ಮನೋರಂಜನೆ

ರಾಯ್ (ಹಿಂದಿ); ಹದ ತಪ್ಪಿದ ಕಾವ್ಯ

Pinterest LinkedIn Tumblr

ಚಿತ್ರ: ನಿರ್ಮಾಣ: ಭೂಷಣ್ ಕುಮಾರ್, ದಿವ್ಯಾ ಖೋಸ್ಲಾ ಕುಮಾರ್, ಕೃಷ್ಣಕುಮಾರ್, ಫ್ರೀ ವೇ ಪಿಕ್ಚರ್ಸ್
ನಿರ್ದೇಶನ: ವಿಕ್ರಮ್‌ಜಿತ್‌ ಸಿಂಗ್‌
ತಾರಾಗಣ: ಅರ್ಜುನ್‌ ರಾಮ್‌ಪಾಲ್, ಜಾಕ್ವೆಲಿನ್‌ ಫರ್ನಾಂ­ಡಿಸ್, ರಣಬೀರ್‌ ಕಪೂರ್, ಶಿಬಾನಿ ದಾಂಡೇಕರ್‌, ಅನುಪಮ್ ಖೇರ್‌.

14febrroy

‘ಡೈರೆಕ್ಟರ್‌ ಸ್ಪೆಷಲ್‌’ ಕನ್ನಡ ಸಿನಿಮಾ ನಿರ್ದೇಶಿಸಿದ ಗುರು­ಪ್ರಸಾದ್‌ ಒಂದು ಮಾತು ಹೇಳಿ­ದ್ದರು– ‘ಅವೆಲ್ಲಾ ನನ್ನ ತಲೆ­ಯಲ್ಲಿದ್ದ ಪಾತ್ರಗಳು. ಅದನ್ನೇ ವಿಷುಯಲ್ ಆಗಿ ತೋರಿಸಲು ಯತ್ನಿ­ಸಿದ್ದೇನೆ’. ಹೊಸ ನಿರ್ದೇಶಕ ವಿಕ್ರಮ್‌­ಜಿತ್‌ ಸಿಂಗ್‌ ಮಾಡಿರು­ವುದೂ ಅದನ್ನೇ. ಅವರ ಭಾಷೆ ಹಿಂದಿ, ಬಜೆಟ್‌ ದೊಡ್ಡದು ಎನ್ನು­ವುದು ವ್ಯತ್ಯಾಸ.

ಸಿನಿಮಾ ನಿರ್ದೇಶಕನೊಬ್ಬನ ಬದು­ಕಿನ ಕಥೆ ಹಾಗೂ ಅವನು ರೂಪಿಸುತ್ತಿರುವ ಸಿನಿಮಾದ ಸ್ಕ್ರಿಪ್ಟ್‌ನ ಕಥೆ ಎರಡನ್ನೂ ದೃಶ್ಯವತ್ತಾಗಿ ತೋರಿ­ಸುವ ದೊಡ್ಡ ಸಾಹಸಕ್ಕೆ ಎದುರಾ­ಗಿರುವ ವಿಕ್ರಮ್‌ಜಿತ್, ಸಂಕೀರ್ಣ­ವಾದ ಸರಕನ್ನು ಹರಡಿಕೊಂಡು ಕುಳಿತಿದ್ದಾರೆ. ಅದು ಅವರಿಗೆ ಖುಷಿ ಕೊಟ್ಟಿರುವ ಸಾಧ್ಯತೆಗಳು ಕಾಣು­ವಂತೆ ಮಿತಿ ಒಡ್ಡಿರುವ ಉದಾಹರಣೆ­ಗಳನ್ನೂ ಸಿನಿಮಾ ಉಳಿಸಿದೆ.

ಬಾಲ್ಯದಲ್ಲಿ ತಾನು ಕಂಡ ದರೋಡೆಕೋರನ ಆಕರ್ಷಕ ಕಣ್ಣುಗಳ ಸೆಳೆತಕ್ಕೆ ಸಿಲುಕಿ, ಅದೇ ಪಾತ್ರವನ್ನು ಸೃಷ್ಟಿಸಿ ಸರಣಿ ಸಿನಿಮಾಗಳನ್ನು ಮಾಡಿ ಹಣ ಮಾಡಿರುವ ಜನಪ್ರಿಯ ನಿರ್ದೇಶಕ ಸಿನಿಮಾದ ಒಬ್ಬ ನಾಯಕ. ಅವನು ಸೃಷ್ಟಿಸುವ ಪಾತ್ರ ಇನ್ನೊಬ್ಬ ನಾಯಕ. ಇಬ್ಬರೂ ಪಡೆದುಕೊಳ್ಳಲು ಹೋಗಿ, ಕಳೆದುಕೊಳ್ಳುವವರ ಪೈಕಿ. ಅವರಿಬ್ಬರೂ ಕದ್ದ­ದ್ದಾದರೂ ಏನನ್ನು? ಕಳೆದುಕೊಂಡಿದ್ದು ಯಾವುದನ್ನು? ಕೊನೆಗೆ ಮರಳುವ ಹಳಿ ಯಾವುದು ಎನ್ನುವ ಸೂಕ್ಷ್ಮವೂ ಸಂಕೀರ್ಣವೂ ಆದ ಕಥಾನಕವನ್ನು ವಿಕ್ರಮ್‌ಜಿತ್‌ ಸಿಂಗ್‌ ಅದ್ದೂರಿ ಹಿನ್ನೆಲೆಯಲ್ಲಿ, ಅಲ್ಲಲ್ಲಿ ಅತಿ ಮಾತಿನೊಟ್ಟಿಗೆ ತೋರಿಸಿದ್ದಾರೆ.

ಸಂಪೂರ್ಣ ಕಾವ್ಯಾತ್ಮಕ ಆಗಬಹುದಾಗಿದ್ದ ವಸ್ತುವಿಗೆ ನಿರ್ದೇಶಕರು ಬಲವಂತವಾಗಿ ಬಾಲಿವುಡ್‌ ಶ್ರೀಮಂತಿಕೆಯ ಬಟ್ಟೆ ತೊಡಿಸಿದ್ದಾರೆ. ಆದ್ದರಿಂದ ಇದನ್ನು ‘ನೋಡಲು ಚೆನ್ನಾಗಿರುವ ಹದ ತಪ್ಪಿದ ಕಾವ್ಯ’ ಎನ್ನಬಹುದು.

ನಾಯಕನ ತಂದೆ, ಆತನ ಸಿನಿಮಾ ಉಸ್ತುವಾರಿ ನೋಡಿಕೊಳ್ಳುವ ಮಹಿಳೆ ಸೇರಿದಂತೆ ಎಲ್ಲ ಪಾತ್ರಗಳೂ ಹೊಸಕಾಲದ ವ್ಯಕ್ತಿಯೊಬ್ಬನ ತಲ್ಲಣಗಳ ಭಾಗಗಳಾಗಿವೆ. ಬಹುತೇಕ ಪಾತ್ರಗಳು ಸದಾ ಸಿಗರೇಟು ಸೇದುವುದು, ಸೆಟೆದುಕೊಂಡಂತೆ ನಿರ್ಭಾವುಕವಾಗಿ ಮಾತನಾಡುವುದನ್ನು ರೂಪಕ ಎಂದು ಭಾವಿಸುವುದು ಕಷ್ಟ.

ಅರ್ಜುನ್‌ ರಾಮ್‌ಪಾಲ್‌ ಅವರಲ್ಲಿ ದೇಹದ ಕಸುವು ಇರುವಷ್ಟು ಅಭಿನಯದ ಆರ್ದ್ರತೆ ಇಲ್ಲ. ರಣಬೀರ್‌ ಸಿಂಗ್ ರೋಬೊ ತರಹ ಇರುವುದರಲ್ಲಿ ನಿರ್ದೇಶಕರ ಕಾವ್ಯ­ಪ್ರಜ್ಞೆ­ಯ ಕೊಡುಗೆ ಇದೆ. ಜಾಕ್ವೆಲಿನ್‌ ಫರ್ನಾಂಡಿಸ್‌ ಸಿಕ್ಕಿರುವ ದ್ವಿಪಾತ್ರದ ಅವಕಾಶ­ವನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಸಣ್ಣದಾದರೂ ಮುಖ್ಯವಾದ ಪಾತ್ರದಲ್ಲಿ ಶಿಬಾನಿ ದಾಂಡೇಕರ್‌ ಗಮನ ಸೆಳೆದಿದ್ದಾರೆ.

ಕಾವ್ಯವನ್ನು ದೃಶ್ಯವಾಗಿ ಮೂಡಿಸಿ, ಅದಕ್ಕೆ ಮೆಲೋಡ್ರಾಮಾ ಸೇರಿಸಿದರೆ ಕೆನೆಹಾಲಿಗೆ ತೊಟ್ಟು ಹುಳಿ ಬಿದ್ದಂತೆ. ಈ ಸಿನಿಮಾದ ಪರಿಸ್ಥಿತಿಯೂ ಅದೇ.

Write A Comment