ಮನೋರಂಜನೆ

ಸಂಗಕ್ಕಾರ, ಜಯವರ್ಧನೆ ವಿದಾಯ

Pinterest LinkedIn Tumblr

pvec19xsangakkara

ಸಿಡ್ನಿ: ಶ್ರೀಲಂಕಾ ಕಂಡಂತಹ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಕುಮಾರ ಸಂಗಕ್ಕಾರ ಮತ್ತು ಮಾಹೇಲ ಜಯವರ್ಧನೆ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ.

ವಿಶ್ವಕಪ್‌ ಟೂರ್ನಿಯೊಂದಿಗೆ ಏಕದಿನ ಕ್ರಿಕೆಟ್‌ನಿಂದ ದೂರ ಸರಿಯು ವುದಾಗಿ ಇವರಿಬ್ಬರು ಹೇಳಿದ್ದರು. ಶ್ರೀಲಂಕಾ ತಂಡ ಕ್ವಾರ್ಟರ್‌ ಫೈನಲ್‌ನಲ್ಲಿ ಸೋಲು ಅನುಭವಿಸಿದ ಕಾರಣ ಸಂಗಕ್ಕಾರ ಮತ್ತು ಜಯವರ್ಧನೆ ಅವರ ಏಕದಿನ ಕ್ರಿಕೆಟ್‌ ಜೀವನಕ್ಕೆ ತೆರೆಬಿದ್ದಿದೆ.
ವಿಶ್ವಕಪ್‌ ಗೆಲ್ಲುವ ಮೂಲಕ ಇವರಿಬ್ಬರ ವಿದಾಯ ಟೂರ್ನಿಯನ್ನು ಸ್ಮರಣೀಯನ್ನಾಗಿಸುವ ಗುರಿಯನ್ನು ಲಂಕಾ ತಂಡ ಹೊಂದಿತ್ತು. ಆದರೆ ದಕ್ಷಿಣ ಆಫ್ರಿಕಾ ತಂಡ ಅದಕ್ಕೆ ಅವಕಾಶ ನೀಡಲಿಲ್ಲ.

ಆದರೂ ಸಂಗಕ್ಕಾರ ಮಧುರ ನೆನಪುಗಳೊಂದಿಗೆ ವಿದಾಯ ಹೇಳಿ ದ್ದಾರೆ. ಏಕೆಂದರೆ ಈ ಟೂರ್ನಿಯಲ್ಲಿ ಅವರು ಅಮೋಘವಾಗಿ ಆಡಿದ್ದಾರೆ. ಏಳು ಪಂದ್ಯಗಳಿಂದ 541 ರನ್‌ ಗಳಿಸಿದ್ದಾರೆ. ಸತತ ನಾಲ್ಕು ಶತಕಗಳನ್ನು ಗಳಿಸಿ ವಿಶ್ವದಾಖಲೆಯನ್ನೂ ತಮ್ಮದಾಗಿಸಿ ಕೊಂಡಿದ್ದರು.
ಮಾಹೇಲ ಅವರಿಗೆ ಇದು ನಿರಾಸೆಯ ವಿದಾಯ ಎನಿಸಿತು. ಪ್ರಸಕ್ತ ಟೂರ್ನಿಯಲ್ಲಿ ಅವರು ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ‘ಮಾಹೇಲಗೆ ಅತಿಯಾದ ನಿರಾಸೆಯಾಗಿರಬಹುದು. ಇದೆಲ್ಲ ಆಟದ ಒಂದು ಭಾಗ’ ಎಂದು ಸಂಗಕ್ಕಾರ ಹೇಳಿದ್ದಾರೆ.

404 ಏಕದಿನ ಪಂದ್ಯಗಳನ್ನು ಆಡಿರುವ ಸಂಗಕ್ಕಾರ 41.98ರ ಸರಾಸರಿಯಲ್ಲಿ 14,234 ರನ್‌ ಪೇರಿಸಿದ್ದಾರೆ. ಜಯವರ್ಧನೆ 448 ಪಂದ್ಯಗಳಿಂದ 33.37ರ ಸರಾಸರಿಯಲ್ಲಿ 12,650 ರನ್‌ ಗಳಿಸಿದ್ದಾರೆ.

ಅಭಿನಂದನೆಯ ಮಹಾಪೂರ: ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಸಂಗಕ್ಕಾರ ಮತ್ತು ಜಯವರ್ಧನೆ ಅವರ ಸಾಧನೆಯನ್ನು ಹಾಲಿ ಹಾಗೂ ಮಾಜಿ ಆಟಗಾರರು ಕೊಂಡಾಡಿದ್ದಾರೆ.

‘ಏಕದಿನ ಕ್ರಿಕೆಟ್‌ನಲ್ಲಿ ಅಮೋಘವಾಗಿ ಆಡಿದ ನಿಮಗಿಬ್ಬರಿಗೂ ಅಭಿನಂದನೆಗಳು.  ಹಲವು ವರ್ಷಗಳ ಕಾಲ ಶ್ರೀಲಂಕಾ ತಂಡದ ಅವಿಭಾಜ್ಯ ಅಂಗವಾಗಿದ್ದುಕೊಂಡು ಹಲವು ಸಾಧನೆ ಗಳನ್ನು ಮಾಡಿದ್ದೀರಿ. ನೀವು ಇಲ್ಲದೇ ಇರುವ ಲಂಕಾ ತಂಡವನ್ನು ಊಹಿಸು ವುದು ಕಷ್ಟ. ನಿಮಗೆ ಶುಭವಾಗಲಿ’ ಎಂದು ಸಚಿನ್‌ ‘ಟ್ವೀಟ್‌’ ಮಾಡಿದ್ದಾರೆ.

‘ಮಾಹೇಲ ಮತ್ತು ಸಂಗಕ್ಕಾರ ಅವರಿಗೆ ಅಭಿನಂದನೆಗಳು. ಇಬ್ಬರ ಕ್ರಿಕೆಟ್‌ ಜೀವನ ಅಮೋಘವಾಗಿತ್ತು. ಹಲವು ಮಧುರ ನೆನಪುಗಳನ್ನು ನಮಗೆ ಕಟ್ಟಿಕೊಟ್ಟಿದ್ದೀರಿ’ ಎಂದು ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್‌ ಸ್ಮಿತ್‌ ಹೇಳಿದ್ದಾರೆ.

‘ಇಬ್ಬರು ಶ್ರೇಷ್ಠ ಆಟಗಾರರು ಏಕದಿನ ಕ್ರಿಕೆಟ್‌ನಿಂದ ದೂರ ಸರಿಯು ತ್ತಿರುವುದನ್ನು ನೋಡುವಾಗ ದುಃಖ ವಾಗುತ್ತಿದೆ’ ಎಂದು ಶೇನ್‌ ವಾಟ್ಸನ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದಿದ್ದಾರೆ.
*
ವಿಶ್ವಕಪ್‌ ಗೆದ್ದು ಸಂಗಕ್ಕಾರ ಮತ್ತು ಮಾಹೇಲ ಅವರಿಗೆ ಸ್ಮರಣೀಯ  ಬೀಳ್ಕೊಡುಗೆ ನೀಡುವ ಗುರಿ ಇಟ್ಟುಕೊಂಡಿದ್ದೆವು. ಅದು ಸಾಧ್ಯವಾಗದೆ ನಿರಾಸೆಯಾಗಿದೆ.
– ಏಂಜೆಲೊ ಮ್ಯಾಥ್ಯೂಸ್‌,
ಶ್ರೀಲಂಕಾ ತಂಡದ ನಾಯಕ
*
ಮುಖ್ಯಾಂಶಗಳು
* 404 ಪಂದ್ಯಗಳಿಂದ 14,234 ರನ್‌ ಕಲೆಹಾಕಿದ ಸಂಗಕ್ಕಾರ
* 448 ಪಂದ್ಯಗಳಿಂದ 12,650 ರನ್‌ ಪೇರಿಸಿದ ಜಯವರ್ಧನೆ
* ಸಚಿನ್‌ ಒಳಗೊಂಡಂತೆ ಹಲವರಿಂದ ಅಭಿನಂದನೆಯ ಮಹಾಪೂರ

Write A Comment