ನವದೆಹಲಿ: ಕಳೆದ ವರ್ಷ ಮೇ 16 ರಂದು ಸೂರ್ಯ ಮೂಡುತ್ತಲೇ ಲೋಕಸಭಾ ಚುನಾವಣೆಯ ಫಲಿತಾಂಶ ತಿಳಿದುಕೊಳ್ಳಲು ಇಡೀ ದೇಶ ಕುತೂಹಲದಿಂದ ತುದಿಗಾಲ ಮೇಲೆ ನಿಂತಿತ್ತು. ಮತ್ತೊಂದೆಡೆ ಬಿಜೆಪಿ ಚುನಾವಣಾ ಸಾರಥ್ಯವಹಿಸಿದ್ದ ನರೇಂದ್ರ ಮೋದಿ ಇದ್ಯಾವುದೂ ತಮಗೆ ಸಂಬಂಧವೇ ಇಲ್ಲದಂತೆ ಕೊಠಡಿಯಲ್ಲಿ ಏಕಾಂಗಿಯಾಗಿ ಧ್ಯಾನಾಸಕ್ತರಾಗಿದ್ದರು.
ಒಂದೊಂದಾಗಿ ಫಲಿತಾಂಶ ಹೊರಬೀಳಲು ಆರಂಭವಾಗಿತ್ತು. ಎಲ್ಲೆಡೆ ಬಿಜೆಪಿ ಅಭ್ಯರ್ಥಿಗಳ ಅಬ್ಬರ ಜೋರಾಗಿತ್ತು. ಆದರೆ, ಈ ಯಾವ ಜಂಜಡ ಇಲ್ಲದೆ ತಮ್ಮ ಮನೆಯ ನಿಶ್ಯಬ್ದ ಕೊಠಡಿಯೊಂದರಲ್ಲಿ ಮೋದಿ ಧ್ಯಾನ, ಯೋಗದಲ್ಲಿ ಮುಳುಗಿದ್ದರು.
ಮನುಷ್ಯ ಸಹಜವಾದ ಕುತೂಹಲಕ್ಕಾದರೂ ಅವರು ಟಿ.ವಿಯನ್ನೂ ಹಾಕಿರಲಿಲ್ಲ. ಫೋನ್, ಮೊಬೈಲ್ ಕರೆ ಸ್ವೀಕರಿಸಿರಲಿಲ್ಲ. ತಮ್ಮ ನಿತ್ಯಕರ್ಮ ಮುಗಿಸಿ ಹೊರಬಂದಾಗ ಅಪರಾಹ್ನ 12ಗಂಟೆ. ಆಗ ಮೊಬೈಲ್ ಎತ್ತಿಕೊಂಡರು. ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಫೋನ್ ಮಾಡಿದ್ದರು. ಬಿಜೆಪಿಯ ವಿಜಯಯಾತ್ರೆ ತಿಳಿಸಿದರು. ಅಲ್ಲಿಯವರೆಗೂ ಅವರಿಗೆ ಫಲಿತಾಂಶದ ಬಗ್ಗೆ ಒಂದಿಷ್ಟೂ ತಿಳಿದಿರಲಿಲ್ಲ. ಮೋದಿ ಅವರಿಗೆ ದೊರೆತ ಮೊದಲ ಮಾಹಿತಿ ಅದಾಗಿತ್ತು.
ಮೋದಿ ಅವರ ವೈಯಕ್ತಿಕ ಹಾಗೂ ರಾಜಕೀಯ ಜೀವನಕ್ಕೆ ಸಂಬಂಧಿಸಿದ ಇಂತಹ ಅನೇಕ ಕುತೂಹಲಕಾರಿ ಹಾಗೂ ರೋಚಕ ಅಂಶಗಳು ‘ದ ಮೋದಿ ಎಫೆಕ್ಟ್: ಇನ್‌ಸೈಡ್ ಮೋದಿ’ಸ್ ಕ್ಯಾಂಪೇನ್ ಟು ಟ್ರಾನ್ಸ್‌ಫಾರ್ಮ್ ಇಂಡಿಯಾ’ ಎಂಬ ಪುಸ್ತಕದಲ್ಲಿವೆ. ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್ ಮಾಧ್ಯಮ ಸಲಹೆಗಾರರಾಗಿದ್ದ ಲ್ಯಾನ್ಸ್ ಪ್ರೈಸ್ ಬರೆದಿರುವ ಈ ಪುಸ್ತಕವನ್ನು ಹ್ಯಾಚೆಟ್ ಪ್ರಕಾಶನ ಸಂಸ್ಥೆ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಲೋಕಸಭಾ ಚುನಾವಣೆ ಹಾಗೂ ನಂತರದಲ್ಲಿ ಮೋದಿ ಜತೆಗಿನ ಸಂದರ್ಶನ, ಸಹೋದ್ಯೋಗಿಗಳಾದ ಪಿಯೂಷ್ ಗೋಯಲ್, ಪ್ರಕಾಶ್ ಜಾವಡೇಕರ್, ಸ್ಮೃತಿ ಇರಾನಿ, ಮೋದಿ ಸಲಹೆಗಾರ ತಂಡದ ಸದಸ್ಯರು, ರಾಜಕೀಯ ವಿಶ್ಲೇಷಕರ ಅಭಿಪ್ರಾಯಗಳನ್ನು ಈ ಪುಸ್ತಕ ಒಳಗೊಂಡಿದೆ.
‘ಕಾರ್ಪೊರೇಟ್ ಸಂಸ್ಥೆಗಳಿಂದ ನಾವು ಸಾಕಷ್ಟು ಅನುಕೂಲ ಪಡೆದಿದ್ದೇವೆ ಎಂದು ಹೇಳಲಾಗುತ್ತಿದೆ. ಹೌದು, ಚುನಾವಣಾ ಪ್ರಚಾರಕ್ಕಾಗಿ ಕಾರ್ಪೊರೇಟ್ ಸಂಸ್ಥೆಗಳ ಪುಟ್ಟ ವಿಮಾನ, ಹೆಲಿಕಾಪ್ಟರ್ ಗಳನ್ನು ಬಾಡಿಗೆಗೆ ಪಡೆದಿದ್ದೇವೆ. ಪುಗಸಟ್ಟೆ ಅಲ್ಲ. ಪಕ್ಷ ಪೈಸೆ, ಪೈಸೆಯ ಲೆಕ್ಕಚಾರವನ್ನು ಚುಕ್ತಾ ಮಾಡಿದೆ. ನಾವು ಯಾರೊಬ್ಬರ ಋಣದಲ್ಲಿ ಇಲ್ಲ. ದೇಶದ ಉದ್ದ ಅಗಲಕ್ಕೂ ತಿರುಗಿ ಪ್ರಚಾರ ಮಾಡಲು ವಿಮಾನದ ಅಗತ್ಯ ಇತ್ತು. ಪ್ರಚಾರ ರ್‍್ಯಾಲಿಗೆ ಅಗತ್ಯ ಬಿದ್ದರೆ ಸೈಕಲ್ ಕೂಡ ಬಾಡಿಗೆ ಪಡೆಯಲು ನಾನು ಹಿಂದೇಟು ಹಾಕುವುದಿಲ್ಲ’ ಎಂದು ಹೇಳಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದ ಅನೇಕ ಸಂಘ, ಸಂಸ್ಥೆಗಳು ಬಿಜೆಪಿಯನ್ನು ಬೆಂಬಲಿಸಿದ್ದವು. ದೇಶದಲ್ಲಿ ಬದಲಾವಣೆ ತರಲು ಆರ್ಟ್ ಆಫ್ ಲಿವಿಂಗ್ ಫೌಂಡೇಶನ್, ಬಾಬಾ ರಾಮ್‌ದೇವ್, ಗಾಯಕಿ ಲತಾ ಮಗೇಂಶ್ಕರ್ ಕೂಡ ಆಂದೋಲನದಲ್ಲಿ ಭಾಗವಹಿಸಲು ಮುಂದಾಗಿದ್ದರು ಎಂದು ಅವರು ತಿಳಿಸಿದ್ದಾರೆ.
ಮೋದಿ ಹೇಳಿದ್ದು…
* 2012ರಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ ಗೆದ್ದಾಗಲೇ ‘ಪಕ್ಷದ ಪ್ರಧಾನಿ ಅಭ್ಯರ್ಥಿಗಳಲ್ಲಿ ನಾನೂ ಒಬ್ಬ’ ಎಂಬುದು ಮನವರಿಕೆಯಾಗಿತ್ತು
* ಹಾಗಂತ ಪ್ರಧಾನಿ ಹುದ್ದೆಗಾಗಿ ನಾನು ಪಕ್ಷದಲ್ಲಿ ಗುಂಪುಗಾರಿಕೆ ಮಾಡಲಿಲ್ಲ. ಒತ್ತಡ ಹೇರಲಿಲ್ಲ. ಪ್ರಧಾನಿಯಾಗುವ ಮಹತ್ವಾಕಾಂಕ್ಷೆಯೂ ಇರಲಿಲ್ಲ.
* ಒಂದು ವೇಳೆ ನಾನು ಪ್ರಧಾನಿ ಆಗದಿದ್ದರೂ ಹೆಚ್ಚು ಚಿಂತಿಸುತ್ತಿರಲಿಲ್ಲ. ನಾನಾಗದಿದ್ದರೆ ನನ್ನ ಪಕ್ಷದವರೇ ಯಾರಾದರೂ ಒಬ್ಬರು ಈ ಹುದ್ದೆಗೆ ಏರುತ್ತಿದ್ದರು. ಇದರಿಂದ ಅಂತಹ ಹೆಚ್ಚಿನ ವ್ಯತ್ಯಾಸವೇನೂ ಆಗುತ್ತಿರಲಿಲ್ಲ.
* ಲೋಕಸಭಾ ಚುನಾವಣೆಗೂ ಮೊದಲು ವ್ಯವಸ್ಥಿತ ರಣತಂತ್ರ ರೂಪಿಸಿದ್ದೆ. ಉದ್ದೇಶಪೂರ್ವಕವಾಗಿಯೇ ಮಾಧ್ಯಮಗಳನ್ನು ದೂರ ಇಟ್ಟೆ. ಅವರ ಕೈಗೆ ಸುಲಭವಾಗಿ ಸಿಗಲಿಲ್ಲ. ಹೀಗಾಗಿಯೇ ನನ್ನತ್ತ ಮಾಧ್ಯಮಗಳಿಗೆ ಕುತೂಹಲ ಹೆಚ್ಚುತ್ತಾ ಹೋಯಿತು
* ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಷ್ಟ್ರೀಯ ಮಾಧ್ಯಮಗಳಿಗೆ ಸಂದರ್ಶನ ನೀಡಿದೆ. ಮೊದಲು ಹಿಂದಿ ಸುದ್ದಿವಾಹಿನಿಗಳಿಗೆ ನಂತರ ಇಂಗ್ಲಿಷ್ ವಾಹಿನಿಗಳಿಗೆ ಆದ್ಯತೆ ನೀಡಿದೆ.
* ಒಂದೇ ಸಂದರ್ಶನದಲ್ಲಿಯೇ ಎಲ್ಲವನ್ನೂ ಹೇಳಿ ಮುಗಿಸಲಿಲ್ಲ. ಹೇಳುವುದು ಇನ್ನೂ ಬಾಕಿ ಇದೆ ಎಂಬ ಸಂದೇಶ ರವಾನಿಸಿ ಸಂದರ್ಶನ ಮುಗಿಸುತ್ತಿದೆ. ಇದರಿಂದಾಗಿ ಜನರು ಮುಂದಿನ ಸಂದರ್ಶನದಲ್ಲಿ ಮೋದಿ ಏನು ಹೇಳಬಹುದು ಎಂದು ಕುತೂಹಲದಿಂದ ಕಾಯುತ್ತಿದ್ದರು. ಪ್ರತಿ ಸಂದರ್ಶನದಲ್ಲೂ ಕೊನೆಯಲ್ಲೂ ಆ ಕುತೂಹಲವನ್ನು ಉಳಿಸುತ್ತಿದ್ದೆ.
ಕೇಜ್ರಿವಾಲ್‌ರನ್ನು ನಿರ್ಲಕ್ಷಿಸಿದ್ದ ಮೋದಿ
ದೇಶದಲ್ಲಿ ಲೋಕಸಭಾ ಚುನಾವಣಾ ಕಾವು ಏರಿತ್ತು. ವಾರಾಣಸಿಯಲ್ಲಿ ಮೋದಿ ವಿರುದ್ಧ ಸ್ಪರ್ಧಿಸುವುದಾಗಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು.
ಆಗ ಕೇಜ್ರಿವಾಲ್ ಸ್ಪರ್ಧೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಮೋದಿ, ‘ನನ್ನ ಮೌನವೇ ನನ್ನ ಶಕ್ತಿ’ ಎಂದು ಹೇಳಿದ್ದರು.
‘ಕೇಜ್ರಿವಾಲ್ ದೆಹಲಿ ನಗರಕ್ಕೆ ಸೀಮಿತವಾದ ಒಬ್ಬ ಸಣ್ಣ ನಾಯಕ. ಆದರೆ, ಉಳಿದೆಲ್ಲ ವಿರೋಧ ಪಕ್ಷದ ನಾಯಕರಿಗಿಂತ ಅವರಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಚಾರ ದೊರೆಯುತ್ತಿದೆ. ಕೇಜ್ರಿವಾಲ್ ಅವರಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ. ಅವರ ಬಗ್ಗೆ ಮಾತನಾಡಿ ಸುಮ್ಮನೇ ಏಕೆ ಕಾಲಹರಣ ಮಾಡಲಿ. ಅವರಿಗೆ ನಿರ್ಲಕ್ಷ್ಯವೇ ಮದ್ದು’ ಎಂದಿದ್ದರು.
ಪ್ರೈಸ್ ಸಂದರ್ಶನದ ಅನುಭವ
* ನಾಲ್ಕು ಬಾರಿ ನಾನು ಮೋದಿ ಅವರನ್ನು ಭೇಟಿ ಮಾಡಿದ್ದೆ. ಯಾವುದೇ ಪೂರ್ವ ಷರತ್ತು ಇಲ್ಲದೇ ಅವರು ಭೇಟಿಗೆ ಒಪ್ಪಿಗೆ ಸೂಚಿಸಿದರು. ಪ್ರತಿ ಬಾರಿಯೂ ಒಂದು ಗಂಟೆ ಅಥವಾ ಅದಕ್ಕಿಂತ ಹೆಚ್ಚು ಹೊತ್ತು ಅವರೊಂದಿಗೆ ಮಾತನಾಡುವ ಅವಕಾಶ ನನಗೆ ಸಿಕ್ಕಿತ್ತು.
* ಪ್ರತಿ ಬಾರಿಯೂ ಅವರು ನನ್ನೊಂದಿಗೆ ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಿದರು. ಚುನಾವಣಾ ಪ್ರಚಾರ, ರ್‍್ಯಾಲಿ ಬಗ್ಗೆ ಅನೇಕ ಸೂಕ್ಷ್ಮ ಹಾಗೂ ಮಹತ್ವದ ವಿಷಯಗಳನ್ನು ಹಂಚಿಕೊಂಡರು. ಅವೆಲ್ಲವನ್ನೂ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದೇನೆ
* ಎಲ್ಲ ವಿಷಯಗಳ ಬಗ್ಗೆ ಮುಕ್ತ ವಾಗಿ ಹಾಗೂ ಸ್ವಚ್ಛಂದವಾಗಿ ಮನಬಿಚ್ಚಿ ಮಾತನಾಡಿದ ಮೋದಿ, ಗೋದ್ರಾ ಘಟನೆಯ ವಿಷಯಕ್ಕೆ ಬಂದಾಗ ಮಾತ್ರ ಬಿಗುವಾದರು. ಆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
* ‘ಗೋದ್ರಾ ವಿಷಯದ ಬಗ್ಗೆ ಒಂದೇ ಒಂದು ಅಕ್ಷರವನ್ನೂ ನಾನು ಮಾತನಾಡುವುದಿಲ್ಲ . ಈಗಾಗಲೇ ಆ ಬಗ್ಗೆ ನಾನು ಸಾಕಷ್ಟು ಹೇಳಿಯಾಗಿದೆ. ಬೇಕಾದರೆ ಪತ್ರಿಕಾ ವರದಿ ನೋಡಿ. ಇಲ್ಲವೇ ಸುಪ್ರೀಂಕೋರ್ಟ್ ತೀರ್ಪು ಓದಿಕೊಳ್ಳಿ’ ಎಂದು ಹೇಳಿದ್ದರು.
* * *
ಅತ್ಯಂತ ಪ್ರಮಾಣಿಕವಾಗಿ ಹೇಳುತ್ತೇನೆ ಪ್ರಧಾನಿ ಎಂಬ ಅಧಿಕಾರದ ಮದ ಇದುವರೆಗೂ ನನ್ನ ತಲೆಗೆ ಏರಿಲ್ಲ. ಈ ಕ್ಷಣದವರೆಗೂ ನನ್ನನ್ನು ನಾನು ಪ್ರಧಾನಿ ಎಂದು ಭಾವಿಸಿಕೊಂಡಿಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ ಎಂದುಕೊಳ್ಳುತ್ತೇನೆ.
– ನರೇಂದ್ರ ಮೋದಿ,
ಪ್ರಧಾನಿ