ಮನೋರಂಜನೆ

ಅಬ್‌ ತಕ್‌ ಛಪ್ಪನ್‌–2: ಮುಂದುವರಿಸುವ ಗೊಂದಲ!

Pinterest LinkedIn Tumblr

ತಾರಾಗಣ: ನಾನಾ ಪಾಟೇಕರ್, ಮೋಹನ್‌ ಅಗಾಶೆ, ವಿಕ್ರಂ ಗೋಖಲೆ, ಆಶುತೋಷ್‌ ರಾಣಾ, ಗುಲ್‌ ಪನಾಗ್‌ ಮತ್ತಿತರರು.
ನಿರ್ದೇಶನ: ಐಜಾಜ್‌ ಗುಲಾಬ್
ನಿರ್ಮಾಪಕರು: ರಾಜು ಚಡಾ, ಗೋಪಾಲ್‌ ದಳವಿ

pvec28feb15nana-patekar3

ಹಿಂದೆಂದೋ ತೆರೆಕಂಡ ಯಶಸ್ವಿ ಸಿನಿಮಾದ ಮುಂದು­ವರಿದ ಭಾಗದ ದೃಶ್ಯ ಪರಿಕಲ್ಪನೆ ಸಂಕೀರ್ಣ­ವಾದುದು. ಅದರಲ್ಲೂ ಬೇರೆ ನಿರ್ದೇಶಕರು ಅಂಥ ಯತ್ನಕ್ಕೆ ಕೈಹಾಕಿದಾಗ ಹಿಂದಿನ ಹದವನ್ನೇ ಉಳಿಸಿಕೊಳ್ಳುವುದು ಸವಾಲೇ ಸರಿ. ನಿರ್ದೇಶಕ ಐಜಾಜ್‌ ಗುಲಾಬ್‌ ‘ಅಬ್‌ ತಕ್‌ ಛಪ್ಪನ್‌–2’ ಸಿನಿಮಾದಲ್ಲಿ ಹೆಣಗಾಡಿರುವುದನ್ನು ನೋಡಿದರೆ ಇದು ಸ್ಪಷ್ಟವಾಗುತ್ತದೆ.

ಸಿನಿಮಾದಲ್ಲಿ ಲೀಲಾಜಾಲವಾಗಿ ನಟಿಸಬಲ್ಲ ತಾರಾಬಳಗವಿದೆ. ಅರವತ್ತು ದಾಟಿದ ನಾನಾ ಪಾಟೇಕರ್‌ ದೇಹಭಾಷೆ, ಗತ್ತು, ಕಂಠದ ಕಿಮ್ಮತ್ತು ಕಿಂಚಿತ್ತೂ ಕಡಿಮೆಯಾಗಿಲ್ಲ. ಮಾತು, ಕ್ರಿಯೆ ಎರಡರಲ್ಲೂ ಸಿನಿಮಾ ಪೊಲೀಸ್‌ಗೆ ಇರಬೇಕಾದ ತೀವ್ರತೆ ಮುಕ್ಕಾಗಿಲ್ಲ. ಮೋಹನ್‌ ಅಗಾಶೆ, ವಿಕ್ರಂ ಗೋಖಲೆ ತರಹದ ತಣ್ಣಗಿನ ನಟರ ಪಾತ್ರಪೋಷಣೆಯ ಬೆಂಬಲ ಅವರಿಗೆ ಚೆನ್ನಾಗಿಯೇ ಸಿಕ್ಕಿದೆ. ಆದ್ದರಿಂದ ಗುಲ್‌ ಪನಾಗ್‌ ನಟಿಸಲು ಹೆಣಗಾಡಿರುವುದನ್ನೂ ಮರೆತು ಸಿನಿಮಾ ನೋಡಬಹುದು.

ಅಸಂಖ್ಯ ಕಾನೂನು ಪ್ರಕರಣಗಳನ್ನು ಎದುರಿಸುತ್ತಿರುವ ಪೊಲೀಸ್‌ ಅಧಿಕಾರಿಗೆ ದಿಢೀರನೆ ದೊಡ್ಡ ಜವಾಬ್ದಾರಿ ವಹಿಸುವ ತೀರ್ಮಾನವನ್ನು ರಾಜ್ಯವೊಂದರ ಗೃಹಮಂತ್ರಿ ತೆಗೆದುಕೊಳ್ಳುವ ರೀತಿಯಿಂದ ಹಿಡಿದು ತನ್ನ ಸಂಚಿನ ಗುಂಡಿಗೆ ಅದೇ ಮಂತ್ರಿ ತಾನಾಗಿಯೇ ಬೀಳುವವರೆಗೆ ಸಿನಿಮಾದ ಕ್ಯಾನ್ವಾಸ್‌ ಮೇಲೆ ಘಟನಾವಳಿಗಳು ಮೂಡಿವೆ. ಮುಂದೇನಾಗುತ್ತದೆ ಎಂದು ಊಹಿಸುವುದು ಕಷ್ಟವೇನೂ ಅಲ್ಲದ ಚಿತ್ರಕಥೆ ಇದು. ಕಥನದ ದೃಷ್ಟಿಯಿಂದ ಮುಂದೇನಾಗುತ್ತದೆ ಎಂಬ ಅರಿವಿದ್ದರೂ ದೃಶ್ಯವತ್ತಾಗಿ ಮುಂದಿನದ್ದು ಏನನ್ನು ಕಟ್ಟಿಕೊಟ್ಟೀತು ಎಂಬ ಕುತೂಹಲವನ್ನಾದರೂ ಸಿನಿಮಾ ಕಾಪಾಡಿಕೊಳ್ಳಬೇಕು. ಅದಿಲ್ಲಿ ಸಂಪೂರ್ಣ ಮಾಯವಾಗಿದೆ.

ತಾಂತ್ರಿಕವಾಗಿ ಅಚ್ಚುಕಟ್ಟು ಎನ್ನಬಹುದಾದ ಈ ಸಿನಿಮಾವನ್ನ ತರ್ಕ ಗಾಳಿಗೆ ತೂರಿ ನೋಡಬಹುದು. ಆದರೆ, ಒಂದೂಮುಕ್ಕಾಲು ತಾಸಿನ ಅವಧಿಯೂ ದೀರ್ಘವಾಯಿತೇನೋ ಎನ್ನಿಸುವಷ್ಟು ಶಿಲ್ಪ ಸಡಿಲವಾಗಿದೆ. ದೃಶ್ಯವನ್ನು ಸೆರೆಹಿಡಿಯಲು ಕ್ಯಾಮೆರಾ ಬಳಸಿರುವ ಕೋನಗಳಲ್ಲಿ ನಿರ್ದೇಶಕರಿಗೆ ಇರುವ ಜಾಣತನ ಅದರ ವಸ್ತುವಿಷಯದಲ್ಲಿ ಇಲ್ಲವಾಗಿದೆ. ಹಾಗಾಗಿಯೇ ಕೊನೆಯಲ್ಲಿ ಮುಂದೇನಾಯಿತು ಎನ್ನುವ ಸಾಲುಗಳನ್ನು ಬರೆದು, ಕೇಳಿಸಿ ಸಿನಿಮಾ ಮುಗಿಸುವ ಪರಿಸ್ಥಿತಿ ನಿರ್ದೇಶಕರಿಗೆ ಒದಗಿಬಂದಿದೆ. ನಾನಾ ಪಾಟೇಕರ್‌ ಅಭಿನಯದ ಆರದ ಹಸಿವನ್ನು ಪಕ್ಕಕ್ಕಿಟ್ಟರೆ ಈ ಸಿನಿಮಾದಲ್ಲಿ ಮೆಚ್ಚತಕ್ಕ ಅಂಶಗಳಿಗಾಗಿ ತಡಕಾಡಬೇಕು.

Write A Comment