ಕರ್ನಾಟಕ

ಬಂಗಾರದ ಮನುಷ್ಯ’ – ‘ಬೂತಯ್ಯನ ಮಗ ಅಯ್ಯು’ ಸೃಷ್ಟಿಕರ್ತ ಸಿದ್ಧಲಿಂಗಯ್ಯ ನಿರ್ಗಮನ

Pinterest LinkedIn Tumblr

sii

ಬೆಂಗಳೂರು: ‘ದೂರದ ಬೆಟ್ಟ’ ಸಿನಿಮಾ ನೋಡಿ­ದವರು ‘ಪ್ರೀತಿನೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಪಾಲಿಗೆ’ ಎನ್ನುವ ಗೀತೆಯನ್ನೂ, ಆ ಗೀತೆಯಲ್ಲಿನ ‘ಹಸಿವಿನಲ್ಲೂ ಹಬ್ಬಾನೇ’ ಎನ್ನುವ ಸಾಲನ್ನೂ ಮರೆಯಲಾರರು. ನಾಯಕ–ನಾಯಕಿಯ ಕಡು ಬಡತನ ಹಾಗೂ  ಆ ಮೂಲಕ ಅದನ್ನು ಮೀರಲು ಶಕ್ತಿ ನೀಡುವ ಒಲವಿನ ಮಹತ್ವವನ್ನು ಚಿತ್ರಿಸುವ ಅದ್ಭುತ ಗೀತೆಯದು. ಜೀವನಪ್ರೀತಿಯ ಆ ಗೀತೆ ಒಂದರ್ಥದಲ್ಲಿ ಚಿತ್ರದ ನಿರ್ದೇಶಕ ಸಿದ್ಧಲಿಂಗಯ್ಯನವರ ಬದುಕಿನ ಚಿತ್ರಪಟವೂ ಹೌದು. ತುಮಕೂರು ಜಿಲ್ಲೆಯ ತರೂರಿನ ಬಡ ಕುಟುಂಬದ ಹುಡುಗನೊಬ್ಬ ಕನ್ನಡ ಚಿತ್ರರಂಗದ ಶ್ರೇಷ್ಠ ನಿರ್ದೇಶಕರ ಸಾಲಿನಲ್ಲಿ ಗುರ್ತಿಸಿಕೊಂಡ ಪಯಣದಲ್ಲಿ ಬಡತನ, ಅವಮಾನಗಳನ್ನು ಮೀರಲು ನೆರವಾ­ದುದೇ ಜೀವನಪ್ರೀತಿ ಹಾಗೂ ಸ್ವಾಭಿಮಾನ.

‘ಬಂಗಾರದ ಮನುಷ್ಯ’ ಹಾಗೂ ‘ಬೂತಯ್ಯನ ಮಗ ಅಯ್ಯು’– ಈ ಎರಡು ಚಿತ್ರಗಳಷ್ಟೇ ಸಾಕು ಸಿದ್ಧಲಿಂಗಯ್ಯನವರ ಶ್ರೇಷ್ಠತೆಯನ್ನು ಸೂಚಿಸಲು. ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲಿ ಗ್ರಾಮೀಣ ಭಾರತವನ್ನು ಅತ್ಯಂತ ಪರಿಣಾ­ಮಕಾರಿಯಾಗಿ ಅಭಿವ್ಯಕ್ತಿಸಿರುವ ಉತ್ಕೃಷ್ಟ ಕಲಾಕೃತಿಗಳಿವು. ಹದಿನಾರಾಣೆ ಕನ್ನಡತನವನ್ನು ಸಿದ್ಧಲಿಂಗಯ್ಯನವರಂತೆ ಸಮರ್ಥವಾಗಿ ಸಿನಿಮಾಕ್ಕೆ ತಂದ ಮತ್ತೊಬ್ಬ ನಿರ್ದೇಶಕನನ್ನು ಕಾಣುವುದು ಕಷ್ಟ.

ಮೇಷ್ಟ್ರೊಬ್ಬರ ಮೂಲಕ ಓದಿನ ಹುಚ್ಚು ಹತ್ತಿಸಿಕೊಂಡ ಸಿದ್ಧಲಿಂಗಯ್ಯ ತಮ್ಮ ಬಾಲ್ಯದಲ್ಲಿ ಪುಸ್ತಕದ ಹುಳುವಾಗಿದ್ದರು. ನಿದ್ದೆಗೆಟ್ಟು ಓದುವುದು ಅವರಿಗೆ ಅಭ್ಯಾಸ­ವಾಗಿತ್ತು. ಬೆಳಗ್ಗೆ ಸೀನಿದರೆ  ಮೂಗೆಲ್ಲ ಕಪ್ಪುಕಪ್ಪು. ಅದು ಬುಡ್ಡಿಯ ಹೊಗೆಯ ಕಪ್ಪು! ಉಪ್ಪಿಲ್ಲದ ಬೆರಕೆ ಸೊಪ್ಪು ಬೇಯಿಸಿ ತಿನ್ನುತ್ತಿದ್ದ ಬಡತನದ ದಿನಗಳಲ್ಲಿ, ಹುಡುಗನಲ್ಲಿ ನಾಳೆಗಳ ಬಗ್ಗೆ ಕನಸುಗಳನ್ನು ಉಳಿಸಿದ್ದೇ ಪುಸ್ತಕಗಳು.

ಬಡತನದಿಂದಾಗಿಯೇ ಕಾಲೇಜು ಮೆಟ್ಟಿಲು ಹತ್ತುವ ಕನಸನ್ನು ಬಿಟ್ಟುಕೊಟ್ಟಿದ್ದ ಸಿದ್ಧಲಿಂಗಯ್ಯ, ಮೇಷ್ಟ್ರು ಕೆಲಸಕ್ಕಾಗಿ ಜಾಹೀರಾತು ನೋಡಿ ಕಚೇರಿ ಮೆಟ್ಟಿಲು ಹತ್ತಿದರು. ಅವರು ಬರೆದ ಅರ್ಜಿಯನ್ನು ಮೆಚ್ಚಿಕೊಂಡ ಅಧಿಕಾರಿಗೆ, ಸಿದ್ಧಲಿಂಗ­ಯ್ಯನವರ ವೇಷ ನೋಡಿ ಗಾಬರಿ­ಯಾಯಿತು. ‘ನೀನು ಪ್ಯೂನ್ ಕೆಲಸಕ್ಕೂ ನಾಲಾಯಕ್ಕು’ ಎಂದಾತ ಹೀಯಾಳಿಸಿದ. ಸಿದ್ಧಲಿಂಗಯ್ಯ ಅಧಿಕಾರಿಯ ಕೆನ್ನೆ ಬಿಸಿಮಾಡಿದರು. ಅಲ್ಲಿಗೆ ಬಂದ ಮತ್ತೊಬ್ಬ ಅಧಿಕಾರಿ, ‘ಸರಿಯಾಗೇ ಮಾಡಿದ್ದಿ’ ಎಂದು ಹುಡುಗನ ಬೆನ್ನುತಟ್ಟಿದರು. ‘ಸರ್ಕಾರಿ ಕೆಲಸಕ್ಕೆ ಸೇರಬಾರದು’ ಎಂದು ಸಿದ್ಧಲಿಂಗಯ್ಯ ನಿರ್ಧರಿಸಿದ್ದೇ ಆಗ.

ಸಾತ್ವಿಕ ಸಿಟ್ಟಿನ ಸ್ವಾಭಿಮಾನ, ಗ್ರಾಮೀಣ ಬದುಕಿನ ಸಿಹಿಕಹಿಗಳು, ಕಂಡದ್ದನ್ನು ಮನಸ್ಸಿನಲ್ಲಿ ಅಚ್ಚಾಗಿಸುವ ಗ್ರಹಣಶಕ್ತಿ- ಇವೆಲ್ಲ ಸಿದ್ಧಲಿಂಗಯ್ಯನವರ ವ್ಯಕ್ತಿತ್ವವನ್ನು ಮಾಗಿಸಿದವು. ಇದೇ ಪಕ್ವತೆ ಅವರ ಸಿನಿಮಾಗಳನ್ನೂ ಕಳೆಗಟ್ಟಿಸಿತು.

ರಂಗದಿಂದ ಬೆಳ್ಳಿತೆರೆಯತ್ತ: ಹೈಸ್ಕೂಲು ದಿನಗಳಲ್ಲೇ ಸಿದ್ಧಲಿಂಗಯ್ಯ­ನವರಿಗೆ ನಾಟಕದ ಹುಚ್ಚಿತ್ತು. ಸಿನಿಮಾದ­ಲ್ಲಾದರೆ ನಾಲ್ಕು ಕಾಸು ಹೆಚ್ಚಿಗೆ ಕಾಣಬಹುದು ಎಂದು ಮೈಸೂರಿಗೆ ಬಂದ ಅವರು, ನವಜ್ಯೋತಿ ಸ್ಟುಡಿಯೊದ ನೆಲ ಒರೆಸು ವುದರಿಂದ ಹಿಡಿದು ಎಲ್ಲ ಚಾಕರಿ­ಗ ಳನ್ನೂ ಮಾಡಿದರು. ನಟ ಬಾಲಣ್ಣನವರ ಗಮನ ಹುಡುಗನ ಮೇಲೆ ಬಿದ್ದದ್ದು ಆಗಲೇ. ‘ಕಂದಾ, ನಟನಾಗೋ ಕನಸು ಬಿಟ್ಟುಬಿಡು. ಆಗೋದಿದ್ದರೆ ನಿರ್ದೇಶಕ ಆಗು. ನಿರ್ದೇಶಕನಾದರೆ ಇಡೀ ಚಿತ್ರ ತಂಡ ನಿನ್ನ ಹಿಡಿತದಲ್ಲಿರ್ತದೆ’ ಎಂದು ಬಾಲಣ್ಣ ಕಿವಿಮಾತು ಹೇಳಿದರು.

ನಿರ್ದೇಶಕನಾಗುವ ಕನಸು ಹೊತ್ತು ಮದರಾಸ್‌ಗೆ ಬಂದ ಸಿದ್ಧಲಿಂಗಯ್ಯ, ವೃತ್ತಿ ಆರಂಭಿಸಿದ್ದು ತೆಲುಗು ಚಿತ್ರಗಳಲ್ಲಿ. ಸಹಾಯಕ ನಿರ್ದೇಶಕನಾಗಿ ಮೂವತ್ತೆ­ರಡು ಸಿನಿಮಾಗಳಿಗೆ ದುಡಿದರು. ತೆಲುಗು ಚಿತ್ರೋದ್ಯಮ ಮದರಾಸ್‌ನಿಂದ ಹೈದರಾಬಾದ್‌ಗೆ ಠಿಕಾಣಿ ಬದಲಿಸುವಾಗ, ‘ನೀನು ಕೂಡ ಹೈದರಾಬಾದ್‌ಗೆ ಬಾ’ ಎಂದರು ತೆಲುಗಿನ ಗೆಳೆಯರು. ಆ ವೇಳೆಗಾಗಲೇ ಸಂಸಾರ ಮದರಾಸ್‌ನಲ್ಲಿ ನೆಲೆ ಕಂಡು­ಕೊಂಡಿತ್ತು. ಮತ್ತೆ ಶುರುವಾಯಿತು ಕೆಲಸದ ಬೇಟೆ. ನಿರ್ದೇಶಕ ಸಿ.ಎಸ್. ರಾವ್ ಅವರ ಶಿಫಾರಸು ಪತ್ರ ಹಿಡಿದು ನಿರ್ಮಾಪಕ ಹಬೀಬುಲ್ಲಾ ಅವರನ್ನು ಸಂಪರ್ಕಿಸಿದರು. ನಲವತ್ತು ರೂಪಾಯಿ ಸಂಬಳ ಪಡೆಯುತ್ತಿದ್ದ ಸಿದ್ಧಲಿಂಗಯ್ಯ ಐದು ರೂಪಾಯಿ ಹೆಚ್ಚಿಗೆ ಕೇಳಿದರು. ಹಬೀಬುಲ್ಲಾ ಇನ್ನೂರೈವತ್ತು ಕೊಡುತ್ತೇ­ನೆಂದರು. ಎರಡು ತಿಂಗಳ ಸಂಬಳ ಮುಂಗಡ ಕೊಟ್ಟರು. ನೂರು ರೂಪಾಯಿಯ ದೊಡ್ಡ ನೋಟುಗಳನ್ನು ಕೈಯಲ್ಲಿ ಹಿಡಿದಾಗ ಅವರ ಕೈಗಳು ನಡುಗುತ್ತಿದ್ದವಂತೆ.

ಸಿದ್ಧಲಿಂಗಯ್ಯನವರ ಕೆಲಸವನ್ನು ವರದ­ರಾಜ್- ರಾಜಕುಮಾರ್ ಸೋದ­ರರು ಗಮನಿಸಿದ್ದರು. ವರದರಾಜ್ ಅವರಿಗಂತೂ ಗೆಳೆಯನ ಬಗ್ಗೆ ಅಪಾರ ಸ್ನೇಹ.  ಆ ಸ್ನೇಹದಲ್ಲೇ ಹೇಳಿದರು- ‘ನಿಮಗೆ ಯಾರಾದರೂ ನಿರ್ಮಾಪಕ ಸಿಕ್ಕರೆ– ರಾಜ್ ಕಾಲ್‌ಷೀಟ್ ಕೊಡಿಸ್ತೇನೆ, ನಿರ್ದೇಶನದ ಅವಕಾಶ ಕೊಡಿ ಎಂದು ಕೇಳಿಕೊಳ್ಳಿ’ ಎಂದರು. ವೃತ್ತಿ ಜೀವನದ ತಿರುವಿನ ಕ್ಷಣವದು. ರಾಜಕುಮಾರ್ ಕಾಲ್‌ಷೀಟ್‌ಗಾಗಿ ದ್ವಾರಕೀಶ್ ಪ್ರಯತ್ನಿ­ಸುತ್ತಿದ್ದರು. ಸಿದ್ಧಲಿಂಗಯ್ಯನವರ ಬಳಿ ಕಾಲ್‌ಷೀಟ್‌ ಇತ್ತು. ‘ಮೇಯರ್ ಮುತ್ತಣ್ಣ’ ರೂಪುಗೊಂಡಿದ್ದು ಹೀಗೆ. ಮುತ್ತಣ್ಣ ಗೆಲ್ಲುವ ಮೂಲಕ ಸಿದ್ಧಲಿಂಗಯ್ಯನವರೂ ಗೆದ್ದರು.  ನಂತರ ‘ಬಾಳು ಬೆಳಗಿತು’, ‘ನಮ್ಮ ಸಂಸಾರ’ ಚಿತ್ರಗಳು ತೆರೆಕಂಡವು.

ಬಂಗಾರದ ಮನುಷ್ಯ: ಸಿದ್ಧಲಿಂಗಯ್ಯನವರಿಗೆ ತಾರಾಪಟ್ಟ ತಂದುಕೊಟ್ಟ ‘ಬಂಗಾರದ ಮನುಷ್ಯ’ ಚಿತ್ರ ಆದ್ದದೊಂದು ಸ್ವಾರಸ್ಯದ ಕಥೆ. ಟಿ.ಕೆ.ರಾಮರಾಯರ ‘ಬಂಗಾರದ ಮನುಷ್ಯ’ ಕಾದಂಬರಿಯ ಸೈಕ್ಲೊಸ್ಟೋನ್ ಪ್ರತಿ ಯನ್ನು ಪತ್ರಕರ್ತ ಗೆಳೆಯರೊಬ್ಬರು ಸಿದ್ಧಲಿಂಗಯ್ಯನವರಿಗೆ ಕಳುಹಿ­ಸಿಕೊಟ್ಟಿದ್ದರು. ಕಾದಂಬರಿ ಇಷ್ಟವಾದರೂ ಅದನ್ನು ಯಾರೂ ಸಿನಿಮಾ ಮಾಡಲಿಕ್ಕೆ ಮುಂದಾಗಲಿಲ್ಲ. ಸುಮಾರು ಮೂರು ವರ್ಷಗಳ ಕಾಲ ‘ಬಂಗಾರದ ಮನುಷ್ಯ’­ನಿಗಾಗಿ ಸಿದ್ಧಲಿಂಗಯ್ಯ ನಿರ್ಮಾಪಕರನ್ನು ಹುಡುಕಾಡಿದರು. ಕಾದಂಬರಿ ಪುಸ್ತಕ­ರೂಪದಲ್ಲೂ ಬಂತು. ಒಂದು ದಿನ, ‘ಈ ಕಾದಂಬರಿ ಚೆನ್ನಾಗಿದೆ ನೋಡಿ’ ಎಂದರು ನಿರ್ಮಾಪಕ ಕೆ.ಸಿ.ಎನ್.ಗೌಡ. ‘ಇದರ ಬಗ್ಗೆ ಮೊದಲೇ ನಿಮ್ಮ ಬಳಿ ಹೇಳಿದ್ದೆ. ನೀವು ಒಪ್ಪಿರಲಿಲ್ಲ’ ಎಂದರು ಸಿದ್ಧಲಿಂಗಯ್ಯ. ‘ಈಗ ಸಿನಿಮಾ ಮಾಡೋಣ’ ಎಂದು ಗೌಡರು ಮಾತು ಮುಗಿಸಿದರು.

‘ಬಂಗಾರದ ಮನುಷ್ಯ’ ಚಿತ್ರಕ್ಕೆ ಖರ್ಚಾದ ಮೊತ್ತ ಹನ್ನೆರಡೂವರೆ ಲಕ್ಷ. ಎರಡು ದಿನ ಸಿನಿಮಾಕ್ಕೆ ಹೆಚ್ಚು ಜನ ಬರಲಿಲ್ಲ. ‘ಸಿದ್ಧಲಿಂಗಯ್ಯ ಗೌಡರನ್ನು ಮುಳು­ಗಿ­ಸಿದ’ ಎಂದು ಗಾಂಧಿನಗರ ಆಡಿಕೊಂಡಿತು. ಪೆಚ್ಚುಮೋರೆ ಹಾಕಿ­ಕೊಂಡ ಗೌಡರಿಗೆ– ‘ಸ್ವಾಮಿ, ನೀವು ದುಡ್ಡು ಗೋಣಿಚೀಲದಲ್ಲಿ ಸುರಿಯಲಿಲ್ಲ. ನೋಟು ನೋಟನ್ನೂ ಎಣಿಸಿಕೊಟ್ಟಿದ್ದೀರಿ. ಆ ತಾಳ್ಮೆ ಈಗಲೂ ಇರಲಿ’ ಎಂದರು ಸಿದ್ಧಲಿಂಗಯ್ಯ. ಮೂರನೇ ದಿನ ಹೌಸ್‌ಫುಲ್! ಆನಂತರದ್ದು ನೂರಾ ನಾಲ್ಕು ವಾರಗಳ ದಾಖಲೆ ಪ್ರದರ್ಶನ. ಚಿತ್ರ ನೋಡಿದ ಅನೇಕ ಕೃಷಿ ಪದವೀಧರರು ನೇಗಿಲು ಹಿಡಿದದ್ದು ನಿರ್ದೇಶಕರಾಗಿ ಸಿದ್ಧಲಿಂಗ­ಯ್ಯನವರಿಗೆ ಧನ್ಯತೆ ತಂದುಕೊಟ್ಟ ನೆನಪುಗಳು.

ಕನ್ನಡಕ್ಕೊಬ್ಬನೇ ಬೂತಯ್ಯ: ‘ಬೂತಯ್ಯನ ಮಗ’ ಚಿತ್ರದ್ದು ಮತ್ತೊಂದು ಕಥೆ. ಶಾಲಾ ದಿನಗಳಲ್ಲೇ ಗೊರೂರರ ‘ವೈಯಾರಿ’ ಕಥೆ ಓದಿದ್ದ ಸಿದ್ಧಲಿಂಗಯ್ಯ, ಆ ಕಥೆಯ ಹಕ್ಕು ಕೇಳಲು ಲೇಖಕರ ಮನೆಗೆ ಹೋದರು. ‘ಬಂಗಾರದ ಮನುಷ್ಯ ಎಲ್ಲಿ? ಭೂತಯ್ಯ ಎಲ್ಲಿ? ನಿಮ
ಗೇನು ಹುಚ್ಚಾ?’ ಎಂದು ಗೊರೂರು ನಕ್ಕರು. ‘ಸ್ವಾಮಿ ನಿಮ್ಮ ಕೃತಿಯ ಸತ್ವ ನನಗೆ ಗೊತ್ತು. ದಯವಿಟ್ಟು ಆಶೀರ್ವಾದ ಮಾಡಿ’ ಎಂದರು ನಿರ್ದೇ­ಶಕರು. ಅಸ್ತು ಎಂದರು ಗೊರೂರು. ಆನಂತರ, ಸಿದ್ಧಲಿಂಗಯ್ಯ ಚಿತ್ರಕಥೆ ಸಿದ್ಧಪಡಿಸಿದರು. ಕಥೆ ಕೇಳಿದ ಗೊರೂರು, ‘ಕಾಫಿ ತಾ’ ಎಂದರು ಹೆಂಡತಿಗೆ. ‘ಭೂತಯ್ಯನ ಕ್ರಿಯೇಟರ್ ನಾನಲ್ಲ, ನೀವು’ ಎಂದು ಹರಸಿದರು.

ಸಿದ್ಧಲಿಂಗಯ್ಯನವರ ಪಾಲಿಗೆ ನಿರ್ದೇಶನ ಒಂದು ಕಸುಬಷ್ಟೇ ಆಗಿರಲಿಲ್ಲ. ಅದು ಸಮಾಜದೊಂದಿಗೆ ತನ್ನ ಅನುಭವ – ನಿಲುವುಗಳನ್ನು ಹಂಚಿಕೊಳ್ಳುವ ಮಾಧ್ಯಮವಾಗಿತ್ತು. ಅವರ ಪುತ್ರ ಮುರಳಿ ತಮಿಳು ಚಿತ್ರರಂಗದಲ್ಲಿ ತಾರೆಯಾಗಿ ಬೆಳೆಯ ತೊಡಗಿದಂತೆ, ಸಿದ್ಧಲಿಂಗಯ್ಯ ನಿಧಾನವಾಗಿ ಸಿನಿಮಾ ಚಟುವಟಿಕೆಗಳಿಂದ ದೂರವಾಗತೊಡಗಿದರು. ಬದಲಾದ ಚಿತ್ರೋದ್ಯಮದೊಂದಿಗೆ ಹೊಂದಿ­ಕೊಳ್ಳುವುದು ಅವರಿಗೆ ಕಷ್ಟವಾಗಿರಬೇಕು. ‘ಇವತ್ತು ನಿರ್ದೇಶಕರಿಗೆ ಗೌರವವಿಲ್ಲ. ಕಸುಬಿಗೆ ಗೌರವ ಇಲ್ಲದ ಕಡೆ ಕೆಲಸ ಮಾಡೋದು ಹೇಗೆ’ ಎಂದೊಮ್ಮೆ ಅವರು ಹೇಳಿಕೊಂಡಿದ್ದರು. ಆದರೂ, ತಮ್ಮ ಆತ್ಮಕಥೆಯನ್ನು ಸಿನಿಮಾ ಮಾಡುವ ಆಸೆ ಅವರೊಳಗಿತ್ತು.
ಐದು ವರ್ಷಗಳ ಹಿಂದೆ ಮುರಳಿ ಸಾವಿಗೀಡಾದುದು ಸಿದ್ಧಲಿಂಗಯ್ಯನವರಿಗೆ ದೊಡ್ಡ ಆಘಾತವಾಗಿ ಪರಿಣಮಿಸಿತು. ‘ಪುತ್ರಶೋಕ ನಿರಂತರಂ’ ಎನ್ನುವ ಮಾತು ಅವರ ಪಾಲಿಗೆ ನಿಜವಾಯಿತು. ಈಗ ಸಿದ್ಧಲಿಂಗಯ್ಯನವರು ನಿರ್ಗಮಿಸಿದ್ದಾರೆ. ಆದರೆ, ಬೆಳ್ಳಿತೆರೆಯಲ್ಲಿ ಅಮರರಾಗಿರುವ ರಾಜೀವ ಹಾಗೂ ಬೂತಯ್ಯನ ಮೂಲಕ ಸಿದ್ಧಲಿಂಗಯ್ಯ ಕೂಡ ಚಿರಂಜೀವಿ.

ಬೂತಯ್ಯನ ಸೃಷ್ಟಿಕರ್ತನ ನಿರ್ಗಮನ
ಬೆಂಗಳೂರು: ಹಿರಿಯ ಚಲನಚಿತ್ರ ನಿರ್ದೇಶಕ ಸಿದ್ಧಲಿಂಗಯ್ಯ (79) ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಮಧ್ಯಾಹ್ನ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೂರು ವಾರಗಳ ಹಿಂದೆ ಆಸ್ಪತ್ರೆಗೆ ಸೇರಿಸಲಾಗಿತ್ತು. ಕಳೆದ ಎರಡು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.
ಕನ್ನಡದಲ್ಲಿ 23 ಹಾಗೂ ತಮಿಳಿನಲ್ಲಿ ಒಂದು ಚಿತ್ರ ನಿರ್ದೇಶಿಸಿದ್ದ ಸಿದ್ಧಲಿಂಗಯ್ಯನವರಿಗೆ 1993–94ನೇ ಸಾಲಿನ ‘ಪುಟ್ಟಣ್ಣ ಕಣಗಾಲ್ ಪ್ರಶಸ್ತಿ’ ದೊರೆತಿತ್ತು. ‘ಮೇಯರ್ ಮುತ್ತಣ್ಣ’, ‘ಬಂಗಾರದ ಮನುಷ್ಯ’, ‘ಬೂತಯ್ಯನ ಮಗ ಅಯ್ಯು’, ‘ನಾರದ ವಿಜಯ’, ‘ದೂರದ ಬೆಟ್ಟ’, ‘ನ್ಯಾಯವೇ ದೇವರು’, ‘ಅಜೇಯ’, ‘ಪ್ರೇಮ ಪಲ್ಲಕ್ಕಿ’, ‘ನಾರಿ ಸ್ವರ್ಗಕ್ಕೆ ದಾರಿ’, ‘ಭೂಲೋಕದಲ್ಲಿ ಯಮರಾಜ’, ‘ಬಿಳಿಗಿರಿಯ ಬನದಲ್ಲಿ’ ಅವರು ನಿರ್ದೇಶಿಸಿದ ಪ್ರಸಿದ್ಧ ಚಿತ್ರಗಳು. ‘ಪ್ರೇಮ ಪ್ರೇಮ ಪ್ರೇಮ’ (1999) ಅವರ ನಿರ್ದೇಶನದ ಕೊನೆಯ ಚಿತ್ರ.
ಪುತ್ರ ಮುರಳಿಯನ್ನು ನಾಯಕನನ್ನಾಗಿ ಮಾಡಿ ನಿರ್ದೇಶಿಸಿದ ‘ಪ್ರೇಮ ಪರ್ವ’ ಹಾಗೂ ಆತನೇ ನಾಯಕನಾಗಿದ್ದ ತಮಿಳಿನ ‘ಪುದಿರ್’ ಸಹ ಸಿದ್ಧಲಿಂಗಯ್ಯ ಅವರಿಗೆ ಯಶಸ್ಸು ತಂದುಕೊಟ್ಟವು.

Write A Comment