– ಭರತ್ ಮತ್ತು ಶಾಲನ್ ಸವೂರ್
ವನವೇ ಆನಂದ. ಆದರೆ, ಆನಂದಕ್ಕೂ ಸಂತೋಷಕ್ಕೂ ಇರುವ ವ್ಯತ್ಯಾಸವೇನು? ಸಂತೋಷ ಬಾಹ್ಯ ಸಂಗತಿಗಳನ್ನು ಅವಲಂಬಿಸಿರುತ್ತದೆ. ಸಂತೋಷಕ್ಕೆ ಕಾರಣವಾಗುವ ಸಂಗತಿಗಳು ಬದಲಾದಂತೆ ಸಂತೋಷವೆಲ್ಲ ಕರಗಿ ಅಸಂತೋಷವಾಗಿ ಬದಲಾಗುತ್ತದೆ.
ನಾನು ಹೊಸ ಕಾರು ಖರೀದಿಸಿ ಖುಷಿಯಾಗಿರುತ್ತೇನೆ. ಮತ್ತೊಂದು ಕಾರು ನನ್ನ ಕಾರಿಗೆ ಗುದ್ದಿ, ನನ್ನ ಕಾರು ಜಖಂಗೊಳ್ಳುತ್ತದೆ. ಆ ಖುಷಿಯೆಲ್ಲ ಕರಗಿಹೋಗುತ್ತದೆ. ಆದರೆ, ಆನಂದ ವಿಶೇಷವಾದದ್ದು. ಅದು ತನ್ನಿಂದ ತಾನೇ ಹುಟ್ಟಿರುತ್ತದೆ. ಬಾಹ್ಯ ಸಂಗತಿಗಳು ಅದರ ಮೇಲೆ ಪರಿಣಾಮ ಬೀರುವುದಿಲ್ಲ. ನಾನು ಕಾರು ಖರೀದಿಸಲಿ ಅಥವಾ ಬಿಡಲಿ ನನ್ನಲ್ಲಿ ಆನಂದ ತುಂಬಿರುತ್ತದೆ. ನನ್ನ ಹೊಸ ಕಾರು ಜಖಂಗೊಂಡಾಗಲೂ ಈ ಆನಂದ ಕರಗುವುದಿಲ್ಲ.
ಆನಂದ ಶಾಶ್ವತ ಸ್ಥಿತಿ. ಇದು ಸಂಪೂರ್ಣ ಎಚ್ಚರದಲ್ಲಿರುವ ಸ್ಥಿತಿ. ಉಪನಿಷತ್‌ಗಳು ಹೇಳುವಂತೆ ಆನಂದ ಬ್ರಹ್ಮಾಂಡವನ್ನು ಸೌಹಾರ್ದ ಹಾಗೂ ಸಮತೋಲನದಲ್ಲಿ ಇಡುತ್ತದೆ. ಎಂತಹ ಸುಂದರ ವಿಚಾರ. ಇದು ನಮಗೂ ಅನ್ವಯಿಸುತ್ತದೆ.
ಆನಂದ ನಮ್ಮ ದೇಹವನ್ನು ಸೌಹಾರ್ದ ಹಾಗೂ ಸಮತೋಲನ ದಲ್ಲಿ ಇಟ್ಟು ಪ್ರತಿಯೊಂದು ಅಂಗಾಂಗ, ಹಾರ್ಮೋನ್‌ಗಳು, ಸ್ನಾಯು ಗಳು, ಜೀವಕೋಶಗಳನ್ನು ಸುಂದರವಾದ ಸಂಯೋಜನೆಯಲ್ಲಿ ಇಡುತ್ತದೆ. ಆನಂದ ಎಂಬುದು ನಮ್ಮೊಳಗಿನ ಭಾಗವೇ ಆದಲ್ಲಿ ನಮ್ಮ ನಿತ್ಯ ಜೀವನದಲ್ಲಿ ಇಷ್ಟೊಂದು ಕಿರಿಕಿರಿ ಏಕಿರುತ್ತದೆ?
ಏಕೆಂದರೆ ನಮ್ಮೊಳಗಿರುವ ಸಂಪತ್ತಿನ ಕುರಿತು ನಮಗೇ ಅರಿವಿರುವುದಿಲ್ಲ. ನನ್ನ ಪಾಕೆಟ್‌ನಲ್ಲಿ ಚಿನ್ನದ ನಾಣ್ಯ ಇದೆ ಎಂದು ನನಗೆ ತಿಳಿಯದೇ ಇದ್ದಲ್ಲಿ ನಾನು ಅದನ್ನು ಇತರರಿಗೆ ನೀಡಲು ಸಾಧ್ಯವಿಲ್ಲ. ಅದೇ ರೀತಿ ನನ್ನೊಳಗೆ ಆನಂದ ಇದೆ ಎಂದು ತಿಳಿಯದೇ ಸನ್ನಿವೇಶಗಳಿಗೆ ಆನಂದ ನೀಡುವುದು ಸಾಧ್ಯವಿರುವುದಿಲ್ಲ.
ನಮ್ಮ ‘ಫಿಟ್‌ನೆಸ್ ಫಾರ್ ಲೈಫ್’ ಕಾರ್ಯಕ್ರ ಮದಲ್ಲಿ ವಿದ್ಯಾರ್ಥಿಯೊಬ್ಬಳು ಸನ್ನಿವೇಶಗಳಿಗೆ ಆನಂದ ನೀಡುವುದು ಹೇಗೆ ಎಂದು ಪ್ರಶ್ನಿಸಿದಳು. ಆಗಲೇ ದೂರವಾಣಿ ರಿಂಗಾಯಿತು. ನಾನು ದೂರವಾಣಿ ಕರೆಗೆ ಉತ್ತರಿಸುತ್ತಿರುವಾಗ ಆಕೆ ಅಸಮಾಧಾನದಿಂದ ಮುಖ ಕಿವುಚಿದಳು. ಈ ತರಗತಿಯಲ್ಲಿ ಎರಡನೇ ಬಾರಿ ಹೀಗಾಗಿತ್ತು.
ಸನ್ನಿವೇಶಕ್ಕೆ ಆನಂದ ನೀಡುವುದು ಹೇಗೆ ಎಂದು ಆಕೆ ಮತ್ತೆ ಪ್ರಶ್ನಿಸಿದಳು. ಈಗ ನಡೆದ ಘಟನೆಯನ್ನೇ ಉದಾಹರಣೆಯಾಗಿ ತೆಗೆದು ಕೊಳ್ಳೋಣ ಎಂದು ನಾನು ಹೇಳಿದೆ. ಕೂಡಲೇ ಆಕೆಗೆ ಅರ್ಥವಾಯಿತು. ‘ಓ! ಈ ಸನ್ನಿವೇಶಕ್ಕೆ ನಾನು ಆನಂದ ತುಂಬುವುದರ ಬದಲು ಕಿರಿಕಿರಿ ಮಾಡಿದೆ’ ಎಂದು ಆಕೆಯೇ ಉದ್ಗರಿಸಿದಳು.
ಸಾಧಾರಣವಾಗಿ ನಾವು ಹೀಗೆ ಮಾಡುತ್ತಲೇ ಇರುತ್ತೇವೆ. ಏಕೆಂದರೆ ನಮ್ಮೊಳಗಿರುವ ಅನಂತ ಆನಂದದ ಅರಿವು ನಮಗಿರುವುದಿಲ್ಲ. ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಈ ಸಾಲುಗಳನ್ನು ಹೇಳಿಕೊಳ್ಳಿ. ‘ನಾನು ಆನಂದದಿಂದಲೇ ಹುಟ್ಟಿದ್ದೇನೆ. ಆನಂದದಿಂದಲೇ ಬದುಕುತ್ತಿದ್ದೇನೆ ಮತ್ತು ಆನಂದದಲ್ಲೇ ಇರುತ್ತೇನೆ’ ಎಂದು ಮತ್ತೆ ಮತ್ತೆ ಹೇಳಿಕೊಳ್ಳಿ.
ಆನಂದವನ್ನು ಮರೆಯುವುದು ಮೌಢ್ಯ. ನಿಮ್ಮೊಳಗಿರುವ ಆನಂದವನ್ನು 24/7 ಮರೆಯಬೇಡಿ.
* ಎಲ್ಲ ಚಡಪಡಿಕೆಯನ್ನು ಆನಂದದಿಂದ ಬದಲಿಸಿ. ಪ್ರತಿರೋಧ, ಉದ್ವೇಗ ನಡುಕ, ಸಿಡುಕುತನ, ಸಿಟ್ಟು ಎಲ್ಲವನ್ನೂ ನಿಮ್ಮ ವ್ಯವಸ್ಥೆಯಿಂದ ಹೊರ ಹಾಕಿ. ನರಶಾಸ್ತ್ರಜ್ಞರ ಪ್ರಕಾರ ಪ್ರತಿ ಸಿಟ್ಟಿನ ಅಲೆಯೂ ನಮ್ಮ ಮೆದುಳಿನಲ್ಲಿ ಬಿರುಗಾಳಿಯ ಅಲೆಯನ್ನು ಹುಟ್ಟುಹಾಕುತ್ತದೆ. ನಮ್ಮ ಮಾನಸಿಕ ಶಕ್ತಿಯನ್ನು ಸಕಾರಾತ್ಮಕ ಮಾನಸಿಕ ಶಕ್ತಿಯಾಗಿ ಬದಲಿಸುವಲ್ಲಿ ಮೂರು ವಿಧಾನಗಳಿವೆ.
* ನಿಧಾನಕ್ಕೆ ಪ್ರಜ್ಞಾಪೂರ್ವಕವಾಗಿ ಉಸಿರಾಡುವುದು. ಒಂದರಿಂದ ಎಂಟರವರೆಗೆ ಎಣಿಸುತ್ತ ಶ್ವಾಸವನ್ನು ಒಳಕ್ಕೆ ಎಳೆದುಕೊಂಡು ನಿಮ್ಮ ಹೊಟ್ಟೆಯನ್ನು ಆದಷ್ಟು ಉಬ್ಬಿಸಿಕೊಳ್ಳಿ. ಮತ್ತೆ ಒಂದರಿಂದ ಎಂಟರವರೆಗೆ ಎಣಿಸುತ್ತ ನಿಧಾನಕ್ಕೆ ಉಸಿರುಬಿಡಿ. ಹೀಗೆ ದಿನಕ್ಕೆ 100 ಸಲ ಉಸಿರಾಡುವುದರಿಂದ ನೀವು ಮತ್ತಷ್ಟು ಶಾಂತವಾಗುತ್ತ, ಸಿಹಿ ವ್ಯಕ್ತಿಯಾಗುತ್ತೀರಿ.
* ಮನಸ್ಸು ಮುದಗೊಳಿಸುವ ಸಂಗೀತ ಆಲಿಸಿ. ಇದು ನಿಮ್ಮ ಕೋಶ, ಕೋಶಗಳಲ್ಲಿ ಸೌಹಾರ್ದತೆಯನ್ನು ತುಂಬುತ್ತದೆ.
* ಸಂತರ ಜೀವನ ಮತ್ತು ಆಲೋಚನೆಗಳ ಬಗ್ಗೆ ಒಂದು ತಾಸು ಓದಿ. ಈ ಪುಸ್ತಕಗಳಲ್ಲಿನ ಶಬ್ದಗಳು ಆನಂದ ಹೊಮ್ಮಿಸುತ್ತಾ ನಿಮ್ಮೊಳಗೆ ಇಳಿಯುತ್ತವೆ.
* ನಿಮಗೆ ಇಷ್ಟ ಬಂದಂತೆ ಬದುಕಿ. ನಾವು ಹುಟ್ಟಿದಾಗಿನಿಂದ ಬೇರೆಯವರು ಸೃಷ್ಟಿಸಿದ ಸಂಕೀರ್ಣ ಬದುಕಿನಲ್ಲಿ ಬದುಕುತ್ತಿದ್ದೇವೆ. ಸಂದರ್ಶಕರು, ದೂರವಾಣಿ ಕರೆಗಳು, ಬೆಲ್ ಬಡಿಯುವುದು, ಸೂಚನೆಗಳು, ಧಾರ್ಮಿಕ ವಿಧಿ ವಿಧಾನ, ಸಮಾಜದಲ್ಲಿ ಬೆರೆಯುವುದು…. ಅಂತ್ಯವೇ ಇಲ್ಲದ ಈ ಗದ್ದಲದಲ್ಲಿ ನಮ್ಮ ಸಹಜ ಆನಂದ ಕಳೆದುಹೋಗುತ್ತದೆ.
ದೊಡ್ಡವರಾದಾಗಲೂ ನಾವು ಇಂತಹ ಅರ್ಥರಹಿತ ಬದುಕು ಬದುಕುತ್ತವೆ. ನಿಮ್ಮೊಳಗಿನ ಸಹಜ ಆನಂದ ಮತ್ತೆ ಹೊರಹೊಮ್ಮುವಂತೆ ಆಳ ಪ್ರಜ್ಞೆಯನ್ನು ಬೆಳೆಸಿಕೊಳ್ಳಿ. ಋಣಾತ್ಮಕವಾದ, ಚಡಪಡಿಸುತ್ತಿರುವ, ಅಸಂತೃಪ್ತ ವ್ಯಕ್ತಿಗಳನ್ನು ಭೇಟಿಯಾಗುವುದನ್ನು ನಿಲ್ಲಿಸಿ. ನಿಮಗೆ ಇಷ್ಟವಾದ ಕೆಲ ಸಂಗತಿಗಳನ್ನು ಮುಂದೂಡಬೇಡಿ. ‘ಈಗ ಬೇಡ, ನಾಳೆ’ ಎಂಬ ಆಲೋಚನೆ ನಿಮ್ಮಲ್ಲಿ ಅಸಮಾಧಾನ ಹುಟ್ಟುಹಾಕುತ್ತದೆ.
* ನಿಮ್ಮ ದೇಹವನ್ನು ಆರೋಗ್ಯಕರವಾಗಿಟ್ಟುಕೊಳ್ಳಿ. ಮನಸ್ಸು ಶುಭ್ರವಾಗಿರಲಿ. ನಿತ್ಯವೂ ಒಂದು ಗಂಟೆ ಪ್ರೀತಿಯಿಂದ ವಾಕ್ ಮಾಡಿ. ಇಲ್ಲವೇ ಸೈಕ್ಲಿಂಗ್ ಮಾಡಿ. ನಿಮ್ಮ ದೇಹದಲ್ಲಿ ತಾಜಾತನ ಮೂಡುತ್ತದೆ. ನಿಮ್ಮ ಮನಸ್ಸಿನಿಂದ ಎಲ್ಲ ಬಯಕೆಗಳನ್ನು ಹೊರಹಾಕಿ.
ಲೌಕಿಕ ಸುಖ ನೀಡುವ ಸಂಗತಿಗಳಲ್ಲಿ ಮಗ್ನರಾದಷ್ಟು ಮನಸ್ಸು ಮೂಡಿಯಾಗುತ್ತ ಹೋಗುತ್ತದೆ. ಏಕೆಂದರೆ ಸುಖ ನೀಡುವ, ಖುಷಿ ಕೊಡುವ ವಸ್ತು ದೊರೆಯದಿದ್ದಾಗ ಮನಸ್ಸು ಮೂಡಿಯಾಗುತ್ತದೆ. ನಿಮ್ಮ ಮನಸ್ಸಿನ ಆನಂದ ಭೌತಿಕ ವಸ್ತುಗಳನ್ನು ಅವಲಂಬಿಸದಿರಲಿ.
‘ನಾನು ಇವಿಲ್ಲದೆಯೂ ಜೀವಿಸುತ್ತೇನೆ. ನಾನು ಇದಕ್ಕಿಂತ ದೊಡ್ಡವಳು/ವನು’ ಎಂಬುದು ನಿಮ್ಮ ಗೀತೆಯಾಗಲಿ. ನೀವೆ ಆನಂದವಾಗಿರುವುದರಿಂದ ‘ಆನಂದ ಎಲ್ಲಕ್ಕಿಂತ ದೊಡ್ಡದು’ ಎಂದು ಪರೋಕ್ಷವಾಗಿ ಹೇಳುವಿರಿ. ಅದು ಹೌದು ಸಹ. ಮನಸ್ಸು ಖಾಲಿಯಾದಾಗ ಅದು ಬುದ್ಧನ ಮನಸ್ಸಾಗಿರುತ್ತದೆ. ಸ್ಥಿರವಾದ, ತಣ್ಣಗಿನ ಆನಂದವೇ ತುಂಬಿದ ಮನಸ್ಸಾಗಿರುತ್ತದೆ.
ತುಂಬಾ ಜನ ಆನಂದದ ಸ್ಥಿತಿ ಮುಟ್ಟುವುದಕ್ಕೆ ಹೆದರುತ್ತಾರೆ. ಇದರಿಂದ ನಾವು ಆಲಸಿಗಳಾಗುವುದಿಲ್ಲವೇ? ಮಂಕಾಗುವುದಿಲ್ಲವೇ?
ಆದರೆ, ಆನಂದದಲ್ಲಿ ನೀವು ಸ್ವಾರ್ಥದಿಂದ ಕೂಡಿದ, ವ್ಯರ್ಥ ವಿಚಾರಗಳನ್ನು ತ್ಯಜಿಸುವುದರಿಂದ ನೀವು ಹಗುರವಾಗುತ್ತೀರಿ. ಲಘುವಾಗುತ್ತೀರಿ ಚಟುವಟಿಕೆಯಿಂದ ಕೂಡಿರುತ್ತೀರಿ. ಯಾವುದೇ ಪ್ರತಿಫಲದ ಆಕಾಂಕ್ಷೆಯಿಲ್ಲದೇ ನಿಮ್ಮ ಸಾಮರ್ಥ್ಯವನ್ನು ಪೂರ್ಣವಾಗಿ ಬಳಸಿಕೊಳ್ಳುತ್ತೀರಿ.
ಯಾವುದೂ ನಿಮ್ಮನ್ನು ಹಿಮ್ಮೆಟ್ಟಿಸುವುದಿಲ್ಲ. ಸುಖ ಸುರಿದು ಬಿದ್ದಾಗ ಅಥವಾ ಕಷ್ಟದ ಸರಮಾಲೆ ಎದುರಾದಾಗ ನೀವು ಬದಲಾಗುವುದಿಲ್ಲ. ಅದೇ ಸಂತಸ, ನೆಮ್ಮದಿ ಕಾಯ್ದುಕೊಂಡಿರುತ್ತೀರಿ. ಎಲ್ಲ ಸನ್ನಿವೇಶಗಳಿಗೂ ಆನಂದ ನೀಡುತ್ತೀರಿ.
ನೀವು ಹೆಚ್ಚೆಚ್ಚು ಆನಂದ ನೀಡಿದಷ್ಟೂ ಆನಂದವನ್ನು ಮತ್ತಷ್ಟು ವಿಸ್ತರಿಸುತ್ತ ಹೋಗುತ್ತೀರಿ. ವೃತ್ತಾಕಾರವಾಗಿ ಬೆಳಕು ಪಸರಿಸುತ್ತ ಹೋಗುವ ಲಾಟೀನಿನಂತೆ ಆಗುತ್ತೀರಿ.