ಚಿತ್ರ: ರುದ್ರತಾಂಡವ
ತಾರಾಗಣ: ಚಿರಂಜೀವಿ ಸರ್ಜಾ, ರಾಧಿಕಾ ಕುಮಾರಸ್ವಾಮಿ, ಗಿರೀಶ್ ಕಾರ್ನಾಡ್, ಕುಮಾರ್ ಗೋವಿಂದ್, ಕೃಷ್ಣ, ಚಿಕ್ಕಣ್ಣ, ರವಿಶಂಕರ್ ಇತರರು
ನಿರ್ದೇಶನ: ಗುರು ದೇಶಪಾಂಡೆ
ನಿರ್ಮಾಪಕರು: ನಾಗೇಶ್ ಹಾಗೂ ವಿನೋದ್
ತನ್ನ ಮಗನನ್ನು ಹತ್ಯೆ ಮಾಡಿದವನ ವಿರುದ್ಧ ಅಪ್ಪನ ಆಕ್ರೋಶ. ಆ ಕೊಲೆಗಾರನನ್ನು ಹೇಗಾದರೂ ಮಾಡಿ ಮುಗಿಸಿ ಬಿಡಿ ಎಂದು ಸುಪಾರಿ ಕಿಲ್ಲರ್‌ಗೆ ಆತ ಹಣ ಕೊಡುತ್ತಾನೆ. ಆ ಕೊಲೆಗಾರನನ್ನು ಪರಲೋಕಕ್ಕೆ ಕಳಿಸಲು ಇನ್ನೊಬ್ಬ ಬಿಸಿ ರಕ್ತದ ಯುವಕ ಕಾಯುತ್ತಿರುತ್ತಾನೆ. ಆತ ಬೇರಾರೂ ಅಲ್ಲ; ಎರಡನೇ ಮಗ! ತನ್ನ ಅಣ್ಣನ ಕೊಲೆಗೆ ಪ್ರತೀಕಾರ ತೆಗೆದುಕೊಳ್ಳುವ ಹವಣಿಕೆ ಆತನದು. ಒಬ್ಬರಿಗೆ ಗೊತ್ತಾಗದಂತೆ ಇನ್ನೊಬ್ಬರು ನಡೆಸುವ ಪ್ರಯತ್ನದಲ್ಲಿ ಗೆಲ್ಲುವವರು ಯಾರು?
ತಮಿಳಿನ ‘ಪಾಂಡಿಯನಾಡು’ ಚಿತ್ರದ ರೀಮೇಕ್ ‘ರುದ್ರತಾಂಡವ’. ಅಪ್ಪನ ಪ್ರೀತಿಯನ್ನೇ ಬುನಾದಿ ಮಾಡಿಕೊಂಡು ನಿಂತಿರುವ ಕಥೆ. ಗಣಿ ಅಧಿಕಾರಿಯಾಗಿದ್ದ ಮಗ ನಾಗರಾಜನನ್ನು (ಕುಮಾರ್ ಗೋವಿಂದ್) ಗಣಿ ದೊರೆ ನರಸಿಂಹ (ರವಿಶಂಕರ್) ಹತ್ಯೆ ಮಾಡಿದಾಗ ಅಪ್ಪ (ಗಿರೀಶ ಕಾರ್ನಾಡ) ಸಿಡಿದೆದ್ದು ನಿಲ್ಲುತ್ತಾನೆ. ಅತ್ತ ಅಣ್ಣನ ಕೊಲೆಗೆ ಪ್ರತೀಕಾರ ತೆಗೆದುಕೊಳ್ಳಲು ಶಿವರಾಜ್ (ಚಿರಂಜೀವಿ ಸರ್ಜಾ) ಕೂಡ ಮುಂದಾಗುತ್ತಾನೆ. ಇವರಿಬ್ಬರೂ ತುಳಿವ ದಾರಿ ಬೇರೆಯಾದರೂ ಗುರಿ ಮಾತ್ರ ಒಂದೇ.
‘ರುದ್ರತಾಂಡವ’ದಲ್ಲಿ ಪ್ರಮುಖವಾಗಿ ಕಾಣಿಸುವುದು ಹಸಿ ಹಸಿ ಕ್ರೌರ್ಯದ ಕಥಾನಕ. ಗಣಿ ಮಾಫಿಯಾದ ಚಿತ್ರಕಥೆ ಇದಾಗಿರುವುದರಿಂದ, ಮಚ್ಚು–ಲಾಂಗುಗಳ ಹೊಡೆತ ಚಿತ್ರದುದ್ದಕ್ಕೂ ಅಪ್ಪಳಿಸುತ್ತದೆ. ಕೋಲಾರದ ಗ್ರಾನೈಟ್ ಗಣಿಗಾರಿಕೆಯನ್ನು ತಮ್ಮ ವಶಕ್ಕೆ ಪಡೆಯುವ ‘ದೊರೆ’ಗಳ ಅಟ್ಟಹಾಸ ಹಾಗೂ ಕುಟುಂಬವೊಂದರ ವಾತ್ಸಲ್ಯದ ಕಥೆಯನ್ನು ಏಕಕಾಲಕ್ಕೆ ತೋರಿಸಿ ಅವೆರಡನ್ನೂ ಜೋಡಿಸುವ ನಿರ್ದೇಶಕ ಗುರು ದೇಶಪಾಂಡೆ ನಿರೂಪಣಾ ತಂತ್ರ ಯಾಕೋ ತಾಳ ತಪ್ಪಿದಂತೆ ಭಾಸವಾಗುತ್ತದೆ!
ಅಪ್ಪನೇ ಪ್ರಮುಖ ಪಾತ್ರಧಾರಿಯಾಗಿ ಕಾಣಿಸಿಕೊಳ್ಳುವ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಲವರ್ ಬಾಯ್ ಆಗಿ ಕಾಣಿಸಿಕೊಳ್ಳಲು ಸಾಕಷ್ಟು ಪರದಾಡಿದ್ದಾರೆ. ಚಿತ್ರದ ಅರ್ಧದವರೆಗೆ ಕಾಣಿಸಿಕೊಳ್ಳುವ ಕುಮಾರ್ ಗೋವಿಂದ್ ಅಥವಾ ಶಿಕ್ಷಕಿಯಾಗಿ ಬರುವ ರಾಧಿಕಾ ಕುಮಾರಸ್ವಾಮಿ ಅವರಿಗೆ ಹೆಚ್ಚೇನೂ ಅವಕಾಶ ಸಿಕ್ಕಿಲ್ಲ. ಹೀಗಾಗಿ ಪ್ರೇಕ್ಷಕರು ನಿರಾಶೆಯಿಂದ ನಿಟ್ಟುಸಿರುವ ಬಿಡುವ ಸಮಯದಲ್ಲಿ ಗಿರೀಶ ಕಾರ್ನಾಡರ ಅಭಿನಯ ಸಿನಿಮಾಕ್ಕೆ ಒಂದಷ್ಟು ಚೈತನ್ಯ ಕೊಡುತ್ತದೆ. ಒಂದೆರಡು ಹಾಡುಗಳು (ಸಂಗೀತ ವಿ.ಹರಿಕೃಷ್ಣ) ಹಾಗೂ ಛಾಯಾಗ್ರಹಣ (ಜಗದೀಶ್ ವಾಲಿ) ಪರವಾಗಿಲ್ಲ. ಸಂಕಲನ (ಕೆ.ಎಂ.ಪ್ರಕಾಶ್) ಮಾತ್ರ ಚುರುಕಾಗಿದೆ. ಹಾಗೆ ನೋಡಿದರೆ, ಈ ಸಿನಿಮಾದ ಅಸಲಿ ಹೀರೋ ಖಳನಾಯಕ ರವಿಶಂಕರ್! ಮಾಫಿಯಾ ದೊರೆಯಾಗಿ ಅಬ್ಬರಿಸುವ ರವಿಶಂಕರ್, ಸಹಚರರನ್ನು ಮುಂದಿಟ್ಟುಕೊಂಡು ಬೀಸುವ ಮಚ್ಚುಗಳ ಹೊಡೆತಕ್ಕೆ ಪ್ರೇಕ್ಷಕ ಕೂಡ ತತ್ತರಿಸಿಬಿಡುತ್ತಾನೆ! ಬೀಳುತ್ತಲೇ ಇರುವ ಹೆಣಗಳಿಗೆ ಲೆಕ್ಕವಿಟ್ಟವರಾರು?
ತುಸು ಪ್ರೀತಿ, ಪ್ರೇಮ, ಸೆಂಟಿಮೆಂಟಿನ ಜತೆಗೆ ಹೆಚ್ಚಿನ ಪ್ರಮಾಣದ ಕ್ರೌರ್ಯವನ್ನು ಬೆರೆಸಿದ ‘ರುದ್ರತಾಂಡವ’ವನ್ನು ಕನ್ನಡದ ನೇಟಿವಿಟಿಗೆ ಬಲವಂತದಿಂದ ಒಗ್ಗಿಸಲಾಗಿದೆ. ಮೊದಲಾರ್ಧದಲ್ಲಿ ಚಿರು ಹಾಗೂ ಚಿಕ್ಕಣ್ಣ ಅವರ ಕಚಗುಳಿ, ಜೋಕು; ದ್ವಿತೀಯಾರ್ಧದಲ್ಲಿ ಲಾಂಗುಗಳ ಹೊಡೆತ… ಸಾಕಪ್ಪಾ ಸಾಕು!