ಮನೋರಂಜನೆ

ಪಾಕ್‌ ಬಗ್ಗುಬಡಿದ ಭಾರತ: 76 ರನ್‌ ಭರ್ಜರಿ ಗೆಲುವು

Pinterest LinkedIn Tumblr

indiaweb

ಅಡಿಲೇಡ್‌: ಇತಿಹಾಸ ಬದಲಾಗಲಿಲ್ಲ. ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎದುರು ಭಾರತ ಒಮ್ಮೆಯೂ ಸೋತಿಲ್ಲ. ಭಾನುವಾರವೂ ಇದೇ ಇತಿಹಾಸ ಮುಂದುವರಿಯಿತು. ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ಎದುರು 76 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ಟೂರ್ನಿಯಲ್ಲಿ ಗೆಲುವಿನ ಆರಂಭ ಕಂಡಿದೆ.

ವಿರಾಟ್‌ ಕೊಹ್ಲಿ ಅವರ ಶತಕ (107), ಶಿಖರ್‌ ಧವನ್‌ ಅವರ ಅತ್ಯುತ್ತಮ ಜತೆಯಾಟ ( 73) ಮತ್ತು  ಸುರೇಶ್‌ ರೈನಾ ಅವರ ಅಬ್ಬರದ ಬ್ಯಾಟಿಂಗ್‌ (74) ನೆರವಿನಿಂದ ಭಾರತ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಪಾಕಿಸ್ತಾನಕ್ಕೆ ಗೆಲ್ಲಲು 301 ರನ್‌ಗಳ ಗುರಿ ನೀಡಿತು.

ಈ ಸವಾಲಿನ ಗುರಿ ಬೆನ್ನಟ್ಟಿದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವು, 47 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 224 ರನ್ ಗಳನ್ನಷ್ಟೇ ಕಲೆಹಾಕಲು ಶಕ್ತವಾಯಿತು.

ಒತ್ತಡದಲ್ಲೇ ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ ಆರಂಭಿಕ ಆಘಾತ ಅನುಭವಿಸಿತು. 3ನೇ ಓವರ್‌ನಲ್ಲಿಯೇ ಮೊದಲ ವಿಕೆಟ್ ಕಳೆದುಕೊಂಡಿತು. ತಂಡದ ಮೊತ್ತ 11 ರನ್‌ಗಳಾಗಿದ್ದಾಗ 6 ರನ್‌ ಗಳಿಸಿ ಆಡುತ್ತಿದ್ದ ಯೂನಿಸ್‌ ಖಾನ್‌ ಅವರು ಮೊಹಮ್ಮದ್‌ ಶಮಿಗೆ ಎಸೆತಕ್ಕೆ ಬಲಿಯಾದರು. ಶಮಿ ಎಸೆತವು ಯೂನಿಸ್‌ ಖಾನ್‌ ಬ್ಯಾಟ್‌ ಸವರಿಕೊಂಡು ಮಹೇಂದ್ರ ಸಿಂಗ್‌ ದೋನಿ ಕೈ ಸೇರಿದಾಗ ಭಾರತ ಪಾಳೆಯದಲ್ಲಿ ಸಂಭ್ರಮ ಮುಗಿಲು ಮುಟ್ಟಿತು.

ಬಳಿಕ ಅಹ್ಮದ್‌ ಶೆಹ್ಜಾದ್ (30) ಮತ್ತು ಹ್ಯಾರಿಸ್‌ ಸೊಹಾಲಿ (36) ಉತ್ತಮ ಜತೆಯಾಟದ ಮೂಲಕ ತಿರುಗೇಟು ನೀಡುವ ಮುನ್ಸೂಚನೆ ನೀಡಿದರು. ಈ ಜೋಡಿ 17 ಓವರ್‌ಗಳಲ್ಲಿ 66 ರನ್‌ ಕಲೆ ಹಾಕಿತು. ಆದರೆ, 36 ರನ್‌ ಗಳಿಸಿ ಆಡುತ್ತಿದ್ದ ಹ್ಯಾರಿಸ್‌ ಸೊಹಾಲಿ ಆರ್‌. ಅಶ್ವಿನ್‌ ಎಸೆತದಲ್ಲಿ ಸುರೇಶ್‌ ರೈನಾಗೆ ಕ್ಯಾಚ್‌ ನೀಡಿ ಔಟಾದರು. 40 ಓವರ್‌ಗಳಲ್ಲಿ ಪಾಕಿಸ್ತಾನ 8 ವಿಕೆಟ್‌ ಕಳೆದುಕೊಂಡು 215 ರನ್‌ ಗಳಿಸಿತ್ತು.

ಒಬ್ಬರ ಬೆನ್ನಿಗೊಬ್ಬರು ಔಟಾಗುತ್ತಿದ್ದರೂ ವಿಚಿಲಿತನಾಗದೆ ನಾಯಕ ಮಿಸ್ಬಾ ಉಲ್‌ ಹಕ್‌ (76)  ಮಾತ್ರ ಕ್ರೀಸಿಗೆ ಅಂಟಿಕೊಂಡು ಮುಳುಗುತ್ತಿರುವ ದೋಣಿಯನ್ನು ದಡ ಸೇರಿಸಲು ಹರಸಾಹಸ ಪಟ್ಟರು. ಆದರೆ, ಅವರ ಪ್ರಯತ್ನಕ್ಕೆ ಮೋಹಿತ್‌ ಶರ್ಮಾ ಮತ್ತು ಮೊಹಮ್ಮದ್‌ ಶಮಿ ತಣ್ಣೀರೆರಚಿದರು. ಕೊನೆಯ ನಾಲ್ಕು ವಿಕೆಟ್‌ಗಳು ಪಟಪಟನೆ ಉರುಳಿದವು. 47 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 224 ರನ್‌ ಗಳಿಸಿದ ಪಾಕ್‌ ಭಾರತಕ್ಕೆ ಶರಣಾಯಿತು.  ಭಾರತದ ಕೊರಳಿಗೆ 76 ರನ್‌ಗಳ ವಿಜಯದ ಹೂಮಾಲೆ ಬಿತ್ತು.  ಭಾನುವಾರ ಇತಿಹಾಸ ಬದಲಾಗಲಿದೆ ಎಂದು ಹೇಳಿದ ಪಾಕ್‌ ನಾಯಕ ಮಿಸ್ಬಾ  ಉಲ್‌ ಹಕ್‌ ಅವರ ಮಾತು ಹುಸಿಯಾಯಿತು.

ಆರಂಭಿಕ ಆಘಾತ: ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತ ಆರಂಭಿಕ ಆಘಾತ ಎದುರಿಸಿತು. 8 ಓವರ್‌ಗಳಲ್ಲಿ ತಂಡದ ಮೊತ್ತ ಕೇವಲ 34 ರನ್‌ಗಳಾಗಿದ್ದಾಗ  ಸೋಹೈಲ್‌ ಖಾನ್‌ ಬೌನ್ಸರ್‌ಗೆ ರೋಹಿತ್‌ ಶರ್ಮಾ (15) ಔಟಾದರು. ನಂತರ ಜತೆಯಾದ ವಿರಾಟ್‌ ಕೊಹ್ಲಿ (107) ಮತ್ತು ಶಿಖರ್‌ ಧವನ್‌ ಜೋಡಿ (73) 180 ರನ್‌ಗಳ ಅಭೂತಪೂರ್ವ ಜತೆಯಾಟದ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಕೊಹ್ಲಿ ಶತಕ: ರೋಹಿತ್‌ ಶರ್ಮಾ ಔಟಾದ ಬಳಿಕ ಕ್ರೀಸ್‌ಗೆ ಅಂಟಿಕೊಂಡು ರಕ್ಷಣಾತ್ಮಕ ಆಟವಾಡಿದ ಕೊಹ್ಲಿ ಒಟ್ಟು 126 ಎಸೆತಗಳನ್ನು ಎದುರಿಸಿ ಆಕರ್ಷಕ ಶತಕ ಗಳಿಸಿದರು. ಪ್ರತಿಯೊಂದು ಎಸೆತವನ್ನು ತಾಳ್ಮೆಯಿಂದ ಅಷ್ಟೇ ಚಾಣಕ್ಷ್ಯತನದಿಂದ ಎದುರಿಸಿದ ಕೊಹ್ಲಿ 8 ಬೌಂಡರಿಗಳನ್ನು ಸಿಡಿಸಿದರು. ಆರಂಭಿಕ ಆಘಾತದ ನಂತರ ಮೂಡಿಬಂದ ಈ ಅಪರೂಪದ ಜತೆಯಾಟ ಭಾರತವನ್ನು ದೊಡ್ಡ ಮೊತ್ತದತ್ತ ಕೊಂಡೊಯಿತು. ಕೊನೆಯಲ್ಲಿ ಸೋಹೈಲ್‌ ಖಾನ್‌ ಎಸೆತದಲ್ಲಿ ಉಮರ್‌ ಅಕ್ಮಲ್‌ಗೆ ಕ್ಯಾಚ್‌ ನೀಡುವ ಮೂಲಕ ಕೊಹ್ಲಿ  ಔಟಾದರು.

ಕೊಹ್ಲಿಗೆ ಉತ್ತಮ ಜತೆಯಾಟದ  ಸಾಥ್‌ ನೀಡಿದ ಶಿಖರ್‌ ಧವನ್‌ (73) 7 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಿಡಿಸಿ ತಂಡದ ಮೊತ್ತ ಹೆಚ್ಚಿಸಲು ಶ್ರಮಿಸಿದರು.

ರೈನಾ ಅಬ್ಬರ:  4ನೇ ವಿಕೆಟ್‌ಗೆ ಜತೆಯಾದ ಸುರೇಶ್‌ ರೈನಾ ಪಟಪಟನೆ 56 ಎಸೆತಗಳಲ್ಲಿ 74 ರನ್‌ಗಳಿಸಿದರು. 5 ಬೌಂಡರಿ ಮತ್ತು  3 ಸಿಕ್ಸರ್‌ ಅವರ ಬ್ಯಾಟಿನಿಂದ ಸಿಡಿದವು. ರೈನಾ ಔಟಾದಾಗ ತಂಡದ ಮೊತ್ತ 265 ರನ್‌ ಆಗಿತ್ತು. 1 ಬೌಂಡರಿ 1 ಸಿಕ್ಸರ್‌ ಸಿಡಿಸಿ 18 ರನ್‌ ಗಳಿಸಿ ಆಡುತ್ತಿದ್ದ ನಾಯಕ ಧೋನಿ, ರೈನಾ ಬೆನ್ನಲ್ಲೇ ಸೋಹಿಲ್‌ ಖಾನ್‌ಗೆ ವಿಕೆಟ್‌ ಒಪ್ಪಿಸಿದರು.

ನಂತರ ಬಂದ ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ಆರ್‌ ಅಶ್ವಿನ್‌, ಮೊಹಮ್ಮದ್‌ ಶಮಿ ಬಂದಷ್ಟೇ ವೇಗದಲ್ಲಿ ಒಬ್ಬರ ಹಿಂದೊಬ್ಬರಂತೆ ವಿಕೆಟ್‌ ಒಪ್ಪಿಸಿ ಮರಳಿದರು. ಕೊನೆಯ ನಾಲ್ಕು ವಿಕೆಟ್‌ಗಳು 7 ರನ್‌ಗಳ ಅಂತರದಲ್ಲಿ ಪತನವಾದವು.

50 ಓವರ್‌ ಮುಗಿದಾಗ ಭಾರತ 7 ವಿಕೆಟ್‌ ಕಳೆದುಕೊಂಡು 300 ರನ್‌ ಗಳಿಸಿತು.

Write A Comment