ಮನೋರಂಜನೆ

ಪ್ರೇಮಪತ್ರ ಸ್ಪರ್ಧೆ 2015 ತೀರ್ಪುಗಾರರ ಟಿಪ್ಪಣಿ: ನೂರು ಮರ, ನೂರು ಸ್ವರ, ಒಂದೊಂದೂ ಅರರರರಾ!: ಜಯಂತ ಕಾಯ್ಕಣಿ

Pinterest LinkedIn Tumblr

jaya

ಬೇರೆಯವರ ಪ್ರೇಮ ಪತ್ರವನ್ನು ಕದ್ದು ಓದಬಾರದು. ಇದು ಸ್ಪರ್ಧೆ. ಪ್ರೇಮಿಗಳೇ ಖುದ್ದು ತಮ್ಮ ಪತ್ರಗಳನ್ನು ಕಳಿಸಿದ್ದು– ಎಂದು ಎಷ್ಟೇ ಸಮಜಾಯಿಷಿ ಮಾಡಿಕೊಂಡರೂ, ಒಂದು ಸಣ್ಣ ಹಿಂಜರಿಕೆ, ಮುಜುಗರದಿಂದಲೇ, ಕೊನೆಯ ಸುತ್ತಿಗೆ ತೇರ್ಗಡೆ ಹೊಂದಿದ ಮೂವತ್ತು ಪ್ರೇಮ ಪ್ರಲಾಪಗಳನ್ನು ಓದಿದ್ದೇನೆ. ಈ ಮೂವತ್ತನ್ನು ಆಯ್ಕೆ ಮಾಡಲು ಸಂಪಾದಕೀಯ ವಿಭಾಗದವರು ಪತ್ರಗಳನ್ನು ಓದಿದ್ದಾರೆ. ಅವರ ಸಹನೆ, ಸಹಾನುಭೂತಿಗೆ ವಂದನೆ.

ಪ್ರೇಮ ಪತ್ರ ಅಂದರೆ ಪ್ರೇಮ ಪತ್ರ ಅಷ್ಟೆ! ಅದಕ್ಯಾವ ನೀತಿ ನಿಯಮಾವಳಿಗಳು ಇರುವುದಿಲ್ಲ. ಪ್ರತಿ ಪತ್ರಕ್ಕೂ ಅದರದೇ ಆದ ಒಕ್ಕಣಿಕೆ, ಕಂಪನ ವಿಸ್ತಾರ! ತೀವ್ರತೆ, ಅಸಹಾಯಕ ಆವೇಶ, ಸಂಗಾತಿಯ ಮನಸ್ಸನ್ನು ತಲುಪಬೇಕೆನ್ನುವ ಉದ್ವೇಗ… ಇತ್ಯಾದಿ ಅನುರಾಗ ಲಕ್ಷಣಗಳಿಂದ ಕಂಗೊಳಿಸುವ ಪತ್ರಗಳೆಲ್ಲವೂ ಅಮಾಯಕ. ಪರೀಕ್ಷಾ ಭವನದಲ್ಲಿ ಪ್ರಶ್ನೆ ಪತ್ರಿಕೆ ಹಂಚುವ ಮುನ್ನ ಕಂಡು ಬರುವ ಆರ್ತ ಫಳಫಳ ಕಂಗಳ ಮಕ್ಕಳ ಮೊಗಗಳಂತೆ ತೋರುತ್ತವೆ ಈ ಪತ್ರಗಳು. ಬೇಂದ್ರೆ ಹೇಳುವಂತೆ ‘ಒಂದರೊಲು ಒಂದಿಲ್ಲ… ಒಂದರೊಳೂ ಕುಂದಿಲ್ಲ…’ ಈ ಮೂವತ್ತೂ ಪತ್ರಗಳನ್ನು ಓದುತ್ತ ಹೋದಂತೆ ನನ್ನ ಹೃದಯ, ಹೂವಿನ ಸಂತೆಯಾಗಿಬಿಟ್ಟಿತು. ಇದೊಂದು ಪೈಪೋಟಿ ಎಂಬುದೇ ಮರೆತುಹೋಯಿತು. ಪ್ರತಿ ಕಾಗದದಲ್ಲೂ ಒಂದು ಮಿಂಚಿತ್ತು, ಅಪರೂಪದ ಸಾಲಿತ್ತು. ಬೇರೆ ಬೇರೆ ಕಾಗದಗಳಿಂದ ನಾನು ಗುರುತು ಮಾಡಿಕೊಂಡ ಕೆಲ ಸಾಲುಗಳು ಹೇಗಿವೆ ನೋಡಿ:

‘ಕ್ಷಣಾರ್ಧದಲ್ಲಿ ಮಿಠಾಯಿ ತಿಂದ ನಿನ್ನ ಅಂಟು ಅಂಟು ಕೈಗಳೊಂದಿಗೆ ನನ್ನ ಕೈಗಳು ಸೇರಿಕೊಳ್ಳಲು ಸಂತೆ ಬೀದಿಯಲ್ಲೆಲ್ಲ ಸುತ್ತುತ್ತೇನೆ. ನಮ್ಮ ಇಸ್ಕೂಲಿನ ಕುಂಟ ಮೇಷ್ಟ್ರು ಅಲ್ಲೆ ಬೂದುಗುಂ ಬಳಕಾಯಿ ಕೊಳ್ಳುತ್ತ ನಿಂತಿರುವುದನ್ನು ಕಂಡಾಗ ಬೆವರುತ್ತೇನೆ’.
‘ನನಗೆ ಎರಡು ಕತ್ತೆ ವಯಸ್ಸಾಗಿದ್ದರೂ ಸಹಿತ, ನೀನೇ ಬೇಕೆಂದು ಪುಟ್ಟ ಮಗುವಿನಂತೆ ಹಟ ಮಾಡಿದ್ದೇನೆ…’
‘ನಿರುದ್ಯೋಗದ ಸಮಸ್ಯೆಯಿಂದ ಬಳಲಿದ ನನ್ನ ತೋಳುಗಳಿಗೆ ನಿನ್ನ ಅಪ್ಪಿಕೊಳ್ಳುವ ಕೆಲಸ ಸಿಗಲಿ. ನಿವೃತ್ತಿಯ ಚಕಾರ ಎತ್ತುವುದಿಲ್ಲ’.
‘ತುಟಿಯಂಚಿನಲ್ಲಿ ಬಂದು ನಿಂತಿರುವ ಮೌನದ ಮರಿ ಹಕ್ಕಿ’.
‘ನನಗಷ್ಟೇ ಕೇಳುವಂತೆ ನಿನ್ನ ಗೆಜ್ಜೆಕಾಲು ಅಲ್ಲಾಡಿಸಿಬಿಡು’.
‘ಭಾವಲಹರಿಗೆ ಸ್ಟೆಬಿಲೈಸರ್‌ ಇದ್ದಿದ್ದರೆ ಗತಿಯೇನು?’
‘ಎಲ್ಲರೂ ಬ್ರಹ್ಮಕಮಲ ಅರಳೋದನ್ನ ವರುಷಕ್ಕೆ ಒಂದ್ಸಲಾ ನೋಡ್ತಾರೆ. ಆದ್ರೆ ನಾನು ಮಾತ್ರ ನೀನು ನಕ್ಕಾಗೆಲ್ಲ ನೋಡ್ತನೇ ಇರ್ತೀನಿ’.
‘ನಿನ್ನ ನೀಳ ಕೂದಲು ನಮ್ಮ ಹೊಲದ ನಾಟಿ ಪೈರಂತೆ. ನಿನ್ನ ಬೈತಲೆಯು ನಮ್ಮ ಹೊಲದ ಕಾಲುದಾರಿಯಂತೆ’.
‘ಕಣ್ಣಂಚಿನಲ್ಲಿ ಹನಿಯೊಂದು ಹೊರಜಗತ್ತನ್ನು ನೋಡುವಂತೆ ಮಾಡಿಬಿಟ್ಟೆ!’
‘ಆ ನಿನ್ನ ನಾಚಿಕೆಯಿಂದಲೇ ನನ್ನ ಮೀಸೆ ಚಿಗುರಿದ್ದು’.
‘ನೀವು ನಕ್ಕಾಗ ನಿಮ್ಮ ಮೇಲ್ದುಟಿಯ ಎಡ ಅಂಚಿನ ಕೆಳಗೆ ಇಣುಕುವ ಸ್ವಾತಿ ಮುತ್ತಿನಂಥ ಆ extra ಹಲ್ಲು’.
‘ಒಲವಿನ ಚಳಿಗಾಲದ ಅಧಿವೇಶನದ ಸವಿನೆನಪು’.

ಹೀಗೆ ಪ್ರತಿ ಕಾಗದದಲ್ಲೂ ಒಂದು ವಿಶಿಷ್ಟ ಭಾವ ಬಿಂದುವಿದೆ. ಬರವಣಿಗೆಯ ದೃಷ್ಟಿಯಿಂದಲೂ ಅನೇಕ ನಮೂನೆಗಳಿವೆ. ಕೆಲವು ಕಥೆಗಳಂತಿವೆ. ಅಂದರೆ ಮೊದಲ ಬಾರಿ ನೋಡಿದ ಕ್ಷಣದಿಂದ ಈ ತನಕ ಪಟ್ಟ ಪೀಡೆಯ ನಿವೇದನೆ. ಹೆಚ್ಚಿನವುಗಳಲ್ಲಿ ‘ನಾನು’ ಕೇಂದ್ರವಾಗಿದೆ. ನಿನ್ನಿಂದ ನಾನು ಹೀಗಾದೆ, ಹಾಗಾದೆ ಇತ್ಯಾದಿ. ತಾನು ಪ್ರೀತಿಸುವ ವ್ಯಕ್ತಿಯ ಚಹರೆಯೇ ಕಾಣದಷ್ಟು ಕೆಲವು ಆತ್ಮಮರುಕ ಅಥವಾ ಆತ್ಮವೈಭವದಲ್ಲಿ ಮುಳುಗಿವೆ. (ಗೊಳೋ ಎಂದು ಪಿಟೀಲು ಕುಯ್ಯುವ ಆತ್ಮನಿರತರಿಗಿಂತ, ಸೀದಾ ನೇರ ಮಾತುಗಳ ಹುರುಪನ್ನು ‘ಎದುರು ಪಾರ್ಟಿ’ ಇಷ್ಟಪಡುತ್ತದೆ ಎಂಬುದನ್ನು ಕೆಲವು ಪ್ರೇಮವೀರರು ತಿಳಿದುಕೊಳ್ಳುವ ಜರೂರಿ ಇದೆ). ಕೆಲವರು ‘ಅನುಭವಿಸಿ’ಕೊಂಡು ಬರೆದರೆ ಕೆಲವರು ‘ಅಭಿನಯಿಸಿ’ಕೊಂಡು ಬರೆದಿದ್ದಾರೆ. ಕೆಲವರು ಲಲಿತ ಪ್ರಬಂಧಗಳಂತೆ ಪಾಂಡಿತ್ಯಪೂರ್ಣವಾಗಿ ಬರೆದರೆ ಕೆಲವರು ಬಾಯಿಗೆ ಬಂದಂತೆ, ಕೈಗೆ ಬಂದಂತೆ ಭಾವೈಕ್ಯರಾಗಿದ್ದಾರೆ. ಕೆ.ಎಸ್‌.ನ ಸಾಲುಗಳು ಅಲ್ಲಲ್ಲಿ ಉದ್ಧರಿಸಲ್ಪಡುತ್ತವೆ. ದೇವನೂರರ ಒಡ ಲಾಳದ ನವಿಲುಗಳೂ ಕುಣಿದು ಗರಿ ಉದುರಿಸಿ ಮಾಯವಾಗುತ್ತವೆ. ಯಾವ ಸಾಹಿತ್ಯಿಕ ಹಂಗಿಲ್ಲದೆ ನೇರವಾಗಿ, ಸಂಸಾರದ ಆಳದಿಂದಲೇ ಮೂಡಿಬಂದ ಸರಳ ಸಂಪನ್ನ ಪುಟಗಳೂ ಇವೆ. ನೂರು ಮರ, ನೂರು ಸ್ವರ, ಒಂದೊಂದೂ ಅರರರರರಾ!

ಹೇಳಲೇಬೇಕಾದ ಅನಿವಾರ್ಯ ತಹತಹ, ಹೇಳಿಯೂ ಹೇಳಲಾಗದ ಕಳವಳ, ತೀವ್ರತೆ, ತಲುಪುವ ಉದ್ವೇಗದ ತೊದಲು, ಒಂದು ಬಗೆಯ ಚಡಪಡಿಕೆ, ಅಪೂರ್ಣತೆ, ಭಯವನ್ನು ನಿರ್ವಹಿಲಸೆಂದೇ ತೊಟ್ಟುಕೊಂಡಿರುವ ಉಡಾಫೆಯ ಭಂಗಿ… ಮತ್ತು ಪುರಾವೆಯಿಲ್ಲದೆ ಓದಿನಲ್ಲೇ ವೇದ್ಯವಾಗಬಹುದಾದ ಪ್ರಾಮಾಣಿಕ ದನಿ… ಇವೆಲ್ಲವುಗಳ ಮೂಲಕ ಎಂಟು ಪತ್ರಗಳು ನನ್ನ ಮನಸಿಗೆ ಹೆಚ್ಚು ಆಪ್ತವಾದವು. ಅವುಗಳನ್ನು ಈ ಎಲ್ಲ ಗುಣಲಕ್ಷಣಗಳ ಸಾಂದ್ರತೆ ಮತ್ತು ವೈವಿಧ್ಯತೆಯ ಆಧಾರದ ಮೇಲೆ ಬೇರೆ ಬೇರೆ ಬಹುಮಾನಗಳಿಗೆ ಶಿಫಾರಸು ಮಾಡಿದ್ದೇನೆ. ಭಾವಸತ್ವಗಳಿಂದ ತುಂಬಿರುವ ಈ ಪತ್ರಗಳಲ್ಲಿ ಕೇವಲ ಜೀವನಸತ್ವದಿಂದ ತುಂಬಿರುವ ಎರಡು ಕಾಗದಗಳೂ ಇವೆ! ಸಂಸಾರ ಸಾಗರದಲ್ಲಿ ಈಸುತ್ತಲೇ ಜಯಿಸುವ ಜೀವಗಳು ಬಾಳಸಂಗಾತಿಗೆ ಬರೆದಿರುವ ಈ ಎರಡೂ ಕಾಗದಗಳ ‘ನಿರಾಭರಣ ಸೌಂದರ್ಯ’ವೇ ಅವುಗಳ ಶಕ್ತಿಯಾಗಿದೆ.

ಬೇಂದ್ರೆ ಹೇಳ್ತಾರೆ: ‘ಮುತ್ತು ಕೊಟ್ರೆ ಮುತ್ತು ತಗೊಂಡಂತೆ’. ‘ಕೊಡುವುದೇ ಇಲ್ಲಿ ಕೊಂಬುದು!’ ಪ್ರೀತಿಸಿದರೆ ಮಾತ್ರ ಪ್ರೀತಿ ಸಿಕ್ಕಂತೆ, ಪ್ರೀತಿಯ ಯಾಚನೆಯಷ್ಟೇ ಸಾಲದು. ಈ ಸ್ಪರ್ಧೆಯ ನೆಪದಲ್ಲಿ ಈ ಪ್ರೇಮದಾಲಾಪದಲ್ಲಿ ಪಾಲ್ಗೊಂಡ ಎಲ್ಲ ಹೃದಯಗಳನ್ನೂ ಅಭಿನಂದಿಸುತ್ತೇನೆ. ಈ ಪ್ರೀತಿ ನಿಷ್ಕಾರಣ ಪ್ರೀತಿಯಾಗಲಿ ಮತ್ತು ಜೀವನ ಪ್ರೀತಿಯಾಗಿ ವ್ಯಾಪಿಸುತ್ತ ಹೋಗಲಿ ಎಂದು ಹೃತ್ಪೂರ್ವಕವಾಗಿ ಹಂಬಲಿಸುತ್ತೇನೆ, ಎಸ್‌.ಎಂ.ಎಸ್‌.ಗಳ ಶೀಘ್ರಲಿಪಿಯ ಈ ಕಾಲದಲ್ಲಿ, ಕೂತು ಅವಡುಗಚ್ಚಿ, ಕೈಬರಹದಲ್ಲಿ ಬರೆಯಲಾಗಿರುವ ಈ ಕನ್ನಡ ಕಾಗದಗಳು, ಪರೋಕ್ಷವಾಗಿ ಕನ್ನಡದ ಬಾವುಟಗಳಂತೆಯೂ ಕಾಣುತ್ತಿವೆ!

Write A Comment