ಮನೋರಂಜನೆ

ವಿಶ್ವಕಪ್ ಕ್ರಿಕೆಟ್ : ಸ್ಕಾಟ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಭರ್ಜರಿ ಗೆಲುವು

Pinterest LinkedIn Tumblr

Newzalkand

ಡುನೆಡಿನ್(ಓವೆಲ್), ಫೆ.17: ಅಲ್ಪಮೊತ್ತದ ಕುತೂಹಲಕಾರಿ ಸ್ಕಾಟ್ಲೆಂಡ್ ವಿರುದ್ಧದ ಪಂದ್ಯದಲ್ಲಿ ನ್ಯೂಜಿಲೆಂಡ್ ಭರ್ಜರಿ ಗೆಲುವು ಸಾಧಿಸಿದೆ. ಸ್ಕಾಟ್ಲೆಂಡ್ ನೀಡಿದ್ದ 142 ರನ್‌ಗಳ ಅಲ್ಪಮೊತ್ತವನ್ನು ಬೆನ್ನಟ್ಟಿದ ಕಿವೀಸ್ ಕೇವಲ 24.5 ಓವರ್‌ಗಳಲ್ಲಿ ಗುರಿ ಮುಟ್ಟಿ ವಿಶ್ವಕಪ್‌ನಲ್ಲಿ ಸತತ ಎರಡನೇ ಗೆಲುವು ಸಾಧಿಸಿದೆ. ಟಾಸ್‌ಗೆದ್ದು ಮೊದಲು ಕ್ಷೇತ್ರ ರಕ್ಷಣೆ ಆಯ್ದುಕೊಂಡ ನ್ಯೂಜಿಲೆಂಡ್ ನಾಯಕ ಮೆಕ್‌ಲಮ್ ನಿರ್ಧಾರ ಸರಿಯಾಗಿತ್ತು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನು ಕಣ್ಣು ಬಿಡುತ್ತಿರುವ ಸ್ಕಾಟ್ಲೆಂಡ್‌ಗೆ ಆರಂಭದಲ್ಲೇ ಕಿವೀಸ್‌ನ ವೇಗಿಗಳು ಶಾಕ್ ನೀಡಿದರು.

ಬ್ಯಾಟಿಂಗ್ ಆರಂಭಿಸಿದ ಸ್ಕಾಟ್ಲೆಂಡ್‌ನ ಆರಂಭಿಕ ಜೋಡಿ ಕೊಯಿಟ್ಜರ್ ಮತ್ತು ಮೆಕ್‌ಲಿಯೊಡ್ ರನ್ ಗಳಿಸಲು ಪರದಾಡಿದರು. ಸೌದಿ ಮತ್ತು ಬೌಲ್ಟ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದರು.

ಒಂದು ರನ್ ದಾಖಲಿಸುವಷ್ಟರಲ್ಲೇ ಸ್ಕಾಟ್ಲೆಂಡ್‌ನ ಮೊದಲ ವಿಕೆಟ್ ಪತನಗೊಂಡಿತು. ಸೌದಿ ಆರಂಭದಲ್ಲೇ ಆರ್ಭಟಿಸಿದರು. ನಂತರ ವೇಗಿ ಬೌಲ್ಟ್ ಕೂಡ ಮ್ಯಾಕ್‌ಲಿಡೊ(0) ಮತ್ತು ನಂತರ ಬಂದ ಗಾರ್ಡಿನಿಯರ್ (0), ಮೊಮಿನ್ಸನ್(0)ಅವರನ್ನು ಫೆವಿಲಿಯನ್‌ಗೆ ಅಟ್ಟಿ ಕೇವಲ 12ರನ್‌ಗಳಿಗೆ 4 ವಿಕೆಟ್‌ಗಳು ಉರುಳಿಸಿ ಸ್ಕಾಟ್ಲೆಂಡ್‌ನ ಬೆನ್ನು ಮುರಿದರು. ನಂತರ ಬಂದ ಮೆಚ್ಯಾನ್ ಸ್ವಲ್ಪ ಮಟ್ಟದ ಹೋರಾಟ ನೀಡಿ ಸ್ಕಾಟ್ಲೆಂಡ್‌ನ ದಿಢೀರ್ ಕುಸಿತದಿಂದ ಪಾರು ಮಾಡಿದರು. ಇದಕ್ಕೆ ಬ್ಯಾರಿಂಗ್ಟನ್ ಕೂಡ ನೆರವಾದರು. ತಂಡದ ಮೊತ್ತವನ್ನು 100 ಗಡಿ ದಾಟಿಸಿ ಚೇತರಿಕೆ ನೀಡಿದರು. ಆದರೂ ಈ ಜೋಡಿಯನ್ನು ಮುರಿಯಲು ಆಲ್‌ರೌಂಡರ್ ಆಂಡರ್ಸಂನ್ ಯಶಸ್ವಿಯಾದರು. ಅರ್ಧಶತಕ ಸಿಡಿಸಿ ಮುನ್ನುಗುತ್ತಿದ್ದ ಮಚಾನ್(56) ಅವರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿ ಔಟ್ ಮಾಡಿದಾಗ ಮತ್ತೆ ಸ್ಕಾಟ್ಲೆಂಡ್ ಪಾಳಯದಲ್ಲಿ ಚಿಂತೆ ಶುರುವಾಯಿತು.

ನಂತರ ಬ್ಯಾರಿಂಗ್ಟನ್ ಕೂಡ ಅರ್ಧಶತಕ ಸಿಡಿಸಿ ಗಮನ ಸೆಳೆದರು. ತಂಡವನ್ನು ಗೌರವಾನ್ವಿತ ಮೊತ್ತದತ್ತ ಕೊಂಡೊಯ್ಯಲು ವಿಫಲರಾದರು. ಆಂಡರ್ಸದನ್ ಮತ್ತಷ್ಟು ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿ ಬ್ಯಾರಿಂಗ್ಟನ್ ಮತ್ತು ಸ್ಕಾಟ್ಲೆಂಡ್ ನಾಯಕ ಪ್ರೆಸ್ಟನ್ ಮಾಮ್ಸೆನ್ ಅವರ ವಿಕೆಟ್‌ಅನ್ನು ಕೂಡ ಉರುಳಿಸಿದರು. 129ರನ್‌ಗಳಾಗುವಷ್ಟರಲ್ಲೇ ಪ್ರಮುಖ 7ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಸ್ಕಾಟಿಷ್ ಪಡೆ ಚೇತರಿಸಿಕೊಳ್ಳಲೇ ಇಲ್ಲ. ಕೊನೆಯಲ್ಲಿ ದಾಳಿಗಿಳಿದ ಸ್ಪಿನ್ ಮಾಂತ್ರಿಕ ವಿಟ್ಟೋರಿ ಬಾಲಂಗೋಚಿಗಳನ್ನು ಫೆವಿಲಿಯನ್‌ಗೆ ಅಟ್ಟಿ ಸ್ಕಾಟ್ಲೆಂಡ್‌ನ ಬ್ಯಾಟಿಂಗ್‌ಗೆ ಅಂತ್ಯ ಕಾಣಿಸಿದರು. ಅಂತಿಮವಾಗಿ ಸ್ಕಾಟ್ಲೆಂಡ್ 24.5ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದಕೊಂಡು ಕೇವಲ 142ರನ್‌ಗಳಿಸಲು ಮಾತ್ರ ಶಕ್ತವಾಯಿತು.

ಅಲ್ಪಮೊತ್ತದ ಗುರಿಯನ್ನು ಬೆನ್ನತ್ತಿ ನಿಧಾನವಾಗಿಯೇ ಬ್ಯಾಟಿಂಗ್ ಆರಂಭಿಸಿದ ಕಿವೀಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಗುಪ್ಟಿಲ್ ಮತ್ತು ನಾಯಕ ಮೆಕ್‌ಲಮ್ ಜೋಡಿಗೆ ಸ್ಕಾಟ್ಲೆಂಡ್ ವೇಗಿಗಳು ತಕ್ಕ ಪ್ರತ್ಯುತ್ತರ ನೀಡಿದರು. ಮೂರನೇ ಓವರ್‌ನಲ್ಲೇ ಗುಪ್ಟಿಲ್(17) ಅವರ ವಿಕೆಟ್ ಉರುಳಿಸುವಲ್ಲಿ ಸ್ಕಾಟ್ಲೆಂಡ್ ವೇಗಿ ವಾರ್ಡ್‌ಲಾ ಯಶಸ್ವಿಯಾಗಿ ಎದುರಾಳಿ ಪಡೆಗೆ ಆಘಾತ ನೀಡಿದರು. ನಂತರ ಬಂದ ಆಕರ್ಷಕ ಆಟಗಾರ ವಿಲಿಯಂಸನ್ ನಾಯಕನ ಜತೆಗೂಡಿ ತಮ್ಮ ಬಿರುಸಿನ ಆಟವನ್ನು ಪ್ರದರ್ಶಿಸಿದರು. ಇನ್ನೇನು ಇವರು ಪಂದ್ಯದ ಮೇಲೆ ಹಿಡಿತ ಸಾಧಿಸುತ್ತಾರೆ ಎನ್ನುವಷ್ಟರಲ್ಲಿ ಸ್ಕಾಟ್ಲೆಂಡ್‌ನ ವೇಗಿ ವಾರ್ಡ್‌ಲಾ ಅವರು ಮೆಕ್‌ಲಮ್ ವಿಕೆಟ್ ಪಡೆದು ಸಂಭ್ರಮಿಸಿದರು.

ನಂತರ ಕಿವೀಸ್ ಬ್ಯಾಟ್ಸ್‌ಮೆನ್‌ಗಳು ತಾಳ್ಮೆಯ ಆಟಕ್ಕೆ ಒತ್ತುಕೊಡಲು ಮುಂದಾದರು. ನಾಲ್ಕನೆ ಕ್ರಮಾಂಕದಲ್ಲೀ ಕ್ರೀಸ್‌ಗಿಳಿದ ರಾಸ್‌ಟೈಲರ್ ಮತ್ತೆ ರನ್‌ಗಳಿಸಲು ವಿಫಲರಾಗಿ ಕೇವಲ 9 ರನ್‌ಗಳಿಗೆ ಸ್ಕಾಟ್ಲೆಂಡ್‌ನ ಹಗ್ ಅವರ ಬೌಲಿಂಗ್‌ನಲ್ಲಿ ಔಟಾದರು.ಬಳಿಕವೇ ಬಂದ ಇಲೋಟ್ ಜವಬ್ದಾರಿಯುತ ಆಟ ಪ್ರದರ್ಶಿಸಿ ವಿಲುಮ್ಸ್ ಜತೆ ಗೂಡಿ ತಂಡವನ್ನು ಅಪಾಯದಿಂದ ಪಾರು ಮಾಡಲು ಪ್ರಯಾಸಪಟ್ಟು 100ರ ಗಡಿ ದಾಟಿಸಿದರು. ಇನ್ನೇನು ನ್ಯೂಜಿಲೆಂಡ್ ಗೆಲುವಿನ ಗುರಿ ಮುಟ್ಟುತ್ತದೆ ಎನ್ನುವಷ್ಟರಲ್ಲಿ ಜೋಶ್‌ಡೇವಿ ಅವರ ಬೌಲಿಂಗ್‌ನಲ್ಲಿ ವಿಲಿಯಮ್ಸ್ ಎಚ್ಚರಿಕೆ ತಪ್ಪಿ ಕೀಪರ್‌ಗೆ ಕ್ಯಾಚ್‌ನೀಡಿ ಔಟಾದಾಗ ಕಿವೀಸ್ ತನ್ನ 4ನೇ ವಿಕೆಟ್ ಕಳೆದುಕೊಂಡಿತು. ದಿಢೀರನೆ ನ್ಯೂಜಿಲೆಂಡ್ ಮೇಲೆ ಒತ್ತಡ ಏರಲು ಸ್ಕಾಟ್ಲೆಂಡ್ ಬೌಲರ್‌ಗಳು ಪರಿಣಾಮಕಾರಿ ದಾಳಿ ನಡೆಸಿದ್ದರು.

ನಂತರ ಬಂದ ಆಂಡ್ರಸನ್ ಕೆಲ ಹೊತ್ತು ಗರ್ಜಿಸಲು ಮುಂದಾದರೂ ಇದಕ್ಕೆ ಜತೆಯಾಗಿದ್ದ ಗ್ರಾಂಟ್‌ಎಲಿಯಟ್ ಸಾಥ್ ನೀಡಲಿಲ್ಲ. ಪದೇ ಪದೇ ಜೀವದಾನ ಪಡೆದಿದ್ದು ಕೂಡ ಅಚ್ಚರಿಗೆ ಕಾರಣವಾಯಿತು., ಡೇವಿ ಅವರ ಬೌಲಿಂಗ್‌ನಲ್ಲಿ ಆಂಡ್ರಸನ್ ಔಟಾದರೆ ವಾರ್ಡ್‌ಲಾ ಅವರು ಎಲಿಯಟ್ ಅವರ ವಿಕಟ್ ಉರುಳಿಸಿ ಕಿವೀಸ್ ಪಾಳಯದಲ್ಲಿ ಆತಂಕ ಸೃಷ್ಟಿಸಿದರು. ಆದರೆ, ಕೊನೆಗೆ ಬಂದ ಡೇನಿಯಲ್ ವೆಟೋರಿ ಮತ್ತು ಆಡಮ್ ಮಿಲ್ನೆ ತಂಡವನ್ನು ಗೆಲುವಿನ ದಡ ಸೇರಿಸಿದರು. ಅಂತಿಮವಾಗಿ ನ್ಯೂಜಿಲೆಂಡ್ 3ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. 24.5 ಓವರ್‌ಗಳಲ್ಲೇ 146ರನ್‌ಗಳಿಸಿ ವಿಶ್ವಕಪ್‌ನಲ್ಲಿ ತನ್ನ ಎರಡನೇ ಗೆಲುವನ್ನು ದಾಖಲಿಸಿತು. ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಕಿವೀಸ್‌ನ ದಾಳಿ ಬೌಲ್ಟ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು.

Write A Comment