರಿದಂ ಅಡ್ಡಾ ಹುಟ್ಟಿಹಾಕಿದವರು ಶ್ರೀಕಂಠಸ್ವಾಮಿ. ಮೂಲತಃ ಮಂಡ್ಯದವರಾದರೂ, ವಾಸ ಮೈಸೂರಿನಲ್ಲಿ. ಬಿಕಾಂ ಪದವೀಧರ. ಇವರದು ಸಂಗೀತಗಾರರ ಕುಟುಂಬ. ಇವರ ತಾತ ಹಾರ್ಮೋ ನಿಯಂ ಮಾಸ್ಟರ್‌. ತಂದೆ ನಂಜುಂಡಸ್ವಾಮಿ ಸಹ ಖಂಜರಿ ವಾದಕರು. ಆದರೂ ಇವರಿಗೆ ಸಂಗೀತವನ್ನು ವೃತ್ತಿಪರವಾಗಿ ಕಲಿಯುವ ಅವಕಾಶ ಸಿಕ್ಕಿರಲಿಲ್ಲ. ಕಾರಣ ಸಾಂಪ್ರದಾಯಿಕ ಶಿಕ್ಷಣ. ಸಂಗೀತ ವಾದ್ಯಗಳನ್ನು ಕೊಳ್ಳುವ ಆಸಕ್ತಿ ಇವರಿಗೆ ಯಾವಾಗಲೂ ಇರುತ್ತಿತ್ತು. ಆದರೆ, ಕೈಯಲ್ಲಿ ಕಾಸಿರುತ್ತಿರಲಿಲ್ಲ. ಹೇಗೋ ಒಂದಷ್ಟು ಹಣ ಹೊಂದಿಸಿಕೊಂಡು ಒಮ್ಮೆ ಗೆಳೆಯರೊಂದಿಗೆ ಮುಂಬೈಗೆ ಹೋಗಿದ್ದಾಗ ಒಂದು ಢೋಲಕ್‌ ಕೊಂಡರು.

ಅಂದಿನಿಂದ ಇವರಿಗೆ ವಾದ್ಯದ ಹುಚ್ಚು ಅಂಟಿಕೊಂಡಿತು. ಮೈಸೂರಿನ ವಿದ್ಯಾವರ್ಧಕ ಕಾಲೇಜಿನಲ್ಲಿ ಬಿಕಾಂ ಓದಲು ಸೇರಿದರಾದರೂ ಇವರ ಮನಸ್ಸೆಲ್ಲಾ ಸಂಗೀತದ ಕಡೆಗೇ ಇರುತ್ತಿತ್ತು. ಆದರೆ ಇವರ ಸಂಗೀತ ಪ್ರೇಮಕ್ಕೆ ಪ್ರೋತ್ಸಾಹಕ್ಕಿಂತ ಗೇಲಿ ಮಾತುಗಳು ಬಂದಿದ್ದೇ  ಹೆಚ್ಚು. ‘ಸಂಗೀತ ಹೊಟ್ಟೆ ತುಂಬಿಸುವುದಿಲ್ಲ, ಬಿಕಾಂ ಓದುತ್ತಿದ್ದೀಯ, ಅದನ್ನು ಮುಗಿಸು. ಸಿ.ಎ ಮಾಡು, ಬುದ್ಧಿ ಬೆಳೆಸಿಕೋ’ ಎಂದು ಹೇಳಿದವರೇ ಬಹು ಪಾಲು. ಆದರೆ ಇವರು ನಿರ್ಧರಿಸಿಕೊಂಡಿದ್ದರು.

ಓದಿನ ಮೂಲಕ ಬದುಕು ಕಟ್ಟಿಕೊಳ್ಳುವ ಅನಿವಾರ್ಯತೆ ಇಲ್ಲ. ಹಣ ಗಳಿಸುವುದು ಮುಖ್ಯವೇ ಅಲ್ಲ, ಆಸಕ್ತಿ ಇರುವ ಸಂಗೀತವನ್ನೇ ಅಪ್ಪಿಕೊಳ್ಳಬೇಕೆಂದು. ರಂಗಾಯಣದಲ್ಲಿ ಸಿ. ಬಸವಲಿಂಗಯ್ಯ ಅವರ ನಿರ್ದೇಶನದಲ್ಲಿ ಮೂಡಿಬಂದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ನಾಟಕಕ್ಕೆ ಸಂಗೀತ ತಂಡದಲ್ಲಿ ವಾದಕರಾಗಿ ಸಂಗೀತ ನಿರ್ದೇಶಕ ಶ್ರೀನಿವಾಸ ಭಟ್‌ ಅವರ ಬಳಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆಗಲೇ, ಮಿಕ್ಕ ಮೂರು ಮಂದಿ ಇವರಿಗೆ ಪರಿಚಯವಾಗಿ ತಂಡ ಕಟ್ಟಲು ಮುಂದೆ ಕಾಲ ಕೂಡಿಬಂದಿದ್ದು.

ರಂಗಾಯಣಕ್ಕೆ ಬಂದಿದ್ದ ಆ ಮೂರು ಮಂದಿಯ ಭೇಟಿಯಾಯಿತು. ಎಲ್ಲರೂ ಸೇರಿ ಸಣ್ಣ ಪುಟ್ಟ ವಾದ್ಯಗಳನ್ನು ಕೂಡಿಸುವ ಹವ್ಯಾಸ ಬೆಳೆಸಿಕೊಂಡರು.  ಶ್ರೀಕಂಠಸ್ವಾಮಿ ಅವರ ಬಳಿಯಿದ್ದ  ಢೋಲಕ್‌, ಕೃಷ್ಣ ಚೈತನ್ಯ ಅವರ ಬಳಿಯಿದ್ದ ಚಂಡೆಗಳ ಜತೆ ವಾದ್ಯಗಳು ಸೇರುತ್ತಾ ಹೋದವು. ಅಂತೆಯೇ ಅನೂಷ್‌ ಶೆಟ್ಟಿಯ ವಾದ್ಯ ವೈಖರಿ, ಮುನ್ನಾ ಅವರ ಗಾಯನ, ಗಿಟಾರ್‌ ವಾದನ ಇವರಿಗೆ ಸಾಥ್‌ ನೀಡಿತು. ಕೇವಲ ಮೈಸೂರು, ಸುತ್ತಮುತ್ತಲ ಪ್ರದೇಶಗಳ ವಾದ್ಯಗಳು ಸಾಲದು, ಬೇರೆಡೆಯ ವಾದ್ಯಗಳೂ ಇದ್ದರೆ ಚೆನ್ನ ಎಂಬ ಯೋಚನೆಯೂ ಬಂದಿತು. ಅಲ್ಲಿಗೆ ಇವರ ಪಯಣ ಆರಂಭವಾಯಿತು.

ಪರ್ಕಷನ್‌ ಹಂಟಿಂಗ್‌:ಇವರು ವಾದ್ಯ ಸಂಗ್ರಹ ಮಾಡುವ ಕೆಲಸ ಶುರು ವಿಟ್ಟುಕೊಂಡರು. ಕರ್ನಾಟಕದ ತುತ್ತತುದಿ ಚಾಮರಾಜನಗರದಿಂದ ಬೆಳೆಸಿದ ಪ್ರಯಾಣ ವಾಘಾ ಗಡಿವರೆಗೂ ಹೋಯಿತು. ಪುಣೆ, ಮುಂಬೈ, ಭೋಪಾಲ್‌, ಅಮೃತ್‌ಸರ್‌, ಜೈಪುರ್‌, ಲಖನೌ, ಚಂಡೀಗಡ ಹೀಗೆ ಹತ್ತಾರು ಪ್ರದೇಶಗಳಿಗೆ ವಾದ್ಯ ಸಂಗ್ರಹಿಸಲೆಂದೇ ತಿರುಗಿದರು. ಇದು 2009ರಲ್ಲಿ ಆರಂಭವಾದ ಪಯಣ. ಈಗ ಇವರ ಬಳಿ 100ಕ್ಕೂ ಹೆಚ್ಚು ಚರ್ಮವಾದ್ಯಗಳಿವೆ. ಇವುಗಳಲ್ಲಿ 30ಕ್ಕೂ ಹೆಚ್ಚು ಬಗೆಯ ಪ್ರತ್ಯೇಕ ವಾದ್ಯಗಳಿವೆ. ಇವೆಲ್ಲವನ್ನೂ ನುಡಿಸುವ ಪ್ರಾವೀಣ್ಯವನ್ನು ರೂಢಿಸಿಕೊಂಡಿದ್ದೂ ಇವರ ಸಾಧನೆ.

ರಿದಂ ಅಡ್ಡಾ ಹುಟ್ಟು
ಕಷ್ಟಪಟ್ಟು ವಾದ್ಯಗಳ ಸಂಗ್ರಹ ಮಾಡಿದ್ದಾಯಿತು. ಅವುಗಳನ್ನು ಕಲಿತದ್ದೂ ಆಯಿತು. ಆದರೆ ಅದಕ್ಕೊಂದು ರೂಪಕೊಟ್ಟು ಏಕೆ ಕಾರ್ಯಕ್ರಮ ಮಾಡಬಾರದು ಎಂಬ ಆಲೋಚನೆ ಈ ನಾಲ್ಕೂ ಮಂದಿಗೆ ಬಂದಿತು. ಆಗ ರಂಗಾಯಣದಲ್ಲಿ ‘ಕಾಲೇಜು ನಾಟಕೋತ್ಸವ’ ನಡೆಯುತ್ತಿದ್ದ ಕಾಲ. ವಿವಿಧ ಕಾಲೇಜುಗಳ ರಂಗಾಸಕ್ತ ವಿದ್ಯಾರ್ಥಿಗಳು, ವಿಷಯ ತಜ್ಞರು ಬಂದಿದ್ದರು. ಅವರನ್ನೆಲ್ಲಾ ರಂಗಾಯಣದ ಪ್ರಾಂಗಣದಲ್ಲಿ ಒಟ್ಟುಗೂಡಿಸಿ, ‘ಸಂಗೀತದ ಬೆಳವಣಿಗೆ’ ಎಂಬ ಕಾರ್ಯಕ್ರಮ ನಡೆಸಿಕೊಟ್ಟರು. ಅದೊಂದು ತೀರಾ ಚಿಕ್ಕ ಕಾರ್ಯಕ್ರಮ.

ಸಂಗೀತವು ಶಿಲಾಯುಗದಿಂದ ನವಯುಗದವರೆಗೆ ಹೇಗೆ ಹುಟ್ಟಿ ಬೆಳೆದುಬಂದಿತು ಎಂಬ ಕಥೆಯನ್ನು ಹೇಳುವ ಪ್ರಯತ್ನವದು. ಅಚ್ಚರಿ ಎಂಬಂತೆ, ಅವರ ಕಾರ್ಯಕ್ರಮ ಹಿಟ್ ಆಗಿಬಿಟ್ಟಿತು. ದಿನ ಬೆಳಗಾಗುವುದರೊಳಗೆ ಇವರದ್ದೇ ಮಾತು ಹರಡಿತು. ಮೈಸೂರಿನ ಸಿದ್ಧಾರ್ಥನಗರ ಬಡಾವಣೆಯ ವಾಣಿಜ್ಯ ತೆರಿಗೆ ಇಲಾಖೆಯ ಸಿಬ್ಬಂದಿಗೆ ಹೇಗೋ ಈ ಸುದ್ದಿ ಮುಟ್ಟಿ, ಇವರನ್ನು ಕರೆಸಿಕೊಂಡು ತಮ್ಮಲ್ಲೂ ಕಾರ್ಯಕ್ರಮ ನೀಡುವಂತೆ ಕೋರಿದರು. ಅಲ್ಲಿಂದ ಇವರ ಪಯಣ ಶುರು.

2014ರಲ್ಲಿ ‘ರಿದಂ ಅಡ್ಡಾ’ ಎಂಬ ಬ್ಯಾಂಡ್‌ ಕಟ್ಟಿಕೊಂಡು ವಿವಿಧ ಶಾಲಾ- ಕಾಲೇಜು, ಸಂಘ ಸಂಸ್ಥೆಗಳನ್ನು ತಿರುಗಿದರು. ಐಕಾನ್‌ ಶಾಲೆ, ಬೆಂಗಳೂರಿನ ವೈಟ್‌ಫೀಲ್ಡ್‌ನ ಫಿನಿಕ್ಸ್‌ ಮಾಲ್‌, ಮೈಸೂರಿನ ಕಾವಾ ಮೇಳ, ಹುಣಸೂರಿನ ಟ್ಯಾಲೆಂಟ್‌ ಶಾಲೆ, ಕೆಎಲ್‌ಜಿ ಶಾಲೆ, ಮಹಾರಾಣಿ ಕಾಲೇಜು, ಕಲಾಮಂದಿರ- ಹೀಗೆ ಸಾಕಷ್ಟು ಪ್ರದರ್ಶನಗಳನ್ನು ನೀಡಿದರು. ನಂತರ,ಮೈಸೂರಿನ ವಿಜಯನಗರ 3ನೇ ಹಂತದಲ್ಲಿ ‘ಹಾರಿಜಾನ್‌ ಸ್ಕೂಲ್‌ ಆಫ್‌ ಡ್ರಮ್ಸ್‌’ ಎಂಬ ಶಾಲೆಯನ್ನು ಆರಂಭಿಸಿ ವಾದ್ಯ ಕಲಿಸಲೂ ಮುಂದಾದರು.

ಫ್ರಾನ್ಸ್‌ನ ಥಿಯೋ ಸ್ನೇಹ
ಈಗಷ್ಟೇ ಮೈಸೂರಿನ ರಂಗಾಯಣದಲ್ಲಿ ನಡೆದ ಬಹುರೂಪಿ ನಾಟಕೋತ್ಸವದಲ್ಲಿ ಇವರು ಪ್ರದರ್ಶನ ನೀಡಿದ್ದರು. ಇವರ ಕಾರ್ಯಕ್ರಮ ಕಂಡು ಸ್ನೇಹಿತರಾದವರು ಫ್ರಾನ್ಸ್‌ನ ಥಿಯೋ. ಅಡುಗೆಭಟ್ಟರಾದ ಥಿಯೊ ಇವರ ವಾದ್ಯದ ಪರಿಣತಿ ಕಂಡು ಬೆರಗಾಗಿ, ಫ್ರಾನ್ಸ್‌ನಲ್ಲಿ ನಡೆಯುವ ಸಂಗೀತ ಹಬ್ಬಕ್ಕೆ ಬಂದು ಕಾರ್ಯಕ್ರಮ ನೀಡಬೇಕು ಎಂದು ಪಟ್ಟುಹಿಡಿದರು. ಮೈಸೂರಿಗೆ ಯೋಗ ಕಲಿಯಲೆಂದು ಬಂದ ಥಿಯೋ ಇವರಿಗೆ ಸ್ನೇಹಿತರಾಗಿ, ವಾದ್ಯದ ಹುಚ್ಚು ಅಂಟಿಸಿಕೊಂಡು ಹೋಗಿದ್ದು ಇದೆ!

ತ್ರಿ- ವಿಷಯ ವಿಶೇಷ
‘ರಿದಂ ಅಡ್ಡಾ’ ಮೂರು ಮುಖ್ಯ ವಿಷಯಗಳ ಪರಿಣತಿ ಹೊಂದಿದೆ. ಅದರಂತೆ, ಇವರು ಮೂರು ರೀತಿಯ ಕಾರ್ಯಕ್ರಮಗಳನ್ನು ನೀಡುತ್ತಾರೆ. ಸಂಗೀತದ ಬೆಳವಣಿಗೆ, ಜುಗಲ್‌ಬಂದಿ ಹಾಗೂ ಅಬ್‌ಸ್ಟ್ರಾಕ್ಟ್‌ ಎಂಬ ವಿನೂತನ ಪ್ರಕಾರ. ಈಗಾಗಲೇ ಹೇಳಿದಂತೆ ‘ಸಂಗೀತದ ಬೆಳವಣಿಗೆ’ಯಲ್ಲಿ ಸಂಗೀತದ ಪಯಣವನ್ನು ವಿವರಿಸುತ್ತಾರೆ. ಈಗಿನ ‘ಡಿಜೆ’ವರೆಗೆ ಸಂಗೀತ ಹೇಗೆ ಬೆಳೆಯಿತು ಎನ್ನುವ ಕಥೆ. ಇದಕ್ಕೇ ಹೆಚ್ಚು ಡಿಮ್ಯಾಂಡ್‌. ಜುಗಲ್‌ಬಂದಿಯಲ್ಲಿ ಪಾಶ್ಚಿಮಾತ್ಯ, ಶಾಸ್ತ್ರೀಯ ಹಾಗೂ ಜಾನಪದ ಸಂಗೀತದ ಮಿಶ್ರಣ, ಅಬ್‌ಸ್ಟ್ರಾಕ್ಟ್‌ ಎಂಬ ಪ್ರಕಾರದಲ್ಲಿ ಪರಿಸರದ ಸಹಜ ಧ್ವನಿಯನ್ನು ಬಳಸಿಕೊಳ್ಳುವ, ಅದನ್ನು ತಮ್ಮ ವಾದ್ಯಗಳ ಮೂಲಕ ಅನುಕರಿಸಿ ಸಂಗೀತ ಹೊಮ್ಮಿಸುತ್ತಾರೆ.

‘ನಮ್ಮ ಕಾರ್ಯಕ್ರಮಗಳಿಗೆ ಇಂಥದ್ದೇ ಜಾಗವಾಗಬೇಕು ಎಂದೇನೂ ಇಲ್ಲ. ಎಲ್ಲೆಂದರಲ್ಲಿ ಆದೀತು. ರಸ್ತೆ, ಫುಟ್‌ಪಾತ್‌, ಕಚೇರಿ ಹೊರ- ಒಳಗೆ, ವೇದಿಕೆ, ಮನೆ, ಹಳ್ಳಿ, ನಗರ ಯಾವುದಾದರೂ ಸರಿ, ನಮ್ಮ ಮುಖ್ಯ ಉದ್ದೇಶ ವಾದ್ಯ ಸಂಗೀತವನ್ನು ಎಲ್ಲರಿಗೂ ತಲುಪಿಸುವುದಷ್ಟೇ’ ಎನ್ನುತ್ತಾರೆ ಶ್ರೀಕಂಠಸ್ವಾಮಿ. ಇವರ ರಿದಂ ಅಡ್ಡಾದಲ್ಲಿ ಈಗ ನಾಲ್ಕು ಮಂದಿ ಇರುವುದಾದರೂ, ಅದನ್ನು ವಿಸ್ತರಿಸುವ ಆಲೋಚನೆಯೂ ಇವರಿಗೆ ಇದೆ. ಜಾನಪದ ಕಲಾವಿದರನ್ನು ಅವರವರ ಜಾಗಗಳಲ್ಲಿ ಸೇರಿಸಿಕೊಳ್ಳುವ ಯೋಜನೆ. ಅವರಿದ್ದಲ್ಲಿಗೇ ಹೋಗಿ, ಅವರ ಜೊತೆ ಕಾರ್ಯಕ್ರಮ ನೀಡುವುದು. ಅಂತೆಯೇ ವಿದೇಶಿಯರೂ ಸೇರಿಕೊಳ್ಳಲಿದ್ದಾರೆ. ಶ್ರೀಲಂಕಾದ ವಾದ್ಯ ಕಲಾವಿದ ಜೆಮಿತ್‌ ಸಿರಿಮಲ್‌ ಈಗಾಗಲೇ ಇವರೊಂದಿಗಿದ್ದಾರೆ. ಫ್ರಾನ್ಸ್‌ನ ಥಿಯೋ ಸಹ ಸೇರುವಂತೆ ತಿಳಿಸಿದ್ದಾರೆ.

ಹೊಟ್ಟೆಯನ್ನೂ ತುಂಬಿಸುತ್ತದೆ
‘ಸಂಗೀತ ಹೊಟ್ಟೆತುಂಬಿಸುವುದಿಲ್ಲ’ ಎಂಬ ಇವರ ಶಿಕ್ಷಕರ ಮಾತು ಇವರ ಕಿವಿಯಲ್ಲಿ ಇನ್ನೂ ಗುನುಗುತ್ತಲೇ ಇದೆ. ಅದಕ್ಕೇ ‌ಸಂಗೀತದಿಂದಲೂ ಹೊಟ್ಟೆ ತುಂಬಿಸಿಕೊಳ್ಳಬಹುದು, ಅಷ್ಟೇ ಏಕೆ, ಐಷಾರಾಮಿ ಬದುಕು ಕಟ್ಟಿಕೊಳ್ಳ ಬಹುದು ಎಂಬುದನ್ನು ತೋರಿಸುವ ಛಲ ಇವರಲ್ಲಿ ತುಂಬಿಕೊಂಡಿದೆ. ಕಾಲೇಜು ಸಮಯದಲ್ಲಿ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾಗ ದಿನಕ್ಕೆ 30 ರಿಂದ 80 ರೂಪಾಯಿ ಸಂಭಾವನೆ ಸಿಗುತ್ತಿತ್ತಂತೆ.

ಈಗ ಅದು ದಿನಕ್ಕೆ 1000 ರೂಪಾಯಿವರೆಗೂ ಏರಿದೆ. ‘ಸಂಗೀತದಲ್ಲಿ ಪರಿಣತಿ ಮುಖ್ಯ. ಕಠಿಣ ಶ್ರಮ ಅಗತ್ಯ. ಸಿಕ್ಕ ಅವಕಾಶವನ್ನು ತಾಳ್ಮೆಯಿಂದ ಉಪಯೋಗಿಸಿಕೊಳ್ಳುವುದೂ ಮುಖ್ಯ’ ಎಂಬ ಕಿವಿ ಮಾತನ್ನೂ ಹೇಳುತ್ತಾರೆ.  ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಗೀತದಲ್ಲಿಯೇ ಬದುಕು ಕಟ್ಟಿಕೊಳ್ಳುವ ಹುಮ್ಮಸ್ಸಿನಲ್ಲಿದ್ದಾರೆ ಈ ಹುಡುಗರು.  ಇವರ ಸಂಪರ್ಕಕ್ಕೆ: 9620960051.

Write A Comment