ಮನೋರಂಜನೆ

ಡಿಕೆ: ಖದರಿಲ್ಲದ ಕಾಮಿಡಿ

Pinterest LinkedIn Tumblr

ನಿರ್ಮಾಪಕಿ: ರಕ್ಷಿತಾ ಪ್ರೇಮ್
ನಿರ್ದೇಶನ: ವಿಜಯ್ ಹಂಪಾಳಿ
ತಾರಾಗಣ: ಪ್ರೇಮ್, ಚೈತ್ರಾ, ಶರತ್ ಲೋಹಿತಾಶ್ವ, ಶೋಭರಾಜ್, ಋಷಿಕುಮಾರ ಸ್ವಾಮೀಜಿ, ಸನ್ನಿ ಲಿಯೋನ್ ಮತ್ತಿತರರು

dk

‘ಬಂದ ಬಂದ ನೋಡು ಡಿಕೆ ಸಾಹೇಬ…’ ಹೀಗೆ ಖದರ್‌ ಹಾಡಿನೊಂದಿಗೆ ಎಂಟ್ರಿ­ಯಾ­ಗುವ ಪ್ರೇಮ್, ಆನಂತರ ಎದ್ದು ಕಾಣು­ವುದು ಕಾಮಿಡಿ ಪೀಸ್ ಆಗಿ! ಪಕ್ಕಾ ರಾಜ­ಕಾರಣದ ಮೂಲವಸ್ತುವಿಗೆ ಹೊಡೆ­ದಾಟ, ಉಪದೇಶ, ಉಡಾಳ ನಾಯ­ಕನ ಆಟ–ಹುಡುಗಾಟ, ನಾಯ­ಕನ ವಿರುದ್ಧ ನಾಯಕಿಯ ಅಬ್ಬರ, ಪ್ರೀತಿ–ಪ್ರೇಮ, ಆದರ್ಶ ಹೀಗೆ ವಿರೋಧಾಭಾಸದ ಅಂಶಗಳನ್ನೆಲ್ಲ ತುರುಕಿದ್ದಾರೆ ನಿರ್ದೇಶಕ ವಿಜಯ್ ಹಂಪಾಳಿ. ಇಲ್ಲಿ ಹಾಸ್ಯವೂ ಇದೆ; ಮಚ್ಚು, ಬಂದೂಕುಗಳ ಮೊರೆತವೂ ಇದೆ.

ಯಾವ ವಸ್ತು, ವಿಚಾರದಲ್ಲಿ ಗಟ್ಟಿ­ತನ­ವಿದೆ ಎಂದು ಹುಡುಕಲು ಯತ್ನಿ­ಸು­ವುದೇ ಕಷ್ಟ ಎನ್ನುವಷ್ಟು ಗೋಜಲು­ಗಳು. ರಾಜಕೀಯ ಕಥೆಗೆ ಕಾಮಿಡಿ ಸ್ಪರ್ಶ ಇರಬಾರದು ಎಂದೇನೂ ಇಲ್ಲ. ಆದರೆ ಆ ಕಾಮಿಡಿ ಪೇಲವವಾದರೆ, ಇತ್ತ ಖದರೂ ಇಲ್ಲ ಅತ್ತ ಕಾಮಿಡಿಯೂ ಇಲ್ಲದ ಎಡಬಿಡಂಗಿ ಚಿತ್ರವಾಗುತ್ತದೆ. ರಾಜಕೀಯ ಕಥನದ ಮೂಲಕ ಒಂದು ಸಂದೇಶ ಕೊಡಲು ನಿರ್ದೇಶಕರು ಯತ್ನಿಸಿದ್ದಾರೆ. ವೈರುಧ್ಯದ ಅಲೆಯಲ್ಲಿ ಈ ಸಂದೇಶದ ಅಂಶಗಳು ಮರೆಯಾಗಿ ಹೋಗುತ್ತವೆ, ಪೇಲವ ಅಂಶಗಳು ಢಾಳಾಗಿ ಗೋಚರಿಸುತ್ತವೆ!.

ಡಿಕೆ ಮೂಲ ಆದರ್ಶವಾದಿಯಲ್ಲ. ಐದು ನಿಮಿಷಕ್ಕೆ ಪ್ರೀತಿಸಿ, ಐದು ನಿಮಿಷಕ್ಕೆ ತಾಳಿ ಕಟ್ಟಿ, ಐದು ನಿಮಿಷದಲ್ಲಿ ಶೋಬನ ಮುಗಿಸಿ, ಐದೇ ನಿಮಿಷಕ್ಕೆ ವಿಚ್ಛೇದವನ್ನೂ ನೀಡುವ ಭೂಪ! ಅದೆಲ್ಲವೂ ಆತ ನಾಯ­ಕಿಯ ಅಹಂ­ಕಾರ, ಹಟವನ್ನು ಬಗ್ಗಿ­ಸಲು ನಡೆ­ಸುವ ಆಟ. ಅಂತಿಮವಾಗಿ ಬದ­ಲಾ­ಗುವ ಡಿಕೆ, ಸ್ವಚ್ಛ–ಆದರ್ಶ ರಾಜ­ಕಾರಣ­ಕ್ಕಾಗಿ ತನ್ನ ಹೆಂಡತಿಯನ್ನೇ ಚುನಾ­ವಣೆಗೆ ನಿಲ್ಲಿಸಿ ಗೆಲ್ಲಿಸುತ್ತಾನೆ, ಕಿಂಗ್ ಮೇಕರ್ ಆಗುತ್ತಾನೆ. ಎಂಥಾ ವೈರುಧ್ಯ ಇದು!

ನಾಯಕಿ ತನ್ನ ಅಪ್ಪನ ಪರವಾಗಿ ನಾಯಕನ (ಡಿಕೆ) ವಿರುದ್ಧ ತೊಡೆ ತಟ್ಟುವುದು, ಅದಕ್ಕೆ ವಿರುದ್ಧವಾಗಿ ಡಿಕೆ ಮತ್ತೊ­ಬ್ಬನಿಗೆ ಸಾಥ್ ನೀಡುವುದು, ನಾಯಕಿ­ಯನ್ನು ತನ್ನ ಮಾತಿನ ಮೋಡಿಗೆ ಸಿಲುಕಿ ವಂಚಿಸುವುದು, ತನ್ನ ಗುರುವಿನ ಸಾವಿ­ನೊಂದಿಗೆ ಡಿಕೆ ಬದಲಾಗುವುದು ಮತ್ತಿ­ತರ ಸನ್ನಿವೇಶಗಳು ಈಗಾಗಲೇ ತೆರೆಗೆ ಬಂದು ಹೋಗಿರುವ ಹಲವು ಚಿತ್ರ­ಗ­ಳನ್ನು ನೆನಪಿಗೆ ತರುತ್ತವೆ. ಕ್ಲೈಮ್ಯಾಕ್ಸ್‌­ನಲ್ಲಿ ‘ರಾಜಕಾರಣದಲ್ಲಿ ಗೆದ್ದ­ವರೆಲ್ಲ ನಮ್ಮ­ವರೇ’ ಎನ್ನುವ ಸವ­ಕಲು ಮಾತನ್ನು ಮತ್ತೊಮ್ಮೆ ನೆನಪಿಸಿ­ಕೊಂಡಿದ್ದಾರೆ.

ಮಚ್ಚು ಇಲ್ಲದಿದ್ದರೆ ಪ್ರೇಮ್ ಚಿತ್ರಗಳು ಪೂರ್ಣವಾಗುವುದಿಲ್ಲ! ಇಲ್ಲೂ ಪ್ರೇಮ್ ಕೈ ಬಿಚ್ಚಿ ಹೊಡೆದಾಡಿದ್ದಾರೆ. ಕಾಮಿಡಿ­ಗಿಂತ ಹೊಡೆದಾಟದಲ್ಲಿ ಹೆಚ್ಚು ಅಂಕ ಗಳಿಸಿ­ಕೊಳ್ಳುತ್ತಾರೆ. ಚೈತ್ರಾ ಹಟವಾದಿ, ಅಹಂಕಾರದ ತಮ್ಮ ಪಾತ್ರಕ್ಕೆ ಒಗ್ಗಿಕೊಂಡಿದ್ದರೆ, ಶರತ್ ಲೋಹಿತಾಶ್ವ ಪಾತ್ರ ಇಷ್ಟವಾಗುತ್ತದೆ. ರಾಜಕಾರಣಕ್ಕೆ ಸರಿಹೊಂದುವಂಥ ಸಂಭಾಷಣೆಗಳು ಚಿತ್ರಕ್ಕೆ ಪೂರಕವಾಗಿವೆ. ಸನ್ನಿ ಲಿಯೋನ್ ಕುಣಿದಿರುವ ‘ಬಾಗಿಲು ತೆಗೆಯೇ ಸೇಸಮ್ಮ…’ ಹಾಡು ಅಬ್ಬರಿಸುತ್ತದೆ, ಆದರೆ ಸಮೂಹ ಸನ್ನಿಯನ್ನೇನೂ ಹಿಡಿ­ಸು­ವುದಿಲ್ಲ. ‘ಬಂದ ಬಂದ ನೋಡು ಡಿಕೆ ಸಾಹೇಬ’ ಹಾಡು ಹೊರತು ಬೇರಾ­ವುದೂ ನೆನಪಿನಲ್ಲಿ ಉಳಿಯುವುದಿಲ್ಲ.

Write A Comment