ನಿರ್ಮಾಪಕರು: ಮಾಲಿನೇನಿ ಲಕ್ಷ್ಮಯ್ಯ, ನಿರ್ದೇಶಕ: ಶಾಮ್ ಜೆ. ಚೈತನ್ಯ, ತಾರಾಗಣ: ಅರುಣ್, ಪೂಜಾಶ್ರೀ, ಅಶ್ವಿನಿ, ಸೋನಾಲ್, ಅಚ್ಯುತ್ ಕುಮಾರ್ ಮತ್ತಿತರರು
ಹಣಕ್ಕಾಗಿ ಪ್ರಿಯಕರನ ಜತೆ ಸೇರಿ ಕೊಲೆ ಮಾಡುವ ಆಕೆ. ‘ಹಣವಿದ್ದರೆ ಎಲ್ಲೆಡೆಯೂ ಮನ್ನಣೆ’ ಎನ್ನುವ ಮನೋಭಾವ ಬೆಳೆಸಿಕೊಳ್ಳಲು ಆಕೆಯ ತಾಯಿಯ ನಡತೆಯೇ ಕಾರಣ!
ತನ್ನ ಪ್ರೇಯಸಿಯನ್ನು ಬೈಕಿನಲ್ಲಿ ಸುತ್ತಿಸಲು, ಮಜಾ ಉಡಾಯಿಸಲು ಆ ಹುಡುಗ ಸರಗಳ್ಳತನಕ್ಕೂ ಇಳಿಯುತ್ತಾನೆ, ಕೊಲೆಯನ್ನೂ ಮಾಡುತ್ತಾನೆ. ‘ದೊಡ್ಡ ಕುಳ’ಗಳನ್ನು ದೋಚಲು ತನ್ನ ಪ್ರೇಯಸಿಯನ್ನೇ ಬಳಸಿಕೊಳ್ಳುತ್ತಾನೆ. ಮತ್ತೊಂದೆಡೆ ಹೆಣ್ಣುಮಕ್ಕಳನ್ನು ಪ್ರೇಮದ ವಂಚನೆಗೆ ಸಿಲುಕಿಸಿ, ನೀಲಿಚಿತ್ರಗಳನ್ನು ರೂಪಿಸಿ ಹಣಕ್ಕೆ ಪೀಡಿಸುವ ಕಾಮುಕ.
‘ಇಂದಿನ ಶೇ 90ರಷ್ಟು ಹುಡುಗರು ಹೃದಯದಿಂದ ಪ್ರೀತಿ ಮಾಡುವುದಿಲ್ಲ. ಪಾಯಿಂಟ್‌ಗೋಸ್ಕರ ಲವ್ ಮಾಡುತ್ತಾರೆ. ನಿರ್ಮಲ ಮನಸ್ಸಿನ ಹುಡುಗನ ಪ್ರೀತಿಗೆ ಕಾಯುತ್ತಿರುವೆ’ ಎಂದು ತನ್ನ ವ್ಯಾನಿಟಿ ಬ್ಯಾಗ್ ತುಂಬಾ ಕಾಂಡೋಮ್‌ಗಳನ್ನು ತುಂಬಿಕೊಂಡಿರುವ ಮತ್ತೊಬ್ಬಳು…
ಹೀಗೆ ವೈರುಧ್ಯದ ಅಂಶಗಳೊಂದಿಗೆ ಸದಾಶಯದ ಮುಖವಾಡವನ್ನೂ ತೊಟ್ಟಿರುವ ಸಿನಿಮಾ ‘ಒಂದು ರೊಮ್ಯಾಂಟಿಕ್ ಕ್ರೈಂ ಕಥೆ’. ‘ಈ ಸಿನಿಮಾ ಸಮಾಜಕ್ಕೆ ಸಂದೇಶ ಕೊಡುತ್ತದೆ’ ಎನ್ನುವ ಆಶಯದಲ್ಲಿ ಶಾಮ್ ನಿರ್ದೇಶಿಸಿದ್ದಾರೆ. ಇದು ತೆಲುಗಿನ ‘ಒರು ರೊಮ್ಯಾಂಟಿಕ್ ಕ್ರೈಂ ಕಥಾ’ದ ಕನ್ನಡ ಅವತರಣಿಕೆ.
ನೇಟಿವಿಟಿ, ಸೊಗಡು ಇತ್ಯಾದಿ ಮಾತುಗಳನ್ನು ಬದಿಗಿಟ್ಟು ಇಲ್ಲಿ ಗಮನಿಸಬೇಕಾದದ್ದು ಕಥಾಹಂದರವನ್ನು. ಪ್ರಸಕ್ತ ಸಮಾಜದಲ್ಲಿ ಮುಖ್ಯವಾಗಿ ನಗರದಲ್ಲಿನ ಯುವ ಮನಸ್ಸುಗಳ ತುಮುಲ–ತುಡಿತದ ಮನಸ್ಥಿತಿ ಇಲ್ಲಿದೆ. ಅದರಲ್ಲೂ ಪ್ರಮುಖವಾಗಿ ಕೆಡುಕು, ವಂಚನೆ, ಕೊಲೆ, ದುರಾಸೆ ಇತ್ಯಾದಿ ನಕಾರಾತ್ಮಕ ಸರಕನ್ನು ತುಂಬಿದ್ದಾರೆ. ಇಲ್ಲಿ ಕ್ರೈಂಗೂ ಕಿಮ್ಮತ್ತಿದೆ!
ಇಲ್ಲಿ ಕಾಣುವ ಚಿತ್ರಣಗಳು ಪ್ರಸಕ್ತ ಸಮಾಜದಲ್ಲಿ ನಡೆಯುತ್ತಿವೆ. ಯುವ ಮನಸ್ಸುಗಳು ಹಾದಿ ತಪ್ಪುತ್ತಿವೆ ಎನ್ನುವುದನ್ನು ಒಪ್ಪೋಣ. ಆದರೆ ಸಿನಿಮಾದಲ್ಲಿ ಪಾತ್ರಗಳು ಹಾದಿ ತಪ್ಪುವುದು ಸಾಮಾಜಿಕ ವ್ಯವಸ್ಥೆಯ ಹುಳುಕುಗಳಿಂದ ಅಲ್ಲ; ತಮ್ಮ ವೈಯಕ್ತಿಕ ಆಸೆಗಳ ಕಾರಣಕ್ಕೆ. ಇದೊಂದು ವ್ಯಂಗ್ಯ.
ಆಶಯದ ದೃಷ್ಟಿಯಿಂದ ಇದು ಹಿಂದುಳಿಯುವ ಸಿನಿಮಾ. ಕ್ಲೈಮ್ಯಾಕ್ಸ್‌ನಲ್ಲಿ ಅಪರಾಧಿಗಳ ವಿರುದ್ಧ ಒಂದಿಷ್ಟು ಘೋಷಣೆ, ಆಕ್ರೋಶಗಳನ್ನು ಕೂಗಿಸಿ, ಪಾತ್ರಗಳನ್ನು ಸಾಯಿಸಿ ‘ಕೆಡುಕಿಗೆ ಉಳಿಗಾಲವಿಲ್ಲ’ ಎನ್ನುವ ತಥಾಕಥಿತ ಸತ್ಯವನ್ನು ಪುನರುಚ್ಚರಿಸಿದ್ದಾರೆ.
ಅಶ್ವಿನಿ, ಅರುಣ್, ಪೂಜಾಶ್ರೀ ಕಥೆ ಬೇಡಿದ್ದನ್ನು ಮಾಡಿದ್ದಾರೆ. ದ್ವಂದ್ವಾರ್ಥವನ್ನೂ ದಾಟಿ ಖುಲ್ಲಂ ಖುಲ್ಲಾ ಡೈಲಾಗುಗಳನ್ನು ಈ ನಾಯಕಿಯರು ಚೆನ್ನಾಗಿಯೇ ಹೇಳಿದ್ದಾರೆ.
ಪೊಲೀಸ್ ಪಾತ್ರದಲ್ಲಿ ಅಚ್ಯುತ್ ಕುಮಾರ್ ಅವರಿಗೆ ಹೆಚ್ಚು ಅವಕಾಶವಿಲ್ಲ. ಸಂಕಲನಕಾರನ ಕೈ ಕಟ್ಟಿಹಾಕಲಾಗಿದೆ. ಹಾಡುಗಳು ಆ ಕ್ಷಣದಲ್ಲಿಯೇ ಕಿವಿಗೆ ಇಂಪನ್ನು ಕೊಡುವುದಿಲ್ಲ.