ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ಮರಳು ಅಕ್ರಮ ಸಾಗಣೆ ತಡೆಯಲು ಗಸ್ತು ತಿರುಗುತ್ತಿದ್ದ ತಹಶೀಲ್ದಾರ್ ಹಾಗೂ ಸಿಬ್ಬಂದಿಯಿದ್ದ
ವಾಹನಕ್ಕೆ ಮರಳು ಸಾಗಿಸುತ್ತಿದ್ದ ಲಾರಿ ಡಿಕ್ಕಿ ಹೊಡೆಸಲು ಯತ್ನಿಸಿದ ಘಟನೆ ತಾಲ್ಲೂಕಿನ ಬ್ಯಾಲಹುಣಸಿ ಗ್ರಾಮದ ಬಳಿ ಮಂಗಳವಾರ ಮಧ್ಯರಾತ್ರಿ ಸಂಭವಿಸಿದೆ.
ತುಂಗಭದ್ರಾ ನದಿ ತೀರದಲ್ಲಿ ಮಧ್ಯರಾತ್ರಿ 12.30ರ ವೇಳೆಗೆ ಗಸ್ತು ತಿರುಗುತ್ತಿದ್ದ ತಹಶೀಲ್ದಾರ್ ಎಚ್.ವಿಶ್ವನಾಥ ಬ್ಯಾಲಹುಣಸಿಯಿಂದ ಹಾವೇರಿ ಕಡೆ ಹೊರಟಿದ್ದ ಮರಳು ತುಂಬಿದ ಲಾರಿ ನಿಲ್ಲಿಸುವಂತೆ ಸೂಚಿಸಿದರು. ಆಗ ಲಾರಿ ಚಾಲಕ, ಸರ್ಕಾರಿ ಜೀಪ್ಗೆ ಲಾರಿ ಡಿಕ್ಕಿ ಹೊಡೆಸಲು ಮುಂದಾದ.
ಜೀಪ್ ಚಾಲಕನ ಸಮಯಪ್ರಜ್ಞೆಯಿಂದಾಗಿ ತಹಶೀಲ್ದಾರ್ ಹಾಗೂ ಅವರ ಜತೆಗಿದ್ದ ಕಂದಾಯ ಇಲಾಖೆ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಂತರ ಚಾಲಕ ಲಾರಿಯನ್ನು (ಸಂಖ್ಯೆ ಕೆ.ಎ. 27– 0597) ಮಾರ್ಗಮಧ್ಯೆ ಬಿಟ್ಟು ಪರಾರಿಯಾಗಿದ್ದಾನೆ.
ಒಂದು ತಿಂಗಳ ಹಿಂದೆ ಹೂವಿನ ಹಡಗಲಿ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡಿದ್ದ ವಿಶ್ವನಾಥ್ ಅವರು, ಅಕ್ರಮ ಮರಳು ಸಾಗಣೆ ತಡೆಯಲು ನದಿ ತೀರದಲ್ಲಿ ಮೇಲಿಂದ ಮೇಲೆ ದಾಳಿ ನಡೆಸಿದ್ದರು. ಒಂದೇ ವಾರದಲ್ಲಿ 15ಕ್ಕೂ ಹೆಚ್ಚು ಟ್ರ್ಯಾಕ್ಟರ್ ಹಾಗೂ 4 ಲಾರಿಗಳನ್ನು ವಶಪಡಿಸಿಕೊಂಡು ಅಕ್ರಮಕ್ಕೆ ಕಡಿವಾಣ ಹಾಕಿ, ಮರಳು ಮಾಫಿಯಾಗೆ ಬಿಸಿ ಮುಟ್ಟಿಸಿದ್ದರು.
*
ಮುಖ್ಯಾಂಶಗಳು
ಪ್ರಾಣಾಪಾಯದಿಂದ ಪಾರು ಮಾಡಿದ ಜೀಪ್ ಚಾಲಕನ ಸಮಯಪ್ರಜ್ಞೆ
ಹಾವೇರಿ ಮೂಲದ ಲಾರಿ ಚಾಲಕ ಪರಾರಿ
