ರಾಷ್ಟ್ರೀಯ

ಚರ್ಚ್‌ನಲ್ಲಿ ಹನುಮಂತ!: ಹರಿಯಾಣದ ಹಿಸ್ಸಾರ್‌ ಬಳಿ ದುಷ್ಕೃತ್ಯ

Pinterest LinkedIn Tumblr

churchchchchc

ಚಂಡೀಗಡ: ಹರಿಯಾಣದ ಹಿಸ್ಸಾರ್‌ ಜಿಲ್ಲೆಯಲ್ಲಿ ನಿರ್ಮಾಣ ಹಂತದ ಚರ್ಚ್‌ ಮೇಲೆ ದುಷ್ಕರ್ಮಿಗಳು ಸೋಮವಾರ ದಾಳಿ ನಡೆಸಿದ್ದು, ಚರ್ಚ್‌ ಕಟ್ಟಡವನ್ನು ಸಂಪೂರ್ಣ ಧ್ವಂಸಗೊಳಿಸಿದ್ದಾರೆ.

ಈ ಘಟನೆಯ ನಂತರ ಕೈಮ್ರಿ ಗ್ರಾಮ­ದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ­ವಾಗಿದೆ. ಚರ್ಚ್‌ನಲ್ಲಿಯ ಕ್ರಾಸ್ ಕಿತ್ತು, ಆ ಸ್ಥಳದಲ್ಲಿ ಪ್ರತಿಷ್ಠಾಪಿಸಿದ್ದ ಹಿಂದೂ ದೇವತೆ ಹನುಮಾನ ವಿಗ್ರಹ­ವನ್ನು ಪೊಲೀಸರು ತೆರವುಗೊಳಿಸಿದರು.

ಚರ್ಚ್‌ನಲ್ಲಿದ್ದ ಕ್ರಾಸ್ ಹಾಗೂ ಇನ್ನಿತರ ವಸ್ತುಗಳನ್ನು ದಾಳಿಕೋರರು ಕದ್ದು ಒಯ್ದಿದ್ದಾರೆ.  ಕೃತ್ಯದ ಹಿಂದೆ ಬಜರಂಗ ದಳ ಕಾರ್ಯಕರ್ತರ ಕೈವಾಡ ಇರಬಹುದು ಎಂದು  ಪಾದ್ರಿ ಸುಭಾಸ್‌ ಚಂದ್‌ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಗ್ರಾಮದಲ್ಲಿ ಚರ್ಚ್‌ ನಿರ್ಮಿಸದಂತೆ ಫೆಬ್ರುವರಿಯಿಂದ ತಮಗೆ ಜೀವಬೆದರಿಕೆ ಕರೆಗಳು ಬರುತ್ತಿದ್ದವು. ಗ್ರಾಮದಲ್ಲಿ ವಾಸ್ತವ್ಯ ಮಾಡಲು ಮನೆಯನ್ನೂ ನೀಡದಂತೆಯೂ ತಾಕೀತು ಮಾಡಲಾಗಿದೆ. ಜೀವ ಭಯದಿಂದ ಒಂದು ವಾರದ ಹಿಂದೆಯೇ  ಗ್ರಾಮವನ್ನು ತೊರೆದಿದ್ದಾಗಿ  ಅವರು ತಿಳಿಸಿದ್ದಾರೆ.

ಪಾದ್ರಿಯ ದೂರಿನ ಮೇರೆಗೆ ಪೊಲೀಸರು 14 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ, ಘಟನೆಗೆ  ಸಂಬಂಧಿಸಿದಂತೆ ಇದುವರೆಗೂ ಯಾರನ್ನೂಬಂಧಿಸಿಲ್ಲ.

ವರದಿ ಕೇಳಿದ ಗೃಹ ಸಚಿವಾಲಯ
ನವದೆಹಲಿ (ಪಿಟಿಐ): ಹಿಸ್ಸಾರ್‌ ಜಿಲ್ಲೆಯ ಚರ್ಚ್ ಮೇಲಿನ ದಾಳಿ ಘಟನೆ ಕುರಿತು ಸಮಗ್ರ  ವರದಿ ಸಲ್ಲಿಸುವಂತೆ ಕೇಂದ್ರ ಗೃಹ ಸಚಿವಾಲಯ  ಹರಿಯಾಣ ಸರ್ಕಾರಕ್ಕೆ ಸೂಚಿಸಿದೆ. ಈ ಕೃತ್ಯದ ಹಿಂದೆ ಯಾವುದಾದರೂ ಸಂಘಟನೆಯ ಕೈವಾಡವಿದೆಯೇ ಎಂದು ಪ್ರಶ್ನಿಸಿರುವ ಗೃಹ ಸಚಿವಾಲಯ, ಘಟನೆ ನಂತರ ಕೈಗೊಂಡಿರುವ  ಕ್ರಮದ ಬಗ್ಗೆ ತಿಳಿಸುವಂತೆ  ಹೇಳಿದೆ. ಅಲ್ಪಸಂಖ್ಯಾತರ ಧಾರ್ಮಿಕ ಮತ್ತು ಪವಿತ್ರ ಸ್ಥಳಗಳಿಗೆ ರಕ್ಷಣೆ ನೀಡಬೇಕು ಮತ್ತು ಭವಿಷ್ಯದಲ್ಲಿ ಇಂತಹ ದುಷ್ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ಮಾಡಿದೆ.
*
ಮತಾಂತರ ಮಾಡಲು ಯತ್ನ
ಮನೆ ಕಟ್ಟಲು ನಿವೇಶನ ಖರೀದಿಸಿ  ಅಲ್ಲಿ ಚರ್ಚ್‌ ನಿರ್ಮಿಸಲಾಗುತ್ತಿದೆ. ಗ್ರಾಮ­ದಲ್ಲಿ ಕ್ರೈಸ್ತರೇ ಇಲ್ಲದಿರುವಾಗ ಚರ್ಚ್‌  ನಿರ್ಮಿಸುವ ಅಗತ್ಯವೇನಿದೆ? ಕೆಲವು ದಿನಗಳಿಂದ ಪಾದ್ರಿ ಗ್ರಾಮಸ್ಥರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಲು  ಯತ್ನಿಸುತ್ತಿದ್ದಾರೆ   ಎಂದು  ಕೈಮ್ರಿ ಗ್ರಾಮಸ್ಥರು ಹೇಳಿದ್ದಾರೆ.
*
ಚರ್ಚ್‌ ದಾಳಿ ಹಿಂದೆ ಬಜರಂಗದಳ ಕಾರ್ಯಕರ್ತರ ಕೈವಾಡವಿದೆ. ಕೆಲ ದಿನಗಳಿಂದ ಅವರು ನನಗೆ ಜೀವ ಬೆದರಿಕೆ ಒಡ್ಡುತ್ತಿದ್ದರು. ಚರ್ಚ್‌ ನಿರ್ಮಿಸದಂತೆ ತಾಕೀತು ಮಾಡಿದ್ದರು.
–ಸುಭಾಷ್ ಚಂದ್,
ಚರ್ಚ್‌ನ ಪಾದ್ರಿ

Write A Comment