ಮನೋರಂಜನೆ

ಸೋಹಾ ಅಲಿ ಖಾನ್, ಕುನಾಲ್‌ ಖೇಮು: ಜೋಡಿಹಕ್ಕಿಯ ಪಯಣದ ಹಾದಿ

Pinterest LinkedIn Tumblr

psmec15pg1kunal1

-ಯೋಗಿತಾ ಬಿ.ಆರ್‌.
ಒಂದೂವರೆ ತಿಂಗಳ ಹಿಂದೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ  ಸೋಹಾ ಅಲಿ ಖಾನ್‌ ಹಾಗೂ ಕುನಾಲ್‌ ಖೇಮು ಎಂಬ ಬಾಲಿವುಡ್‌  ಜೋಡಿಹಕ್ಕಿ ಇತ್ತೀಚೆಗೆ ನಗರಕ್ಕೆ ಹಾರಿ ಬಂದಿತ್ತು. ‘ಏರಿಯಲ್‌ – ಅವನ ಮತ್ತು ಅವಳ ಪ್ಯಾಕ್‌’ ಎಂಬ ಡಿಟರ್ಜೆಂಟ್‌ ಬಿಡುಗಡೆ ಮಾಡಿ,  ‘ಹೊರೆ ಹಂಚಿಕೊಳ್ಳಿ’ ಅಭಿಯಾನದಲ್ಲಿ ಪಾಲ್ಗೊಳ್ಳಲು ಈ ಯುವಜೋಡಿ ಬಂದದ್ದು.

ತಿಳಿ ನೀಲಿ ಬಣ್ಣದ ಟಾಪ್‌, ನೀಲಿ ಜೀನ್ಸ್‌ ಪ್ಯಾಂಟ್‌ ಹಾಗೂ ಬಿಳಿ ಬಣ್ಣದ ಷೂ ಹಾಕಿಕೊಂಡು ಸೌಮ್ಯವಾದ ನಗೆ ಬೀರುತ್ತಾ ಪಟಪಟನೆ ಸೋಹಾ ಮಾತನಾಡುತ್ತಿದ್ದರೆ,  ಅವರ ಮಾತುಗಳನ್ನು ಕೇಳುತ್ತಾ, ಆಗಾಗ ಮೊಬೈಲ್‌ ಕಡೆ ಕಣ್ಣಾಡಿಸುತ್ತಾ  ಕುನಾಲ್‌ ಖೇಮು ಮಾಧ್ಯಮದವರಿಗೆ ಪ್ರತಿಕ್ರಿಯಿಸುತ್ತಿದ್ದರು. ಏರಿಯಲ್‌ ಉತ್ಪನ್ನದ ಬಿಡುಗಡೆಯ ನಂತರ ಈ ಯುವಜೋಡಿಯೊಂದಿಗಿನ ಮೆಟ್ರೊ ಮಾತುಕತೆ ಇಲ್ಲಿದೆ…

ಮದುವೆಯಾದ ನಂತರದ ಬದುಕು
‘ಮದುವೆಯಾದ ನಂತರ ಹೇಳಿಕೊಳ್ಳುವಂತಹ ಬದಲಾವಣೆಯೇನೂ ಆಗಿಲ್ಲ. ಕೈನಲ್ಲಿ ಒಂದು ರಿಂಗ್ ಹೆಚ್ಚಾಗಿದೆಯೇ ಹೊರತು ನಾವಿಬ್ಬರೂ ಮೊದಲಿನ ರೀತಿಯೇ ಇದ್ದೇವೆ. ಮದುವೆಗೂ ಮುಂಚೆ ನಾವು ‘ಲಿವಿಂಗ್‌ ಟುಗೆದರ್‌’ ಸಂಬಂಧದಲ್ಲಿ ಇದ್ದುದರಿಂದ ಈಗ ಅಂತಹ ವ್ಯತ್ಯಾಸವೇನಿಲ್ಲ ಎಂದು ಕುನಾಲ್‌ ನವ ದಾಂಪತ್ಯದ ಕುರಿತು ಹೇಳಿದರೆ, ಇದಕ್ಕೆ ಸಮರ್ಥನೆಯಾಗಿ ಸೋಹಾ ಪ್ರತಿಕ್ರಿಯಿಸಿದ್ದು ಹೀಗೆ:  ‘ನಾಟ್‌ ಅಟ್‌ ಆಲ್‌… ಸಾಮಾನ್ಯವಾಗಿ ಮದುವೆಯ ನಂತರ ಎಲ್ಲರ ಜೀವನ ಶೈಲಿಯೂ ಬದಲಾಗುತ್ತದೆ. ಆದರೆ ಮದುವೆಯಾದ ಮೇಲೆ ಯಾವುದೇ ಬದಲಾವಣೆಗಳು ಆಗಬಾರದು. ಯಾವಾಗಲೂ ಒಂದೇ ರೀತಿ ಇರಬೇಕು  ಎಂಬುದು ನಮ್ಮ ಡೀಲ್‌ ಆಗಿತ್ತು. ಗಂಡ–ಹೆಂಡತಿ ಎನ್ನುವುದಕ್ಕಿಂತಲೂ ನಾವು ಉತ್ತಮ ಸ್ನೇಹಿತರು ಎಂದು ಹೇಳಿಕೊಳ್ಳಲು ಹೆಮ್ಮೆಯೆನಿಸುತ್ತದೆ’.

ನಾಗರಹೊಳೆ ಮೆಚ್ಚು
‘ಮದುವೆಯಾದ ನಂತರ ನನ್ನ ಮತ್ತು ಕುನಾಲ್‌ನ ಬೆಂಗಳೂರಿನ ಎರಡನೇ ಪ್ರವಾಸ ಇದು. ಮೊದಲನೇ ಸಲ ಇಲ್ಲಿಗೆ ಬಂದು ‘ನಾಗರ ಹೊಳೆ ಅಭಯಾರಣ್ಯ’ಕ್ಕೆ ಹೋಗಿದ್ವಿ.  ತುಂಬಾ ಇಷ್ಟ ಆಯ್ತು. ಅಲ್ಲಿ ಹುಲಿ, ಚಿರತೆ ನೋಡಿದೆ. ಮದುವೆಯಾದ ನಂತರ ನಾವಿಬ್ಬರೂ ರಜೆಯ ಮೇಲೆ ತೆರಳಿದ್ದು ಇಲ್ಲಿಗೇ… ಹಾಗಾಗಿ ನಾಗರಹೊಳೆ ಪ್ರವಾಸ ನಮ್ಮ ಹನಿಮೂನ್‌ ಕೂಡ ಆಗಿತ್ತು. ಬೆಂಗಳೂರಿನ ವಾತಾವರಣ ನನಗೆ ತುಂಬಾ ಇಷ್ಟ. ಉತ್ತಮ ನಗರ’ ಎಂದು  ಮಾತಿನ ಮುತ್ತುದುರಿಸಿದರು ಸೋಹಾ.

ರೊಮ್ಯಾಂಟಿಕ್‌ ಕುನಾಲ್‌
‘ನಾನು ಕುನಾಲ್‌ ಇಬ್ಬರೂ ಮನೆಗೆಲಸದಲ್ಲಿ ಪಾಲ್ಗೊಳ್ಳುತ್ತೇವೆ.  ಕುನಾಲ್‌ ಒಳ್ಳೆ ಕುಕ್. ‌ಅಡುಗೆ  ಮಾಡುವಾಗ ಕುನಾಲ್‌ಗೆ ನಾನು ಸಹಾಯ ಮಾಡುತ್ತೇನೆ. ಬೇರೆಯವರ ರೀತಿ ಹೂವು, ಚಾಕೊಲೇಟ್‌, ಗಿಫ್ಟ್‌ಗಳನ್ನು ಕೊಡುವುದಿಲ್ಲವಾದರೂ ಹಿ ಈಸ್‌ ಸೋ ರೊಮ್ಯಾಂಟಿಕ್‌… ನನಗಾಗಿ ಹಾಡುಗಳನ್ನು ಬರೆದು ಅದಕ್ಕೆ ಟ್ಯೂನ್‌ ಹಾಕಿ ಹಾಡುತ್ತಾನೆ. ನನಗಿಷ್ಟವಾದ ಹಿಂದಿ ಗೀತೆಗಳನ್ನೂ ಹಾಡುತ್ತಾನೆ. ಇದೆಲ್ಲಾ ನನಗೆ ತುಂಬಾ ಇಷ್ಟ’– ತನ್ನ ಪತಿಯ ಬಗ್ಗೆ ಸೋಹಾ ಹೇಳಿದ ಪ್ರೀತಿಯ ಮಾತುಗಳಿವು.

ಫ್ಯಾಷನ್‌ ಬಗ್ಗೆ ಅರಿವು
‘ನನ್ನ ಪ್ರಕಾರ ಫ್ಯಾಷನ್‌, ಸ್ಟೈಲ್‌ ಎರಡಕ್ಕೂ ವಿಭಿನ್ನ ಅರ್ಥವಿದೆ.  ಕಾಲಕ್ಕೆ ತಕ್ಕಂತೆ ಬದಲಾಗುವ ಫ್ಯಾಷನ್‌, ಟ್ರೆಂಡ್‌ ಆಧಾರಿತವಾದದ್ದು. ಆದರೆ ಸ್ಟೈಲ್‌ ಒಬ್ಬ ವ್ಯಕ್ತಿಯ ವ್ಯಾಖ್ಯಾನ. ದೇಹಾಕಾರ ಹಾಗೂ ಮನಸ್ಸಿನ ಇಚ್ಛೆಗೆ ತಕ್ಕಂತೆ ಪ್ರತಿಯೊಬ್ಬರೂ ಅವರದ್ದೇ ಆದ ಸ್ಟೈಲ್‌ ರೂಪಿಸಿಕೊಂಡಿರುತ್ತಾರೆ. ನಾನು ಫ್ಯಾಷನ್‌ಗಿಂತಲೂ ನನ್ನದೇ ಆದ ಸ್ಟೈಲ್‌ ವೃದ್ಧಿಸಿಕೊಳ್ಳಲು ಇಚ್ಛಿಸುತ್ತೇನೆ.

ಮೊದ ಮೊದಲು ನಾನು ಫ್ಯಾಷನ್‌ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ತುಂಬಾ ಸೋಮಾರಿಯಾಗಿದ್ದೆ. ನನ್ನ ಬಗ್ಗೆ ಮಾಧ್ಯಮ ಹಾಗೂ ವೆಬ್‌ಸೈಟ್‌ಗಳಲ್ಲಿ ಬರೆದದ್ದನ್ನು ನೋಡಿ ಬೇಸರವಾಗುತ್ತಿತ್ತು.  ಕ್ರಮೇಣ ನನಗೇ ಅನ್ನಿಸಿತು; ಸೆಲೆಬ್ರಿಟಿ ಆಗಿ ಕೊಂಚವಾದರೂ ನಾನು ಫ್ಯಾಷನ್‌ ಬಗ್ಗೆ ಚಿತ್ತ ಹರಿಸಬೇಕೆಂದು. ಈಗ ಎಲ್ಲಿಗಾದರೂ ಹೋಗಬೇಕೆಂದರೆ ಕಾರ್ಯಕ್ರಮಕ್ಕೆ ತಕ್ಕಂತೆ ಹೇರ್‌ಸ್ಟೈಲ್‌ ಮಾಡಿಕೊಳ್ಳುವುದು, ಅದಕ್ಕೆ ಹೊಂದುವ ಉಡುಪು ಧರಿಸುವುದನ್ನು ರೂಢಿಸಿಕೊಂಡಿದ್ದೇನೆ’ ಎನ್ನುತ್ತಾ ನಗೆ ಬೀರಿದರು ಸೋಹಾ.

ಸಿನಿಮಾದಲ್ಲಿ ಬ್ಯುಸಿ
ಸೋಹಾ ಹಾಗೂ ಕುನಾಲ್‌ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ. ಮದುವೆಯಾದರೂ ನಾನು ಚಿತ್ರಗಳಲ್ಲಿ ಅಭಿನಯಿಸುತ್ತೇನೆ ಎಂದ ಸೋಹಾ  ಅಲಿ ಖಾನ್‌ ‘ಘಾಯಲ್‌ 2’ ಚಿತ್ರದ ಚಿತ್ರೀಕರಣ ಆರಂಭಿಸುವ ಖುಷಿಯಲ್ಲಿದ್ದರೆ, ಕುನಾಲ್‌ ಆ್ಯಕ್ಷನ್‌  ಚಿತ್ರವೊಂದರಲ್ಲಿ ನಟಿಸಲು ಉತ್ಸುಕರಾಗಿದ್ದಾರೆ. ಉತ್ತಮ ಕಥೆ ಸಿಕ್ಕರೆ ಇಬ್ಬರೂ ಒಟ್ಟಿಗೆ ನಟಿಸುತ್ತೇವೆ ಎಂದೂ ಸಹ ಹೇಳಿಕೊಂಡರು.

ಪರಸ್ಪರ ಗೌರವಿಸಬೇಕು
‘ಗಂಡು ಹೆಣ್ಣು ಎಂಬ ಭೇದಭಾವವಿಲ್ಲದೆ ಒಬ್ಬೊರನ್ನೊಬ್ಬರು ಗೌರವಿಸಿ, ಅರ್ಥ ಮಾಡಿಕೊಂಡು ಜೀವನ ನಡೆಸಬೇಕು. ಆಗ ಮಾತ್ರ ಮದುವೆ ಯಶಸ್ವಿಯಾಗಲು ಸಾಧ್ಯ. ನಾನು ಈಗಷ್ಟೇ ಮದುವೆಯಾಗಿದ್ದೇನೆ. ನಾನು ಹಾಗೂ ಸೋಹಾ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿದ್ದೇವೆ. ಇನ್ನು ಕೆಲವು ವರ್ಷ ಕಳೆದ ನಂತರ ಹ್ಯಾಪಿ ಮ್ಯಾರೇಜ್‌ನ ಗುಟ್ಟು ಹೇಳಲು ಅನುಭವ ಎಂಬ ಸರ್ಟಿಫಿಕೇಟ್‌ ಇರುತ್ತದೆ ಎನ್ನುತ್ತಾರೆ ಕುನಾಲ್‌.

Write A Comment