ಮನೋರಂಜನೆ

ನಗೆ ಸಂಚಾರ ಮಾಡಿಸುವ ‘ಬಸ್ ಕಂಡಕ್ಟರ್’…

Pinterest LinkedIn Tumblr

Psmec18Play Bus-Conducotr

-ಗುಡಿಹಳ್ಳಿ ನಾಗರಾಜ

ಬಸ್ ಕಂಡಕ್ಟರ್’ ಇದೊಂದು ಹಾಸ್ಯ ಪ್ರಧಾನ ನಾಟಕ. ಹಿನ್ನೆಲೆಯಾಗಿ ಗಂಭೀರವಾದ ಕಥಾ ವಸ್ತುವಿದೆ. ಸಮಾನವಾಗಿ ಹಂಚಿ ತಿನ್ನುವ ಅವಿಭಕ್ತ ಕುಟುಂಬದ ಆಶಯವನ್ನು ಅದು ಧ್ವನಿಸುತ್ತದೆ. ಆದರೆ ಮುನ್ನಲೆಯಾಗಿರುವುದು  ಬಸ್  ಕಂಡಕ್ಟರ್ ಮತ್ತು ಖಾನಾವಳಿ ಚೆನ್ನಿಯ ಪ್ರಕರಣ. ಇವರಿಬ್ಬರ ಪ್ರಣಯ ಪ್ರಸಂಗಗಳು ಇದನ್ನೊಂದು ಅಪ್ಪಟ ನಗೆಗಡಲಿನ ನಾಟಕವಾಗಿಸಿದೆ. ಬಿ.ಆರ್.ಅರಿಷಿಣಗೋಡಿ ರಚಿಸಿದ ಈ ನಾಟಕ ಬಹುತೇಕ ನಾಟಕ ಕಂಪನಿಗಳ ಯಶಸ್ವಿ ಪ್ರಯೋಗ.

ಈ ನಾಟಕದ ಖಾನಾವಳಿ ಚೆನ್ನಿ ಪಾತ್ರದಲ್ಲಿ ಸಂಸ್ಕೃತಿ ಸಚಿವೆ ಉಮಾಶ್ರೀ ಅವರು ವೃತ್ತಿ ನಾಟಕ ಕಂಪನಿಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ನಗರದಲ್ಲಿ ಈ ನಾಟಕವನ್ನು ಪ್ರಯೋಗಿಸುವ ಮಹಿಳೆಯರ ತಂಡವೊಂದಿದೆ. ಅದು ಮಾಲತಿಶ್ರೀ ಮೈಸೂರು ಅವರ ಆಶಾಕಿರಣ  ಕಲಾ ಟ್ರಸ್ಟ್. ಈ ತಂಡದ  ಬಹುತೇಕ  ನಾಟಕಗಳು ಮಹಿಳೆಯರಿಂದಲೇ ಅಭಿನಯಿ­­­­­ಸ­­ಲ್ಪಟ್ಟಿವೆ. ಪುರುಷ ಪಾತ್ರಗಳು ಸೇರಿದಂತೆ ಎಲ್ಲ ಪಾತ್ರಗಳಲ್ಲೂ ಇಲ್ಲಿ ಮಹಿಳೆಯರೇ ಅಭಿನಯಿಸುತ್ತಾರೆ. ನೆಲಮಂಗಲದಲ್ಲಿ ಇತ್ತೀಚೆಗೆ ಜರುಗಿದ ಕರ್ನಾಟಕ ನಾಟಕ ಅಕಾಡೆಮಿಯ ನಾಟಕೋತ್ಸವದಲ್ಲಿ ಈ ನಾಟಕ ಯಶಸ್ವಿ ಪ್ರಯೋಗ ಕಂಡಿತು.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಗ್ರಾಮೀಣ ಪ್ರದೇಶಗಳಿಗೆ ತನ್ನ ಬಸ್ ಸಂಚಾರವನ್ನು ವಿಸ್ತರಿಸಿದ ಎಪ್ಪತ್ತರ ದಶಕ ಅದು. ಉಡುಪಿ ಹೋಟೆಲ್‌ಗಳ ಸ್ಪರ್ಧೆ ಜತೆಗೆ, ಖಾನಾವಳಿಗಳು ಜನಪ್ರಿಯವಾಗುತ್ತಿದ್ದ ಕಾಲಘಟ್ಟವೂ ಹೌದು. ರಸ್ತೆ ಸಾರಿಗೆಯ ನೌಕರಿ ವರ್ಗವನ್ನು ಇಲ್ಲಿನ ಕಂಡಕ್ಟರ್ ಪ್ರತಿನಿಧಿಸಿದರೆ, ಮಾಲೀಕನ ಮಗಳಾಗಿ ಚೆನ್ನಿ ಖಾನಾವಳಿಯನ್ನು ಪ್ರತಿನಿಧಿಸುತ್ತಾಳೆ. ಅದೇ ತಾನೇ ವ್ಯವಹಾರ ಜಗತ್ತಿಗೆ ಪ್ರವೇಶ ಪಡೆದಿರುವವನು ಖಾನಾವಳಿ ಮಾಲೀಕ. ಎಲ್ಲರಿಗೂ ಅವರವರು ಪ್ರವೇಶಿಸಿರುವ ಜಗತ್ತು ಹೊಸದೇ. ಹಳ್ಳಿಯ ಮುಗ್ಧತೆ ಇವರಾರಲ್ಲೂ ಮಾಸಿಲ್ಲ. ಸ್ವಲ್ಪ ಚಾಲಾಕಿ ಎಂದರೆ ಕಂಡಕ್ಟರ್ ರಾಜು.

ಮುಗ್ಧರಾದರೂ ಹೇಗೋ ಒಳ್ಳೆಯ ಲಾಭ ಗಳಿಸಬೇಕೆನ್ನುವವರು ಖಾನಾವಳಿ ಮಾಲೀಕ ದೇವಣ್ಣ ಮತ್ತವನ ಮಗಳು ಚೆನ್ನಿ. ಈ ಮುಗ್ಧತೆ! ಮತ್ತು ಚಾಲಾಕಿತನದ ಹೊಯ್ದಾಟದಲ್ಲಿ ಹಾಸ್ಯ ತೀರಾ ಸಹಜವೆನ್ನುವಂತೆ ಸೃಷ್ಟಿಯಾಗುತ್ತ ಹೋಗುತ್ತದೆ. ಕಂಡಕ್ಟರ್ ಮತ್ತು ಚೆನ್ನಿ ಪಾತ್ರಧಾರಿಗಳು ಹಾಡು ಮತ್ತು ಮಾತುಗಳಲ್ಲಿ ಮುಗ್ಧತೆ  ಮತ್ತು ಕಳ್ಳಾಟವನ್ನು ನಟಿಸುತ್ತ  ಹೋಗಬೇಕು. ಈ ಇಬ್ಬರು ಪಾತ್ರಧಾರಿಗಳು ಎಷ್ಟು ಚೆನ್ನಾಗಿ ಅದನ್ನು ವಾಚಿಕವಾಗಿಸಬಲ್ಲರೋ, ಅಲ್ಲಿವರೆಗೆ ನಾಟಕ ಬೆಳೆಯುತ್ತ ಹೋಗುತ್ತದೆ. ತನ್ನ ನಾಟಕ
ಬೆಳೆಯುವ ಪರಿಯನ್ನು ನಾಟಕಕಾರನೇ ಸೋಜಿಗದಿಂದ ಬದಿಗೆ ನಿಂತು ನೋಡುವಂತೆ ಇಲ್ಲಿನ ಸಂಭಾಷಣಾ ಚತುರತೆಯನ್ನು ನಟ ನಟಿಯರೇ ಕಟ್ಟುತ್ತಾ ಹೋಗಬೇಕು!

ಕಂಡಕ್ಟರ್ ಮತ್ತು ಚೆನ್ನಿ ಪಾತ್ರಗಳಲ್ಲಿ ವೃತ್ತಿ ರಂಗಭೂಮಿಯ ಹೆಸರಾಂತ ನಟ ನಟಿಯರು ಹೆಸರು ಮಾಡಿದ್ದಾರೆ. ಒಂದು ಕಾಲಕ್ಕೆ ಉಮಾಶ್ರೀಯವರ ಹಾಗೆಯೇ ಚೆನ್ನಿ ಪಾತ್ರಕ್ಕೆ ನಾಟಕ ಕಂಪನಿಗಳಲ್ಲಿ ದೊಡ್ಡ ಹೆಸರಾಗಿದ್ದ ಮಾಲತಿಶ್ರೀ ಅವರು ಇಲ್ಲಿ ಕಂಡಕ್ಟರ್ ರಾಜು ಆಗಿ ಗಂಡಸಿನಷ್ಟೇ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಹುಂಬ, ಮುಗ್ಧ ಖಾನಾವಳಿ ಮಾಲೀಕನ ಪಾತ್ರದಲ್ಲಿ ಹಿರಿಯ ನಟಿ ಕೊಟ್ಟೂರು ಕೋಮಲಮ್ಮ ತಮ್ಮ ಅಭಿನಯ ಪರಿಣತಿಯನ್ನು ತೀರಾ ಸಹಜವಾಗಿ ಬಿಂಬಿಸಿದ್ದಾರೆ. ಖಾನಾವಳಿ  ಚೆನ್ನಿ ಪಾತ್ರದಲ್ಲಿ ಮಹೇಶ್ವರಿ ನಟನೆಯೂ ಉತ್ತಮವಾಗಿತ್ತು.

ಓದಿ ನೌಕರಿಯಲ್ಲಿರುವವರು ಕಷ್ಟದಲ್ಲಿರುವ ತನ್ನ ಕುಟುಂಬದವರನ್ನು ಸಲಹಬೇಕು ಎಂಬ ಆಶಯದೊಂದಿಗೆ ಕೌಟುಂಬಿಕ ಕತೆಯೂ ಒಟ್ಟೊಟ್ಟಿಗೆ ಬಿಚ್ಚಿಕೊಳ್ಳುತ್ತದೆ. ಈ ಕತೆಯ ಪಾತ್ರಧಾರಿಗಳಾಗಿ ವಿನೋದಮ್ಮ, ರವಿಕಲಾ, ಲಲಿತಾ, ಅರುಣಾ ಹೆಗಡೆ, ಮಾಲಾರಾಣಿ, ವಸುಂಧರಾ ಎಲ್ಲರೂ ವೃತ್ತಿ ರಂಗಭೂಮಿಯ ಹೆಸರಾಂತ ಕಲಾವಿದೆಯರು. ಪುರುಷ ಪಾತ್ರಗಳಲ್ಲಿ ಅವರು ಅಷ್ಟೇ ಸಮರ್ಥವಾಗಿ ಅಭಿನಯಿಸಿದ್ದಾರೆ. ಸಂಗೀತದ ಸಾಥ್ ಸೋಮಶೇಖರಗೌಡ ಮತ್ತು ಶಿವಾನಂದ ಸಂಗಮ.

ವೃತ್ತಿ ರಂಗಭೂಮಿಯ ಸಾಂಪ್ರದಾಯಿಕ ರಸ್ತಾ, ಮನೆ, ಜಂಗಲ್ ಪರದೆಗಳನ್ನು ಇಳಿಬಿಟ್ಟುಕೊಂಡು ಈಗ ನಾಟಕ ಆಡುವುದು ಕಷ್ಟ. ಹವ್ಯಾಸಿಗಳು ಬಳಸುವ ಕಪ್ಪು ಅಥವಾ ನೀಲಿ ಪರದೆಗಳ ಮುಂದೆ ನಾಟಕವಾಡುವುದು ಈಗಾಗಲೇ ರೂಢಿಯಾಗಿದೆ. ಆದರೆ ಮಧ್ಯೆ ಒಂದು ಕಪ್ಪು ಪರದೆ ಎಳೆದುಕೊಂಡು ಅದನ್ನು ರಸ್ತಾ ಆಗಿಯೂ, ಆ ಪರದೆಯನ್ನು ಹಿಂದಕ್ಕೆ ಎಳೆದಾಗ ಮನೆ ದೃಶ್ಯವಾಗಿಯೂ ಬಳಸಿಕೊಂಡದ್ದು ಸಮಯೋಚಿತವಾಗಿತ್ತು. ಇಂತಹ ಕೆಲವು ಪುಟ್ಟ ಬದಲಾವಣೆಗಳು, ಸಂಭಾಷಣೆ ಮತ್ತು ಹಾಡಿನಲ್ಲಿ ಹೊಸತನ ನಾಟಕವನ್ನು ಸಕಾಲಿಕವಾಗಿಸುತ್ತ ಹೋಗುತ್ತವೆ. ನಾಟಕದ  ಸಂಘಟನೆ  ಮತ್ತು  ನಿರ್ದೇಶನದ  ಜತೆಗೆ ಅದರ ವಿನ್ಯಾಸವನ್ನೂ ಮಾಲತಿಶ್ರೀ ಅವರು ಇಲ್ಲಿ ಸರಿಯಾಗಿ ನಿಭಾಯಿಸಿದರು.

ಅಂದಹಾಗೆ ಕಂಡಕ್ಟರ್‌ ಮತ್ತು ಚೆನ್ನಿ ಪಾತ್ರಧಾರಿ­ಗಳಿಗೆ ಚೆನ್ನಾಗಿ ಹಾಡಲು ಬರಬೇಕು. ಮಹೇಶ್ವರಿ ಮತ್ತು ಮಾಲತಿಶ್ರೀಯವರು ಸನ್ನಿವೇಶಕ್ಕೆ ತಕ್ಕ ಸಿನಿಮಾ ಮತ್ತು ರಂಗಗೀತೆಗಳ ಸೊಗಸಾದ ಹಾಡುಗಾರಿಕೆಯಿಂದ ನಾಟಕದ ರಸಾನುಭವವನ್ನು ಹೆಚ್ಚಿಸುತ್ತಲೇ ಹೋದರು.

Write A Comment