ಮನೋರಂಜನೆ

‘ಕಾಸಿದ್ರೆ ಕೈಲಾಸ’ ರಾಜಕುಮಾರ್ – ಉದಯಕುಮಾರ್‌ ಒಟ್ಟಿಗೆ ನಟಿಸಿದ ಸಿನಿಮಾ

Pinterest LinkedIn Tumblr

crec13udaya_0

ಬೆಳ್ಳಿತೆರೆಯಲ್ಲಿ ಮಿನುಗುವ ಹಂಬಲದಿಂದ ಉದಯಕುಮಾರ್‌ ಚೆನ್ನೈಗೆ ಹೋದದ್ದು ‘ಭಾಗ್ಯೋದಯ’ ಸಿನಿಮಾ ಮೂಲಕ. ಅದೇ ಸಂದರ್ಭದಲ್ಲಿಯೇ ಪುಟ್ಟಣ್ಣ ಕಣಗಾಲ್ ಸಹ ಅಲ್ಲಿಗೆ ತೆರಳಿದ್ದರು. ಅದು 1956–58ನೇ ಇಸವಿ ಇರಬೇಕು. ಪುಟ್ಟಣ್ಣ ಅನಾರೋಗ್ಯಕ್ಕೀಡಾದಾಗ ಉದಯಕುಮಾರ್‌ ಅವರೇ ಹಾರೈಕೆ ಮಾಡಿದರು.

‘ಕಾಸಿದ್ರೆ ಕೈಲಾಸ’ ರಾಜಕುಮಾರ್ ಹಾಗೂ ಉದಯಕುಮಾರ್‌ ಒಟ್ಟಿಗೆ ನಟಿಸಿದ ಜನಪ್ರಿಯ ಸಿನಿಮಾ. ಈ ಚಿತ್ರದ ನಂತರ ಇಬ್ಬರೂ ಮತ್ತೆ ಒಂದಾಗಿ ಕಾಣಿಸಿಕೊಳ್ಳಲಿಲ್ಲ. ನಿರುದ್ಯೋಗಿ ಪಾತ್ರದಲ್ಲಿ ತೊಟ್ಟಿಯಲ್ಲಿದ್ದ ಅನ್ನವನು ಗಬಗಬನೆ ತಿನ್ನುತ್ತಿದ್ದ ಉದಯ್ ಅವರ ಪಾತ್ರ ಮತ್ತು ಕೊನೆಗೆ ಅದೇ ಸ್ಥಿತಿಯ ಪಾತ್ರದಲ್ಲಿ ರಾಜಕುಮಾರ್ ಕಾಣಿಸಿಕೊಳ್ಳುವ ಚಿತ್ರವದು.

ಅನ್ನವನ್ನು ಗಬಗಬನೆ ತಿನ್ನುವ ಪಾತ್ರದಲ್ಲಿ ಉದಯಕುಮಾರ್‌ ಪಾತ್ರವನ್ನು ವಿಮರ್ಶಕರು ಹೆಚ್ಚು ಮೆಚ್ಚಿಕೊಂಡಿದ್ದರು. ಆ ನಂತರ ಈ ಇಬ್ಬರು ಮಹಾನ್ ನಟರು ಒಗ್ಗೂಡಲೇ ಇಲ್ಲ. ನಿರ್ದೇಶಕ ಸಿದ್ಧಲಿಂಗಯ್ಯ ಇಬ್ಬರನ್ನು ಸೇರಿಸಿ ಸಿನಿಮಾ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ‘ಕೆರಳಿದ ಸಿಂಹ’ ಚಿತ್ರದ ಡಬ್ಬಿಂಗ್ ಸಂದರ್ಭ. ನಾನು, ಉದಯ್ ಕುಮಾರ್ ಅವರ ಮಗ ವಿಶ್ವವಿಜೇತ ಅಲ್ಲಿಗೆ ಹೋಗಿದ್ದೆವು.

ಅಲ್ಲಿ ‘ಉದಯಣ್ಣ’ ಎಂದು ರಾಜಕುಮಾರ್ ಓಡಿ ಬಂದು ಪ್ರೀತಿಯಿಂದ ಬಿಗಿದಪ್ಪಿಕೊಂಡರು. ‘ಮುತ್ತುರಾಜ’ ಎಂದು ಉದಯ್ ಕುಮಾರ್ ಆಲಂಗಿಸಿಕೊಂಡರು. ಆ ಕ್ಷಣ ಅವಿಸ್ಮರಣೀಯ. ಈ ಇಬ್ಬರ ನಡುವೆ ಯಾವ ಮಟ್ಟದ ಪ್ರೀತಿ ಇತ್ತು ಎಂದರೆ ರಾಜ್ ಬಿಟ್ಟ ಪಾತ್ರಗಳನ್ನು ಉದಯಕುಮಾರ್ ಅಭಿನಯಿಸುತ್ತಿದ್ದರು. ಈ ಇಬ್ಬರು ಮಹಾನ್ ಕಲಾವಿದರು 80ಕ್ಕೂ ಹೆಚ್ಚು ಚಿತ್ರಗಳಲ್ಲಿ ಒಗ್ಗೂಡಿ ನಟಿಸಿದ್ದಾರೆ.

ರಂಗಭೂಮಿಯ ಕಡು ವ್ಯಾಮೋಹಿ
ಸಿನಿಮಾದಲ್ಲಿ ಅವಕಾಶಗಳು ಕಡಿಮೆಯಾದಂತೆ ಉದಯಕುಮಾರ್ ಗಮನ ಹರಿಸಿದ್ದು ರಂಗಭೂಮಿ ಕಡೆಗೆ. 1969ರಲ್ಲಿ ‘ಉದಯಭಾನು ಕಲಾಸಂಘ’ ಸ್ಥಾಪಿಸಲಾಯಿತು. ನಟ ರಾಜಾನಂದ್ ಅವರ ಜತೆ ಉತ್ತರ ಕರ್ನಾಟಕ ಪ್ರವಾಸ ಮಾಡಿದರು. ‘ಮಾರ್ಕೆಟ್ ಮದುವೆ’ ಕಲಾಸಂಘದ ಅಂದಿನ ಪ್ರಮುಖ ನಾಟಕ. ಮತ್ತೆ ಸಿನಿಮಾದಲ್ಲಿ ಅವಕಾಶಗಳು ಸಿಕ್ಕವು. ‘ಬಿಳಿಹೆಂಡ್ತಿ’, ‘ಹೇಮಾವತಿ’– ಹೀಗೆ ಅವರ ಸಿನಿಮಾ ಸಂಘ ಮುಂದುವರೆಯಿತು. 1976ರ ಸುಮಾರಿಗೆ ‘ಉದಯ ಭಾನುಕಲಾ ಸಂಘ’ವನ್ನು ಮತ್ತೆ ಪುನರುಜ್ಜೀವನಗೊಳಿಸಿದರು. ಆಗ ಅದಕ್ಕೆ ನನ್ನ ವ್ಯವಸ್ಥಾಪಕನನ್ನಾಗಿ ನೇಮಿಸಿದರು.

ನಮ್ಮ ಮನೆಯಲ್ಲಿ ಕಡುಬಡತನ. ಮನೆ ಬಿಟ್ಟು ಬೆಂಗಳೂರಿಗೆ ಬಂದೆ. ಊಟವಿಲ್ಲದ ದಿನಗಳು. ಮೆಜೆಸ್ಟಿಕ್‌ನ ಅಂಗಡಿ ಮುಂಗಟ್ಟುಗಳ ಮುಂದೆ ಮಲಗುತ್ತಿದ್ದೆ. ಬೆಳಗ್ಗೆ ಅಂಗಡಿ ಮಾಲೀಕರು ನೀರು ಎರಚಿ ಎಚ್ಚರಿಸುತ್ತಿದ್ದರು. ಆಗ ಬುಕ್ಕಿ ಒಬ್ಬರ ಪರಿಚಯವಾಗಿ ರೇಸ್‌ಕೋರ್ಸ್‌ನಲ್ಲಿ ಅಟೆಂಡರ್ ಆಗಿ ಕೆಲಸಕ್ಕೆ ಸೇರಿದೆ. ಅದೇ ಸಮಯದಲ್ಲಿ ಉದಯಕುಮಾರ್ ಅವರ ಮಗ ವಿಶ್ವವಿಜೇತ ಮನೆ ಬಿಟ್ಟು ಬಂದಿದ್ದ. ಸುಮಾರು 15 ದಿನಗಳ ಕಾಲ ಜತೆಗಿದ್ದ. ಅಲ್ಲಿಂದ ಮುಂಬೈಗೆ ಹೋದ.

ಸ್ವಲ್ಪ ದಿನಗಳ ನಂತರ ಉದಯಕುಮಾರ್ ಮತ್ತು ಅವರ ಕುಟುಂಬದವರು ನನ್ನ ಬಳಿ ಬಂದು ಮಗನ ಬಗ್ಗೆ ವಿಚಾರಿಸಿದರು. ಆರು ತಿಂಗಳ ನಂತರ ಅವರಿಗೆ ಮಗ ಸಿಕ್ಕಿದ. ವಿಶ್ವವಿಜೇತ ಮನೆ ಬಿಡಲು ಕಾರಣ, ಅವನು 15–16 ವರ್ಷದ ಹುಡುಗಿಯನ್ನು ಪ್ರೀತಿಸಿ ಮದುವೆ ಮಾಡಿಕೊಂಡು ಮನೆಗೆ ಕರೆದುಕೊಂಡು ಬಂದಿದ್ದು. ‘ಆ ಹುಡುಗಿ ಚಿಕ್ಕವಳು. ಅವಳದು ಮದುವೆಯ ವಯಸ್ಸಲ್ಲ’ ಎಂದು ಆಕೆಯ ಅಪ್ಪನನ್ನು ಕರೆಸಿ ಉದಯಕುಮಾರ್‌ ಬುದ್ಧಿವಾದ ಹೇಳಿದ್ದರು. ಆ ಬೇಸರದಲ್ಲೇ ವಿಶ್ವವಿಜೇತ ಮನೆ ತೊರೆದಿದ್ದು.

ನನಗೆ ನಾಟಕದ ದೀಕ್ಷೆ ಕೊಟ್ಟವರೇ ಉದಯಕುಮಾರ್. ಎಷ್ಟೋ ಬಾರಿ ನಾಟಕದಲ್ಲಿ ಅಭಿನಯಿಸಿದರೂ ಸಂಭಾವನೆ ಇಲ್ಲದೆ ಅವರು ವಾಪಸಾಗಿದ್ದಿದೆ. ಉತ್ತರ ಕರ್ನಾಟಕ ಪ್ರವಾಸಕ್ಕೆ ಹೋದಾಗ ಹಾರ್ಮೋನಿಯಂ, ತಬಲಾ ಇತ್ಯಾದಿ ಕಲಾವಿದರಿಗೆ 500–1000 ರೂಪಾಯಿಯನ್ನು ಉಚಿತವಾಗಿಯೇ ಕೊಡುತ್ತಿದ್ದರು. ಆದರೆ ಅವರು ಸ್ವತಃ ಪಡೆಯುತ್ತಿದ್ದ ಸಂಭಾವನೆ ಕಡಿಮೆ. ಆಸ್ತಿ, ಹಣ ಮಾಡಬೇಕು ಎನ್ನುವ ವ್ಯಾಮೋಹ ಅವರನ್ನು ಎಂದಿಗೂ ಸುತ್ತಿಕೊಳ್ಳಲಿಲ್ಲ.

ರಾಜಕೀಯ ನಂಟು
ಉದಯಕುಮಾರ್ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದಿದ್ದರೂ ಜನಪರ ವ್ಯಕ್ತಿಗಳ ಪರ ಚುನಾವಣಾ ಪ್ರಚಾರ ನಡೆಸಿದ್ದಾರೆ. 1982ರಲ್ಲಿ ಸಿಂಧನೂರಿನಲ್ಲಿ ನಡೆದ ನಾಟಕ ಸಮಾರಂಭದ ಸುದ್ದಿಗೋಷ್ಠಿಯಲ್ಲಿ ‘ವಾಜಪೇಯಿ ಈ ದೇಶದ ಪ್ರಧಾನಿಯಾಗಬೇಕು’ ಎಂದು ಹೇಳಿದ್ದರು. ಬೆಂಗಳೂರಿನಲ್ಲಿ ನಡೆದ ಕಾರ್ಪೊರೇಷನ್ ಚುನಾವಣೆಯಲ್ಲಿ ಅಡ್ವಾಣಿ ಮತ್ತು ಮಲ್ಲಿಕಾರ್ಜುನಯ್ಯ  ಅವರ ಜತೆ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು.

ಕಾಂಗ್ರೆಸ್ ಪರವಾಗಿಯೂ ಬೆಂಗಳೂರಿನ ಸಂಪಂಗಿರಾಮನಗರ ಇತ್ಯಾದಿ ಕಡೆಗಳಲ್ಲಿ ಪ್ರಚಾರ ನಡೆಸಿದ್ದರು. ಜನತಾಪಕ್ಷಕ್ಕೂ ಪ್ರಚಾರ ಮಾಡಿದ್ದರು. 1975ರ ತುರ್ತು ಪರಿಸ್ಥಿತಿ ಸಮಯದಲ್ಲಿ ಅವರು ಸಭೆ ಸಮಾರಂಭಗಳಲ್ಲಿ ಮಾತನಾಡುತ್ತಿದ್ದರು. ಆಗ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಗೃಹಮಂತ್ರಿ ಗುಂಡುರಾಯರನ್ನು ಉದಯಕುಮಾರ್ ಮನೆಗೆ ಸಂಧಾನಕ್ಕೆ ಕಳುಹಿಸಿದ್ದರು. ‘ನಾನು ಸಭೆ ಸಮಾರಂಭಗಳಲ್ಲಿ ಮಾತನಾಡುವವನೇ’ ಎಂದಿದ್ದರು ಕಲಾಕೇಸರಿ. ಗಾಂಧೀಜಿ ಅವರ ಅಹಮದಾಬಾದಿನ ಆಶ್ರಮದಲ್ಲಿ ಕೆಲವು ವರ್ಷಗಳನ್ನು ಕಳೆದಿದ್ದು ಅವರ ವ್ಯಕ್ತಿತ್ವದ ಇನ್ನೊಂದು ಮುಖ.

ಪಾಕ ಪ್ರವೀಣ
ಸಾಹಿತಿಗಳು, ಕಲಾವಿದರ ಬಗ್ಗೆ ಉದಯಕುಮಾರ್ ಅವರಿಗೆ ಅಪಾರ ಗೌರವ. ಪ್ರತಿದಿನ ಹಲವು ಲೇಖಕರು – ಕಲಾವಿದರು ಅವರ ಮನೆಯಲ್ಲಿ ಊಟ ಮಾಡುತ್ತಿದ್ದರು. ಆ ದಿನಗಳಲ್ಲೇ ತರಕಾರಿ, ಹಾಲು–ಮೊಸರು ಎಂದು ದಿನಕ್ಕೆ 300 ರೂಪಾಯಿ ಖರ್ಚಾಗುತ್ತಿತ್ತು. ಉದಯಕುಮಾರ್ ತಿಂಡಿ–ಕಾಫಿ ಮಾಡುವುದರಲ್ಲಿ ಎತ್ತಿದ ಕೈ. ಬೆಳಿಗ್ಗೆಯೇ ಎದ್ದು ಸ್ವತಃ ತಿಂಡಿ ತಯಾರಿಸುತ್ತಿದ್ದರು.

ತುಪ್ಪ, ಮೊಸರು ಅವರಿಗಿಷ್ಟ. ಇದು ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ದೈಹಿಕ ಶಿಕ್ಷಕರಾದರೂ ಅವರು ವ್ಯಾಯಾಮ ಮಾಡಲಿಲ್ಲ. ಮುಂಬೈನಲ್ಲಿ ರಾಷ್ಟ್ರಪ್ರಶಸ್ತಿಯನ್ನು ಅಂದಿನ ಉಪರಾಷ್ಟ್ರಪತಿ ವಿ.ವಿ. ಗಿರಿ ಅವರಿಂದ ಸ್ವೀಕರಿಸಲು ತೆರಳುತ್ತಿದ್ದಾಗ ಕಾರು ಪಲ್ಟಿಯಾಯಿತು. ಆಗ ಬೆನ್ನಿಗೆ ಏಟು ಬಿದ್ದಿತು. ನಂತರ ವ್ಯಾಯಾಮ ನಿಲ್ಲಿಸಿಬಿಟ್ಟರು. ಅವರೊಳಗೂ ಒಬ್ಬ ಸಾಹಿತಿ ಇದ್ದ. ‘ನಾಡಗೀತೆ’, ‘ತಪಸ್ವಿ ರಾವಣ’ ಸೇರಿದಂತೆ ಐದು ನಾಟಕಗಳನ್ನು ಬರೆದರು. ಕನಕದಾಸರಿಗೆ ಸಂಬಂಧಿಸಿದ ನಾಟಕಕ್ಕೆ ಒಂದೇ ದಿನದಲ್ಲಿ ಸ್ಕ್ರೀಪ್ಟ್ ಬರೆದುಕೊಟ್ಟರು.

ಭಾಷಣ ಪ್ರಿಯ
ಗೋಕಾಕ್ ಚಳವಳಿಯಲ್ಲಿ ಅವರು ಧಾರವಾಡ, ಬೆಳಗಾವಿ ಮತ್ತಿತರ ಕಡೆಗಳಲ್ಲಿ ಜನರನ್ನು ಸಂಘಟಿಸಿ ಸ್ಫೂರ್ತಿದಾಯಕ ಭಾಷಣಗಳನ್ನು ಮಾಡಿದ್ದರು. ನಿತ್ಯ ಸುಮಾರು ಐದಾರು ಪ್ಯಾಕೇಟ್ ಸಿಗರೇಟು ಮತ್ತು ಕಾಫಿ ಅವರಿಗೆ ಅಂಟಿದ್ದ ಮುಖ್ಯ ಚಟ. ಆದರೆ ಆ ದೇಹ ಮತ್ತು ಅವರ ಮುಖ ನೋಡಿದವರು ಬಹಳ ಸಂದರ್ಭಗಳಲ್ಲಿ ‘ಇದೇನಪ್ಪ ಉದಯಕುಮಾರ್ ಇಷ್ಟು ಹೊತ್ತಿಗೆ ಕುಡಿದಿದ್ದಾರೆ’ ಎನ್ನುವ ಮಾತುಗಳನ್ನು ಕೇಳಿದ್ದೇನೆ.

ಒಮ್ಮೆ ರಜನಿಕಾಂತ್ ಮನೆಗೆ ಹೋಗಿದ್ದೆವು. ಅಲ್ಲಿ ರಜನಿ ಅವರ ಸಹಾಯಕ ಮದ್ಯವನ್ನು ತಂದಿಟ್ಟ. ‘ಇದೇನು ರಜನಿ, ನಾನು ಕುಡಿಯುತ್ತೇನೆ ಎಂದುಕೊಂಡೆಯಾ’ ಎಂದರು. ‘ಅಣ್ಣ, ನೀವು ಚೆಂದವಳ್ಳಿ ತೋಟದಲ್ಲಿ ಮಾಡಿದ ಶಿವನಂಜೇಗೌಡನ ರೀತಿ ಪಾತ್ರವನ್ನು ನಾನು ಮಾಡಬೇಕು’ ಎಂದು ರಜನಿ ಆ ಸಮಯದಲ್ಲಿ ಹೇಳಿದ್ದರು.

Write A Comment