-ಪ್ರೊ. ಸಿ. ಸಿದ್ದರಾಜು ಆಲಕೆರೆ
ಈ ಶಾಲೆಗಳಲ್ಲಿ ಶಿಕ್ಷಣ ಕೇವಲ ಪಠ್ಯದೊಳಗಿನ ಅಕ್ಷರವಲ್ಲ, ಬದಲಿಗೆ ಮಣ್ಣಿನೊಳಗೆ ಬೆಸೆಯುವ ಬಾಂಧವ್ಯ. ಇಲ್ಲಿ ಕಲಿಯುವ ಚಿಣ್ಣರದು ಹಸಿರಿನ ಹೊನ್ನಿನ ಜೊತೆಗೆ ನಿತ್ಯದ ಆಟೋಟ. ಪಠ್ಯದೊಂದಿಗೆ ಭೂಮಿಯನ್ನೂ ಪ್ರೀತಿಸುವ ಬಗೆ ತಿಳಿಸುವ ಮೂಲಕ ಭೂತಾಯಿಯೊಂದಿಗೆ ಅವಿನಾಭಾವ ಸಂಬಂಧದ ಬಗೆಗೆ ಹೇಳಿಕೊಡುವ ಇಲ್ಲಿಯ ಶಿಕ್ಷಣದ ಪರಿಯೇ ವಿಭಿನ್ನ.
ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಇಂದಿನ ದಿನಗಳಲ್ಲಿ ಖಾಸಗಿ ಶಾಲೆಗಳನ್ನೇ ನಾಚಿಸುವಂತೆ ಇಂಥ ಅಪೂರ್ವ ಕಾರ್ಯದಲ್ಲಿ ತೊಡಗಿರುವುದು ಮಂಡ್ಯ ತಾಲ್ಲೂಕಿನ ದುದ್ದ ಹಾಗೂ ಮದ್ದೂರು ತಾಲ್ಲೂಕಿನ ರಾಂಪುರದ ಸರ್ಕಾರಿ ಶಾಲೆಗಳು. ಇಲ್ಲಿ ಹಸಿರು ನರ್ತಿಸುತ್ತಿದೆ. ನಲಿ-ಕಲಿ ಕಾರ್ಯಕ್ರಮದ ಜೊತೆಗೆ ಪರಿಸರ ಜಾಗೃತಿಯನ್ನು ಈ ಶಾಲೆಗಳು ಮೂಡಿಸುತ್ತಿವೆ. ಮುಂದಿನ ಪೀಳಿಗೆಗೆ ಜ್ಞಾನದ ಅರಿವಿನ ಜೊತೆಗೆ ಪರಿಸರವನ್ನು ಕಾಪಿಟ್ಟುಕೊಳ್ಳುವ ಪಾಠವೂ ಇಲ್ಲಿ ನಿತ್ಯವೂ ನಡೆಯುತ್ತಿದೆ. ಶಿಕ್ಷಕರು ಮನಸ್ಸು ಮಾಡಿದರೆ ಎಂತಹ ಶಾಲೆಗಳಲ್ಲೂ ಹಸಿರ ಪರಿಸರ ಸೃಷ್ಟಿಸಬಹುದು ಎಂಬುದಕ್ಕೆ ಈ ಶಾಲೆಗಳೇ ಸಾಕ್ಷಿ.
ಶತಮಾನ ಮೀರಿದ ದುದ್ದ ಶಾಲೆ
ವಿಸ್ಮಯಕಾರಿ ಕೋಟೆ ಸೇರಿದಂತೆ ಹಲವು ಐತಿಹಾಸಿಕ ಸ್ಮಾರಕಗಳ ಬೀಡಾಗಿರುವ ದುದ್ದ ಗ್ರಾಮವು ಮಂಡ್ಯ-ಮೇಲುಕೋಟೆ ಮಾರ್ಗದ ನಡುವೆ 14 ಕಿ.ಮೀ ದೂರದಲ್ಲಿದೆ. ಈ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 1889ರಲ್ಲಿ (ಮೈಸೂರು ಒಡೆಯರ್ ಕಾಲ) ಸ್ಥಾಪಿತವಾಗಿದೆ. 1988ರಲ್ಲಿ ಶತಮಾನೋತ್ಸವದ ಸಮಾರಂಭವನ್ನೂ ಕಂಡಿದೆ. ಇಕ್ಕೆಲಗಳಲ್ಲಿ ಹಸಿರ ಹಾದಿಯ ನಡುವೆ ಹೆಜ್ಜೆ ಹಾಕುತ್ತ ಸಾಗುತ್ತಿದ್ದಂತೆ ‘ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ’ ಎಂಬ ಸ್ವಾಗತ ಕಮಾನೊಂದು ಎಲ್ಲರನ್ನೂ ಬರಮಾಡಿಕೊಳ್ಳುತ್ತದೆ.
ಶಾಲಾ ಆವರಣ ಪ್ರವೇಶಿಸಿದರೆ ಅಲ್ಲಿ ಕಣ್ಣಿಗೆ ಹಬ್ಬ ಉಂಟು ಮಾಡುವ ವಾತಾವರಣ. ಜಂಬುನೇರಳೆ, ಪಪ್ಪಾಯಿ, ಹೊಂಗೆ, ಶ್ರೀಗಂಧ, ಸೀಬೆ, ತೆಂಗಿನ ಮರಗಳೆಲ್ಲ ತಂಪನ್ನೆರೆದು ಸ್ವಾಗತಿಸಿದರೆ, ತುಳಸಿ, ನರಲೆಹಂಬು, ಕಿರುನಲ್ಲಿ, ಬೆಟ್ಟದ ನಲ್ಲಿ, ಬಜೆ, ಬಾಯಿಬಸಳೆ, ನಿಂಬೆ ಇನ್ನಿತರ ಗಿಡಮೂಲಿಕೆಗಳು, ವೈವಿಧ್ಯಮಯ ಹೂವುಗಳು ಮನಸ್ಸನ್ನು ಉಲ್ಲಸಿತಗೊಳಿಸುತ್ತವೆ. ಶಾಲೆಯ ಮುಂದುಗಡೆ ಮಾತ್ರವಲ್ಲದೇ ಹಿಂಭಾಗದ ಆವರಣದಲ್ಲಿ ಕೂಡ ಅನೇಕ ತರಕಾರಿ ಗಿಡಗಳಿವೆ. ಮಧ್ಯಾಹ್ನದ ಬಿಸಿಯೂಟಕ್ಕಾಗಿ ಈರುಳ್ಳಿ, ಬೆಳ್ಳುಳ್ಳಿ, ಬದನೆ, ಟೊಮೆಟೊ, ಬಾಳೆ ಸೇರಿದಂತೆ ವಿವಿಧ ಬಗೆಯ ಸೊಪ್ಪುಗಳು ಕೂಡ ಸಿಗುವುದು ಈ ತೋಟದಿಂದಲೇ!
ಈ ಶಾಲೆಯಲ್ಲಿ ಇಂಥ ಹಸಿರಿನ ಚಿತ್ರಣಕ್ಕೆ ಕಾರಣರಾದವರು ಮುಖ್ಯ ಶಿಕ್ಷಕಿ ಅಗ್ನಿಸ್ ಸಲ್ಡಾನ್ನ ಹಾಗೂ ದೈಹಿಕ ಶಿಕ್ಷಣ ಶಿಕ್ಷಕ ಹೆಚ್.ಎನ್.ಬಸವರಾಜು. 285 ಮಕ್ಕಳು ವ್ಯಾಸಂಗ ಮಾಡುತ್ತಿರುವ ಈ ಶಾಲೆಯು 9 ಮಂದಿ ಶಿಕ್ಷಕರನ್ನು ಹೊಂದಿದೆ. ಶಿಕ್ಷಕರು ಮಾತ್ರವಲ್ಲದೇ ವಿದ್ಯಾರ್ಥಿಗಳಿಗೂ ಇಲ್ಲಿ ಹಸಿರಿನ ಪಾಠ ಮಾಡಲಾಗುವುದು. ಕೃಷಿಯಲ್ಲಿಯೂ ಅವರನ್ನು ತೊಡಗಿಸಿಕೊಳ್ಳುವ ಮೂಲಕ ಅವರಿಗೆ ಜಾಗೃತಿ ಮೂಡಿಸಲಾಗುತ್ತಿದೆ.
ಭಿತ್ತಿಯ ಮೂಲಕ ಜಾಗೃತಿ
ಮಂಡ್ಯ ಜಿಲ್ಲೆಯ ಮದ್ದೂರು -ತಾಲ್ಲೂಕಿನ ವಳಗೆರೆಹಳ್ಳಿ ಮಾರ್ಗವಾಗಿ 11 ಕಿ.ಮೀ ದೂರದಲ್ಲಿ ರಾಂಪುರ ಗ್ರಾಮವಿದೆ. ಐತಿಹಾಸಿಕ ದೇಗುಲಕ್ಕೆ ಹೆಸರುವಾಗಿಯಾಗಿರುವ ಈ ಗ್ರಾಮದಲ್ಲಿರುವ ಚೌಡಮ್ಮ ದೇಗುಲ ಬಲು ಪ್ರಸಿದ್ಧಿ. ಈ ದೇವಾಲಯದ ಪಡಸಾಲೆಯಲ್ಲಿ 1951ರಲ್ಲಿ ಆರಂಭಗೊಂಡಿರುವ ಸರ್ಕಾರಿ ಶಾಲೆ ಸದ್ಯ ಸ್ವಂತ ಕಟ್ಟಡ ಹೊಂದಿದ್ದು, ಇಲ್ಲಿ ಕೂಡ ಸದಾ ಹಸಿರಿನ ವಾತಾವರಣ.
ಶಾಲೆಯ ಎದುರಿಗೆ ಪರಿಸರ ಕಾಳಜಿ ಇರುವ ಭಿತ್ತಿ ಬರಹಗಳನ್ನು ಹಾಕಲಾಗಿದೆ.
‘ಗಿಡಗಳನ್ನು ಬೆಳಸಿ-ಪರಿಸರ ಉಳಿಸಿ, ಇದು ಸುಂದರ ಮಂದಿರ’ ಎಂಬ ಸುಸ್ವಾಗತ ಫಲಕ ಶಾಲೆಯೊಳಕ್ಕೆ ಬರ ಮಾಡಿಕೊಳ್ಳುತ್ತದೆ. ‘ಕಾಡು ಬೆಳೆಸಿ, -ನಾಡು ಉಳಿಸಿ’, ‘ನಲ್ಲಿ ನೀರು ಅಮೂಲ್ಯ. ನೀರನ್ನು ಮಿತವಾಗಿ ಬಳಸಿ, ಪೋಲು ಮಾಡಬೇಡಿ’… ಹೀಗೆ ಪರಿಸರದ ಸಂದೇಶ ಸಾರುವ ಅನೇಕ ಭಿತ್ತಿ ಫಲಕಗಳು ಇಲ್ಲಿವೆ. ಶಾಲಾ ಆವರಣದಲ್ಲಿ ಬಗೆಬಗೆಯ ಗಿಡಗಳನ್ನು ನೆಡಲಾಗಿದೆ. ಹಲವು ಗಿಡಗಳು ಮರವಾಗಿ ಬೆಳೆದು ಪರಿಸರವನ್ನು ಸ್ವಚ್ಛಂದವಾಗಿರಿಸಿವೆ.
ಇಷ್ಟೇ ಅಲ್ಲದೇ ಕಾಂಪೋಸ್ಟ್ ಗೊಬ್ಬರದ ಗುಂಡಿ, ಔಷಧಿ ವನ, ನೀರು ಇಂಗುವ ಗುಂಡಿಯನ್ನೂ ಇಲ್ಲಿ ತಯಾರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ಅವುಗಳ ತಿಳಿವಳಿಕೆ ಮೂಡಿಸಲಾಗುತ್ತಿದೆ. ಶಾಲಾ ಗೋಡೆಯ ಮೇಲೆ ಯುಗಗಳು, ವೇದಗಳು, ಭೂಮಿಯ ಪ್ರಮುಖ ಅಕ್ಷಾಂಶಗಳು, ಮಹಾ ಸಾಗರಗಳು, ಖಂಡಗಳ ವಿವರಗಳಿವೆ. ಕನ್ನಡ ಹಾಗೂ ಇಂಗ್ಲಿಷ್ ವರ್ಣಮಾಲೆಗಳಿವೆ. ಕನ್ನಡ ಇಂಗ್ಲಿಷ್ ಅಂಕಿಗಳು, ಗಣಿತ ಚಿಹ್ನೆಗಳು, ಲೇಖನ ಚಿಹ್ನೆಗಳು, ಭಿನ್ನರಾಶಿ, ಕಾಲದ ಅಳತೆ, ಉದ್ದದ ಅಳತೆ, ದ್ರವದ ಅಳತೆ, ತೂಕದ ಅಳತೆಯ ಅರಿವಿನ ಬರಹಗಳಿವೆ. ಪ್ರಾಣಿ, ಪಕ್ಷಿ ಸಂಬಂಧಿಸಿದ ರಾಷ್ಟ್ರನಾಯಕರ, ಜ್ಞಾನಪೀಠ ಪುರಸ್ಕೃತ ಕನ್ನಡ ಸಾಹಿತಿಗಳ ಭಿತ್ತಿ ಚಿತ್ರಗಳಿವೆ.
ಈ ಶಾಲೆಯಲ್ಲಿ ಕೇವಲ 30 ವಿದ್ಯಾರ್ಥಿಗಳಿದ್ದರೂ ಶಿಕ್ಷಕ ಬಿ.ಸಿ.ಪುಟ್ಟಸ್ವಾಮಿ ಅಲ್ಲಿನ ಮಕ್ಕಳಿಗೆ ನಲಿ-ಕಲಿ ಜೊತೆ ಪರಿಸರ ಜಾಗೃತಿ ಮೂಡಿಸಲು ಶ್ರಮಿಸುತ್ತಿದ್ದಾರೆ. ‘ಇಂದಿನ ಪೀಳಿಗೆಗೆ ಪರಿಸರ ಜ್ಞಾನ ಕಡಿಮೆ. ಹಲವು ಮರ-ಗಿಡಗಳ ಹೆಸರೇ ಗೊತ್ತಿರು ವುದಿಲ್ಲ. ಆದ್ದರಿಂದ ವಿವಿಧ ಜಾತಿಯ ಗಿಡಗಳನ್ನು ಮಕ್ಕಳಿಂದಲೇ ನೆಡಿಸಿ ಪರಿಚಯಿಸುತ್ತಿದ್ದೇನೆ’ ಎನ್ನುತ್ತಾರೆ ಪುಟ್ಟಸ್ವಾಮಿ.
ಅಂದಹಾಗೆ ಇಲ್ಲಿ ಮಾವು, ಬೇವು, ಕರಿಬೇವು, ತ್ಯಾಗ, ಅಡಿಕೆ, ಸಿಲ್ವರ್, ಅರಳಿ, ಹೊಂಗೆ, ನೀಲಗಿರಿ, ಅಶೋಕ, ಸೀಬೆ, ದಾಳಿಂಬೆ, ಬಾಳೆ, ತುಳಸಿ, ಸಂಪಿಗೆ ಹೀಗೆ ವಿವಿಧ ಗಿಡ ಮರಗಳಿವೆ. ಆ ಗಿಡಗಳ ಪರಿಚಯದ ಫಲಕವೂ ಇದೆ. 20ಕ್ಕೂ ಹೆಚ್ಚು ಹೂ ಗಿಡಗಳು ಇವೆ. ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಕೂಡ ಶಾಲೆಯ ಆವರಣದಲ್ಲಿಯೇ ಬೆಳೆಯಲಾಗುತ್ತದೆ. ಕೆಲವು ಗಿಡಗಳಿಗೆ ಕುವೆಂಪು, ದ.ರಾ.ಬೇಂದ್ರೆ ಸೇರಿದಂತೆ ಹಲವರ ಹೆಸರುಗಳನ್ನು ಇಡಲಾಗಿದೆ.
ಬಿಸಾಡಿದ ಪ್ಲಾಸ್ಟಿಕ್ ಬಾಟಲುಗಳನ್ನು ಸಂಗ್ರಹಿಸಿ ಅದರ ತಳಭಾಗವನ್ನು ಕತ್ತರಿಸಿ ಬಿರುಡೆಗೆ ರಂಧ್ರ ಮಾಡಿ ಆ ಬಾಟಲನ್ನು ತಲೆಕೆಳಕ್ಕಾಗಿ ಗಿಡಗಳಿಗೆ ಕಟ್ಟಲಾಗಿದೆ. ಆ ಬಾಟಲಿಗೆ ನೀರು ಹಾಕುವುದರ ಮೂಲಕ ನೀರು ವ್ಯರ್ಥವಾಗದಂತೆ ಹನಿನೀರಾವರಿ ವ್ಯವಸ್ಥೆಯನ್ನು ಮಾಡುವ ಮೂಲಕ ಮಕ್ಕಳಿಗೆ ನೀರಿನ ಮಹತ್ವ ತಿಳಿಸಲಾಗುತ್ತದೆ.
ಈ ಶಾಲೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ 2012–13ನೇ ಸಾಲಿನ ‘ಪರಿಸರ ಮಿತ್ರ’ ಪ್ರಶಸ್ತಿ ಲಭಿಸಿದೆ. ಈ ಶಾಲೆಯ ಶ್ಲಾಘನಾರ್ಹ ಕಾರ್ಯ ನೋಡಿ ಊರಿನ ದಾನಿಗಳು ಪೀಠೋಪಕರಣಗಳನ್ನು ದಾನವಾಗಿ ನೀಡಿದ್ದಾರೆ. ಇದೇ ಮಾದರಿಯನ್ನು ಇತರ ಶಾಲೆಗಳಲ್ಲೂ ಅಳವಡಿಸಿದರೆ ಸರ್ಕಾರಿ ಶಾಲೆಗಳು ಜ್ಞಾನ ದೇಗುಲದ ಜೊತೆಗೆ ಸಸ್ಯಕಾಶಿಯೂ ಆಗುವುದರಲ್ಲಿ ಸಂದೇಹವೇ ಇಲ್ಲ.
