ಕರ್ನಾಟಕ

ಡಿ.ಕೆ. ರವಿ ಸಾವಿನ ಪ್ರಕರಣ: ಸದನದಲ್ಲಿ ಮುಂದುವರಿದ ಅಹೋರಾತ್ರಿ ಧರಣಿ

Pinterest LinkedIn Tumblr

pvec19march15Council04ಬೆಂಗಳೂರು: ‘ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು’ ಎಂದು ಉಭಯ ಸದನಗಳಲ್ಲಿ ಬುಧವಾರ ಬಿಜೆಪಿ ಹಾಗೂ ಜೆಡಿಎಸ್‌ ಸದಸ್ಯರು ಅಹೋರಾತ್ರಿ ಧರಣಿ ಮುಂದುವರಿಸಿದರು.

‘ರವಿ ಅವರ ಸಾವಿನ ಪ್ರಕರಣ ಕುರಿತಂತೆ ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದ್ದು, ಸಿಬಿಐಗೆ ಒಪ್ಪಿಸುವಂತಹ ಯಾವ ಅಗತ್ಯವೂ ಕಂಡಿಲ್ಲ’ ಎಂದು ಗೃಹ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು. ಸಚಿವರ ಈ ಹೇಳಿಕೆಯಿಂದ ಕೆರಳಿದ ಧರಣಿನಿರತ ವಿರೋಧಪಕ್ಷದ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ನಮ್ಮ ಮಾತನ್ನು ಕೇಳುವುದು ಬೇಡ. ಜನರ ಭಾವನೆಗೆ ಬೆಲೆ ಕೊಡಿ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ’ ಎಂದು ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆಗ್ರಹಿಸಿದರು. ‘ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣ ಮುಚ್ಚಿಹಾಕುವ ಯತ್ನ ನಡೆದಿದೆ’ ಎಂದೂ ಅವರು ದೂರಿದರು.

‘ರಾಜ್ಯ ಪೊಲೀಸರ ಮೇಲೆ ನಿಮಗೆ ವಿಶ್ವಾಸವಿಲ್ಲವೆ, ಅವರ ಸಾಮರ್ಥ್ಯದ ಮೇಲೆ ನಿಮಗೆ ಅಪನಂಬಿಕೆಯೇ’ ಎಂದು ಜಾರ್ಜ್‌ ಕೆಣಕಿದರು. ಇದರಿಂದ ಮತ್ತಷ್ಟು ಕೆರಳಿದ ವಿರೋಧಪಕ್ಷದ ಸದಸ್ಯರು ಜಾರ್ಜ್‌ ವಿರುದ್ಧ ಘೋಷಣೆ ಕೂಗಿದರು.

ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ, ‘ಪ್ರಕರಣಕ್ಕೆ ಹಲವು ಆಯಾಮಗಳಿದ್ದು ಸಿಬಿಐ ತನಿಖೆಯಿಂದ ಮಾತ್ರ ಸತ್ಯ ಹೊರಬರಲು ಸಾಧ್ಯ. ಇದು ರಾಜ್ಯದ ಜನರ ಅಭಿಪ್ರಾಯವೂ ಆಗಿದೆ. ನಾವೇನು ಯಾವುದೇ ಮಂತ್ರಿಗಳ ಮೇಲೆ ಆರೋಪ ಮಾಡುತ್ತಿಲ್ಲ. ಈ ವಿಷಯದಲ್ಲಿ ಸರ್ಕಾರಕ್ಕೆ ಪ್ರತಿಷ್ಠೆ ಬೇಡ’ ಎಂದು ಹೇಳಿದರು.

‘ಧರಣಿ ಕೈಬಿಟ್ಟು ಕಲಾಪದಲ್ಲಿ ಪಾಲ್ಗೊಳ್ಳಿ. ಬಜೆಟ್‌ ಮೇಲೆ ಮಹತ್ವದ ಚರ್ಚೆಯನ್ನು ನಡೆಸಬೇಕಿದೆ’ ಎಂದು ಸ್ಪೀಕರ್‌ ಕಾಗೋಡು ತಿಮ್ಮಪ್ಪ ಮನವಿ ಮಾಡಿದರು. ಅದಕ್ಕೆ ಧರಣಿನಿರತ ಶಾಸಕರು ಒಪ್ಪಲಿಲ್ಲ. ಮಧ್ಯಾಹ್ನ 3ರವರೆಗೆ ಕಲಾಪವನ್ನು ಮುಂದೂಡಲಾಯಿತು.
ಮಧ್ಯಾಹ್ನ ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್‌ ಪೀಠದ ಎದುರು ಧರಣಿನಿರತರಾಗಿದ್ದ ವಿರೋಧ ಪಕ್ಷದ ಸದಸ್ಯರು ಸಿಬಿಐ ತನಿಖೆಗೆ ಆಗ್ರಹಿಸಿ ಘೋಷಣೆ ಕೂಗಲಾರಂಭಿಸಿದರು.  ‘ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ಸಿಬಿಐ ತನಿಖೆಗೆ ಆದೇಶಿಸಬೇಕು’ ಎಂದು ಶೆಟ್ಟರ್‌ ವಾಗ್ದಾಳಿ ನಡೆಸಿದರು.

‘ಸರ್ಕಾರಕ್ಕೆ ಮಾನ, ಮರ್ಯಾದೆ ಎಲ್ಲವೂ ಇದೆ. ಆದರೆ, ಸಿಬಿಐ ತನಿಖೆಗೆ ವಹಿಸುವುದಿಲ್ಲ. ಸಿಐಡಿ ಪೊಲೀಸರೇ ತನಿಖೆ ನಡೆಸುತ್ತಾರೆ. ರಾಜಕೀಯಕ್ಕಾಗಿ ಸುಳ್ಳು ಆರೋಪ ಮಾಡಬೇಡಿ’ ಎಂದು ಉನ್ನತ ಶಿಕ್ಷಣ ಸಚಿವ ಆರ್‌.ವಿ.ದೇಶಪಾಂಡೆ ಪ್ರತ್ಯುತ್ತರ ನೀಡಿದರು.

ಇಷ್ಟಾಗುತ್ತಿದ್ದಂತೆ ಗದ್ದಲ ಹೆಚ್ಚಾಯಿತು. ಸುಗಮ ಕಲಾಪಕ್ಕೆ ಅವಕಾಶ ಕಲ್ಪಿಸುವಂತೆ ಸ್ಪೀಕರ್‌ ಮನವಿ ಮಾಡಿದರು. ಈ ನಡುವೆಯೇ ಮಂಗಳವಾರ ಮತ್ತು ಬುಧವಾರದ ಪ್ರಶ್ನೋತ್ತರಗಳನ್ನು ಸದನದಲ್ಲಿ ಮಂಡಿಸಲಾಯಿತು. ಗಲಾಟೆ ಇನ್ನೂ ಹೆಚ್ಚಿದಾಗ ಸ್ಪೀಕರ್ ಕಲಾಪವನ್ನು ಗುರುವಾರಕ್ಕೆ ಮುಂದೂಡಿದರು.
*
ಯಾವ ತನಿಖೆ ನಡೆಸಬೇಕು ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಸತ್ಯಾಂಶ ಹೊರತರಲು ಸಿಐಡಿ ಸಮರ್ಥವಾಗಿದೆ. ಆಲದ ಮರದ ಕೆಳಗೆ ಪಂಚಾಯಿತಿ ಮಾಡಿದರೆ ಆಗುವುದಿಲ್ಲ. ವಾಸ್ತವ ಸ್ಥಿತಿ ಅರಿತು ಮಾತನಾಡಬೇಕಾಗುತ್ತದೆ.
– ಕೆ.ಜೆ.ಜಾರ್ಜ್‌,
ಗೃಹ ಸಚಿವ.
*
ಸದನದಲ್ಲಿ ಕೇಳಿಸಿದ್ದು
ಕುಂಬಳಕಾಯಿ ಕಳ್ಳ ಎಂದರೆ ಕೆ.ಜೆ. ಜಾರ್ಜ್‌ ಏಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಾರೆ?
–ಜಗದೀಶ ಶೆಟ್ಟರ್‌

ವಿರೋಧಪಕ್ಷದ ನಾಯಕ
ಸಿಬಿಐ ತನಿಖೆ ಎಂದೊಡನೆ ಗೃಹ ಸಚಿವರಿಗೆ ಅಷ್ಟೊಂದು ಆತಂಕ ಯಾಕೋ?
–ಬಿಜೆಪಿ ಶಾಸಕರು
(ಜಾರ್ಜ್‌ ಸಿಟ್ಟನ್ನು ಉಲ್ಲೇಖಿಸಿ)

ರವಿ ಅವರಿಗೆ ಯಾವ ಕೌಟುಂಬಿಕ ಸಮಸ್ಯೆಯೂ ಇರಲಿಲ್ಲ. ಅವರ ಚಾರಿತ್ರ್ಯಹರಣ ಮಾಡುವಂತಹ ಸುದ್ದಿಗಳನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ.  ಪತ್ನಿ ಕುಸುಮಾ ಸ್ವತಃ ಅತ್ತೆ–ಮಾವನಿಗೆ ತಮ್ಮಲ್ಲಿ ಬಂದು ನೆಲೆಸುವಂತೆ ಕೋರಿದ್ದರು
–ಆರ್‌.ಅಶೋಕ
ವಿಧಾನಸಭೆ ವಿರೋಧಪಕ್ಷದ ಉಪನಾಯಕ

Write A Comment