ಚಿತ್ರರಸಿಕರಲ್ಲಿ ‘ಅಪೂರ್ವ’ ಕುತೂಹಲ ಕೆರಳಿಸುತ್ತಿದೆ. ಇದು ಸಿನಿಮಾರಂಗಕ್ಕೂ ಅಪೂರ್ವ ಎನಿಸಲಿದೆಯೇ?
ಈ ಚಿತ್ರದ ಕಾನ್ಸೆಪ್ಟ್ ತೀರಾ ಹೊಸತು. ಆ ಕಾರಣಕ್ಕೆ ಅದು ವಿಶಿಷ್ಟ. ಇಬ್ಬರು ಪ್ರೇಮಿಗಳ ನಡುವಿನ ವಯಸ್ಸಿನ ಅಂತರ ಇಲ್ಲಿರುವ ಕಾರಣಕ್ಕೆ ಸಿನಿಮಾ ಹೊಸತಾಗುವುದಿಲ್ಲ. ಆ ರೀತಿಯ ಕಥೆ ಬಂದಿರಬಹುದು. ವಯಸ್ಸಿನ ಅಂತರ ಮೀರಿದ ಪ್ರೀತಿ ಹೊಸತು ಎಂದೂ ನಾನು ಹೇಳುತ್ತಿಲ್ಲ. ಚಿತ್ರದ ಒಂದೂವರೆ ಗಂಟೆಯ ಕಥೆ ಲಿಫ್ಟ್ ಒಳಗೇ ನಡೆಯುತ್ತದೆ. ಚಿತ್ರಮಂದಿರದೊಳಗೆ ಕುಳಿತ ಪ್ರೇಕ್ಷಕರೂ ಲಿಫ್ಟ್ ಒಳಗೆ ಕುಳಿತ ಭಾವಕ್ಕೆ ಸಿಲುಕುತ್ತಾರೆ. ನಿಮ್ಮನ್ನು ಒಂದು ಕೋಣೆಯಲ್ಲಿ ಲಾಕ್ ಮಾಡಿದರೆ ಏನು ಮಾಡುವಿರಿ? ಅಲ್ಲಿಯೇ ಹೊಸತನ್ನು ಹುಡುಕುತ್ತೀರಿ. ಹಾಗೆಯೇ ಸಂದರ್ಭ, ಸನ್ನಿವೇಶಗಳು ಪ್ರೀತಿಗೆ ಕಾರಣವಾಗುತ್ತದೆ, ವಯಸ್ಸು ಮುಖ್ಯವಾಗುವುದಿಲ್ಲ. ಎರಡು ದಿನಗಳಲ್ಲಿ ನಡೆಯುವ ಒಟ್ಟಾರೆ ಘಟನೆಯ ಹೂರಣ ಇಲ್ಲಿದೆ.
ಚಿತ್ರರಂಗದಲ್ಲಿ ನಿಮ್ಮದೇ ಒಂದು ಶೈಲಿ ರೂಪಿಸಿದವರು ನೀವು. ಈ ಶೈಲಿಗೆ ‘ಅಪೂರ್ವ’ ಪೂರಕವಾಗಿ ಇರಲಿದೆಯೇ?
ನನ್ನ ಶೈಲಿಯಲ್ಲಿ ಇಲ್ಲದಿದ್ದರೆ ಅದು ನನ್ನ ಸಿನಿಮಾ ಆಗುವುದೇ ಇಲ್ಲ. ‘ಅಪೂರ್ವ’ ತುಂಬಾ ವರ್ಷದ ಬಳಿಕ ಸಂಪೂರ್ಣವಾಗಿ ನನ್ನ ಶೈಲಿಯಲ್ಲಿ ತಯಾರಾಗುತ್ತಿರುವ ಸಿನಿಮಾ. ಸ್ವಲ್ಪ ಕಾಲ ನನ್ನ ಶೈಲಿಯನ್ನು ಬಿಟ್ಟಿದ್ದೆ. ‘ಪ್ರೇಮಲೋಕ ರವಿಚಂದ್ರನ್’ ಎಂದು ಜನ ಕರೆಯುತ್ತಾರೆ. ಆ ಮಾದರಿಗೆ ಮರಳಿದ್ದೇನೆ. ವಿಶಿಷ್ಟ ಕಥೆಯನ್ನು ಒಂದು ಪುಟ್ಟ ಲಿಫ್ಟ್ ಒಳಗೆ ಹೇಗೆ ಚಿತ್ರಿಸಬೇಕು ಎನ್ನುವುದನ್ನು ನನ್ನ ಶೈಲಿಗೆ ಅಳವಡಿಸಿಕೊಂಡೇ ಮಾಡಿದ್ದೇನೆ. ತುಂಬಾ ಸವಾಲಿನ ಕೆಲಸ ಇದು.
ನಡುವೆ ನಿಮ್ಮ ಶೈಲಿ ಬಿಟ್ಟಿದ್ದಾಗಿ ಹೇಳಿದಿರಿ. ಏಕೆ?
ಒಂದೇ ಮಾದರಿ ಸಿನಿಮಾ ಸಾಕೆನಿಸಿದಾಗ ‘ಏಕಾಂಗಿ’ ಮೂಲಕ ಒಂದು ಬದಲಾವಣೆಗೆ ಪ್ರಯತ್ನಿಸಿದೆ. ಈ ಚಿತ್ರದ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಬೇಕು ಎನ್ನುವ ಆಸೆ ಇತ್ತು. ಹೊಸ ಪ್ರಯತ್ನ ಮಾಡುತ್ತಾ ವಿಭಿನ್ನ ಸಿನಿಮಾ ಮಾಡಬೇಕು ಎನ್ನುವುದು ನನ್ನ ಗುರಿ. ಈ ರೀತಿಯೂ ಸಿನಿಮಾ ಮಾಡಬಹುದು ಎಂಬ ಆಲೋಚನೆ ಎಲ್ಲರಲ್ಲಿಯೂ ಮೂಡಬೇಕೆಂಬ ಮಹತ್ವಾಕಾಂಕ್ಷೆ ಇತ್ತು. ಗೆದ್ದರೆ ಅದು ಸಾಧ್ಯ. ಸೋತಾಗ ಏನೂ ಮಾಡಲು ಆಗುವುದಿಲ್ಲ. ಜನ ಅದನ್ನು ಸ್ವೀಕರಿಸದಿದ್ದಾಗ ‘ಮಲ್ಲ’ದಿಂದ ಹಳೆಯ ಹಾದಿಗೆ ಮರಳಿದೆ. ಬದುಕಬೇಕಲ್ಲ? ಜನರೂ ನನ್ನನ್ನು ಮತ್ತೆ ಅದೇ ಜಾಗಕ್ಕೆ ಇಳಿಸಿದರು. ಅದು ನನಗೆ ಇಷ್ಟ ಆಗದಿರುವ ಸಂಗತಿ. ಆದರೂ ಅದರ ನಡುವೆಯೇ ನನ್ನ ಗುರಿಗೆ ವಾಪಸ್ ಬರಬೇಕು. ನನಗೆ ಅನಿಸಿದಂತೆ ಸಿನಿಮಾ ಮಾಡಬೇಕು. ಅದು ಆಗುವುದೋ ಇಲ್ಲವೋ, ಗೆಲ್ಲುತ್ತದೆಯೋ ಸೋಲುತ್ತದೆಯೋ ಎನ್ನುವುದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ. ‘ಅಪೂರ್ವ’ ಇಂಥದ್ದೇ ಪ್ರಯತ್ನ. ಐಡಿಯಾ ಚೆನ್ನಾಗಿದೆ ಎನಿಸಿತು. ಮಾಡಲು ಪ್ರಾರಂಭಿಸಿದೆ. ಶುರುಮಾಡಿದ ಬಳಿಕವಷ್ಟೇ ಅದರಲ್ಲಿನ ಸಮಸ್ಯೆಗಳು ಗೊತ್ತಾಗುವುದು. ಹಣಕಾಸು, ಸಮಯ, ತಾಂತ್ರಿಕತೆ ಇತ್ಯಾದಿ…
ಲಿಫ್ಟ್ ಒಳಗೇ ಚಿತ್ರೀಕರಣ ನಡೆಸುವುದು ದೇಹ ಮತ್ತು ಮನಸು ಎರಡಕ್ಕೂ ಶ್ರಮ ಅಲ್ಲವೇ?
ತುಂಬಾ ಕಷ್ಟದ ಕೆಲಸ. ದಿನಕ್ಕೆ ಆರು ಗಂಟೆಗಿಂತ ಹೆಚ್ಚು ಚಿತ್ರೀಕರಣ ನಡೆಸಲು ಸಾಧ್ಯವಾಗಲಿಲ್ಲ. ಆರು ತಿಂಗಳಿನಿಂದ ಲಿಫ್ಟ್ ಒಳಗೇ ಇದ್ದೇನೆ. ಅಷ್ಟು ಚಿಕ್ಕ ಸ್ಥಳದಲ್ಲಿ ಭಾವನೆಗಳನ್ನು ಸೆರೆಹಿಡಿಯಬೇಕು. ಏನೇನು ಅಂದುಕೊಂಡಿದ್ದೆವೊ ಅದನ್ನೆಲ್ಲಾ ಮಾಡಲು ಆಗುವುದಿಲ್ಲ. ಕಿರಿದಾದ ಲಿಫ್ಟ್‌ನಲ್ಲಿ ಕ್ಯಾಮೆರಾ ಕೋನಗಳು ಸಿಗುವುದು ಕಷ್ಟ. ನೋಡುವವನಿಗೆ ವೈವಿಧ್ಯಮಯ ಎನಿಸಬೇಕು. ಕುತೂಹಲ ಮೂಡಿಸಬೇಕು. ಅದನ್ನೆಲ್ಲಾ ಯೋಜಿಸಿ ಮಾಡುತ್ತಿದ್ದೇವೆ.
ನಾಯಕಿ ಬಗ್ಗೆ? ವಿಜಯ ರಾಘವೇಂದ್ರ ದಂಪತಿಯೂ ನಟಿಸಿದ್ದಾರೆ…
ನಾಯಕಿ ಅಪೂರ್ವ ಮೈಸೂರಿನ ಹುಡುಗಿ. ಈ ಸಿನಿಮಾಕ್ಕೆ ಸೂಕ್ತ ವಯಸ್ಸು, ಚಹರೆ ಹೊಂದಿರುವವಳು. ಬಿ.ಕಾಂ ಓದುತ್ತಿರುವವಳನ್ನು ಸಿನಿಮಾಕ್ಕೆ ಕರೆತಂದಿದ್ದೇನೆ. ನನ್ನ ಮಗ–ಸೊಸೆಯ ಪಾತ್ರಗಳಿಗೆ ವಿಜಯ ರಾಘವೇಂದ್ರ ದಂಪತಿಯನ್ನು ಆಯ್ಕೆ ಮಾಡಿದೆ. ಅವರು ಬರುವುದು ಎರಡು ಸನ್ನಿವೇಶಗಳಲ್ಲಿ. ಸುದೀಪ್ ಸಹ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಅವರು ಇರುತ್ತಾರೆ.
ಮಗನ ಚಿತ್ರ ‘ರಣಧೀರ’ ಎಲ್ಲಿವರೆಗೆ ಬಂದಿದೆ?
ಶೇ 30ರಷ್ಟು ಭಾಗ ಚಿತ್ರೀಕರಣ ಆಗಿದೆ. ‘ಅಪೂರ್ವ’ ಮುಗಿದ ಬಳಿಕ ‘ರಣಧೀರ’ ಶುರುವಾಗುತ್ತದೆ.
‘ಮಂಜಿನಹನಿ’ ಮತ್ತೆ ವಿಳಂಬವಾಗುತ್ತಲೇ ಇದೆ?
‘ಮಂಜಿನ ಹನಿ’ ಯಾಕೋ ನನ್ನನ್ನು ಹಿಡಿದುಕೊಂಡಿದೆ. ಅದನ್ನು ಬಿಟ್ಟು ಮುಂದೆ ಬಂದಿದ್ದೇನೆ. ಈಗಿರುವ ಕೆಲಸಗಳು ಮುಗಿದ ಬಳಿಕ ಅದರತ್ತ ಗಮನ ಹರಿಸುತ್ತೇನೆ. ‘ಮಂಜಿನ ಹನಿ’ಗೆ ಎದುರಾಗಿರುವುದು ಗ್ರಾಫಿಕ್ ಸಮಸ್ಯೆ. ಯಂತ್ರಗಳಿಂದಾಗುವ ಕೆಲಸ ಅದು. ಅಂದುಕೊಂಡಂತೆ ಬರುತ್ತಿಲ್ಲ. ನನ್ನ ಮನಸಿನಲ್ಲಿ ಇರುವ ಗ್ರಾಫಿಕ್ಸ್ ಪರಿಕಲ್ಪನೆ ತಂತ್ರಜ್ಞರ ತಲೆಗೆ ಹೋಗುತ್ತಿಲ್ಲ. ಇದು ವೆಚ್ಚದಾಯಕ ಕೆಲಸ. ತುಂಬಾ ಹಣ ಅದಕ್ಕೆ ಪೋಲಾಗಿದೆ. ವಿದೇಶಕ್ಕೆ ಹೋಗಿ ಮಾಡೋಣ ಎಂದರೆ, ಅಲ್ಲಿ ಒಂದೆರಡು ವರ್ಷ ಕುಳಿತು ಕೆಲಸ ಮಾಡುವಷ್ಟು ಶಕ್ತಿ ನನ್ನಲ್ಲಿಲ್ಲ, ದುಡ್ಡೂ ಇಲ್ಲ. ಈಗ ಬೇರೆ ಥರ ಕಥೆ ಹೊರತರಲು ಸಿದ್ಧತೆ ನಡೆಸಿದ್ದೇನೆ. ಸಿನಿಮಾ ತರುವುದಂತೂ ನಿಶ್ಚಿತ. ಗ್ರಾಫಿಕ್ ನಂಬಿಕೊಂಡೇನೂ ನಾವು ಸಿನಿಮಾ ಇಂಡಸ್ಟ್ರಿಯಲ್ಲಿಲ್ಲ. ಅದರಿಂದ ಹೊರತಾಗಿ ಯೋಚನೆ ಮಾಡುತ್ತಿದ್ದೇನೆ.
‘ಮಾಣಿಕ್ಯ’, ‘ದೃಶ್ಯ’, ‘ಅಪೂರ್ವ’– ಈ ಚಿತ್ರಗಳು ನಿಮ್ಮ ಇಮೇಜ್‌ಗೆ ಹೊರತಾಗಿರುವಂತಿವೆ. ಇದೇನು ಉದ್ದೇಶಪೂರ್ವಕ ಆಯ್ಕೆಯೇ?
ನಾನು ಯಾವ ಬಗೆಯ ಪಾತ್ರವನ್ನಾದರೂ ಮಾಡುತ್ತೇನೆ. ಆದರೆ ಈಗ ಅಂತಹ ಪಾತ್ರಗಳು ಬರುತ್ತಿವೆ ಅಷ್ಟೇ. 10 ವರ್ಷದ ಹಿಂದೆ ಕೇಳಿದ್ದರೂ ಮಾಡುತ್ತಿದ್ದೆ. ಆಗ ಯಾರಿಗೂ ರವಿಚಂದ್ರನ್‌ಗೆ ಅಂತಹ ಪಾತ್ರ ಕೊಡಲು ಧೈರ್ಯ ಇರಲಿಲ್ಲ. ರವಿಚಂದ್ರನ್ ಎಂದರೆ ಹುಡುಗಿ ಜೊತೆ ಆಡಬೇಕು, ಡ್ಯುಯೆಟ್ ಹಾಡಬೇಕು ಎನ್ನುವುದೇ ಎಲ್ಲರ ತಲೆಯಲ್ಲಿತ್ತು.
ಸುದೀಪ್ ಜೊತೆ ನಟಿಸಿದಂತೆ ಹೊಸಬರೊಂದಿಗೆ ನಟಿಸಲು ಒಪ್ಪುತ್ತೀರಾ?
ಯಾರು ಕರೆದರೂ ಮಾಡುತ್ತೇನೆ. ನನಗೆ ಅಂತಹ ಭೇದವಿಲ್ಲ.
ಇತ್ತೀಚೆಗೆ ಕಿರುತೆರೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದೀರಿ. ಕಾರಣವೇನು?
ಸಂಪಾದನೆ ಮಾಡುವವನು ಯಾರು ಯಾವ ದಾರಿಯಲ್ಲಾದರೂ ಮಾಡಬಹುದು. ಅದು ಅವರ ಆಯ್ಕೆ. ಈಗ ದುಡ್ಡು ಬೇಕು, ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.
ಅಂದರೆ, ರವಿಚಂದ್ರನ್‌ರಿಗೆ ಕಿರುತೆರೆಗೆ ಹೋಗಬೇಕಾದ ಅನಿವಾರ್ಯತೆ ಎದುರಾಯಿತೆ?
ಕಿರುತೆರೆಗೆ ಹೋಗಬಾರದು ಎಂಬ ರೂಲ್ಸ್ ಇಲ್ಲವಲ್ಲ. ನಾನು ಎಲ್ಲಾ ಕಡೆಯೂ ಇರುತ್ತೇನೆ. ರೇಡಿಯೊ ಕಾರ್ಯಕ್ರಮವನ್ನೂ ಮಾಡುತ್ತೇನೆ. ಟೀವಿಗೂ ಹೋಗುತ್ತೇನೆ. ನನ್ನಿಷ್ಟ. ಚಿಕ್ಕ ಪಾತ್ರವನ್ನೂ ಮಾಡುತ್ತೇನೆ. ದೊಡ್ಡ ಪಾತ್ರವನ್ನೂ ಮಾಡುತ್ತೇನೆ.
ಕೊನೆಯ ಪ್ರಶ್ನೆ– ‘ಅಪೂರ್ವ’ ಬಿಡುಗಡೆ ಯಾವಾಗ?
ಏಪ್ರಿಲ್ 17ಕ್ಕೆ. ಇದು ಶೇ 99ರಷ್ಟು ಖಚಿತ.
ಚಿತ್ರರಂಗಕ್ಕೆ ನಾಯಕತ್ವದ ಸಮಸ್ಯೆ ಕಾಡುತ್ತಲೇ ಇದೆ. ಇತ್ತೀಚೆಗೆ ಕಾರ್ಮಿಕರ ವೇತನ ಸಮಸ್ಯೆಗೆ ಪರಿಹಾರ ಒದಗಿಸಲು ಶ್ರಮಿಸಿದಿರಿ. ಆದರೆ ನಾಯಕತ್ವ ವಹಿಸಿಕೊಳ್ಳಲು ಏಕೆ ಮುಂದಾಗುತ್ತಿಲ್ಲ?
ನಾನು ಸಿದ್ಧನಿಲ್ಲ. ನಾಯಕತ್ವ ವಹಿಸಿಕೊಳ್ಳುವುದೂ ಇಲ್ಲ. ಇಲ್ಲಿ ಮಾತುಗಳನ್ನು ಕೇಳಿಸಿಕೊಳ್ಳುವವರಿಲ್ಲ. ತರ್ಕಬದ್ಧವಾಗಿ ಮಾತನಾಡುವವರು, ಪ್ರಾಕ್ಟಿಕಲ್ ಆಗಿ ಕೆಲಸ ಮಾಡುವವರು ಇದ್ದರೆ ಮಾತ್ರ ಸರಿಯಾಗಿ ಮಾತನಾಡಬಹುದು. ಇಲ್ಲಿ ಒಳಗೊಳಗೇ ಯಾರ್‍ಯಾರೊಂದಿಗೋ ಸಂಪರ್ಕಗಳಿರುತ್ತವೆ. ಇಷ್ಟು ದಿನ ಇಲ್ಲದೆ ಈಗ ಇದ್ದಕ್ಕಿದ್ದಂತೆ ನಾನು ಸಮಸ್ಯೆಗಳನ್ನು ಬಗೆಹರಿಸುತ್ತೇನೆ ಬನ್ನಿ ಎಂದು ಕರೆದರೆ, ಇರುವ ಕೆಲಸವನ್ನೆಲ್ಲ ಬಿಟ್ಟು ಹೋಗಿ ಕೂರಬೇಕಷ್ಟೆ. ಕಾರ್ಮಿಕರ ವೇತನ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೂ ಷರತ್ತಿನ ಮೇಲೆ.
ನಾನು ಏನು ತೆಗೆದುಕೊಂಡರೂ ಎರಡೂ ಕಡೆಯವರು ಅದಕ್ಕೆ ಬದ್ಧರಾಗಿದ್ದರೆ ಮಾತ್ರ ತೀರ್ಮಾನ ತೆಗೆದುಕೊಳ್ಳುತ್ತೇನೆ. ಎಲ್ಲರ ಮಾತು ಕೇಳಿಸಿಕೊಂಡು ನಾನೊಬ್ಬ ಏನಾದರೂ ಮಾಡಬೇಕು ಎಂದರೆ ಅದಕ್ಕೆ ತಯಾರಿಲ್ಲ. ನನ್ನ ಮೇಲೆ ನಂಬಿಕೆ ಇದೆ ಎಂದರೆ ನನ್ನ ತೀರ್ಮಾನಕ್ಕೆ ಸಹಿ ಮಾಡಿ. ಆಮೇಲೆ ಮತ್ತೆ ವರಸೆ ಬದಲಿಸಿದರೆ ನಾನು ಮಧ್ಯೆ ಬರುವುದಿಲ್ಲ ಎಂದಿದ್ದೆ. ಹಾಗೆ ಭರವಸೆ ನೀಡಿದ ಮೇಲೆಯೇ ನಾನು ಪರಿಹಾರ ಒದಗಿಸಲು ಒಪ್ಪಿಕೊಂಡಿದ್ದು.
